Vegetables Price Hike: ಅಕಾಲಿಕ ಮಳೆಗೆ ರೈತ ಅತಂತ್ರ; ತರಕಾರಿ ದರ ದಿಢೀರ್ ಏರಿಕೆಯಾಗಿ ಹೌಹಾರಿದ ಗ್ರಾಹಕ

ಒಂದು ಕಡೆ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿ ರೈತ ಕಣ್ಣೀರು ಹಾಕುತ್ತಿದ್ದಾನೆ. ಮತ್ತೊಂದೆಡೆ ತರಕಾರಿ ದರ ದಿಢೀರ್ ಏರಿಕೆಯಾಗಿ ಗ್ರಾಹಕನ ಕಿಸೆಗೆ ಕತ್ತರಿ ಬಿದ್ದಿದೆ. ವಾಣಿಜ್ಯ ನಗರಿಯಲ್ಲಿ ಹಲವು ತರಕಾರಿಗಳ ಬೆಲೆ ಶತಕದ ಗಡಿ ದಾಟಿದ್ದು, ಕೊಳ್ಳೋಕೆ ಮೀನ - ಮೇಷ ಎಣಿಸುವಂತಾಗಿದೆ.

ಹುಬ್ಬಳ್ಳಿ ಮಾರುಕಟ್ಟೆ

ಹುಬ್ಬಳ್ಳಿ ಮಾರುಕಟ್ಟೆ

  • Share this:
ಹುಬ್ಬಳ್ಳಿ - ಅಕಾಲಿಕವಾಗಿ ಸುರಿದ ಭಾರಿ ಮಳೆ (Unseasonal Rain) ಸೃಷ್ಟಿಸಿದ ಅವಾಂತರಗಳಿಗೆ ಲೆಕ್ಕವಿಲ್ಲ. ಮಳೆಯಿಂದಾಗಿ ಒಂದು ಕಡೆ ರೈತ ಸಮುದಾಯ (Famers) ಸಂಕಷ್ಟಕ್ಕೆ ಗುರಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ (Dharwad District) ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಕೈಗೆ ಬಂದ ತುತ್ತು ರೈತರ ಬಾಯಿಗೆ ಬಾರದಂತಾಗಿದೆ. ಇದು ಹೀಗಿರಬೇಕಾದರೆ ಅತಿಯಾದ ಮಳೆ ಹೊಡೆತಕ್ಕೆ ಜನಸಾಮಾನ್ಯನೂ ಕಕ್ಕಾಬಿಕ್ಕಿಯಾಗುವಂತಾಗಿದೆ. ತರಕಾರಿಗಳ ದರ ದಿಢೀರ್ ಏರಿಕೆ(Price Hike)ಯಾಗಿದ್ದು, ಗ್ರಾಹಕನ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅತಿವೃಷ್ಟಿಯಿಂದ ತರಕಾರಿ ಬೆಲೆ (Vegetables Price) ಗಗನಕ್ಕೇರಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಟೊಮ್ಯಾಟೊ, ಮೆಣಸಿನಕಾಯಿ ಬೆಲೆ ಶತಕದ ಗಡಿ ದಾಟಿದೆ.

ಹುಬ್ಬಳ್ಳಿ ಜನತಾ ಬಜಾರ್, ದುರ್ಗದ ಬೈಲು, ಸರಾಫ್ ಕಟ್ಟಾ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೋ 100 ರೂಪಾಯಿಗೆ ಮಾರಾಟವಾಗುತ್ತಿದೆ. ಸಣ್ಣ ಟೊಮೇಟೊ 70 ರಿಂದ 80 ರೂ.ಗಳಿಗೆ ಮಾರಾಟವಾಗುತ್ತಿದೆ. ಹಸಿ ಮೆಣಸಿನಕಾಯಿ ದರ ಪ್ರತಿ ಕೆ.ಜಿ.ಗೆ 100 ರಿಂದ 120 ರೂಪಾಯಿಗೆ ಏರಿಕೆಯಾಗಿದೆ.  ಈರುಳ್ಳಿ ದರ ಅರ್ಧ ಶತಕದ ಗಡಿ ದಾಟಿದೆ.

ತರಕಾರಿ ಬೆಲೆ ಎಷ್ಟಿದೆ?

ಬೆಂಡೆಕಾಯಿ, ಹೀರೇಕಾಯಿ, ಸೌತೇಕಾಯಿ, ಕ್ಯಾರೆಟ್, ಹೂ ಕೋಸು, ಎಲೆ ಕೋಸು ಇತ್ಯಾದಿಗಳ ದರವೂ ಗಗನಮುಖಿಯಾಗಿದೆ. ಕೆಜಿ ಕ್ಯಾರೆಟ್‌-80 ರೂ., ಬೆಂಡೇಕಾಯಿ-80ರೂ., ಆಲೂಗೆಡ್ಡೆ-35 ರೂ, ಹೀರೇಕಾಯಿ-80, ಬದನೆಕಾಯಿ-50, ಹಸಿಮೆಣಸಿನಕಾಯಿ-100 ರಿಂದ 120 ರೂಪಾಯಿ, ಎಲೆಕೋಸು-40, ಸವತಿಕಾಯಿ-60 ರೂ ಹೀಗೆ ಕಾಯಿಪಲ್ಲೆಗಳ ಬೆಲೆಗಳಲ್ಲಿ ಭಾರೀ ಹೆಚ್ಚಳ ಕಂಡಿವೆ. ಇದರ ಜತೆಗೆ ಸೊಪ್ಪುಗಳ ಬೆಲೆಯಲ್ಲೂ ಭಾರೀ ಏರಿಕೆ ಕಾಣುತ್ತಿದೆ.

Unseasonal Rain Effect Hike in the vegetables price Hubbballi Market
ಹುಬ್ಬಳ್ಳಿ ಮಾರುಕಟ್ಟೆ


ವಾಯು ಭಾರ ಕುಸಿತದಿಂದ ಧಾರವಾಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಟೊಮೇಟೊ ಬೆಳೆ ನೆಲ ಕಚ್ಚಿದೆ. ಕೆಲವೆಡೆ ಟೊಮೇಟೊ ಬೆಳೆ ಜಿಟಿ ಜಿಟಿ ಮಳೆಗೆ ನಾಶವಾಗಿವೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಸರಬರಾಜು ಆಗದಿರುವುದು ಡಿಮ್ಯಾಂಡ್‌ ಸೃಷ್ಟಿಗೆ ಕಾರಣವಾಗಿದೆ. ಅಲ್ಲದೆ ದೀಪಾವಳಿ ಹಬ್ಬದ ನಂತರ ಮದುವೆ ಹಾಗೂ ಶುಭ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.

ಕಡಿಮೆ ಪೂರೈಕೆ, ಬೇಡಿಕೆ ಹೆಚ್ಚಳ

ರಾಜ್ಯದಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದ ಟೊಮೆಟೊ ಮಾರುಕಟ್ಟೆಗೆ ಪೂರೈಕೆ ಆಗದಿರುವುದರಿಂದ ಬೆಲೆ ಏರುತ್ತಲೇ ಇದೆ. ದಿನ ನಿತ್ಯದ ಆಹಾರ ಬಳಕೆಗೆ ಅಗತ್ಯವಾಗಿರುವ ಟೊಮೆಟೊ ಈಗ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಬೆಲೆಯಲ್ಲಿ ಚೌಕಾಸಿ ಮಾಡುವುದು ಸಾಮಾನ್ಯವಾಗಿದೆ. ಬೀದಿ ವ್ಯಾಪಾರಿಗಳು ಹಾಗೂ ವರ್ತಕರು 100 ರೂ.ಗೆ 1 ಕೆ.ಜಿ ಬೇಕಾದರೆ ತಗೊಳ್ಳಿ ಇಲ್ಲವಾದರೆ ಬಿಡಿ ಎಂದು ಖಡಕ್ಕಾಗಿ ಹೇಳುವುದು ಕಂಡುಬರುತ್ತಿದೆ.

ಇದನ್ನೂ ಓದಿ:  Bengaluru Rains: ಟಿಪ್ಪು ಬಚ್ಚಿಟ್ಟ ನಿಧಿಗಾಗಿ BESCOM, BWSSB, BBMP ಹುಡುಕಾಟ: ಕಿರಣ್ ಮಜುಂದಾರ್ ಷಾ ವ್ಯಂಗ್ಯ

ತರಕಾರಿ ದರ ಕೇಳಿ ಗ್ರಾಹಕರು ಹೌಹಾರೋ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಆರಂಭಗೊಂಡಾಗಿನಿಂದಲೂ ತರಕಾರಿ ದರ ದಿಢೀರ್ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ದರ ಏರುತ್ತಲೇ ಇದೆ. ದರ ಏರಿಕೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರವೂ ಆಗುತ್ತಿಲ್ಲವೆಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ದಿಢೀರ್ ದರ ಏರಿಕೆಯಿಂದ ದಿಕ್ಕೇ ತೋಚದಂತಾಗಿದೆ. ಟೊಮೆಟೋ, ಮೆಣಸಿನಕಾಯಿ ಇತ್ಯಾದಿಗಳ ದರ ನೂರು ರೂಪಾಯಿ ದಾಟಿದೆ. ಬಹುತೇಕ ಎಲ್ಲ ತರಕಾರಿಗಳ ದರವೂ ಏರಿಕೆಯಾಗಿದೆ. ಅನಿವಾರ್ಯವಾಗಿ ಕಡಿಮೆ ಪ್ರಮಾಣದಲ್ಲಿ ತರಕಾರಿ ಖರೀದಿಸ್ತಿದ್ದೇವೆ. ದರ ಏರಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Hubli Airport: ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿಗೆ; ಖಾಸಗಿ ತೆಕ್ಕೆಗೆ ಹಾರಲಿರುವ ರಾಜ್ಯದ ಮೊದಲ ಏರ್​ಪೋರ್ಟ್?

ಗ್ರಾಹಕ, ರೈತರಿಗೆ ಮಳೆರಾಯನ ಬಿಸಿ

ಒಟ್ಟಾರೆ ಅಕಾಲಿಕ ಮಳೆಯಿಂದಾಗಿ ರೈತರಿಂದ ಹಿಡಿದು ಜನಸಾಮಾನ್ಯನವರೆಗೂ ಹೈರಾಣಾಗುವಂತಾಗಿದೆ. ಇದ್ದ ಬೆಳೆಯಲ್ಲವೂ ನಷ್ಟ ಹೊಂದಿರೋ ಭೀತಿಯಲ್ಲಿ ರೈತನಿದ್ದಾನೆ. ತರಕಾರಿ ದರ ಏರಿಕೆಯಿಂದ ತರಕಾರಿ ಬೆಳೆದ ಒಂದಷ್ಟು ರೈತರು ಸಮಾಧಾನದಿಂದಿದ್ದರೂ, ಅಲ್ಲಿಯೂ ಬಹುತೇಕ ಬೆಳೆ ಮಳೆ ಪಾಲಾಗಿರುವುದು ಕಂಗಾಲಾಗುವಂತೆ ಮಾಡಿದೆ. ಅತ್ತ ರೈತ, ಇತ್ತ ಗ್ರಾಹಕ ಇಬ್ಬರಿಗೂ ಮಳೆರಾಯನ ಬಿಸಿ ಮುಟ್ಟಿದೆ.

ವರದಿ - ಶಿವರಾಮ ಅಸುಂಡಿ.
Published by:Mahmadrafik K
First published: