ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಗ್ಗಟ್ಟು ಪ್ರದರ್ಶನ; ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ

ವೀರಶೈವ ಲಿಂಗಾಯತ ಸಮುದಾಯದ 106 ಒಳಪಂಗಡಗಳ ಪೈಕಿ 30 ಪಂಗಡಗಳಿಗೆ ಮೀಸಲಾತಿ ಸಿಗುತ್ತಿದೆ. ಉಳಿದ ಒಳಪಂಗಡಗಳನ್ನೂ ಓಬಿಸಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ವಿಜಯನಗರದಲ್ಲಿ ನೂರಾರು ಮಠಾಧೀಶರು ಸಭೆ ನಡೆಸಿದರು.

ವೇದಿಕೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು

ವೇದಿಕೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು

  • Share this:
ಬೆಂಗಳೂರು(ಫೆ. 13): ಪಂಚಮಸಾಲಿ ಲಿಂಗಾಯತ ಸಮುದಾಯದಿಂದ 2ಎ ಪಟ್ಟಿ ಸೇರ್ಪಡೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಜೊತೆಗೆ ಇಂದು ವೀರಶೈವ ಲಿಂಗಾಯತ ಮಠಾಧೀಶರ ಬೃಹತ್ ಸಭೆ ಬೆಂಗಳೂರಿನ ವಿಜಯನಗರದಲ್ಲಿ ನಡೆಯಿತು. ಬಹುತೇಕ 500 ಮಂದಿ ಸಮುದಾಯದ ಮಠಾಧೀಶರು ಭಿನ್ನಾಭಿಪ್ರಾಯಗಳನ್ನ ಮರೆತು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶನ ಮಾಡಿದರು. ವೀರಶೈವ ಲಿಂಗಾಯತ ಸಮುದಾಯದ ಒಳಪಂಡಗಳನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಈ ಸಭೆ ನಡೆಸಲಾಯಿತು. ಈ ಸಂಬಂಧ ವಿಭೂತಿಪುರ ಮಠದ ಶ್ರೀ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮೂಲಕ ಸಿಎಂಗೆ ಮನವಿ ಪತ್ರ ನೀಡಿದರು.

ಬಿ.ಎಸ್. ಪರಮಶಿವಯ್ಯ ನೇತೃತ್ವದಲ್ಲಿ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ಈ ಸಭೆಯ ವೇದಿಕೆಯಲ್ಲಿ ಉಜ್ಜಯಿನಿ ಜಗದ್ಬುರು ಡಾ. ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿ, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು, ದಿಗಲೇಶ್ವರ ಶ್ರೀಗಳು, ಮುಚ್ಚಳಾಂಬ ಶ್ರೀಗಳು, ಸಿಂದಗಿ ಪ್ರಭು ಸಾರಂಗ ಶಿವಾಚಾರ್ಯ ಸ್ವಾಮಿಗಳು, ವಿಭೂತಿಪುರ ಮಠದ ಶ್ರೀ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಶ್ರೀಗಳಾದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಬಸವಾನಂದ ಸ್ವಾಮಿಗಳು, ಉಪ್ಪೂರು ಗದ್ದಿಗೆಯ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೊದಲಾದ ನೂರಾರು ಮಠಾಧೀಶರು ಪಾಲ್ಗೊಂಡಿದ್ದರು. ಹೊರರಾಜ್ಯಗಳಿಂದಲೂ ಮಠಾಧೀಶರು ಆಗಮಿಸಿ ಸಮುದಾಯದ ಬಲ ಮತ್ತು ಒಗ್ಗಟ್ಟು ಪ್ರದರ್ಶನಕ್ಕೆ ಕೈಜೋಡಿಸಿದರು.

ಇದನ್ನೂ ಓದಿ: ಫೆ. 15 ರಂದು 2ನೇ ಬಾರಿಗೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಿರುವ ಸಿಎಂ ಯಡಿಯೂರಪ್ಪ

ಈ ವೇಳೆ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಇದು ರಾಜಕೀಯ ಉದ್ದೇಶದಿಂದ ನಡೆದ ಸಭೆಯಲ್ಲ. ಯಾರ ವಿರುದ್ಧವೂ ನಡೆಯುತ್ತಿರುವ ಸಭೆಯಲ್ಲ. ವೀರಶೈವ ಲಿಂಗಾಯತ ಸಮುದಾಯದ 70ಕ್ಕೂ ಹೆಚ್ಚು ಒಳಪಂಗಡಗಳನ್ನ ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಲು ಈ ಸಭೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು, ಸಭೆಯ ನೇತೃತ್ವ ವಹಿಸಿರುವ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ತಮ್ಮ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಬೇಕೆನ್ನುವ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ. ಬಸವಕಲ್ಯಾಣದಿಂದಲೇ ಹೋರಾಟ ಆರಂಭಿಸುತ್ತೇವೆ ಎಂದು ಕರೆ ನೀಡಿದರು.

ಇದನ್ನೂ ಓದಿ: ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಶಶಿಭೂಷಣ್ ಹೆಗಡೆ, ಪ್ರದೀಪ್ ನಾಯಕ ಕಾಂಗ್ರೆಸ್ ಸೇರ್ಪಡೆ?

ಪಂಚಮಸಾಲಿಗಳನ್ನ 2ಎಗೆ ಸೇರಿಸಬೇಕೆಂದು ಪರ್ಯಾಯವಾಗಿ ನಡೆಯುತ್ತಿರುವ ಹೋರಾಟಕ್ಕೂ ಇವತ್ತಿನ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು. ಕೇವಲ ಪಂಚಮಸಾಲಿಗಳಷ್ಟೇ ಅಲ್ಲ ಇಡೀ ವೀರಶೈವ ಲಿಂಗಾಯತ ಸಮುದಾಯದ ಹೋರಾಟವಾಗಿ ರೂಪುಗೊಂಡಿದ್ದರೆ ಇನ್ನೂ ಚೆನ್ನಾಗಿತ್ತು ಎಂಬ ತುಸು ಅಸಮಾಧಾನವೂ ಸಭೆಯಲ್ಲಿ ವ್ಯಕ್ತವಾಗಿದೆ. ಸಮುದಾಯವನ್ನ ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಿದರೆ 2ಎ ಪಟ್ಟಿಗೆ ಸೇರಿಸುವ ಅಗತ್ಯ ಇರುವುದಿಲ್ಲ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ಕೇಳಿಬಂದಿತು.

ವೀರಶೈವ ಲಿಂಗಾಯತ ಸಮುದಾಯದಲ್ಲಿರುವ 106 ಒಳ ಪಂಗಡಗಳ ಪೈಕಿ 30 ಒಳಪಂಗಡಗಳಿಗೆ ಮೀಸಲಾತಿ ಸಿಗುತ್ತಿದೆ. ಉಳಿದ 76 ಒಳಪಂಗಡಗಳ ಗತಿ ಏನು? ಅವರು ನಮ್ಮಂತೆಯೇ ಬದುಕಬೇಕು. ಹೀಗಾಗಿ ನಾವು ಕೇಂದ್ರ ಸರ್ಕಾರವನ್ನ ಒತ್ತಾಯಿಸಬೇಕು ಎಂದು ಪರಮಶಿವಯ್ಯ ಹೇಳಿದರು.

ವರದಿ: ಸಂಜಯ್ ಎಂ ಹುಣಸನಹಳ್ಳಿ / ಹರ್ಷವರ್ಧನ್
Published by:Vijayasarthy SN
First published: