ಚಾಮರಾಜನಗರ (ಡಿ.07): ಪತ್ನಿಯ ಶವ ಸಂಸ್ಕಾರಕ್ಕೂ (Cremation) ಹಣವಿಲ್ಲದೇ ಪತ್ನಿಯ ಶವವನ್ನು ಮೂಟೆಯಲ್ಲಿ ತುಂಬಿಕೊಂಡು ಹೋಗಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆದಿದೆ. ಮಂಡ್ಯ ಮೂಲದ ಕಾಳಮ್ಮ(26) ಎಂಬುವರು ಮೃತಪಟ್ಟಿದ್ದು, ಅವರ ಪತಿ ರವಿ ಮೂಟೆಯಲ್ಲಿ ಶವ (Dead Body) ಸಾಗಿಸಿದ್ದಾರೆ. ಈ ವೇಳೆ ಪೊಲೀಸರೇ (Police) ಮಧ್ಯಪ್ರವೇಶ ಮಾಡಿ ವಿಚಾರಿಸಿದ್ದಾರೆ.
ಆಲೆಮನೆಯಲ್ಲಿ ವಾಸವಿದ್ದ ಗಂಡ-ಹೆಂಡತಿ
ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರ ಇರುವ ಆಲೆಮನೆಯಲ್ಲಿ ಕಳೆದ 15 ದಿನಗಳಿಂದ ರವಿ ಮತ್ತು ಆತನ ಹೆಂಡತಿ ಕಾಳಮ್ಮ ವಾಸವಾಗಿದ್ರು. ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ದ ಪತಿ
ಅನಾರೋಗ್ಯದಿಂದ ಬಳಲುತ್ತಿದ್ದ ಕಾಳಮ್ಮ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಆಕೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಪತಿಗೆ ಅಂತ್ಯಸಂಸ್ಕಾರಕ್ಕೆ ಹಣ ಹೊಂದಿಸುವುದು ಹೇಗೆಂದು ದಿಕ್ಕು ತೋಚದೆ ಶವವನ್ನು ಚೀಲದಲ್ಲಿ ಹಾಕಿಕೊಂಡು ತನ್ನ ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ ಕಡೆಗೆ ಅಂತ್ಯ ಸಂಸ್ಕಾರ ಮಾಡಲೆಂದು ತೆರಳಿದ್ದರು.
ಶವಾಗಾರದಲ್ಲಿ ಪರೀಕ್ಷೆಗೆ ಕಳುಹಿಸಿ
ಈ ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಿಚಾರಿಸಿ ಹೇಳಿಕೆ ಪಡೆದಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್ಐ ತಿಳಿಸಿದ್ದಾರೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಗು ಶವ ಹೊತ್ತೊಯ್ದ ತಂದೆ
ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆಯೂ ಇದೆ. ಆದರೆ ಅವೆಲ್ಲ ಬರೀ ಹಣವಂತರಿಗೆ ಎನ್ನುವಂತಾಗಿದೆ. ಹೀಗಾಗಿ ಉತ್ತಮ ವೈದ್ಯಕೀಯ ಸವಲತ್ತುಗಳು ಬಡವರಿಗೂ ಸಿಗಲಿ ಅಂತ ಸರ್ಕಾರವೇನೋ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೌಲಭ್ಯದ ವ್ಯವಸ್ಥೆ ಮಾಡಿದೆ. ಆದರೆ ಅದು ಎಲ್ಲಾ ಬಡವರಿಗೂ ಸಿಗುತ್ತಿಲ್ಲ ಎಂಬುದಕ್ಕೆ ಈ ಒಂದು ಘಟನೆಯೇ ನಿದರ್ಶನ. ಇಲ್ಲಿ ಬಡ ಕುಟುಂಬದ ಕಂದಮ್ಮ ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದೆ.
ಆದರೆ ಮಗುವಿನ ಶವ ಮನೆಗೆ ಸಾಗಿಸೋದಕ್ಕೆ ಆ್ಯಂಬುಲೆನ್ಸ್ ಕೊಡದೇ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ. ಕೊನೆಗೆ ಅವಲ ಮನೆಯ ವ್ಯಕ್ತಿಯೇ ಹೆಗಲ ಮೇಲೆ ಶವ ಹೊತ್ತು ಸಾಗಿದ್ದಾನೆ. ಮಧ್ಯ ಪ್ರದೇಶದ ಭೋಪಾಲ್ನಲ್ಲಿ ನಡೆದ ಈ ಮನಕಲಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಪಘಾತದಲ್ಲಿ ಮೃತಪಟ್ಟ ಪುಟ್ಟ ಬಾಲಕಿ
ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿದ ವ್ಯಕ್ತಿ
ಪುಟ್ಟ ಬಾಲಕಿ ತನ್ನ ಗ್ರಾಮದಲ್ಲಿ ಸಾವನ್ನಪ್ಪಿದ್ದು, ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಆ ವ್ಯಕ್ತಿ ಆಂಬುಲೆನ್ಸ್ ಗಾಗಿ ಹುಡುಕುತ್ತಾ ಅಲೆದಿದ್ದಾರೆ. ಇತ್ತ ಸರ್ಕಾರಿ ಶವ ವಾಹನವೂ ಸಿಗದೆ ಖಾಸಗಿ ವಾಹನವೂ ಸಿಗದೆ ಆ ವ್ಯಕ್ತಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬಂದು ತನ್ನ ಗ್ರಾಮಕ್ಕೆ ಬಸ್ ಹತ್ತಿದ್ದಾರೆ. ಆತನ ಬಳಿ ಬಸ್ ಟಿಕೆಟ್ಗೆ ಬೇಕಾದಷ್ಟು ಹಣವೂ ಇರಲಿಲ್ಲ. ಇನ್ನೊಬ್ಬ ಪ್ರಯಾಣಿಕರು ಟಿಕೆಟ್ ಹಣ ನೀಡಿ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ