ಮನೆ ಮನೆಗೂ ಶೌಚಾಲಯ ಇದ್ದರೂ ಬಹಿರ್ದೆಸೆಗೆ ಬಯಲೇ ಗತಿ; ಅಧಿಕಾರಿಗಳ ಎಡವಟ್ಟಿಗೆ ಜನರ ಪಡಿಪಾಟಲು

ಈ ತಗಡಿನ ಡಬ್ಬಿಗಳಿಂದ ಶೌಚಾಲಯಗಳನ್ನು ನಿರ್ಮಿಸಲು ಕೇವಲ ಐದಾರು ಸಾವಿರ ರೂಪಾಯಿ ಸಾಕು. ಆದರೆ, ಮಹಾನಗರ ಪಾಲಿಕೆ ಈ ತಗಡಿನ ಡಬ್ಬಿಗಳಿಗೂ ರೂ. 15 ಸಾವಿರ ಪಾವತಿಸಿದ್ದು, ಈ ಕಾಮಗಾರಿಯ ಹಿಂದೆ ಅವ್ಯವಹಾರದ ಆರೋಪಗಳೂ ಕೇಳಿ ಬರುತ್ತಿವೆ. ಆದರೆ, ಉತ್ತರಿಸಬೇಕಾದವರು ಮಾತ್ರ ಜಾರಿಕೊಳ್ಳಲು ಪ್ರಯತ್ಸಿಸುತ್ತಿರುವುದು ವಿಪರ್ಯಾಸವಾಗಿದೆ.  

ಒಳಚರಂಡಿ ವ್ಯವಸ್ಥೆ ಇಲ್ಲದೆ ನಿರ್ಮಿಸಿರುವ ಶೌಚಾಲಯಗಳು.

ಒಳಚರಂಡಿ ವ್ಯವಸ್ಥೆ ಇಲ್ಲದೆ ನಿರ್ಮಿಸಿರುವ ಶೌಚಾಲಯಗಳು.

  • Share this:
ವಿಜಯಪುರ: ದೇಶಾದ್ಯಂತ ಬಯಲು ಶೌಚಮುಕ್ತವನ್ನಾಗಿ ಮಾಡಲು ಪಣ ತೊಡಲಾಗಿದೆ. ಅದರಂತೆ ವಿಜಯಪುರ ಮಹಾನಗರ ಪಾಲಿಕೆಗೆ ಸ್ವಚ್ಛ ಭಾರತ ಯೋಜನೆಯಡಿ ಸುಮಾರು 10 ಸಾವಿರ ಶೌಚಾಲಯಗಳು ಮಂಜೂರಾಗಿ ಅವುಗಳಲ್ಲಿ ಶೇ. 60 ರಷ್ಟು ಪೂರ್ಣಗೊಂಡಿವೆ.  ಆದರೆ, ವಿಜಯಪುರ ನಗರದ ಹೊರ ವಲಯದ ಬುರಣಾಪುರ ರಸ್ತೆಯಲ್ಲಿರುವ ಬಸವ ನಗರಕ್ಕೆ ಮಂಜೂರಾಗಿರುವ ಶೌಚಾಲಯಗಳು ಮಾತ್ರ ಇದ್ದೂ ಇಲ್ಲದಂತಿವೆ.  

ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಸಿದಂತಾಗಿದೆ ಇಲ್ಲಿನ ಜನರ ಕಥೆ. ಸುಮಾರು 15 ರಿಂದ 20 ವರ್ಷಗಳ ಹಿಂದೆ ಬಡವರು ಮತ್ತು ಹಿಂದುಳಿದವರು ಹಾಗೂ ದಲಿತರಿಗಾಗಿ ರಾಜ್ಯ ಸರಕಾರ ಇಲ್ಲಿ ಸುಮಾರು 1600 ಮನೆಗಳನ್ನು ನಿರ್ಮಿಸಿ, ಹಂಚಿಕೆಯನ್ನೂ ಮಾಡಿದೆ. ಆದರೆ, ಇವರಿಗೆ ಈವರೆಗೆ ಬಯಲು ಶೌಚಾಲಯವೇ ಗತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯಡಿ ಇಲ್ಲಿನ ಜನರಿಗೆ 559 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಈ ಶೌಚಾಲಯಗಳು ಇಲ್ಲಿನ ಜನರ ಪಾಲಿಗೆ ಕಳೆದ ಸುಮಾರು ಒಂದು ವರ್ಷದಿಂದ ಕೇವಲ ಪ್ರದರ್ಶನಕ್ಕೆ ಇಟ್ಟಂತಾಗಿದೆ.

ವಿಜಯಪುರದ ಬಸವನಗರ.


ಇಲ್ಲಿನ ಬಹುತೇಕ ಮನೆಗಳ ಎದುರು ನೀಲಿ ಬಣ್ಣದ ಶೌಚಾಲಯಗಳು ತಲೆ ಎತ್ತಿ ನಿಂತಿವೆಯಾದರೂ, ಯಾರೂ ಇವುಗಳನ್ನು ಬಳುವಂತಿಲ್ಲ. ಕಾರಣ, ಈ ಶೌಚಾಲಯಗಳಿಗೆ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ ಶೌಚಾಲಯ ಇದ್ದರೂ ಬಳಕೆ ಮಾಡಲು ಆಗದ ಕಾರಣ ಈ ಜನರಿಗೆ ಈಗಲೂ ಬಯಲು ಶೌಚಾಲಯವೇ ಗತಿಯಾಗಿದೆ. ಇಲ್ಲಿನ ಮಹಿಳೆಯರು ಶೌಚಕ್ಕೆ ತೆರಳಬೇಕಾದರೆ ಸೂರ್ಯಾಸ್ತಮದವರೆಗೆ ಕಾಯಬೇಕು. ಬೆಳಿಗ್ಗೆಯ ದಿನನಿತ್ಯದ ಶೌಚ ಸಂಬಂಧಿ ಕೆಲಸಗಳನ್ನು ಸೂರ್ಯೋದಯದ ಒಳಗೆ ಮುಗಿಸಬೇಕಾದ ಅನಿವಾರ್ಯತೆ ಇದೆ. ಭೇದಿ ಆಯಿತೆಂದರೆ ಸಾಕು ಇಲ್ಲಿನ ಮಹಿಳೆಯರ ಗೋಳು ಕೇಳುವವರೇ ಇಲ್ಲವಾಗಿದೆ. ಇದೆಂಥ ಕರ್ಮ ಎಂದು ಇಲ್ಲಿನ ನಿವಾಸಿಗಳಾದ ಶಿವಮ್ಮ, ಪೂಜಾ ಅಶೋಕ ಹೆಗಣ್ಣವರ ಮತ್ತು  ಹೊನ್ನವ್ವ ಜಮದಗ್ನಿ, ಬೌರಮ್ಮ ಗಾಯಕವಾಡ ಮತ್ತು ಗೌರವ್ವ ಕಲಗುರ್ಕಿ ಅಸಮಾಧಾನದ ಪ್ರಶ್ನೆ ಮಾಡುತ್ತಾರೆ.

ಬಸವನಗರ ವಾರ್ಡ್.


ಈ ಶೌಚಾಲಯಗಳನ್ನು ಅಳವಡಿಸುವುದರಿಂದ ಸದ್ಯಕ್ಕೆ ಯಾವುದೇ ಪ್ರಯೋಜನ ಇಲ್ಲ. ಒಳಚರಂಡಿ ನಿರ್ಮಿಸಿಯೇ ಇವುಗಳನ್ನು ಅಳವಡಿಸಿ ಎಂದು ಇಲ್ಲಿನ ಜನ ಪರಿಪರಿಯಾಗಿ ವಿನಂತಿಸಿದರೂ ತಮ್ಮ ಕಾರ್ಯ ಸಾಧನೆಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಇವರ ಮಾತಿಗೆ ಬೆಲೆ ಕೊಡದೇ ತಗಡಿನ ಶೌಚಾಲಯ ಡಬ್ಬಿಗಳನ್ನು ಇಟ್ಟು ಹೋಗಿದ್ದಾರೆ ಎಂದು ಇಲ್ಲಿನ ನಿವಾಸಿ ಬಾಳು ಗೋವಿಂದ ರಾಠೋಡ ಆರೋಪಿಸಿದ್ದಾರೆ. ಆದರೆ, ಈ ಕುರಿತು ಪ್ರಶ್ನಿಸಿದರೆ ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುವುದೇ ಬೇರೆ. ವಿಜಯಪುರ ಮಹಾನಗರದ 35 ವಾರ್ಡುಗಳಿಗೆ ಸುಮಾರು 10 ಸಾವಿರ ಶೌಚಾಲಯಗಳು ಮಂಜೂರಾಗಿದ್ದವು. ಅವುಗಳಲ್ಲಿ 6272 ಶೌಚಾಲಯಗಳನ್ನು ಪೂರ್ಣಗೊಳಿಸಲಾಗಿದೆ.  ವಾರ್ಡ್ ಸಂಖ್ಯೆ 16ರಲ್ಲಿ ಬರುವ ಈ ಬಸವನಗರಕ್ಕೆ 559 ಫೈಬರ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸೇಫ್ಟಿ ಟ್ಯಾಂಕ್ ನಿರ್ಮಿಸಿ ಅವುಗಳನ್ನು ಬಳಸುವಂತೆ ಸೂಚಿಸಲಾಗಿದೆ.  ಇಲ್ಲದಿದ್ದರೆ, ಒಳಚರಂಡಿ ಕಾಮಗಾರಿ ಆದ ಬಳಿಕ ಉಪಯೋಗಿಸುವಂತೆ ತಿಳಿಸಿದ್ದೇವೆ ಎನ್ನುತ್ತಾರೆ ಪಾಲಿಕೆ ಪರಿಸರ ಅಭಿಯಂತರ ಜಗದೀಶ.

ಇದನ್ನು ಓದಿ: 15 ಲಕ್ಷ ರೂ. ವ್ಯಯಿಸಿ ಖಾಸಗಿ ಕಾರ್ಯಕ್ರಮಕ್ಕೆ ಪ್ರತ್ಯೇಕ ಹೆಲಿಕಾಪ್ಟರ್​ಗಳಲ್ಲಿ ಬಂದ ಇಬ್ಬರು ಸಚಿವರು!

ಮೂಲಗಳ ಮಾಹಿತಿಯಂತೆ ಈ ತಗಡಿನ ಡಬ್ಬಿಗಳಿಂದ ಶೌಚಾಲಯಗಳನ್ನು ನಿರ್ಮಿಸಲು ಕೇವಲ ಐದಾರು ಸಾವಿರ ರೂಪಾಯಿ ಸಾಕು. ಆದರೆ, ಮಹಾನಗರ ಪಾಲಿಕೆ ಈ ತಗಡಿನ ಡಬ್ಬಿಗಳಿಗೂ ರೂ. 15 ಸಾವಿರ ಪಾವತಿಸಿದ್ದು, ಈ ಕಾಮಗಾರಿಯ ಹಿಂದೆ ಅವ್ಯವಹಾರದ ಆರೋಪಗಳೂ ಕೇಳಿ ಬರುತ್ತಿವೆ. ಆದರೆ, ಉತ್ತರಿಸಬೇಕಾದವರು ಮಾತ್ರ ಜಾರಿಕೊಳ್ಳಲು ಪ್ರಯತ್ಸಿಸುತ್ತಿರುವುದು ವಿಪರ್ಯಾಸವಾಗಿದೆ.
First published: