ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಆಮೆಗತಿಯಲ್ಲಿ ತನಿಖೆ; ಆಸಕ್ತಿ ಕಳೆದುಕೊಂಡರಾ ಪೊಲೀಸರು?

ಹುಬ್ಬಳ್ಳಿಯ ಕೇಂದ್ರ ರೈಲು ನಿಲ್ದಾಣದಲ್ಲಿ ಕಳೆದ ಅಕ್ಟೋಬರ್‌ 21ರಂದು ನಡೆದ ಸ್ಪೋಟ ಪ್ರಕರಣದಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಜನನಿಬಿಡ ರೈಲು ನಿಲ್ದಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

news18
Updated:November 25, 2019, 5:41 PM IST
ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಆಮೆಗತಿಯಲ್ಲಿ ತನಿಖೆ; ಆಸಕ್ತಿ ಕಳೆದುಕೊಂಡರಾ ಪೊಲೀಸರು?
ಸ್ಫೋಟಕದ ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸರು.
  • News18
  • Last Updated: November 25, 2019, 5:41 PM IST
  • Share this:
ಹುಬ್ಬಳ್ಳಿ(ನ. 25): ಇಲ್ಲಿಯ ರೈಲು ನಿಲ್ದಾಣದಲ್ಲಿನ ಸ್ಪೋಟ ಪ್ರಕರಣದ ತನಿಖೆ ಹಳಿತಪ್ಪಿದೆ. ಘಟನೆ ನಡೆದು ಒಂದು ತಿಂಗಳಾದರೂ ಅಪರಾಧಿಗಳ ಸುಳಿವು ಪತ್ತೆಯಾಗಿಲ್ಲ. ದೇಶದ ಗಮನ ಸೆಳೆದಿದ್ದ ಸ್ಪೋಟ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಿಸುತ್ತಿಲ್ಲ. ಸ್ಫೋಟಕದಲ್ಲಿ ಹೆಸರು ಬರೆಯಲಾಗಿದ್ದ ಶಿವಸೇನಾ ಶಾಸಕರ ಜೊತೆಯೂ ಪೊಲೀಸರು ಮಾತನಾಡುವ ಗೋಜಿಗೆ ಹೋಗಿಲ್ಲ. ಪೊಲೀಸರು ಈ ಪ್ರಕರಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವಂತೆ ಕಾಣುತ್ತಿದೆ.

ಹುಬ್ಬಳ್ಳಿಯ ಕೇಂದ್ರ ರೈಲು ನಿಲ್ದಾಣದಲ್ಲಿ ಕಳೆದ ಅಕ್ಟೋಬರ್‌ 21ರಂದು ನಡೆದ ಸ್ಪೋಟ ಪ್ರಕರಣದಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಜನನಿಬಿಡ ರೈಲು ನಿಲ್ದಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸಪ್ರೆಸ್‌ ರೈಲಿನಲ್ಲಿದ್ದ ಎಂಟು ಸ್ಪೋಟಕಗಳ ಪೈಕಿ ಒಂದು ಸಿಡಿದಿತ್ತು. ಇನ್ನುಳಿದ ಏಳು ಸ್ಪೋಟಕಗಳನ್ನು ಬಾಂಬ್‌ ನಿಷ್ಕ್ರೀಯ ದಳದಿಂದ ನಿಷ್ಕ್ರಿಯಗೊಳಿಸಲಾಗಿತ್ತು.

ಇದನ್ನೂ ಓದಿ: ರವಿಕೃಷ್ಣಾ ರೆಡ್ಡಿ, ಎನ್.ಆರ್. ರಮೇಶ್ ವಿರುದ್ಧ ಕೆ.ಜೆ. ಜಾರ್ಜ್ ಮಾನನಷ್ಟ ಮೊಕದ್ದಮೆ

ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಆದರೆ ಇದುವರೆಗೆ ತನಿಖೆಯಲ್ಲಿ ಸಣ್ಣ ಪ್ರಮಾಣದ ಪ್ರಗತಿಯೂ ಆಗಿಲ್ಲದಿರುವುದು ಕಂಡುಬರುತ್ತಿದೆ. ತನಿಖಾ ತಂಡ ಆಂಧ್ರದ ವಿಜಯವಾಡ ಮತ್ತು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿ ಬಂದಿದೆ. ವಿಜಯವಾಡದಿಂದ ಹುಬ್ಬಳ್ಳಿವರೆಗಿನ 26 ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ ಬಹುತೇಕ ರೈಲು ನಿಲ್ದಾಣಗಳಲ್ಲಿನ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಯಾವ ನಿಲ್ದಾಣದಲ್ಲಿ ಸ್ಪೋಟಕಗಳನ್ನು ರೈಲಿನಲ್ಲಿ ಇರಿಸಲಾಯಿತು ಎನ್ನುವುದರ ಸುಳಿವು ಸಿಕ್ಕಿಲ್ಲ. ಈ ಭಾಗದವರೇ ಆದ ರೈಲ್ವೆ ಸಚಿವ ಸುರೇಶ್‌ ಅಂಗಡಿ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದಿದ್ದರು. ಆದರೆ ತನಿಖೆ ಮಾತ್ರ ಮಂದಗತಿಯಲ್ಲಿ ಸಾಗಿರುವಂತೆ ಕಂಡುಬರುತ್ತಿದ್ದು ಸಾರ್ವಜನಿಕರಲ್ಲಿ ನಿರಾಶೆ ಮೂಡಿಸಿದೆ.

ಸ್ಪೋಟಕಗಳಿದ್ದ ಬಾಕ್ಸ್‌ ಮೇಲೆ ಮಹಾರಾಷ್ಟ್ರದ ರಾಧಾನಗರಿ ಕ್ಷೇತ್ರದ ಶಾಸಕ ಪ್ರಸಾದ್‌ ಅಬಿತಕರ್ ಹೆಸರು ಬರೆಯಲಾಗಿತ್ತು. ನೋ ಬಿಜೆಪಿ, ನೋ ಆರ್‌ಎಸ್‌ಎಸ್‌, ಓನ್ಲಿ ಶಿವಸೇನಾ ಎಂದು ನಮೂದಿಸಲಾಗಿತ್ತು. ಆದರೆ ರೈಲ್ವೇ ಪೊಲೀಸರು ಇದುವರೆಗೂ ಶಾಸಕ ಪ್ರಸಾದ್‌ ಅಬಿತಕರ್‌ ಅವರ ಜೊತೆ ಚರ್ಚಿಸುವ ಪ್ರಯತ್ನ ಮಾಡಿಲ್ಲ. ಸ್ಪೋಟಕದಲ್ಲಿ ಗನ್‌ ಪೌಡರ್‌, ಸಲ್ಫರ್‌, ಅಮೋನಿಯಂ ನೈಟ್ರೇಟ್‌ ಅಂಶ ಇತ್ತೆಂದು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಆದರೆ ರೈಲ್ವೇ ಪೊಲೀಸರು ಇದುವರೆಗೂ ಎಫ್‌ಎಸ್‌ಎಲ್‌ ವರದಿಯನ್ನೂ ಸಂಗ್ರಹಿಸಿಲ್ಲ. ರೈಲ್ವೆ ಪೊಲೀಸರು ತನಿಖೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಂತೆ ಕಂಡು ಬರುತ್ತಿಲ್ಲ. ತನಿಖಾ ಪ್ರಗತಿಯ ಬಗ್ಗೆ ಕೇಳಿದ್ರೆ ಯಾವುದೇ ಉತ್ತರ ಕೊಡುತ್ತಿಲ್ಲ. ತನಿಖೆಯ ನೇತೃತ್ವ ವಹಿಸಿರುವ ರೈಲ್ವೇ ಪೊಲೀಸ್‌ ಠಾಣೆ ಡಿವೈಎಸ್‌ಪಿ ಬಿ.ಬಿ. ಪಾಟೀಲ್‌ ತನಿಖಾ ಪ್ರಗತಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸುತ್ತಿದ್ದಾರೆ.

ಇದನ್ನೂ ಓದಿ: ನೀವು ಸಿಎಂ ಆಗುವುದಾದರೆ ಮಾತ್ರ ಕಾಂಗ್ರೆಸ್​ಗೆ ವೋಟು: ದಲಿತ ಮತದಾರರ ಮಾತಿಗೆ ಜಿ. ಪರಮೇಶ್ವರ್ ಶಾಕ್

ಸ್ಪೋಟದಿಂದ ಓರ್ವ ಅಮಾಯಕ ಕಾರ್ಮಿಕ ಕೈ ಕಳೆದುಕೊಂಡಿದ್ದಾನೆ. ಇತರೆ ಏಳು ಸ್ಪೋಟಕಗಳು ಸಿಡಿದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಸಾಕಷ್ಟು ಸುರಕ್ಷತಾ ಕ್ರಮಗಳ ನಡುವೆಯೂ ರೈಲ್ವೇ ನಿಲ್ದಾಣದಲ್ಲಿ ಸ್ಪೋಟಕ ಸಿಕ್ಕಿದ್ದು ಜನರನ್ನು ಭಯಭೀತರನ್ನಾಗಿ ಮಾಡಿದೆ. ರೈಲ್ವೇ ಭದ್ರತೆಯ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ಆರೋಪಿಗಳನ್ನು ಪತ್ತೆಹಚ್ಚಿ ರೈಲ್ವೇ ಪ್ರಯಾಣಿಕರಲ್ಲಿ ಭದ್ರತೆಯ ಭರವಸೆ ಮೂಡಿಸುವ ಕೆಲಸ ಆಗಬೇಕಿದೆ. ಮೇಲ್ನೋಟಕ್ಕೆ ರೈಲ್ವೆೇ ಪೊಲೀಸರು ಮತ್ತು ರೈಲ್ವೆೇ ಇಲಾಖೆ ಪ್ರಕರಣವನ್ನು ನಿರ್ಲಕ್ಷಿಸಿದಂತೆ ಕಂಡುಬರುತ್ತಿದೆ. ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಬಂಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 25, 2019, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading