Covid-19: ಎಸ್​ಡಿಎಂ ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ 306ಕ್ಕೆ ಏರಿಕೆ; ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ

ಧಾರವಾಡದ ಎಸ್.ಡಿ.ಎಂ. ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ 306ಕ್ಕೆ ಏರಿದೆ . ಇವರಲ್ಲಿ 6 ಜನರಲ್ಲಿ ಮಾತ್ರ ರೋಗಲಕ್ಷಣ ಕಾಣಿಸಿಕೊಂಡಿದೆ. ಉಳಿದವರಲ್ಲಿ ಯಾವುದೇ ಸಿಂಪ್ಟಮ್ ಕೂಡ ಇಲ್ಲ. ಎಲ್ಲರೂ ಅರೋಗ್ಯವಾಗಿದ್ದಾರೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ನಿತೇಶ್ ಪಾಟೀಲ್

ನಿತೇಶ್ ಪಾಟೀಲ್

  • Share this:
ಧಾರವಾಡ: ಕೊರೋನಾ ಹಾಟ್ ಸ್ಪಾಟ್ ಆಗಿರುವ ಎಸ್.ಡಿ.ಎಂ. ಕಾಲೇಜಿನಲ್ಲಿ ಮತ್ತೆ 25 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಅಲ್ಲಿ ಪ್ರಕರಣಗಳ ಸಂಖ್ಯೆ 306ಕ್ಕೆ ಏರಿದೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ ಕುಮಾರ್ ಅವರು ಈ ವಿಚಾರವನ್ನು ಇಂದು ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೇ, ಎಸ್​ಡಿಎಂ ಕಾಲೇಜನ್ನು ಕಂಟೇನ್ಮೆಂಟ್ ಜೋನ್ ಮಾಡುವಂತೆ‌ ಸಿಎಂ ಅವರು ಹೇಳಿದ್ದಾರೆ. ಜೊತೆಗೆ, ಜಿಲ್ಲೆಯಲ್ಲಿ ಕೋವಿಡ್ ನಿಗ್ರಹಕ್ಕೆ ಕಠಿಣ ಕ್ರಮ ‌ಜರುಗಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ಧಾರವಾಡದ ಜಿಲ್ಲಾಡಳಿತ ಸಭಾ ಭವನದಲ್ಲಿ ಸಿಎಂ ಅವರೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ಮುಖ್ಯಮಂತ್ರಿ ಅವರು ರಾಜ್ಯದ 7 ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಧಾರವಾಡ ಎಸ್.ಡಿ.ಎಂ ಕಾಲೇಜಿನಲ್ಲಿ ಕಾಣಿಸಿಕೊಂಡ ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಎಂದರು.

ಎಸ್.ಡಿ.ಎಂ ಆಸ್ಪತ್ರೆಯ ಹೊರರೋಗಿಗಳ ಚಿಕಿತ್ಸೆಯನ್ನು ನ. 29 (ಸೋಮವಾರ ) ವರೆಗೆ ಬಂದ್ ಮಾಡಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಅಡ್ಮಿಟ್ ಇರುವ ರೋಗಿಗಳಿಗೆ ಸೂಕ್ತ‌ ಚಿಕಿತ್ಸೆ‌‌ನೀಡಲು ಸೂಚನೆ ನೀಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರು, ಸಿಬ್ಬಂದಿಗೆ ಕೊರೊನಾ‌ ಸೋಂಕು ಕಂಡಿದೆ. ಈ ವಿಚಾರವಾಗಿ ಯಾರೂ ಆತಂಕ ಪಡಬೇಕಾಗಿಲ್ಲ. ಎರಡೂ ಡೋಸ್ ಆಗಿದ್ದರಿಂದ ಗಂಭೀರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Omicron Covid- ಹೊಸ ಅಪಾಯಕಾರಿ ವೈರಸ್; ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಟ್ಟೆಚ್ಚರ

ರೂಪಾಂತರಿ ಕೊರೊನಾ ಹೊರಡದಂತೆ ಮುನ್ನೆಚ್ಚರಿಕೆಯಾಗಿ ಸಾರ್ವಜನಕರು ಕಾರ್ಯಕ್ರಮಗಳಿಗೆ ಭಾಗಿಯಾದ್ದಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈಗಾಗಲೇ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಪಾಲಿಕೆ ಕಮಿಷನರ್ ಅವರು ದಂಡ ಹಾಕುವ ಕೆಲಸ ಮುಂದುವರೆಸಿದ್ದಾರೆ. ಈ ವಿಚಾರವಾಗಿ ಹೊಸ ಮಾರ್ಗಸೂಚಿ ಬರಲಿವೆ. ಕೆಲವು ಜಿಲ್ಲೆಗಳಲ್ಲಿ ಕ್ಲಸ್ಟರ್ ಬಂದಿದೆ. ಇದು ಬಿಟ್ಟರೆ ಬೇರೆ ಕಡೆ ಬಂದಿಲ್ಲ. ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಅಡ್ಮಿಟ್ ಕೂಡಾ ಬಹಳ‌ ಜನ ಆಗಿಲ್ಲ ಎಂದರು.

ಈಗಾಗಲೇ ಎಸ್.ಡಿ.ಎಂ ಕಾಲೇಜಿನಲ್ಲಿ‌ ಕಾಣಿಕೊಂಡ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ‌ ನೀಡಲಾಗುತ್ತಿದೆ. ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಕಾಲೇಜಿನವರು ಮಾಡಿದ್ದಾರೆ. ಇವರೆಲ್ಲರ ರಕ್ತ ಮಾದರಿ‌‌ ಸಹ ಪಡೆಯಲಾಗಿದೆ. ಯಾರು ಕೂಡ ಭಯ ಪಡುವ ಅಗತ್ಯ ಇಲ್ಲ ಎಂದ ಅವರು, ಎಲ್ಲೆಡೆ ಕೊರೊನಾ ರೂಪಾಂತರ ಸೋಂಕಿನ ಹರಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೊರ‌ದೇಶದಿಂದ ಎಸ್.ಡಿ.ಎಂ ಕಾಲೇಜಿಗೆ ಯಾರು ಬಂದಿಲ್ಲ. ಆದರೂ ಸಹ ಸೋಂಕು‌‌ ಕಾಣಿಸಿಕೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್; ಸಿಎಂ ನೇತೃತ್ವದಲ್ಲಿ ಸಭೆ; ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಲಿರುವ ಕ್ರಮಗಳಿವು

ಧಾರವಾಡ ಜಿಲ್ಲೆಯಲ್ಲಿ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಕಡಿಮೆ ಜನರನ್ನು ಸೇರಿಸಬೇಕಿದೆ. ಕೆಲವು ಕಾರ್ಯಕ್ರಮಗಳನ್ನು ಮುಂದೂಡುವ ಅಥವಾ ಕೈಬಿಡುವಲ್ಲಿ ಸಾರ್ವಜನಿಕರು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು. ಇನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವ ಹೊಸ ಮಾರ್ಗಸೂಚಿಗಳು, ನಿರ್ದೇಶನಗಳನ್ನು ಜಾರಿಗೊಳಿಸಲಾಗುವುದು‌. ಕೋವಿಡ್ ನಿರೋಧಕ ಲಸಿಕೆಯ ಎರಡನೇ ಡೋಸ್ ಬಾಕಿ ಇರುವವರಿಗೆ ಎಸ್ ಎಂ ಎಸ್ ಮೂಲಕ ಮಾಹಿತಿ ನೀಡಿ, ಲಸಿಕೆ ಪಡೆಯಲು ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪಂಚಾಯತ್ ಸಿಇಓ ಡಾ. ಬಿ. ಸುಶೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ್ ಮದೀನಕರ್ ಸೇರಿದಂತೆ ಜಿಲ್ಲೆಯ ತಹಸೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ: ಮಂಜುನಾಥ ಯಡಳ್ಳಿ
Published by:Vijayasarthy SN
First published: