ಬಳ್ಳಾರಿ(ಫೆ. 13): ಮೂರು ದಿನಗಳ ಹಿಂದೆ ಇಲ್ಲಿ ಸಂಭವಿಸಿದ್ದ ರಸ್ತೆ ಅಪಘಾತ ಪ್ರಕರಣದಲ್ಲಿ ಸಚಿವ ಆರ್. ಅಶೋಕ್ ಅವರ ಮಗನ ಹೆಸರು ಬಲವಾಗಿ ಕೇಳಿಬರುತ್ತಿದೆ. ಇಬ್ಬರು ಮೃತರಲ್ಲಿ ಸಚಿನ್ ಎಂಬುವವರ ಶವದ ಪೋಸ್ಟ್ ಮಾರ್ಟಂ ಅನ್ನು ರಾತ್ರೋರಾತ್ರಿ ಮಾಡಿಸಿಕೊಳ್ಳಲಾಗಿದೆ. ಅಪಘಾತವಾದ ಫೆ. 10ರಂದು ರಾತ್ರಿ ಸಚಿನ್ ಕಡೆಯವರು ಬಂದು ಪೋಸ್ಟ್ ಮಾರ್ಟಂ ತುರ್ತಾಗಿ ಆಗಬೇಕೆಂದು ಕೇಳಿಕೊಂಡರು. ಅದಕ್ಕೆ ಅಂದೇ ಮರಣೋತ್ತರ ಪರೀಕ್ಷೆ ಮಾಡಿದೆ ಎಂದು ಹೊಸಪೇಟೆ ತಾಲೂಕು ಆಸ್ಪತ್ರೆಯ ವೈದ್ಯ ಡಾ. ಮಹಾಂತೇಶ್ ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.
ತಾವು ಅಶೋಕ್ ಕಡೆಯವರು. ತುರ್ತಾಗಿ ಬೆಂಗಳೂರಿಗೆ ಹೋಗಬೇಕಿದೆ. ಈಗಲೇ ಪೋಸ್ಟ್ ಮಾರ್ಟಂ ಮಾಡಿಕೊಡಿ ಎಂದು ಕೇಳಿಕೊಂಡರು. ತುರ್ತು ಸಂದರ್ಭವಿದ್ದರೆ ಆವತ್ತೇ ಪೋಸ್ಟ್ ಮಾರ್ಟಂ ಮಾಡುವುದು ಸಾಮಾನ್ಯ ಎಂದು ಡಾ. ಮಹಾಂತೇಶ್ ಹೇಳಿದ್ಧಾರೆ.
ಇದನ್ನೂ ಓದಿ: ಹೊಸಪೇಟೆ ಕಾರು ಅಪಘಾತವಾದ ಕಾರನ್ನು ಡ್ರೈವ್ ಮಾಡಿದ್ದು ರಾಹುಲ್ ಎಂಬ ವ್ಯಕ್ತಿ: ಬಳ್ಳಾರಿ ಎಸ್ಪಿ
ಅಪಘಾತಕ್ಕೆ ಕಾರಣವಾದ ಬೆಂಜ್ ಕಾರಿನಲ್ಲಿ ಐವರಿದ್ದರು. ಸಚಿನ್ನನ್ನು ಇಲ್ಲಿಗೆ ತರುವಷ್ಟರಲ್ಲಿ ಮೃತನಾಗಿದ್ದ. ರಾಕೇಶ್ ಎಂಬಾತನ ಬೆನ್ನು ಮೂಳೆ ಮುರಿದಿತ್ತು. ಶಿವಕುಮಾರ್ ಮತ್ತು ರಾಹುಲ್ಗೆ ಸಣ್ಣಪುಟ್ಟ ಗಾಯವಾಗಿದೆ. ವರುಣ್ ಎಂಬ ಮತ್ತೊಬ್ಬ ವ್ಯಕ್ತಿಗೆ ಹೆಚ್ಚಿನ ಗಾಯವಾಗದ ಕಾರಣ ಚಿಕಿತ್ಸೆ ಪಡೆಯಲಿಲ್ಲ. ಬೆನ್ನುಮೂಳೆ ಮುರಿದಿದ್ದ ರಾಕೇಶ್ನಿಗೆ ಆವತ್ತೇ ಎಂಆರ್ಐ ಸ್ಕ್ಯಾನ್ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವರೇ ಮರುದಿನ ಬೆಂಗಳೂರಿಗೆ ತೆರಳಿದರು ಎಂದು ಡಾ. ಮಹಾಂತೇಶ್ ವಿವರ ನೀಡಿದ್ಧಾರೆ.
ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾಗಿರುವ ಎಫ್ಐಆರ್ ಪ್ರಕಾರ ಫೆ. 10, ಸೋಮವಾರ ಮಧ್ಯಾಹ್ನ 2:45ರ ಆಸುಪಾಸಿನಲ್ಲಿ ಆಕ್ಸಿಡೆಂಟ್ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು. ರಸ್ತೆ ಬದಿ ನಿಂತಿದ್ದ ರವಿ ನಾಯ್ಕ್ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಸಚಿನ್ ಎಂಬಾತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಹೊಸಪೇಟೆಯ ಹೆದ್ದಾರಿ 50ರಲ್ಲಿರುವ ಮರಿಯಮ್ಮನಹಳ್ಳಿ ಬಳಿಯ ದುರ್ಗಾ ಪೆಟ್ರೋಲ್ ಎದುರಿನ ಪಂಕ್ಚರ್ ಅಂಗಡಿ ಸಮೀಪ ಅಪಘಾತವಾಗಿದೆ. ವೇಗವಾಗಿ ಬಂದ ಬೆಂಜ್ ಕಾರು ಪಂಕ್ಚರ್ ಅಂಗಡಿ ಬಳಿ ನಿಂತಿದ್ದ ರವಿ ನಾಯ್ಕ(18) ಎಂಬುವನಿಗೆ ಗುದ್ದಿ ಆತನ ಸಮೇತವಾಗಿ 100 ಮೀಟರ್ ದೂರ ಹೋಗಿ ಪಲ್ಟಿ ಹೊಡೆದಿದೆ. ಕೊಪ್ಪಳ ಮೂಲದ ರವಿ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಜ್ ಕಾರಿನಲ್ಲಿದ್ದ ಐವರ ಪೈಕಿ ಸಚಿನ್ಗೆ ಗಂಭೀರ ಗಾಯಗಳಾಗಿದ್ದವು. ವಾಹನ ಚಲಾಯಿಸುತ್ತಿದ್ದ ರಾಹುಲ್ ಮತ್ತು ರಾಕೇಶ್ ಅವರಿಗೂ ಗಾಯಗಳಾಗಿದ್ದವು. ಶಿವಕುಮಾರ್ ಮತ್ತು ವರುಣ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವೆನ್ನಲಾಗಿದೆ.
ಇದನ್ನೂ ಓದಿ: ಉಸೇನ್ ಬೋಲ್ಟ್ಗಿಂತಲೂ ಕಡಿಮೆ ಅವಧಿಯಲ್ಲಿ 100 ಮೀ. ಓಟ ಪೂರೈಸಿದ ಕಂಬಳ ವೀರ!
ಅಪಘಾತವಾದ ಕೂಡಲೇ ಸ್ಥಳೀಯ ಜನರು ಸೇರಿ ಗಾಯಾಳುಗಳನ್ನ ಆ್ಯಂಬುಲೆನ್ಸ್ ಮೂಲಕ ಹೊಸಪೇಟೆ ತಾಲೂಕು ಆಸ್ಪತ್ರೆಗೆ ಸಾಗಿಸಿದ್ಧಾರೆ. ಮೃತ ಪಟ್ಟ ರವಿ ನಾಯ್ಕನ ಸಂಬಂಧಿಕ ಲಕ್ಷ್ಮ ನಾಯ್ಕ ಅವರೂ ಅಪಘಾತ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದರು. ಅವರು ಹೇಳುವ ಪ್ರಕಾರ, ಕಾರಿನಲ್ಲಿ ಮದ್ಯದ ಬಾಟಲಿಗಳು ಇದ್ದವು. ಅವರೆಲ್ಲರೂ ಕುಡಿದು ವಾಹನ ಚಾಲನೆ ಮಾಡುತ್ತಿದ್ದರೆಂದು ಆಕ್ರೋಶ ಪಟ್ಟಿದ್ಧಾರೆ.
ಇನ್ನು, ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ್ ಅವರ ಮಗ ಕೂಡ ಕಾರಿನಲ್ಲಿದ್ದ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲ ಸುದ್ದಿಗಳ ಪ್ರಕಾರ, ಅಶೋಕ್ ಮಗ ತನ್ನ ಸ್ನೇಹಿತರೊಂದಿಗೆ ಬರೊಂದು ಕಾರಿನಲ್ಲಿ ಹಿಂದೆ ಬರುತ್ತಿದ್ದನೆನ್ನಲಾಗಿದೆ. ಅಪಘಾತವಾದ ಸ್ಥಳಕ್ಕೆ 10 ನಿಮಿಷಗಳ ನಂತರ ಮತ್ತೊಂದು ಕಾರು ಬಂದಿತ್ತು. ಅದರಲ್ಲಿ ಅಶೋಕ್ ಮಗ ಇದ್ದರೆನ್ನಲಾಗಿದೆ. ಆದರೆ, ಇದ್ಯಾವುದೂ ಇನ್ನೂ ದೃಢಪಟ್ಟಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ