• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಾಜಿ ಸಿಎಂ ಶೆಟ್ಟರ್-ಜಾರಕಿಹೊಳಿ ಸಭೆ; ಭಿನ್ನಮತೀಯರ ತಂತ್ರಗಾರಿಕೆಗೆ ವೇದಿಕೆಯೇ?

ಮಾಜಿ ಸಿಎಂ ಶೆಟ್ಟರ್-ಜಾರಕಿಹೊಳಿ ಸಭೆ; ಭಿನ್ನಮತೀಯರ ತಂತ್ರಗಾರಿಕೆಗೆ ವೇದಿಕೆಯೇ?

ಶೆಟ್ಟರ್​- ರಮೇಶ್​ ಜಾರಕಿಹೊಳಿ

ಶೆಟ್ಟರ್​- ರಮೇಶ್​ ಜಾರಕಿಹೊಳಿ

ಇಬ್ಬರು ನಾಯಕರ ನಡುವಿನ  ಮಾತುಕತೆ ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಚಟುವಟಿಕೆಗೆ ನಾಂದಿಹಾಡುತ್ತೆಯಾ ಎನ್ನುವ ಅನುಮಾನ ಸೃಷ್ಟಿಸಿದೆ.

  • Share this:

ಹುಬ್ಬಳ್ಳಿ (ಆ. 8): ಸಿಎಂ ಯಡಿಯೂರಪ್ಪರನ್ನು ಇಳಿಸುವಾಗಲೂ ಮತ್ತೆ ಬಸವರಾಜ ಬೊಮ್ಮಾಯಿ ಅವರನ್ನೂ ಸಿಎಂ ಸ್ಥಾನಕ್ಕೆ ಏರಿಸುವಾಗಲೂ ಹುಬ್ಬಳ್ಳಿ ರಾಜಕೀಯ ಚಟುವಟಿಕೆಯ ಕೇಂದ್ರಬಿಂದುವಾಗಿತ್ತು. ಇದೀಗ ಬಿಜೆಪಿ ಸರ್ಕಾರದಲ್ಲಿ ಹೊಸ ಸಿಎಂ ಜೊತೆ 29 ಸಚಿವರು ಸೇರ್ಪಡನೆಗೊಂಡ ಬಳಿಕವೂ ವಾಣಿಜ್ಯ ನಗರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಯ ಕೇಂದ್ರವಾಗಲಾರಂಭಿಸಿದೆ. ಅದಕ್ಕೆ ಪುಷ್ಠಿ ಸಿಕ್ಕಿದ್ದು ಸಹ ಜಗದೀಶ್ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ಭೇಟಿ. ಇಬ್ಬರು ನಾಯಕರ ನಡುವಿನ  ಮಾತುಕತೆ ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಚಟುವಟಿಕೆಗೆ ನಾಂದಿಹಾಡುತ್ತೆಯಾ ಅನ್ನೋ ಅನುಮಾನ ಸೃಷ್ಟಿಸಿದೆ.


ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯ ಮಯೂರಿ ಎಸ್ಟೇಟ್ ನಲ್ಲಿರೋ ಶೆಟ್ಟರ್ ನಿವಾಸಕ್ಕೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅರ್ಧ ಗಂಟೆಗೂ ಹೆಚ್ಚು ಕಾಲ‌ ಮಾತುಕತೆ ನಡೆಸಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಅಂತ ಘೋಷಣೆಯಾದ ಕೂಡಲೇ ಅತೃಪ್ತಿ ಹೊರ ಹಾಕಿದ್ದ ಜಗದೀಶ್ ಶೆಟ್ಟರ್, ತಾನು ಮಾಜಿ ಸಿಎಂ ಆಗಿದ್ದು, ಜೂನಿಯರ್ ಸಿಎಂ ಆಗಿರುವ ಸರ್ಕಾರದಲ್ಲಿ ಸಚಿವನಾಗೋದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ನಂತರ ಆರ್.ಎಸ್.ಎಸ್. ಕಚೇರಿಗೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು.


ಇದಾದ ನಂತರ ಬೊಮ್ಮಾಯಿ ಸಿಎಂ ಆಗಿ ಪದಗ್ರಹಣ ಮಾಡಿ ಹುಬ್ಬಳ್ಳಿಗೆ ಬಂದಿದ್ದರು. ಈ ವೇಳೆ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ, ಖುದ್ದು ಮಾತುಕತೆ ನಡೆಸುವುದಾಗಿ ಬೊಮ್ಮಾಯಿ ತಿಳಿಸಿದ್ದರು. ಆದರೆ ವಿಮಾನ ಟೇಕ್ ಆಫ್ ಗೆ ತೊಂದರೆಯಾಗಲಿದೆ ಎಂಬ ತಾಂತ್ರಿಕ ನೆಪವೊಡ್ಡಿ ಬೊಮ್ಮಾಯಿ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿರಲಿಲ್ಲ. ಇದಾದ ನಂತರ ಸಚಿವ ಸಂಪುಟ ವಿಸ್ತರಣೆಯಾಗಿ ಕೆಲ ನಾಯಕರು ಶೆಟ್ಟರ್ ಮನೆಗೆ ಭೇಟಿ ನೀಡಿ ಹೋಗಿದ್ದಾರೆ.
ಸಚಿವರಾಗಿ ಪದಗ್ರಹಣ ಮಾಡಿದ ನಂತರ ನಿನ್ನೆಯಷ್ಟೇ ನೂತನ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ವಾಪಸ್ಸಾಗಿದ್ದರು.


ಇದನ್ನು ಓದಿ: ತ್ಯಾಗ ಮಾಡಿದ್ದೇವೆ ಎಂದು ಪಕ್ಷ ಸೇವೆ ಮಾಡದೇ ದೊಡ್ಡ ಖಾತೆ ಕೇಳುವುದು ಸರಿಯಲ್ಲ; ಎಂಟಿಬಿಗೆ ಪರೋಕ್ಷವಾಗಿ ತಿವಿದ ಮುನಿರತ್ನ


ಇದರ ಬೆನ್ನ ಹಿಂದೆಯೇ ಸಚಿವ ಸ್ಥಾನ ಸಿಗದೇ ಅತೃಪ್ತಗೊಂಡಿರೋ ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಶೆಟ್ಟರ್ ಮತ್ತು ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದು, ಏನು ಚರ್ಚಿಸಿದರೆನ್ನೋದರ ಬಗ್ಗೆ ಕುತೂಹಲ ಮೂಡಿದೆ.


ರಮೇಶ್ ಜಾರಕಿಹೊಳಿ ನಂತರ ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ಸಹ ಜಗದೀಶ್ ಶೆಟ್ಟರ್ ನಿವಾಸಕ್ಕೆ‌ ಭೇಟಿಯಾಗಿದ್ದಾರೆ. ಸಚಿವ ಸಂಪುಟ ಸೇರಲ್ಲ ಅಂತ ಬಹಿರಂಗವಾಗಿ ಹೇಳಿಕೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿರೋದು ಇತ್ಯಾದಿ ವಿಚಾರಗಳ ಬಗ್ಗೆ ಶೆಟ್ಟರ್ ಅಸಮಾಧಾನಗೊಂಡಿದ್ದಾರೆ ಎಂದು ಅರಿತಿರೋ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಶೆಟ್ಟರ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ತಮಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಮತ್ತು ಕೇವಲ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದರ ಬಗ್ಗೆ ಶೆಟ್ಟರ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ತೀವ್ರ ಅಸಮಾಧಾನಗೊಂಡಿರೋ ಜಾರಕಿಹೊಳಿ, ಮುಂದಿನ ದಿನಗಳಲ್ಲಿ ತಾವು ಇಡಬೇಕಾಗಿರೋ ಹೆಜ್ಜೆಯ ಬಗ್ಗೆಯೂ ಶೆಟ್ಟರ್ ಜೊತೆ ಸಮಾಲೋಚಿಸಿದ್ದಾರೆ ಎನ್ನಲಾಗಿದೆ.


ಶೆಟ್ಟರ್ ಜೊತೆ ಜಾರಕಿಹೊಳಿ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿರೋದು ಕುತೂಹಲ ಕೆರಳಿಸಿದೆ. ಸಂಪುಟದಿಂದ ಶೆಟ್ಟರ್ ಹೊರಗುಳಿದ ಬಳಿಕ‌ ಹಲವು‌ ನಾಯಕರು ಶೆಟ್ಟರ್ ನಿವಾಸಕ್ಕೆ ಭೇಟಿಯಾಗಿ ಮಾತುಕತೆ ನಡೆಸುತ್ತಿರೋದು ವಿಶೇಷ. ಸಿಎಂ ನಿರ್ಗಮನ ಹಾಗೂ ಹೊಸ ಸಿಎಂ ಆಗಮನದ ಸಂದರ್ಭದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದ್ದ ಹುಬ್ಬಳ್ಳಿಯಲ್ಲಿ ಸದ್ಯದ ಮಟ್ಟಿಗೆ ಜಗದೀಶ್ ಶೆಟ್ಟರ್ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ಎಲ್ಲರ ದೃಷ್ಟಿ ಶೆಟ್ಟರ್ ನಿವಾಸದತ್ತ ನೆಟ್ಟಿದೆ.

First published: