ಯೋಗೇಶಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ ಕುಲಕರ್ಣಿ ಇಂದು ಹಿಂಡಲಗಾ ಜೈಲಿಂದ ಬಿಡುಗಡೆ

ಬಿಜೆಪಿಯ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಸಂಬಂಧ ಕೊಲೆ ಕೇಸ್​ನಲ್ಲಿ ಈ ಮೊದಲೇ ಜಾಮೀನು ಪಡೆದಿದ್ದ ವಿನಯ ಕುಲಕರ್ಣಿ ಇದೀಗ ಸಾಕ್ಷ್ಯ ನಾಶ ಕೇಸ್​ನಲ್ಲೂ ಜಾಮೀನು ಪಡೆದಿರುವ ಹಿನ್ನೆಲೆಯಲ್ಲಿ ಬಿಡುಗಡೆಯ ಭಾಗ್ಯ ಪಡೆದಿದ್ದಾರೆ.

ವಿನಯ ಕುಲಕರ್ಣಿಗೆ ಜಾಮೀನು ಸಿಗುತ್ತಿದ್ದಂತೆ ಅವರ ಬೆಂಬಲಿಗರಿಂದ ಪಟಾಕಿ ಸಂಭ್ರಮ

ವಿನಯ ಕುಲಕರ್ಣಿಗೆ ಜಾಮೀನು ಸಿಗುತ್ತಿದ್ದಂತೆ ಅವರ ಬೆಂಬಲಿಗರಿಂದ ಪಟಾಕಿ ಸಂಭ್ರಮ

  • Share this:
ಧಾರವಾಡ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವೂ ನಿನ್ನೆ ಜಾಮೀನು ನೀಡಿದ್ದು, ವರ ಮಹಾಲಕ್ಷ್ಮೀ‌ ಹಬ್ಬದ ದಿನವೇ ಮಾಜಿ ಸಚಿವನಿಗೆ ಬಿಡುಗಡೆ ಭಾಗ್ಯ ಲಭಿಸುತ್ತಿದೆ.

2016ರ ಜೂನ್ 15 ರಂದು ಧಾರವಾಡದ ಉದಯ ಜಿಮ್‌ನಲ್ಲಿ ಬಿಜೆಪಿ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ನಡೆದಿತ್ತು. ಬಳಿಕ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು 2020 ನ. 5 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಅವರನ್ನು ಬಂಧನ ಮಾಡಲಾಗಿತ್ತು. ಪ್ರಕರಣ ಕುರಿತು ಸಿಬಿಐ ಅಧಿಕಾರಿಗಳಿಂದ 302 ಕೊಲೆ ಕೇಸ್ ಹಾಗೂ 195 ಸಾಕ್ಷಿ ನಾಶ ಕೇಸ್ ದಾಖಲು ಮಾಡಲಾಗಿತ್ತು. ಹತ್ಯೆ ಕೇಸ್‌ನಲ್ಲಿ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್‌ನಿಂದ ಜಾಮೀನು ದೊರೆತಿತ್ತು. ಆದರೆ ಸಾಕ್ಷಿ ನಾಶ ಕೇಸ್‌ನ ಜಾಮೀನು ಬಾಕಿ ಇದ್ದ ಹಿನ್ನೆಲೆ ಬಿಡುಗಡೆ ಭಾಗ್ಯ ದೊರೆತಿರಲಿಲ್ಲ. ಆದ್ರೆ ನಿನ್ನೆ ಗುರುವಾರ ಅದರಲ್ಲಿಯೂ ಜಾಮೀನು ಸಿಕ್ಕಿದೆ.

ಜಾಮೀನು ಸಿಗುತ್ತಿದ್ದಂತೆಯೇ ಧಾರವಾಡದಲ್ಲಿನ ವಿನಯ ಕುಲಕರ್ಣಿ ನಿವಾಸ ಹಾಗೂ ಹೆಬ್ಬಳ್ಳಿ ಅಗಸಿ ಸೇರಿದಂತೆ ಹಲವು ಕಡೆಗಳಲ್ಲಿ ನಿನ್ನೆ ವಿನಯ ಕುಲಕರ್ಣಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿನಯ ಬೆಂಬಲಿಗ ಶಿವಶಂಕರ ಹಂಪಣ್ಣವರ, ಸತ್ಯಕ್ಕೆ‌ಜಯ ಸಿಕ್ಕಿದೆ‌, ನ್ಯಾಯಾಲಯದ ಮೇಲೆ‌ ನಮಗೆ ವಿಶ್ವಾಸ ಇತ್ತು. ಕೊನೆಗೂ ನಮ್ಮ‌ನಾಯಕರಿಗೆ ಜಾಮೀನು ಸಿಕ್ಕಿದ್ದು ಆನೆ ಬಲ‌ಬಂದಂತಾಗಿದೆ ಎಂದರು.

ಇದನ್ನೂ ಓದಿ: ಕರ್ನಾಟಕ ತೊರೆದ ಕ್ರಿಕೆಟರ್ ಪವನ್; ಅನ್ಯ ರಾಜ್ಯಗಳಿಗೆ ವಲಸೆ ಹೋಗಲಿದ್ದಾರೆ ಇನ್ನೂ ಕೆಲ ಆಟಗಾರರು

ಇನ್ನು ಸುಪ್ರೀಂ ಕೋರ್ಟ್ ಜಾಮೀನು ಆದೇಶದಲ್ಲಿದ್ದ ಷರತ್ತುಗಳೇ ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನಿಗೂ ಅನ್ವಯವಾಗುತ್ತಿವೆ. ಹೀಗಾಗಿ ಧಾರವಾಡ ಜಿಲ್ಲೆಗೆ ಯಾವುದೇ ಕಾರಣಕ್ಕೂ ಪ್ರವೇಶ ಮಾಡುವಂತಿಲ್ಲ. ಜೊತೆಗೆ ಬೆಂಗಳೂರು ನಗರದಲ್ಲೇ ವಾಸ್ತವ್ಯ ಮಾಡುವಂತೆ ಷರತ್ತು ಹಾಕಲಾಗಿದೆ. ಹೀಗಾಗಿ ಬೆಂಗಳೂರು ನಗರದಲ್ಲೇ ಅವರು ಉಳಿಯಬೇಕಾಗಿದ್ದು, ಬೆಂಗಳೂರು ನಗರ ಬಿಟ್ಟು ಹೊರ ಬರುವಂತಿಲ್ಲ. ಇನ್ನು ಸಿಬಿಐಗೆ ಯೋಗೀಶಗೌಡ ಹತ್ಯೆ ಕೇಸ್ ಕೊಟ್ಟಿರೋದು ಸರಿಯಲ್ಲ ಅನ್ನೋದು ವಿನಯ ಕುಲಕರ್ಣಿ ಪರ ವಕೀಲರ ವಾದವಾಗಿದ್ದು, ಈ ಸಂಬಂಧ ತಮ್ಮ ಕಾನೂನು ಹೋರಾಟವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಸಾಕ್ಷಿ ನಾಶದ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಂದುವರೆಯಲಿದೆ ಎಂದು ವಿನಯ ಪರ ವಕೀಲರು ಆನಂದ ಕೊಳ್ಳಿ ಹೇಳಿದರು.

ವಿನಯ ಕುಲಕರ್ಣಿ ಅವರಿಗೆ ವರವಾದ ವರಲಕ್ಷ್ಮಿ:

ಶ್ರಾವಣ ಆರಂಭದಲ್ಲಿಯೇ ಮೊದಲ ಪ್ರಕರಣಕ್ಕೆ ಜಾಮೀನು ಸಿಕ್ಕಿತ್ತು. ಅದೇ ಜಾಮೀನಿನ ಮೇಲೆ‌ ಎರಡನೇ ಪ್ರಕರಣಕ್ಕೂ ಜಾಮೀನು ಸಿಕ್ಕಿದೆ. ವರಮಹಾಲಕ್ಷ್ಮಿ ದಿನದಂದೇ ಬಿಡುಗಡೆ ಸಿಕ್ಕಿದ್ದು ಕುಟುಂಬಸ್ಥರಲ್ಲಿ ಮತ್ತಷ್ಟು ಸಂತಸ ತರಿಸಿದೆ‌. ಎರಡೂ ಕಡೆಯೂ ಜಾಮೀನು ಸಿಕ್ಕಿರೋ ಹಿನ್ನೆಲೆಯಲ್ಲಿ 9 ತಿಂಗಳು 14 ದಿನಗಳ ಬಳಿಕ ವಿನಯ ಕುಲಕರ್ಣಿ ಅವರು ಬಿಡುಗಡೆಯಾಗುತ್ತಿದ್ದು, ಇಂದು ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ದಿನವೇ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ತೆರಳಲಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಮಂಜುನಾಥ ಯಡಳ್ಳಿ
Published by:Vijayasarthy SN
First published: