ಅತ್ತ ತಾಲಿಬಾನ್ ಅಟ್ಟಹಾಸ; ಇತ್ತ ಧಾರವಾಡದಲ್ಲಿ ಆಫ್ಘಾನ್ ಮೂಲದ ವಿದ್ಯಾರ್ಥಿಗಳ ಕಣ್ಣೀರು

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಫ್ಘನ್ ಮೂಲದ 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರ ಪೈಕಿ 10 ಹುಡುಗರು ಇಲ್ಲಿಯೇ ಇದ್ದಾರೆ. ತಮ್ಮ ದೇಶದಲ್ಲಿ ಆಗುತ್ತಿರುವ ಬೆಳವಣಿಗೆ ಕಂಡು ಆತಂಕಕ್ಕೊಳಗಾಗಿದ್ದಾರೆ.

ಧಾರವಾಡದ ಕೃಷಿ ವಿವಿಯಲ್ಲಿರುವ ಆಫ್ಘನ್ ವಿದ್ಯಾರ್ಥಿಗಳು

ಧಾರವಾಡದ ಕೃಷಿ ವಿವಿಯಲ್ಲಿರುವ ಆಫ್ಘನ್ ವಿದ್ಯಾರ್ಥಿಗಳು

  • Share this:
ಧಾರವಾಡ: ಅತ್ತ ಅಫ್ಘಾನಿಸ್ತಾನದ ಮೇಲೆ‌ ತಾಲಿಬಾನ್ ತನ್ನ ಪ್ರಾಬಲ್ಯ ಸಾಧಿಸಿರೋ ಘಟನೆ ಇಡೀ ಜಗತ್ತಿನಲ್ಲೇ‌ ತಲ್ಲಣ ಮೂಡಿಸಿದೆ. ಸದ್ಯ ನಮ್ಮದೇ ರಾಜ್ಯದಲ್ಲಿರೋ ಅಪ್ಘನ್ ಮೂಲದ ವಿದ್ಯಾರ್ಥಿಗಳು ಸಹ ಅತ್ತ ತಮ್ಮ ದೇಶವನ್ನೂ ಸೇರಲಾಗದೇ ತಮ್ಮ ಕುಟುಂಬದ ಸದಸ್ಯರು ಹೇಗಿದ್ದಾರೆ ಎಂಬ ಚಿಂತೆಯಲ್ಲಿ ಮುಳಗಿದ್ದಾರೆ.

ಧಾರವಾಡದಲ್ಲಿರೋ ಕೃಷಿ ವಿಶ್ವವಿದ್ಯಾಲಯದಲ್ಲಿ ಅಫ್ಘನ್ ದೇಶದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿವಿಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರ ಪೈಕಿ ಕಳೆದ ವರ್ಷ ಐವರು ತಮ್ಮ ದೇಶಕ್ಕೆ ಮರಳಿ ಹೋಗಿದ್ದಾರೆ. ಕೊರೊನಾ ಕಾರಣಕ್ಕೆ ವಿಮಾನ ಸಂಚಾರ ಬಂದ್ ಆಗಿದ್ದರಿಂದ ಆ ಐವರು ಅಲ್ಲೇ ಉಳಿದಿದ್ರೆ, ಉಳಿದ ಹತ್ತು ಜನ ಇಲ್ಲೇ ವಿವಿಯ ಅಂತಾರಾಷ್ಟ್ರೀಯ ವಸತಿ ನಿಲಯದಲ್ಲಿ ಇದ್ದು ವಾಸವಾಗಿದ್ದಾರೆ. ಈ ಹತ್ತು ಜನರಲ್ಲಿ‌ ಕೆಲವರು ಪಿ.ಹೆಚ್.ಡಿ (ಮೂರು ವರ್ಷ) ಹಾಗೂ ಪಿಜಿ (ಎರಡು ವರ್ಷ) ಮಾಡುತ್ತಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವುದು ಅಲ್ಲಿಯ ಜನಸಾಮಾನ್ಯರಲ್ಲಿ ಆತಂಕ ‌ಮೂಡಿಸಿದೆ. ನೂರಾರು ಸಾವು ನೋವು ಕಂಡು ಸ್ಥಳೀಯರು ತಮ್ಮ ಜೀವ ಉಳಿಸಿಕೊಳ್ಳಲು ಹರ ಸಾಹಸ ಪಡುವಂತಾಗಿದೆ. ಆದ್ರೆ ತಾಲಿಬಾನಿಗಳು ನಿಮ್ಮನ್ನು ಏನು ಮಾಡಲ್ಲ ಎಂದು ಭರವಸೆ‌ ನೀಡಿದ್ದಾರೆ ಎನ್ನಲಾಗುತ್ತಿದ್ದರೂ ಅಫ್ಘಾನಿಗಳಲ್ಲಿ ಭಯ ಮಾತ್ರ ಹೋಗಿಲ್ಲ.

ಇದನ್ನೂ ಓದಿ: ಕೊರೋನಾ ಪಾಸಿಟಿವಿಟಿ ದರ ಶೇ.2 ದಾಟಿದರೆ ಬೆಂಗಳೂರಲ್ಲಿ ಕಠಿಣ ನಿಯಮ ಜಾರಿ!

ತಮ್ಮ ಊರು ಹಾಗೂ ತಮ್ಮ ಕುಟುಂಬಗಳು ತಾಲಿಬಾನಿಗಳ ಅಧೀನ್‌ಕ್ಕೆ ಒಳಗಾದ ವಿಷಯ ತಿಳಿದ ತಕ್ಷಣವೇ ಧಾರವಾಡದ ಕೃಷಿ ವಿವಿಯಲ್ಲಿರುವ ಆಫ್ಘನ್ನರಿಗೆಲ್ಲ ಶಾಕ್ ಆಗಿತ್ತು‌. ಯಾಕಂದ್ರೆ ತಾಲಿಬಾನಿಗಳ ಹಿಂಸಾಕೃತ್ಯಕ್ಕೆ ಇಳಿದ್ರೆ ನಮ್ಮವರ ಗತಿ ಏನಾಗುತ್ತೋ ಏನೋ ಅನ್ನೋ ಅಳಕು ಇವರಲ್ಲಿತ್ತು. ಆದರೆ ಯಾವಾಗ ತಾಲಿಬಾನಿಗಳು, ಅಪ್ಘನ್‌ರಿಗೆ ಏನೂ ಮಾಡೊಲ್ಲ. ನಾವು ಅಪ್ಘನ್ ಮೇಲೆ ಪ್ರಭುತ್ವ ಮಾತ್ರ ಸಾಧಿಸುತ್ತೇವೆ ಎಂದು ಹೇಳಿದ ಬಳಿಕ ತಮ್ಮ ಕುಟುಂಬದ ಚಿಂತೆ ಬಿಟ್ಟಿದ್ದಾರೆ. ಆದರೆ ಭವಿಷ್ಯದಲ್ಲಿ ನಮ್ಮ ದೇಶದ ಸ್ಥಿತಿ ಏನಾಗುವುದೋ ಅನ್ನೋ ಚಿಂತೆಯಂತೂ ಇವರಿಗೆ ಇದ್ದೇ ಇದೆ.

ಅಫ್ಘನ ದೇಶ ತಾಲಿಬಾನಿಗಳ ಕೈ ವಶ ಆಗಿದ್ದಕ್ಕೆ ಸಾಕಷ್ಟು ಚಿಂತೆ ಆಗಿದೆ. ನಮ್ಮ ಕುಟುಂಬದವರ ಸ್ಥಿತಿ ಎಲ್ಲಿ ಏನಾಗಿದೆಯೋ ಅನ್ನೋ ನೋವಿನಲ್ಲಿ ನಾವೆಲ್ಲ ಇದ್ದೇವೆ.  ಫೋನ್ ಕರೆ ಮೂಲಕ ತಮ್ಮ ಕುಟುಂಬ ಸದಸ್ಯರ ಬಗ್ಗೆ ಮಾತನಾಡಿದ್ದು ಅವರೆಲ್ಲ ಸುರಕ್ಷಿತ ಆಗಿರೋದು ತಿಳಿದು ಸ್ವಲ್ಪ ನಿರಾಳ ಆಗಿದ್ದೇವೆ ಎನ್ನುತ್ತಾರೆ ಆಫ್ಘಾನ್ ಮೂಲದ ಕೃಷಿ ವಿದ್ಯಾರ್ಥಿ ನಸ್ರತ್.

ಇದನ್ನೂ ಓದಿ: ಗದ್ದೆಗಿಳಿದು ನಾಟಿ ಮಾಡಿದ ಕೇಂದ್ರ ಕೃಷಿ ಸಚಿವೆ.. ಮಂಡ್ಯದ ಬೆಲ್ಲಕ್ಕೆ ಮನಸೋತ ಶೋಭಾ ಕರಂದ್ಲಾಜೆ

ಧಾರವಾಡದ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡಲು ಬಂದ ಸಂಶೋಧನಾ ವಿದ್ಯಾರ್ಥಿಗಳಲ್ಲಿ ತಮ್ಮ‌ಕುಟುಂಬಸ್ಥರ ಚಿಂತೆಯೇ ಆಗಿದೆ. ಸದ್ಯ ಅಫ್ಘನ್ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ನೋಡಿ ಅಲ್ಲಿ ಶಾಂತಿ ನೆಲಸಲಿ ಅನ್ನೋದೇ ಈಗ ಇಡೀ ಜಗತ್ತಿನ ಪ್ರಾರ್ಥನೆಯಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಮಂಜುನಾಥ ಯಡಳ್ಳಿ
Published by:Vijayasarthy SN
First published: