ಹುಬ್ಬಳ್ಳಿ (ಏ. 8): ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯ ಕ್ರಿಯೆ (Last rites) ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅನಾಧ ಶವ ಎಂದು ಹೂತಿದ್ದ ಶವ ಹೊರತೆಗೆದು ಮತ್ತೆ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ. ಉಣಕಲ್ ಕೆರೆಯಲ್ಲಿ (Unkal Lake) ಸಿಕ್ಕಿದ್ದ ಸುಮಾರು 31 ವರ್ಷದ ವ್ಯಕ್ತಿಯ ಶವ ಅನಾಥ ಎಂದು ಪಾಲಿಕೆಯ ಸಿಬ್ಬಂದಿ ಹುಬ್ಬಳ್ಳಿಯ ಬಿಡನಾಳ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ, ಪೋಷಕರು (Parents) ಪತ್ತೆಯಾದ ಹಿನ್ನೆಲೆಯಲ್ಲಿ ಶವ ತೆಗೆಯುವುದಕ್ಕೆ ಅಧಿಕಾರಿಗಳು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಶವ ಹೊರ ತೆಗೆದು ಪೋಷಕರಿಗೆ ಹಸ್ತಾಂತರಿಸಿದ್ದಾರೆ
ಶವದ ಗುರುತು ಪತ್ತೆಯಾದ ಹಿನ್ನಲೆ ಅಂತ್ಯಕ್ರಿಯೆ
ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿದ್ದ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಇದ್ದಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಶವ ದುರ್ನಾತ ಬೀರುತ್ತಿದ್ದರಿಂದ ಶವಾಗಾರದಲ್ಲಿ ಇಟ್ಟುಕೊಳ್ಳಲು ಕಿಮ್ಸ್ ಶವಾಗಾರದ ಸಿಬ್ಬಂದಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದಂತೆಯೇ ಪಾಲಿಕೆ ಸಿಬ್ಬಂದಿಯೇ ವಾರಸುದಾರರಿಲ್ಲದ ಶವವೆಂದು ಬಿಡನಾಳ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕ
ಹುಬ್ಬಳ್ಳಿಯ ಪೆಂಡಾರ ಗಲ್ಲಿಯ ನಿವಾಸಿಯಾಗಿದ್ದ ಮುಜಾಫರ್ ಕಲಾದಗಿ (31) ಅವರು ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಕುರಿತು ಏ. 5 ರಂದು ಸಾರ್ವಜನಿಕರೊಬ್ಬರ ಮಾಹಿತಿ ಆಧರಿಸಿ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪಾರ್ಥೀವ ಶರೀರವು ಶವಾಗಾರದಲ್ಲಿರಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ, ನಿನ್ನೆ ಬಿಡನಾಳ ರುದ್ರಭೂಮಿಯಲ್ಲಿ ಮಹಾನಗರಪಾಲಿಕೆಯ ಪೌರಕಾರ್ಮಿಕರು ಅಂತ್ಯಕ್ರಿಯೆ ನೆರವೇರಿಸಿದ್ದರು. ಅಂತ್ಯಕ್ರಿಯೆ ನಡೆದ ಬಳಿಕ ರಾತ್ರಿ ಬೈಕ್ ಹಾಗೂ ಇತರೆ ವಸ್ತುಗಳನ್ನು ಮೃತನ ತಂದೆ ಅಬ್ದುಲ್ ಮುನಾಫ್ ಕಲಾದಗಿ ಅವರು ಗುರುತಿಸಿ, ಪಾರ್ಥಿವ ಶರೀರ ತಮ್ಮ ಮಗನದೆಂದು ಖಚಿತ ಪಡಿಸಿದರು.
ಇದನ್ನು ಓದಿ: ಸಂಜೀವಿನಿ ಸರಸ್ ಮೇಳ ಉದ್ಘಾಟನೆ ಬಳಿಕ ಹೆಂಡತಿಗೆ ಸೀರೆ ಖರೀದಿಸಿ ಗಮನಸೆಳೆದ CM Bommai
ಸಂಪ್ರಾದಯದಂತೆ ಅಂತ್ಯಕ್ರಿಯೆಗೆ ಪೋಷಕರ ಮನವಿ
ಆದರೆ ತನ್ನ ಮಗನ ಅಂತ್ಯಕ್ರಿಯೆ ಇಸ್ಲಾಂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಲ್ಲ ಎಂದ ಮುಜಾಫರ್ ತಂದೆ ಆರೋಪಿಸಿದ್ದರು. ಮುಜಾಫರ್ ಶವವನ್ನು ತಮಗೆ ಕೊಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲು ಧಾರವಾಡ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಸೂಚಿಸಿದ್ದರು. ಕೊನೆಗೆ ಪಾಲಿಕೆ ಸಿಬ್ಬಂದಿ ಬಿಡನಾಳ ರುದ್ರಭೂಮಿಯಲ್ಲಿ ಹೂತಿದ್ದ ಶವವನ್ನು ಹೊರತೆಗೆದಿದ್ದಾರೆ.
ಧಾರವಾಡ ಎಸಿ ತೇಲಿ ಹಾಗೂ ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ ಪ್ರಕಾಶ್ ನಾಶಿ ಸಮ್ಮುಖದಲ್ಲಿ ಶವ ಹೊರತೆಗೆಯಲಾಗಿದೆ. ಶವವನ್ನು ಪೋಷಕರಿಗೆ ಹಸ್ತಾಂತರಿಸಿದ ನಂತರ ಪೆಂಡಾರಗಲ್ಲಿಯ ರುದ್ರಭೂಮಿಯಲ್ಲಿ ಮತ್ತೊಮ್ಮೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇಸ್ಲಾಂ ಧರ್ಮದ ವಿಧಿ ವಿಧಾನಗಳ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇದನ್ನು ಓದಿ:
ಮಂಗಳೂರಿನಲ್ಲಿ ರಸ್ತೆಯಲ್ಲಿ ಹೊತ್ತಿ ಉರಿದ ಬೈಕ್- ಬಸ್
ಧಾರ್ಮಿಕ ವಿಧಿ ವಿಧಾನದಂತೆ ಎರಡನೇ ಬಾರಿ ಅಂತ್ಯ ಕ್ರಿಯೆ
ಮೃತ ಮುಜಾಫರ್ ಅವರ ಬೈಕ್ ಉಣಕಲ್ ಕೆರೆ ಬಳಿ ದೊರೆತ ನಂತರ ಅದು ನನ್ನ ಮಗನ ಶವ ಎಂದು ತಿಳಿಯಿತು. ಉಪವಿಭಾಗಾಧಿಕಾರಿಯವರಿಗೆ ಮನವಿ ಮಾಡಿಕೊಂಡ ನಂತರ ಕಾನೂನು ಪ್ರಕಾರ ಇಂದು ಮಗನ ಶವವನ್ನು ನನಗೆ ಹಸ್ತಾಂತರ ಮಾಡಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮತ್ತೊಮ್ಮೆ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಈ ವೇಳೆ ಮುಜಾಫರ್ ತಂದೆ ಅಬ್ದುಲ್ ಮುನಾಫ್ ಕಲಾದಗಿ ತಿಳಿಸಿದ್ದಾರೆ. ಮುಜಾಫರ್ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ