No Freebies - ಕೊರೋನಾ ಹೆಸರಲ್ಲಿ ಉಚಿತ ಕೊಡುಗೆಗಳು ದೇಶಕ್ಕೆ ಗಂಡಾಂತರ - ವಿಜಯ ಸಂಕೇಶ್ವರ್
ಜನಸಾಮಾನ್ಯರಿಗೆ ಸರಕಾರ ಉಚಿತವಾಗಿ ವಸ್ತುಗಳನ್ನ ನೀಡುವುದನ್ನು ಉದ್ಯಮಿ ಹಾಗೂ ಮಾಜಿ ಬಿಜೆಪಿ ಸಂಸದ ವಿಜಯ ಸಂಕೇಶ್ವರ್ ವಿರೋಧಿಸಿದ್ದಾರೆ. ಇಂಥ ಕೊಡುಗೆಗಳು ನಾಡಿನ ಆರ್ಥಿಕತೆಗೆ ಮಾರಕ ಎಂಬುದು ಅವರ ಅನಿಸಿಕೆ.
ಹುಬ್ಬಳ್ಳಿ: ಉಚಿತ ಆಹಾರ ವಿತರಣೆಯಂತಹ ಸ್ಕೀಂ ಗಳು ದೇಶದ ಉತ್ಪಾದನಾ ವಲಯದ ಮೇಲೆ ತೀವ್ರ ತರದ ಪರಿಣಾಮ ಬೀರಲಿದೆ ಎಂದು ಮಾಜಿ ಸಂಸದ, ಉದ್ಯಮಿ ವಿಜಯ ಸಂಕೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ 2 ನೇ ಅಲೆ ಅಬ್ಬರಿಸುತ್ತಿದೆ. ಜನ ಸಾಮಾನ್ಯರು ತೊಂದರೆಗೆ ಈಡಾಗ್ತಿದಾರೆ ಅಂತ ಪ್ರಧಾನಿ ನರೇಂದ್ರ ಮೋದಿ, ಅವರ ನರವಿಗೆ ಮುಂದಾಗಿದಾರೆ. 80 ಕೋಟಿ ಜನರಿಗೆ ಉಚಿತ ರೇಷನ್ ಕೊಡೋದಾಗಿ ಪ್ರಧಾನಿ ಹೇಳಿದಾರೆ. ಇದರಿಂದ ಉತ್ಪಾದನಾ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ರೀತಿಯ ಉಚಿತ ಕೊಡುಗೆಗಳು ದೇಶಕ್ಕೆ ಗಂಡಾಂತರ. ಉಚಿತ ರೇಷನ್ ನೀಡೋದ್ರಿಂದ ಜನ ಕೆಲಸ ಮಾಡೋಕೆ ತಯಾರಿಲ್ಲ. ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿಯೂ ಉಚಿತ ರೇಷನ್ ನೀಡಿದ ಕೂಡಲೆ ಜನ ಕೆಲಸಕ್ಕೆ ಹೋಗೋದನ್ನು ಮರೆತರು ಎಂದು ವಿಜಯ್ ಸಂಕೇಶ್ವರ ಹೇಳಿದರು.
ದೇಶದಲ್ಲಿ ಕೋವಿಡ್ ಹೆಚ್ಚಳವಾಗಿದ್ದು, ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ನಡೆಸಿವೆ. 130 ಕೋಟಿ ಜನಸಂಖ್ಯೆಯಲ್ಲಿ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡೋದು ಕಷ್ಟ. ನೆಗಡಿ, ಕೆಮ್ಮಿನ ಪವರ್ ಫುಲ್ ವರ್ಷನ್ ಕೊರೋನಾ ಆಗಿದೆ. ನ್ಯಾಚುರೋಪಥಿ ಚಿಕಿತ್ಸೆ ಮೂಲಕ ಕೊರೋನಾದಿಂದ ಮುಕ್ತಿ ಪಡೆಯಬಹುದು. ಮನೆಮದ್ದು ಬಳಕೆಯಿಂದ ಕೋವಿಡ್ ತೀವ್ರತೆಯಿಂದ ಬಚಾವಾಗಬಹುದು. ನಿತ್ಯ ಸ್ಟೀಂ ತೊಗೊಂಡ್ರೆ ಆರೋಗ್ಯ ವೃದ್ಧಿ ಆಗಲಿದೆ. ನಿಂಬೆ ರಸ ಮೂಗಿಗೆ ಹಾಕಿಕೊಳ್ಳೋದ್ರಿಂದ ಉಸಿರಾಟದ ತೊಂದರೆ ನಿವಾರಣೆಯಾಗಲಿದೆ. ಆಕ್ಸಿಜನ್ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದರು.
ಕೋವಿಡ್ ವ್ಯಾಪಕಗೊಂಡಿರುವ ಈ ಸಂದರ್ಭದಲ್ಲಿ ಚುನಾವಣಾ ರ್ಯಾಲಿ, ಕುಂಭ ಮೇಳ ಇವು ಸರಿಯಲ್ಲ. ಇದರಿಂದ ಕೋವಿಡ್ ಮತ್ತಷ್ಟು ವ್ಯಾಪಕಗೊಳ್ಳಲಿದೆ. ಜನ ಕೂಡ ಬೇಜವಾಬ್ದಾರಿಯಿಂದ ವರ್ತಿಸ್ತಿದಾರೆ. ಜನ ಒಂದಷ್ಟು ಜವಾಬ್ದಾರಿಯಿಂದ ನಡೆದುಕೊಂಡರೆ ಕೊರೋನಾ ಎರಡನೆಯ ಅಲೆಯ ತೀವ್ರತೆಯನ್ನು ಒಂದಷ್ಟು ಕಡಿಮೆ ಮಾಡಬಹುದು ಎಂದು ಹುಬ್ಬಳ್ಳಿಯಲ್ಲಿ ವಿಜಯ ಸಂಕೇಶ್ವರ್ ತಿಳಿಸಿದರು.
ಮುಂದುವರಿದ ವೀಕೆಂಡ್ ಕರ್ಫ್ಯೂ....
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿದಿದೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಖರೀದಿಗೆ ಅವಕಾಶ ನೀಡಿದ್ದರಿಂದ, ಹಣ್ಣು, ಹಾಲು, ತರಕಾರಿ, ಕಿರಾಣಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಹುಬ್ಬಳ್ಳಿಯ ಗಿರಣಿ ಚಾಳ್ ಬಳಿ ತರಕಾರಿ ಖರೀದಿಗೆ ಅವಕಾಶ ನೀಡಲಾಗಿತ್ತು. ತರಾತುರಿಯಲ್ಲಿ ಜನ ತರಕಾರಿ ಖರೀದಿ ಮಾಡಿಕೊಂಡು ಹೋದರು.
ಹುಬ್ಬಳ್ಳಿ ನಗರದ ಗಣೇಶ್ ಪೇಟೆಯಲ್ಲಿ ಮೀನು ಇತ್ಯಾದಿ ನಾನ್ ವೆಜ್ ವಸ್ತುಗಳ ಮಾರಾಟ ಜೋರಾಗಿತ್ತು. ವೀಕೆಂಡ್ ಸಂಡೆಯಾಗಿರೋದ್ರಿಂದ ಮೀನು ಇತ್ಯಾದಿಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಜನ ತರಕಾರಿಗಿಂತ ಹೆಚ್ಚಾಗಿ ಮಾಂಸ ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದರು. ಗಣೇಶ ಪೇಟೆಯಲ್ಲಿ ಮಟನ್, ಚಿಕನ್, ಮೀನು ಖರೀದಿಯಲ್ಲಿ ಜನ ತೊಡಗಿದ್ದರು. ಸಾಲುಗಟ್ಟಿ ನಿಂತು ಮಾಂಸ ಪ್ರಿಯರು ಚಿಕನ್, ಮಟನ್, ಫಿಶ್ ಇತ್ಯಾದಿಗಳನ್ನು ಖರೀದಿಸಿದರು. ಬೆಳಿಗ್ಗೆ 10 ಗಂಟೆಯೊಳಗಾಗಿಯೇ ಖರೀದಿಗೆ ಅವಕಾಶ ನೀಡಿದ್ದರಿಂದ ಅಷ್ಟರೊಳಗೆ ಖರೀದಿಸಿ ಮನೆಗಳನ್ನು ಸೇರಿದರು. ಕೆಲವೆಡೆ ದಿನಸಿ ಖರೀದಿಯಲ್ಲಿಯೂ ಜನರು ತೊಡಗಿಕೊಂಡಿರು.
ವರದಿ: ಶಿವರಾಮ ಅಸುಂಡಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ