ಹುಬ್ಬಳ್ಳಿ : ತೀವ್ರ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ (Hubballi-Dharwad Municipal Corporation Election Result) ನಾಳೆ ಪ್ರಕಟಗೊಳ್ಳಲಿದೆ. ಕಳೆದ ಅವಧಿ ಮುಗಿದ ನಂತರ ಎರಡೂವರೆ ವರ್ಷಗಳ ಕಾಲ ತಡವಾಗಿ ಚುನಾವಣೆ ನಡೆದಿದ್ದರೂ ಮತದಾರರಿಂದ ನಿರೀಕ್ಷಿತ ಉತ್ಸಾಹ ಕಂಡು ಬರಲಿಲ್ಲ. ಪಾಲಿಕೆ ಇತಿಹಾಸದಲ್ಲಿಯೇ ಅತಿ ಕಡಿಮೆ ಮತದಾನವಾಗಿದ್ದು ಅದು ಯಾರಿಗೆ ಲಾಭವಾಗಲಿದೆ, ಯಾರಿಗೆ ನಷ್ಟವಾಗಲಿದೆ ಎಂಬ ಲೆಕ್ಕಾಚಾರ ಜೋರಾಗಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದಾಗ ಯಾರಿಗೂ ಸ್ಪಷ್ಟ ಬಹುಮತ ಬರೋದು ಡೌಟ್ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ನಡೀತಿರೋ ಚರ್ಚೆಯಾಗಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಎಲ್ಲರ ಚಿತ್ತ ಅದರತ್ತ ನೆಟ್ಟಿದೆ. ಬೆಂಗಳೂರಿನ ನಂತರ ರಾಜ್ಯದ ಅತಿದೊಡ್ಡ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿರೋದ್ರಿಂದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಫಲಿತಾಂಶ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಪಾಲಿಕೆಯಲ್ಲಿ ಬಹುತೇಕ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ರಾಜಕೀಯ ಪಕ್ಷಗಳಿಂದ ಅತ್ಯುತ್ಸಾಹಸದ ಪ್ರಚಾರ ನಡೆದಿತ್ತಾದರೂ, ಅದಕ್ಕೆ ತದ್ವಿರುದ್ಧವಾಗಿ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಚುನವಣೆಯಲ್ಲಿ ಅತಿ ಕಡಿಮೆ ಮತದಾನ - ಶೇ. 53.81 ರಷ್ಟು ಮಾತ್ರ ಮತದಾನವಾಗಿದೆ.
ಕೋವಿಡ್ ಸೋಂಕಿತರಿಗೂ ಈ ಬಾರಿ ಮತದಾನದ ಹಕ್ಕು ನೀಡಲಾಗಿತ್ತು. ಹುಬ್ಬಳ್ಳಿಯಲ್ಲಿ ವಾರ್ಡ್ ಸಂಖ್ಯೆ 49 ರ ಮತಗಟ್ಟೆ ಸಂಖ್ಯೆ 2 ರಲ್ಲಿ 52 ವರ್ಷದ ಕೋವಿಡ್ ಸೋಂಕಿತನಿಂದ ಮತದಾನ ನಡೆದಿತ್ತು. ಇದೇ ಕೋವಿಡ್ ಭೀತಿ ಮತದಾನ ಕಡಿಮೆ ಆಗಲು ಕಾರಣವಾಯಿತು ಅನ್ನೋ ಮಾತೂ ಇದೆ. ಇದರ ಜೊತೆ ಮತದಾರರ ಪಟ್ಟಿಯಲ್ಲಿನ ಗೊಂದಲ ಇತ್ಯಾದಿಗಳ ಕಾರಣದಿಂದಲೂ ಮತದಾನ ಕಡಿಮೆಯಾಗಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ತವರಿನಲ್ಲಿ ನಡೀತಿರೋ ಮೊದಲ ಚುನಾವಣೆ ಇದಾಗಿರೋದ್ರಿಂದ ಬಿಜೆಪಿ ಪಾಲಿಕೆಯಲ್ಲಿ ಕಮಲ ಅರಳಿಸೋ ಉಮೇದಿನಲ್ಲಿದೆ. ಈ ಬಾರಿ ಒಟ್ಟು 82 ವಾರ್ಡ್ ಗಳಿವೆ. ಕಳೆದ ಬಾರಿ ಒಟ್ಟು 67 ವಾರ್ಡ್ ಗಳಿದ್ದವು. ಕಳೆದ ಬಾರಿ ಬಿಜೆಪಿ – 33, ಕಾಂಗ್ರೆಸ್ -22, ಜೆಡಿಎಸ್ – 09, ಕೆ.ಜೆ.ಪಿ. – 01, ಇತರೆ – 02 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಪಾಲಿಕೆಯಲ್ಲಿ ಈ ಬಾರಿ ಒಟ್ಟು420 ಅಭ್ಯರ್ಥಿಗಳಿದ್ದು, ಅಧಿಕಾರದ ಗದ್ದುಗೆಗೆ ಏರಲು 42 ಸ್ಥಾನಗಳ ಅಗತ್ಯವಿದೆ.
ಹುಬ್ಬಳ್ಳಿ – ಧಾರವಾಡ ವ್ಯಾಪ್ತಿಯಲ್ಲಿಯೂ ಲಿಂಗಾಯಿತ ಮತದಾರ ಸಂಖ್ಯೆ ಅತಿ ಹೆಚ್ಚಿದೆ. ನಂತರದ ಸ್ಥಾನ ಹಿಂದುಳಿದ ವರ್ಗದ ಮತದಾರರದ್ದು. ಕೆಲವೆಡೆ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕರಾಗಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿತ್ತು. ಕಳೆದ ಮೂರು ಅವಧಿಗಳಲ್ಲಿಯೂ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಹೀಗಾಗಿ ಸಿಎಂ ತವರಿನಲ್ಲಿ ಮತ್ತೊಮ್ಮೆ ಕಮಲ ಅರಳೋದು ನಿಶ್ಚಿತ ಎಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಆದರೆ ಈ ಬಾರಿ ಬಿಜೆಪಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ.
ಇದನ್ನು ಓದಿ: Teachers Day: ಶಿಕ್ಷಕಾಂಕ್ಷಿಗಳಿಗೆ ಗುಡ್ ನ್ಯೂಸ್; 5 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು; ಸಿಎಂ ಬೊಮ್ಮಾಯಿ
ಬಿಜೆಪಿ ಗೆಲುವಿಗೆ ಎಎಪಿ ಅಡ್ಡಗಾಲಾಗುವ ಸಾಧ್ಯತೆಗಳಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಐಎಂಐಎಂ ಅಡ್ಡಗಾಲಾಗುವ ಸಾಧ್ಯತೆಗಳಿವೆ. ಎರಡೂ ಪಕ್ಷಗಳಿಗೆ ಬಂಡಾಯಗಾರರು ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನೊಳಗಿನ ಒಳಬೇಗುದಿ ಫಲಿತಾಂಶದ ಮೇಲೆ ಪರಿಣಾಮ ಬೀರೋ ಆತಂಕವೂ ಇದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರೋ ಸಾಧ್ಯತೆ ಕ್ಷೀಣಗೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಇದೆಲ್ಲದಕ್ಕೂ ನಾಳಿನ ಫಲಿತಾಂಶವೇ ಉತ್ತರ ನೀಡಲಿದೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ