ಅಪಘಾತಕ್ಕೀಡಾದ ಕಾರಿನಲ್ಲಿದ್ದ ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕುಂಸಿ ಠಾಣೆ ಪಿಎಸ್ಐ

ಮೃತ ಭಾರತಿ ಯವರು ಬಂಗಾರವನ್ನು ತನ್ನೊಡನೆ ತಂದ ಮಾಹಿತಿ ಇದ್ದಂತಿಲ್ಲ. ಆದರೆ, ಅದನ್ನು ಸೇಫಾಗಿ ಆ ಕುಟುಂಬಕ್ಕೆ ತಲುಪಿಸುವ ಮೂಲಕ ಪಿಎಸ್ಐ ಮಾನವೀಯತೆ ಮೆರೆದಿದ್ದಾರೆ

ಚಿನ್ನಾಭರಣವನ್ನು ಹಸ್ತಾಂತರಿಸಿದ ಪಿಎಸ್​ಐ ನವೀನ್ ಮಠಪತಿ

ಚಿನ್ನಾಭರಣವನ್ನು ಹಸ್ತಾಂತರಿಸಿದ ಪಿಎಸ್​ಐ ನವೀನ್ ಮಠಪತಿ

  • Share this:
ಶಿವಮೊಗ್ಗ(ಮೇ.26):  ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಮಠಪತಿ ಅವರು ಅಪಘಾತಕ್ಕೀಡಾದ ಕಾರಿನಲ್ಲಿದ್ದ 20 ಲಕ್ಷದ ಮೌಲ್ಯದ  ಚಿನ್ನಾಭರಣವನ್ನು ಮಾಲೀಕರಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಮೇ. 23 ರಂದು ಕುಂಸಿ ಠಾಣೆ ವ್ಯಾಪ್ತಿಯ ಚೋರಡಿ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೋರ್ವರು ಸಾವನ್ನಪ್ಪಿದ್ದರು. ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿತ್ತು. ಕಡೂರಿನ ನಿವಾಸಿಯಾದ ಕೆಇಬಿ ನೌಕರ ಸುಬ್ಬಯ್ಯ ಮತ್ತು ಪತ್ನಿ ಭಾರತೀ ಚೋರಡಿ ಬಳಿ ತುಪ್ಪೂರಿನಿಂದ ಕಡೂರಿಗೆ ಹೋಗುತ್ತಿದ್ದಾಗ ಅಪಘಾತ ನಡೆದಿತ್ತು. ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡ ಸುಬ್ಬಯ್ಯ  ಅವರ ಮನೆಯಲ್ಲಿ ಸೂತಕ ಮನೆ ಮಾಡಿತ್ತು.  ಈ ನಡುವೆ 25 ರಂದು ಕುಂಸಿ ಠಾಣೆಯಿಂದ ಸುಬ್ಬಯ್ಯನವರಿಗೆ ಫೋನ್ ಬಂದಿದೆ. ಸ್ವಲ್ಪ ಠಾಣೆಗೆ ಬಂದು ಹೋಗಿ ಎಂದಿದ್ದಾರೆ. ಆಗ ಸುಬ್ಬಯ್ಯ ಕುಟುಂಬದ ಕಡೆಯಿಂದ ಐವರು ಠಾಣೆಗೆ ಬಂದಿದ್ದಾರೆ.

ಆಗ ಪಿಎಸ್ಐ ನವೀನ್ ಮಠಪತಿ ಅಂದಾಜು 20 ಲಕ್ಷ ರೂಪಾಯಿ ಬೆಲೆಬಾಳುವ ವಿವಿಧ ಬಂಗಾರದ ಆಭರಣವನ್ನು ಕೈಗಿತ್ತು ಇದು ನಿಮಗೆ ಸೇರಿದ್ದು ಎಂದು ಹೇಳಿದ್ದಾರೆ. ಸುಬ್ಬಯ್ಯ ಮನೆಯಿಂದ ಬಂಗಾರ ನಾಪತ್ತೆಯಾದ ಬಗ್ಗೆ ದೂರನ್ನು ನೀಡಿರಲಿಲ್ಲ. ಮೃತ ಭಾರತಿ ಯವರು ಬಂಗಾರವನ್ನು ತನ್ನೊಡನೆ ತಂದ ಮಾಹಿತಿ ಇದ್ದಂತಿಲ್ಲ. ಆದರೆ, ಅದನ್ನು ಸೇಫಾಗಿ ಆ ಕುಟುಂಬಕ್ಕೆ ತಲುಪಿಸುವ ಮೂಲಕ ಪಿಎಸ್ಐ ಮಾನವೀಯತೆ ಮೆರೆದಿದ್ದಾರೆ.

ಮೇ 23 ರಂದು ಕುಂಸಿ ಪಿಎಸ್ಐ ಊಟಕ್ಕಾಗಿ ಆಯನೂರಿಗೆ ತೆರಳುತ್ತಿದ್ದ ವೇಳೆ ಆದಾಗಲೇ ಅಪಘಾತಗೊಂಡಿದ್ದ ಕಾರನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಗೆ ತೆರಳಿದ ಕಾರಣ ಕುಟುಂಬದವರು ಯಾರು ಇರಲಿಲ್ಲ. ಜನರು ಮಾತ್ರ ನೋಡಿ ಹೋಗುತ್ತಿದ್ದರು. ಕಾರನ್ನು ಪರಿಶೀಲಿಸುವಾಗ ಬ್ಯಾಗ್ ಒಂದನ್ನು ಅಲ್ಲೇ ಬಿಟ್ಟು ಹೋಗಿರುವುದು ಕಂಡು ಬಂದಿದೆ.

ಇದನ್ನೂ ಓದಿ :  ಎಂಬಿಬಿಎಸ್ ವೈದ್ಯರಿಗೆ ಸಮಾನಾದ ವೇತನಕ್ಕೆ ಬೇಡಿಕೆ: ಆಯುಷ್ ವೈದ್ಯರ ಜೊತೆ ಆರೋಗ್ಯ ಸಚಿವರ ಸಭೆ

ಆ ಬ್ಯಾಗನ್ನು ಸ್ಟೇಷನ್ ಗೆ ಕೊಂಡೊಯ್ದು ನಂತರದಲ್ಲಿ ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಂಗಾರದ ಸರಗಳು ಅದರಲ್ಲಿತ್ತು. ಕೂಡಲೇ ಕುಟುಂಬದವರಿಗೆ ಕರೆ ಮಾಡಿ ಬರಲು ಹೇಳಿ ಅವರ ಬಂಗಾರವನ್ನು ವಾಪಾಸು ಮಾಡಿದ್ದಾರೆ. ಜವಾಬ್ದಾರಿಯುತ ಪಿಎಸ್ಐ ಆಗಿ ತನ್ನ ಕರ್ತವ್ಯ, ಮಾನವೀಯತೆ ಮೆರೆಯುವ ಮೂಲಕ ನವೀನ್ ಮಠಪತಿ ನಿಜವಾದ ಹೀರೋ ಆಗಿ ಹೊರಹೊಮ್ಮಿದ್ದಾರೆ.
First published: