• Home
  • »
  • News
  • »
  • state
  • »
  • ಯಾರಾಗಲಿದ್ದಾರೆ ಮುಂದಿನ ಸಿಎಂ?; ಧಾರವಾಡ ಜಿಲ್ಲೆಯ ನಾಯಕರ ಲೆಕ್ಕಾಚಾರ ಶುರು

ಯಾರಾಗಲಿದ್ದಾರೆ ಮುಂದಿನ ಸಿಎಂ?; ಧಾರವಾಡ ಜಿಲ್ಲೆಯ ನಾಯಕರ ಲೆಕ್ಕಾಚಾರ ಶುರು

ಬಿಎಸ್ ಯಡಿಯೂರಪ್ಪ.

ಬಿಎಸ್ ಯಡಿಯೂರಪ್ಪ.

ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರು ಹೊಸ ಹೊಸ ಲೆಕ್ಕಾಚಾರ ಆರಂಭಿಸಿದ್ದಾರೆ.

  • Share this:

ಹುಬ್ಬಳ್ಳಿ(ಜು. 22): ರಾಜಧಾನಿಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಬಿಎಸ್​ ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಜೋರಾದ ಬೆನ್ನಲ್ಲೇ ವಾಣಿಜ್ಯ ನಗರಿಯಲ್ಲಿ ಮತ್ತೆ ಯಾರು ಸಿಎಂ ಹುದ್ದೆಗೆ ಏರಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಈ ನಡುವೆ ಜಿಲ್ಲೆಯವರೇ ಯಾರಾದ್ರೂ ಸಿಎಂ ಆದ್ರೂ ಅಚ್ಚರಿಯಿಲ್ಲ ಅನ್ನೋ ಮಾತು ಕೇಳಿ ಬಂದಿದೆ.  ಬೆಂಗಳೂರು ಮತ್ತು ದೆಹಲಿ ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡ ಸಂದರ್ಭದಲ್ಲಿಯೇ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆಯ ಕಾವು ಕೂಡ ಹೆಚ್ಚಿದ್ದು, ಧಾರವಾಡದ ಮೂವರು ನಾಯಕರ ಹೆಸರು ಬಲು ಜೋರಾಗಿ ಕೇಳಿ ಬಂದಿದೆ. 


ಪ್ರಧಾನಿ ಆಪ್ತವಲಯದ ಜೋಶಿ


ಮುಖ್ಯಮಂತ್ರಿ ಹುದ್ದೆಗಳ ಪ್ರಮುಖ ಆಕಾಂಕ್ಷಿಗಳಲ್ಲಿ ಧಾರವಾಡ ಸಂಸದರೂ ಆಗಿರೋ,  ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜೋಶಿ, ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, ಸದ್ಯ ಕೇಂದ್ರ ಸಚಿವರಾಗಿ ಮುನ್ನಡೆದಿದ್ದಾರೆ. ಪ್ರಧಾನಿಗಳ ಆಪ್ತ ವಲಯದ ಸಚಿವರಲ್ಲಿ ಜೋಶಿ ಅವರೂ ಒಬ್ಬರಾಗಿದ್ದು, ಒಂದು ವೇಳೆ ಯಡಿಯೂರಪ್ಪ ಅವನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಲ್ಲಿ, ಜೋಶಿ ಅವರನ್ನು ಆ ಪಟ್ಟಕ್ಕೆ ಕೂಡಿಸಿ, ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡಲು ಅದೇ ಸಮುದಾಯವದರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡ್ತಾರೆ ಅನ್ನೋ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ನಡೆದಿದೆ.


ಬಂಡಾಯ ನಾಯಕ ಅರವಿಂದ್​ ಬೆಲ್ಲದ್​ 


ಇನ್ನು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರೋ ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ನಡೆಯೂ ತೀವ್ರ ಕುತೂಹಲ ಕೆರಳಿಸಿದೆ. ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿರೋ ಬೆಲ್ಲದ್, ಈಗಾಗಲೇ ಒಮ್ಮೆ ದೆಹಲಿಗೆ ಭೇಟಿ ನೀಡಿ, ಬಿಜೆಪಿಯ ಹಲವು ಹಿರಿಯ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಬೆನ್ನ ಹಿಂದೆಯೇ ವಾರಣಾಸಿಗೆ ಭೇಟಿ ನೀಡಿರೋ ಅರವಿಂದ್ ಬೆಲ್ಲದ್, ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆ ಅಥವಾ ಮುಂದಿನ ದಿನಗಳಲ್ಲಿ ಸಚಿವರಾದ್ರೂ ಆಗಬೇಕೆನ್ನೋ ಬಯಕೆಯಲ್ಲಿರೋ ಬೆಲ್ಲದ್, ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ.


ಲಿಂಗಾಯತ ಸಮುದಾಯದ ಶೆಟ್ಟರ್​


ಆದರೆ ಇದೆಲ್ಲದರ ಬೆಳವಣಿಗೆಯ ಬೆನ್ನ ಹಿಂದೆಯೇ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರವೊಂದು ಶುರುವಾಗಿದೆ. ಅದರ ಪ್ರಕಾರ ಜಗದೀಶ್ ಶೆಟ್ಟರ್ ಮತ್ತೊಮ್ಮೆ ಸಿಎಂ ಆದ್ರೂ ಅಚ್ಚರಿಯಿಲ್ಲ. ಹುಬ್ಬಳ್ಳಿ - ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ, ಕೈಗಾರಿಕಾ ಸಚಿವ ಆಗಿರೋ ಜಗದೀಶ್ ಶೆಟ್ಟರ್ ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಡಿಯೂರಪ್ಪ ಅವರನ್ನು ತೆಗೆದರೆ, ಲಿಂಗಾಯತ ಸಮುದಾಯದವರನ್ನೇ ಸಿಎಂ ಮಾಡಬೇಕೆಂದು ಕೆಲ ಮಠಾಧೀಶರು, ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ.


ಇದನ್ನು ಓದಿ: ಯಾವುದೇ ಆತಂಕವಿಲ್ಲ, ರಾಜೀನಾಮೆ ನೀಡಲ್ಲ ಎಂದ ಬಿಜೆಪಿ ವಲಸಿಗ ನಾಯಕರು


ಹಾಗೆಂದು ಲಿಂಗಾಯತ ಸಮುದಾಯಕ್ಕೆ ಸೇರಿದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಅವರನ್ನು ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನಾಗಿ ಮಾಡುವಂತಿಲ್ಲ ಎಂಬ ವಾದ ಯಡಿಯೂರಪ್ಪ ಬೆಂಬಲಿತ ಶಾಸಕರದ್ದಾಗಿದೆ. ಪಕ್ಷದ ವಿರುದ್ಧ, ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದವರನ್ನು ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಲ್ಲಿ ಕೂಡಿಸಬಾರದು. ಎಲ್ಲದಕ್ಕೂ ಹೊಂದಿಕೊಂಡು ಹೋಗೋ ಜಗದೀಶ್ ಶೆಟ್ಟರ್ ರನ್ನು ಮಾಡಿದರೆ ಲಿಂಗಾಯತರಿಗೂ ಸಮಾಧಾನ ಮಾಡಿದಂತಾಗುತ್ತದೆ ಎಂದು ದೆಹಲಿಗೆ ತೆರಳಿದ್ದ ಶಾಸಕರ ತಂಡ ಬಿಜೆಪಿ ಹೈಕಮಾಂಡ್ ಗೆ ಮನವರಿಕೆ ಮಾಡೋ ಪ್ರಯತ್ನ ನಡೆಸಿದೆ.


ಇದನ್ನು ಓದಿ: ಕೈಹಿಡಿಯದ ಕಾವಿಶೀಲ್ಡ್​, ರಾಜಿಯಾಗದ ಹೈಕಮಾಂಡ್​: ಯಡಿಯೂರಪ್ಪ ರಾಜೀನಾಮೆ ಖಚಿತ


ಕಟೀಲ್ ರದ್ದೆನ್ನಲಾದ ಮೊಬೈಲ್ ಸಂಭಾಷಣೆಯಲ್ಲಿ ಶೆಟ್ಟರ್ ಮತ್ತು ಈಶ್ವರಪ್ಪ ಟೀಮ್ ನ್ನು ದೂರವಿಡುವ ಮಾತು ಕೇಳಿ ಬಂದಿತ್ತು. ಅದರ ಪ್ರಕಾರ ಶೆಟ್ಟರ್ ಇರುವ ಸಚಿವ ಸ್ಥಾನವನ್ನೂ ಕಳೆದುಕೊಳ್ಳಬಹುದೆಂದೂ ಲೆಕ್ಕಿಸಲಾಗುತ್ತಿತ್ತು. ಆದರೆ ಲಿಂಗಾಯತರನ್ನೇ ಸಿಎಂ ಮಾಡಲು ಹೊರಟರೆ, ಅದಕ್ಕೆ ಶೆಟ್ಟರ್ ರೇ ಸೂಕ್ತ ಅನ್ನೋ ಅಭಿಪ್ರಾಯ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಸೃಷ್ಟಿಯಾಗಿದೆ. ಯಡಿಯೂರಪ್ಪ ಹಿಂಬಾಲಕ ಶಾಸಕರು, ಅವರನ್ನೇ ಸಿಎಂ ಹುದ್ದೆಯಲ್ಲಿ ಮುಂದುವರೆಸಬೇಕೆನ್ನು ಬೇಡಿಕೆ ಇಡೋ ಜೊತೆಗೆ, ಅವರಿಗೆ ಪರ್ಯಾಯವಾಗಿ ಮಾಡೋದಾದ್ರೆ ಶೆಟ್ಟರ್ ರನ್ನು ಮಾಡಿ ಎಂದು ಹೈಕಮಾಂಡ್ ಗೆ ಮನವರಿಕೆ ಮಾಡು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಜಗದೀಶ್ ಶೆಟ್ಟರ್ ಮತ್ತೊಮ್ಮೆ ಸಿಎಂ ಆದ್ರೂ ಅಚ್ಚರಿಯಿಲ್ಲ.


ಅದೇನೇ ಇರಲಿ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರು ಹೊಸ ಹೊಸ ಲೆಕ್ಕಾಚಾರ ಆರಂಭಿಸಿದ್ದಾರೆ. ಸಿಎಂ ಹುದ್ದೆಯ ರೇಸ್ ನಲ್ಲಿ ಮುವ್ವರಿದ್ದು, ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಅದೃಷ್ಟ ಒಲಿದು ಬರುತ್ತದೋ ಅನ್ನೋದರ ಬಗ್ಗೆ ಎಲ್ಲರ ಚಿತ್ತ ಬಿಜೆಪಿ ಹೈಕಮಾಂಡ್ ನತ್ತ ಹರಿದಿದೆ.

Published by:Seema R
First published: