ಹುಬ್ಬಳ್ಳಿ (ಆ. 18): ಹೆಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರಂತೆ ಎಂಬ ಮಾತಿದೆ. ಅಪ್ಪ ಅಮ್ಮನನ್ನು ಎಷ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತೇವೋ ಅಷ್ಟೇ ಅಕ್ಕರೆಯಿಂದ ಹೆಂಡತಿಯ ಪೋಷಕರನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ. ಆದರೆ, ಇಲ್ಲಿ ಮಾತ್ರ ಅಳಿಯ ಮಾವನ ಮೃತ್ಯುವಾಗಿ ಪರಿಣಮಿಸಿದ್ದಾನೆ. ಹೆಂಡತಿಯನ್ನು ತನ್ನ ಜೊತೆ ಕಳುಹಿಸಲು ನಿರಾಕರಿಸಿದ ಕಾರಣಕ್ಕೆ ವೃದ್ಧ ಮಾವನ ಜೀವಕ್ಕೆ ಸಂಚಕಾರ ತಂದ ಅಳಿಯ ಈಗ ಪೊಲೀಸರ ವಶವಾಗಿದ್ದಾರೆ. ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಈ ಮಾವನನ್ನು ಅಳಿಯನೇ ಬ್ಲೇಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹೆಂಡತಿಯನ್ನು ಜೊತೆಗೆ ಕಳುಹಿಸಲು ನಿರಾಕರಿಸಿದ ಕಾರಣಕ್ಕಾಗಿ ಸಿಟ್ಟಿಗೆದ್ದ ಅಳಿಯ ಹೆಣ್ಣು ಕೊಟ್ಟ ಮಾವನ ಕೊಲೆ ಮಾಡಲು ಯತ್ನಿಸಿದ್ದಾನೆ. ಅಳಿಯನ ಕೋಪಕ್ಕೆ ತುತ್ತಾದ ವ್ಯಕ್ತಿಯನ್ನು ಶಿವಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಶಿವಪ್ಪ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜಗದೀಶ್ ಕಂಬಳಿ ಎಂಬಾತನಿಗೆ, ಹಲವು ವರ್ಷಗಳ ಹಿಂದೆ ಶಿವಪ್ಪ ದಳವಾಯಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದ. ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪತಿಯೊಂದಿಗೆ ಜಗಳವಾಡಿದ್ದ. ಗಂಡನೊಟ್ಟಿಗಿನ ಮುನಿಸಿನಿಂದ ಹೆಂಡತಿ ತವರು ಮನೆ ಸೇರಿದ್ದಳು. ಮರಳಿ ಬಾರದ ಹೆಂಡತಿಯನ್ನು ಕರೆಯಲು ಜಗದೀಶ್ ಕಂಬಳಿ ಮಾವನ ಮನೆ ಹಳ್ಳಿಕೇರಿಗೆ ಬಂದಿದ್ದಾನೆ. ಈ ವೇಳೆ ಹೆಂಡತಿಯನ್ನು ಸಮಾಧಾನ ಮಾಡಿ ಕರೆದು ಕೊಂಡು ಹೋಗುವ ಬದಲು, ಮಾವನ ಮನೆ ಮುಂದೆ ನಿಂತು ಅಸಭ್ಯವಾಗಿ ವರ್ತಿಸಿ, ಬಾಯಿಗೆ ಬಂದಂತೆ ಬೈಯಲು ಆರಂಭಿಸಿದ ಎಂದು ಹೇಳಲಾಗಿದೆ.
ಇದನ್ನು ಓದಿ: ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನದಂದೇ ಮಹಿಳಾ ಟಿಕ್ಟಾಕರ್ ಮೇಲೆ ದೌರ್ಜನ್ಯ
ಇದರಿಂದ ಅಸಮಾಧಾನಗೊಂಡ ಶಿವಪ್ಪ ತನ್ನ ಮಗಳನ್ನು ಆತನ ಜೊತೆಗೆ ಕಳುಹಿಸಲು ನಿರಾಕರಿಸಿದ್ದಾನೆ. ಈ ವೇಳೆ ಅಳಿಯ ಮತ್ತು ಮಾವನ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಆಗ ಸಿಟ್ಟಿಗೆದ್ದ ಜಗದೀಶ್ ಕಂಬಳಿ ಬ್ಲೇಡ್ ನಿಂದ ಮಾವನ ಮೇಲೆ ದಾಳಿ ನಡೆಸಿದ್ದಾನೆ. ಶಿವಪ್ಪನ ಮೇಲೆ ಏಕಾಏಕಿ ದಾಳಿ ನಡೆಯುತ್ತಿದ್ದಂತೆಯೇ, ತಂದೆಯ ಜೀವ ಉಳಿಸಲು ಆತನ ಮಗ ಮುಂದಾಗಿದ್ದಾನೆ. ಈ ವೇಳೆ ಅಡ್ಡ ಬಂದ ಮಗ ಪ್ರವೀಣ ದಳವಾಯಿಯ ಕುತ್ತಿಗೆಗೂ ಬ್ಲೇಡ್ ನಿಂದ ದಾಳಿ ನಡೆಸಿದ್ದಾನೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಸೇರಿಸಿದ ಪರಿಣಾಮ ಇಬ್ಬರ ಜೀವ ಉಳಿದಿದೆ.
ಘಟನೆಯ ಮಾಹಿತಿ ತಿಳಿದ ಅಣ್ಣಿಗೇರಿ ಠಾಣೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಜಗದೀಶ್ ಕಂಬಳಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ