HOME » NEWS » State » HUBLI WOMEN SUICIDE ATTEMPT INFRONT OF CENTRAL MINISTER PRALHAD JOSHI HOUSE SAKLB SESR

ಬಿದ್ದ ಮನೆ ಪರಿಹಾರಕ್ಕಾಗಿ ಅಲೆದಾಟ; ಕೇಂದ್ರ ಸಚಿವ ಜೋಶಿ ಮನೆ ಎದುರು ವಿಷ ಸೇವಿಸಿ ಮಹಿಳೆ ಸಾವು

ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ದುರಾದೃಷ್ಟಕರ. ಮಹಿಳೆ ಮನವಿ ಕೊಟ್ಟ ನತರ ಈ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ‌ ಮಾಡಲು ಹೇಳಲಾಗಿತ್ತು. ಆದರೆ, ಆ ಮಹಿಳೆ ಈ ರೀತಿ ದುಡುಕಿ‌ ನಿರ್ಧಾರ ನಿರ್ಧಾರ ತೆಗೆದುಕೊಳ್ಳಬಾರದಿತ್ತು.

news18-kannada
Updated:April 9, 2021, 9:17 PM IST
ಬಿದ್ದ ಮನೆ ಪರಿಹಾರಕ್ಕಾಗಿ ಅಲೆದಾಟ; ಕೇಂದ್ರ ಸಚಿವ ಜೋಶಿ ಮನೆ ಎದುರು ವಿಷ ಸೇವಿಸಿ ಮಹಿಳೆ ಸಾವು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
  • Share this:
ಹುಬ್ಬಳ್ಳಿ(ಏ. 9): ಬಿದ್ದು ಹೋದ ಮನೆಗೆ ಪರಿಹಾರ ದೊರಕಿಸಿಕೊಡಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳ ಮನೆಗೆ ಸುತ್ತಿ ಸುತ್ತಿ ಸುಸ್ತಾದ ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಎದುರು ವಿಷ ಸೇವಿಸಿದ್ದ ಮಹಿಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.  ಮಳೆಗೆ ಬಿದ್ದ ಮನೆ ಪರಿಹಾರ ಸಿಗದೆ ಕಂಗೆಟ್ಟಿದ್ದ ಮಹಿಳೆ, ಬಿದ್ದ ಮನೆಯ ಪರಿಹಾರಕ್ಕಾಗಿ ಅಲೆದು ಅಲೆದು ಸುಸ್ತಾಗಿದ್ದಳು. ಜಿಲ್ಲಾಧಿಕಾರಿಯಿಂದ ಹಿಡಿದು ವಿವಿಧ ಅಧಿಕಾರುಗಳ ಕಛೇರಿ, ಜನಪ್ರತಿನಿಧಿಗಳ ಮನೆಗೆ ಅಡ್ಡಾಡಿ ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಕೊನೆಗೆ ನೀವಾದರೂ ಸಹಾಯ ಮಾಡಿ ಎಂದು ಕೇಳಿಕೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಬಳಿ ಬಂದಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು.

ಏಪ್ರಿಲ್​ 6 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕಿಮ್ಸ್ ಆಸ್ಪತ್ರೆಯಲ್ಲಿ‌ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ಕಮ್ಮಾರ ಎಂದು ಗುರುತಿಸಲಾಗಿದೆ.

ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಇವರ ಮನೆ ಬಿದ್ದು ಹೋಗಿತ್ತು. ಪರಿಹಾರಕ್ಕಾಗಿ ಕಳೆದ ಐದು ತಿಂಗಳಿಂದ ಅಲೆದಿದ್ದ ಮಹಿಳೆ, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹತ್ತಿರ ಹೋಗಿಯೂ ಮನವಿ ಮಾಡಿದ್ದಳು. ಯಾರೂ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದ ಶ್ರೀದೇವಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.

ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆಯನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಮಹಿಳೆ ಆತ್ಮಹತ್ಯೆ ದುರದೃಷ್ಟಕರ ಎಂದ ಸಚಿವರು

ಮಹಿಳೆ ಸಾವಿನ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪರಿಹಾರದ ಹಣ ಸಿಗಲಿಲ್ಲ ಎಂಬ ಕಾರಣಕ್ಕೆ‌ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ದುರಾದೃಷ್ಟಕರ. ಮಹಿಳೆ ಮನವಿ ಕೊಟ್ಟ ನತರ ಈ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ‌ ಮಾಡಲು ಹೇಳಲಾಗಿತ್ತು. ಆದರೆ, ಆ ಮಹಿಳೆ ಈ ರೀತಿ ದುಡುಕಿ‌ ನಿರ್ಧಾರ ನಿರ್ಧಾರ ತೆಗೆದುಕೊಳ್ಳಬಾರದಿತ್ತು.ಈ ಹಿಂದೆಯೂ ಮಹಿಳೆ ಬಂದು ಮನವಿ ಕೊಟ್ಟಿದ್ದರು. ಅವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನೂ ಕೊಡಿಸಲಾಗಿತ್ತು. ಆದರೆ ಆ ಮಹಿಳೆ ಹೆಚ್ಚಿನ ಪರಿಹಾರ ಬೇಕೆಂದು ಮತ್ತೊಮ್ಮೆ ಮನವಿ ಮಾಡಿದ್ದಳು. ಈ ಬಗ್ಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ  ತಿಳಿಸಲಾಗಿದೆ. ಅವರ  ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ

(ವರದಿ - ಶಿವರಾಮ ಅಸುಂಡಿ)
Published by: Seema R
First published: April 9, 2021, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories