ಕೊರೋನಾಘಾತದ ನಡುವೆಯೂ ಚೇತರಿಕೆ ಕಂಡ ರಾಷ್ಟ್ರ ಧ್ವಜ ಮಾರಾಟ; 4 ಕೋಟಿ ರೂಪಾಯಿ ವಹಿವಾಟು ನಿರೀಕ್ಷೆ!

ಹುಬ್ಬಳ್ಳಿಯ ರಾಷ್ಟ್ರ ಧ್ವಜ ತಯಾರಿಕಾ ಘಟಕ ಕೊರೋನಾಘಾದಿಂದ ಚೇತರಿಸಿಕೊಳ್ಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಧ್ವಜಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚುವ ನಿರೀಕ್ಷೆ ಇದ್ದು, ನಾಲ್ಕು ಕೋಟಿ ರೂಪಾಯಿವರೆಗೂ ವಹಿವಾಟು ನಡೆಸೋ ನಿರೀಕ್ಷೆ ಇಟ್ಟುಕೊಂಡು ಸಿಬ್ಬಂದಿ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ.

ರಾಷ್ಟ್ರಧ್ವಜ

ರಾಷ್ಟ್ರಧ್ವಜ

  • Share this:
ಹುಬ್ಬಳ್ಳಿ: ಕೊರೋನಾಘಾತದಿಂದ ಕುಸಿತ ಕಂಡಿದ್ದ ರಾಷ್ಟ್ರ ಧ್ವಜ ಮಾರಾಟ ಚೇತರಿಕೆ ಕಂಡಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರೋ ರಾಷ್ಟ್ರಧ್ವಜ ತಯಾರಿಕಾ ಘಟಕದಲ್ಲಿ ಮಳೆಗಾಲದಲ್ಲಿಯೂ ಸಿಬ್ಬಂದಿ ಓವರ್ ಟೈಮ್ ಕೆಲಸದಲ್ಲಿ ನಿರತರಾಗಿದ್ದಾರೆ. ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಿಂದ ತ್ರಿವರ್ಣ ಧ್ವಜ ತಯಾರಿಕೆ ನಡೆಯುತ್ತಿದೆ. ಇದೇ ಆಗಸ್ಟ್  15 ರಿಂದ ಮುಂದಿನ ವರ್ಷದ ಆಗಸ್ಟ್  15 ರವರೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಡೆಸುತ್ತಿರುವುದರಿಂದ 4 ಕೋಟಿ ರೂಪಾಯಿವರೆಗೂ ವಹಿವಾಟು ಆಗುವ ನಿರೀಕ್ಷೆ ಹೊಂದಲಾಗಿದೆ.

ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ ರಾಷ್ಟ್ರ ಧ್ವಜ ತಯಾರಿಕೆಗೆ ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಮಾನ್ಯತೆ ಪಡೆದಿರೋ ಏಕೈಕ ಸಂಸ್ಥೆ ಇದಾಗಿದೆ. ಕೊರೋನಾ ಕಾರಣದಿಂದಾಗಿ ಧ್ವಜ ತಯಾರಿಕೆ ಮತ್ತು ಮಾರಾಟ ತೀವ್ರ ಕುಸಿತವಾಗಿತ್ತು. ಕೊರೋನಾ ಎರಡನೆಯ ಅಲೆಯ ನಂತರ ಧ್ವಜ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ ಧ್ವಜ ತಯಾರಿಕೆಯೂ ಜೋರಾಗಿದೆ. ಮಳೆಗಾಲದಲ್ಲಿ ಸ್ಥಗಿತಗೊಂಡಿರುತ್ತಿದ್ದ ಘಟಕ ಚಾಲನೆಯಲ್ಲಿದ್ದು, ನಿಗದಿಗಿಂತ ಅಧಿಕ ಅವಧಿಯಲ್ಲಿ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ.

ಮಳೆಗಾಲದಲ್ಲಿಯೂ ಸಿಬ್ಬಂದಿ ಧ್ವಜ ತಯಾರಿಕೆ ಮಾಡುವಲ್ಲಿ ನಿರತರಾಗಿದ್ದಾರೆ. ಧ್ವಜ ತಯಾರಿಕಾ ಘಟಕದಲ್ಲಿ 21 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಮಹಿಳೆಯರೇ ಅನ್ನೋದು ವಿಶೇಷ. ಪ್ರತಿ ವರ್ಷ ಒಂದೂವರೆಯಿಂದ ಎರಡು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಕಳೆದ ವರ್ಷ ಶೇ.70 ರಷ್ಟು ಧ್ವಜ ಉತ್ಪತ್ತಿ ಮತ್ತು ಮಾರಾಟ ಕುಸಿತವಾಗಿತ್ತು. ಈ ವರ್ಷದ ಏಪ್ರಿಲ್ ನಿಂದ ಒಂದಷ್ಟು ಚೇತರಿಕೆ ಕಂಡಿದೆ.

ಸುಮಾರು 92 ಲಕ್ಷ ರೂಪಾಯಿವರೆಗೂ ಧ್ವಜದ ವಹಿವಾಟು ನಡೆದಿದ್ದು, ಮತ್ತಷ್ಟು ಮಾರಾಟವಾಗೋ ನಿರೀಕ್ಷೆ ಇದೆ. ರಾಷ್ಟ್ರ ಧ್ವಜ ಬೇಡಿಕೆ ಹೆಚ್ಚಾಗಿರೋದಕ್ಕೆ ಸಿಬ್ಬಂದಿ ಹರ್ಷಗೊಂಡಿದ್ದಾರೆ. ಓವರ್ ಟೈಮ್ ಡ್ಯೂಟಿ ಮಾಡಿ ಧ್ವಜ ತಯಾರಿಕೆಯಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷ ಧ್ವಜಕ್ಕೆ ಡಿಮ್ಯಾಂಡ್ ಇಲ್ಲದೆ ತಯಾರಿಕೆಯೂ ಸ್ಥಗಿತ, ವೇತನವೂ ಇಲ್ಲದೆ ಪರದಾಟ ಪಡುವಂತಾಗಿತ್ತು. ಆದರೆ ಈ ಬಾರಿ ಆರ್ಡರ್ ಹೆಚ್ಚಳವಾಗಿದ್ದು, ಎಲ್ಲ 21 ಸಿಬ್ಬಂದಿಯೂ ಕೆಲಸದಲ್ಲಿ ತೊಡಗಿಕೊಂಡಿದೆ ಎನ್ನುತ್ತಾರೆ ರಾಷ್ಟ್ರ ಧ್ವಜ ತಯಾರಿಕಾ ಘಟಕದ ವ್ಯವಸ್ಥಾಪಕಿ ಅನ್ನಪೂರ್ಣ.

ಮಳೆಗಾಲದಲ್ಲಿಯೂ ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದೇವೆ. ಪುರುಸೋತ್ತ ಇಲ್ಲದ ಹಾಗೆ ಕೆಲಸ ಮಾಡ್ತಿದ್ದೇವೆ. ಕಟ್ಟಿಂಗ್, ಪೇಂಟಿಂಗ್, ಸ್ಟಿಚ್ಚಿಂಗ್ ಇತ್ಯಾದಿ ಘಟಕಗಳಲ್ಲಿ ಭರದ ಕೆಲಸ ನಡೆದಿದೆ. ಹಗಲು - ರಾತ್ರಿ ಕೆಲಸ ಮಾಡಿದರೂ ಹೆಮ್ಮೆ ಇದೆ. ರಾಷ್ಟ್ರ ಪ್ರೇಮದಿಂದಲೇ ರಾಷ್ಟ್ರ ಧ್ವಜ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಖುಷಿಯಿಂದ ಹೇಳುತ್ತಾರೆ ಸಿಬ್ಬಂದಿ ಪ್ರೇಮಾ ಪೂಜಾರಿ.

ಇದನ್ನು ಓದಿ: ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ!

ಅಮೃತ ಮಹೋತ್ಸವ ವರ್ಷಾಚರಣೆಗೆ ಕಾಲಿಡೋ ಹೊಸ್ತಿಲಲ್ಲಿರೋದ್ರಿಂದ ಧ್ವಜಕ್ಕೆ ಮತ್ತಷ್ಟು ಬೇಡಿಕೆ ಸಾಧ್ಯತೆ ಇದೆ. ಇದೇ ಆಗಸ್ಟ್  15 ರಿಂದ ಮುಂದಿನ ವರ್ಷದ ಆಗಸ್ಟ್  15 ರವರೆಗೂ ಅಮೃತ ಮಹೋತ್ಸವ ಆಚರಣೆಗೆ ಕೇಂದ್ರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಅಮೃತ ಮಹೋತ್ಸವ ನಿರ್ಧಾರ ಕೈಗೊಂಡರೆ ಧ್ವಜಕ್ಕೆ ದುಪ್ಪಟ್ಟು ಬೇಡಿಕೆ ಹೆಚ್ಚಾಗಲಿದೆ. 4 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸೋ ನಿರೀಕ್ಷೆ ಇದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಹುಬ್ಬಳ್ಳಿಯ ರಾಷ್ಟ್ರ ಧ್ವಜ ತಯಾರಿಕಾ ಘಟಕ ಕೊರೋನಾಘಾದಿಂದ ಚೇತರಿಸಿಕೊಳ್ಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಧ್ವಜಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚುವ ನಿರೀಕ್ಷೆ ಇದ್ದು, ನಾಲ್ಕು ಕೋಟಿ ರೂಪಾಯಿವರೆಗೂ ವಹಿವಾಟು ನಡೆಸೋ ನಿರೀಕ್ಷೆ ಇಟ್ಟುಕೊಂಡು ಸಿಬ್ಬಂದಿ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by:HR Ramesh
First published: