ಹುಬ್ಬಳ್ಳಿಗೆ ಹೋದಾಗಲೆಲ್ಲ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದ Puneeth Rajkumar

ಪುನೀತ್ ರಾಜಕುಮಾರ್ ಗೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿತ್ತು. ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟ ನಂತರವೇ ಮುಂದಿನ ಕೆಲಸ. ಇಲ್ಲಿಗೆ ಬಂದ್ರೆ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯುತ್ತಿದ್ದರು.

ನಟ ಪುನೀತ್ ರಾಜ್​ಕುಮಾರ್ ಇನಿಲ್ಲ

ನಟ ಪುನೀತ್ ರಾಜ್​ಕುಮಾರ್ ಇನಿಲ್ಲ

  • Share this:
ಯುವಕರ ಕಣ್ಮಣಿ, ಯುವರತ್ನ, ಎಲ್ಲರ ಮೆಚ್ಚುಗೆ ಅಪ್ಪು ಇನ್ನಿಲ್ಲ (RIP Puneeth Rajkumar). ಈ ಸುದ್ದಿ ಪುನೀತ್ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದೆರಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಜನತೆಗೆ ಈ ಸುದ್ದಿ ಅರಗಿಸಿಕೊಳ್ಳಲಾಗ್ತಿಲ್ಲ. ಅಷ್ಟರ ಮಟ್ಟಿಗೆ ಅಪ್ಪು ಉತ್ತರ ಕರ್ನಾಟಕದ ಜನತೆಗೆ ಪ್ರೀತಿಪಾತ್ರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕಣ್ಣೀರು ಹಾಕಿರೋ ಹುಬ್ಬಳ್ಳಿ ಜನ, ಅವರ ನೆನಪುಗಳನ್ನು ಮೆಲುಕು ಹಾಕಿ, ಮತ್ತೆ ಹುಟ್ಟಿಬರಲೆಂದು ಸಿದ್ಧಾರೂಢರಲ್ಲಿ ಪ್ರಾರ್ಥಿಸಿದ್ದಾರೆ. ಯುವರತ್ನ, ಅಪ್ಪು ಪುನೀತ್ ರಾಜ್ ಕುಮಾರ್ ಗೂ ಹುಬ್ಬಳ್ಳಿ ಜೊತೆ ಅವಿನಾಭಾವ ಸಂಬಂಧವಿತ್ತು. ಅವರ ತಂದೆ ರಾಜ್ ಕುಮಾರ್ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಹೆಜ್ಜೆ ಹಾಕಿದಾಗಿನಿಂದಲಂತೂ ಪುನೀತ್​ ಅವರಿಗೆ ಹುಬ್ಬಳ್ಳಿ ಮೇಲೆ ಎಲ್ಲಿಲ್ಲದ ಪ್ರೀತಿಯಿತ್ತು. ಹುಬ್ಬಳ್ಳಿಗೆ ಬಂದ್ರೆ ಮೊದಲು ಭೇಟಿ ನೀಡುತ್ತಿದ್ದ ಸ್ಥಳ ಸಿದ್ಧಾರೂಢ ಮಠವಾಗಿತ್ತು. ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿಯೇ ಪುನೀತ್ ರಾಜಕಮಾರ್ ಮುಂದಿನ ಕೆಲಸ ಮಾಡ್ತಿದ್ದರು.

ತಂದೆ ರಾಜ್ ಕುಮಾರ್ ಸಹ ಸಿದ್ಧಾರೂಢ ಮಠದ ಪರಮ ಭಕ್ತರಾಗಿದ್ದರು. ತಂದೆಯನ್ನೇ ಅನುಕರಣೆ ಮಾಡುತ್ತಿದ್ದ ಅಪ್ಪು, ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆದ ನಂತ್ರ ಮುಂದಿನ ಕೆಲಸ ಮಾಡ್ತಿದ್ದರು. ಸಿನಿಮಾ ಪ್ರಚಾರವಿರಲಿ, ಶೂಟಿಂಗ್ ಇರಲಿ ಹುಬ್ಬಳ್ಳಿಗೆ ಪುನೀತ್ ಆದ್ಯತೆ ಕೊಡ್ತಿದ್ದರು.

PM Narendra Modi condolence tweet on Power star puneeth Rajkumar death
ಪುನೀತ್ ರಾಜಕಮಾರ್


ಯುವರತ್ನ ಸಿನಿಮಾ ಶೂಟಿಂಗ್​ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದರು. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಯುವರತ್ನ ಚಿತ್ರದ ಬಹುತೇಕ ಶೂಟಿಂಗ್ ಧಾರವಾಡ ಮತ್ತು ಹುಬ್ಬಳ್ಳಿಗಳಲ್ಲಿ ನಡೆದಿತ್ತು. ಉತ್ತರ ಕರ್ನಾಟಕದ ಹಲವಾರು ಕಲಾವಿದರಿಗೂ ಸಿನೆಮಾದಲ್ಲಿ ಅವಕಾಶ ನೀಡಲಾಗಿತ್ತು. ಬೆಂಗಳೂರು ಮೈಸೂರು ಬಿಟ್ಟರೆ ಅತ್ಯಧಿಕ ಅಪ್ಪು ಅಭಿಮಾನಿಗಳು ಹುಬ್ಬಳ್ಳಿಯಲ್ಲಿದ್ದಾರೆ.

ಇದನ್ನೂ ಓದಿ: ಅಪ್ಪನಂತೆಯೇ ನೇತ್ರದಾನ ಮಾಡಿದ ಅಪ್ಪು: ಇಲ್ಲಿವೆ Puneeth Rajkumarರ ಅಪರೂಪದ ಚಿತ್ರಗಳು

ಹುಬ್ಬಳ್ಳಿಗೆ ಬಂದ್ರೆ ಮಯೂರ ಹೋಟೆಲ್, ನವೀನ್ ಹೋಟೆಲ್ ಅಥವಾ ಡೆನಿಸನ್ ಹೋಟೆಲ್​ಗಳಲ್ಲಿ ಉಳಿದುಕೊಳ್ಳುತ್ತಿದ್ದ ಪುನೀತ್, ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟವನ್ನೇ ಇಷ್ಟಪಡುತ್ತಿದ್ದರು. ಉತ್ತರ ಕರ್ನಾಟಕದ ಊಟ, ಉತ್ತರ ಕರ್ನಾಟಕ ಶೈಲಿಯ ಮಾತು ಎಲ್ಲವೂ ಪುನಿತ್ ಗೆ ಇಷ್ಟವಾಗಿತ್ತು. ಉತ್ತರ ಕರ್ನಾಟಕದಲ್ಲಿ ಯುವರತ್ನ ಸೇರಿ ಹಲವಾರು ಚಿತ್ರಗಳ  ದೃಶ್ಯೀಕರಣ ಮಾಡಲಾಗಿತ್ತು. ಪುನೀತ್ ಅಕಾಲಿಕ ನಿಧನ ಆಘಾತ ತಂದಿದೆ ಎಂದು ಪುನೀತ್ ಆಪ್ತರು ಕಂಬನಿ ಮಿಡಿದಿದ್ದಾರೆ.

ಸಿದ್ಧಾರೂಢ ಮಠದಿಂದ ಸಂತಾಪ

ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಸಿಬ್ಬಂದಿ ಕಂಬನಿ ಮಿಡಿದಿದೆ. ಹುಬ್ಬಳ್ಳಿಗೆ ಬಂದಾಗ ತಪ್ಪದೇ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದರು. ರಾಜ್ ಕುಮಾರ್ ಕಾಲದಿಂದಲೂ ಮಠಕ್ಕೆ ಅವರ ಕುಟುಂಬದ ನಿರಂತರ ಭೇಟಿ ನಡೆದಿತ್ತು. ಸಿದ್ಧಾರೂಢರ ಆಶೀರ್ವಾದದಿಂದಲೇ ಇಷ್ಟು ಮೇಲೆ ಬಂದಿರೋದಾಗಿ ರಾಜ್ ಕುಮಾರ್ ಹೇಳುತ್ತಿದ್ದರು. ಹುಬ್ಬಳ್ಳಿಗೆ ಬಂದಾಗ ತಪ್ಪದೇ ಭೇಟಿ ನೀಡುವಂತೆ ಮಕ್ಕಳಿಗೆ ರಾಜಕುಮಾರ್ ಸಲಹೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಾಗಲೆಲ್ಲ ಪುನೀತ್ ಮತ್ತು ಇತರೆ ಸಹೋದರರು ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದರು.

ಇದನ್ನೂ ಓದಿ: Puneeth Rajkumar​ ಜೊತೆ Come Back ಮಾಡುವ ಮಾತುಕತೆ ಮಾಡಿದ್ದ ನಟಿ ರಮ್ಯಾ..!

ಯುವರತ್ನ ಚಿತ್ರದ ಪ್ರೊಮೋಷನ್ ವೇಳೆಯಲ್ಲಿಯೂ ಪುನೀತ್ ರಾಜಕುಮಾರ್ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟಿದ್ದರು. ಮೊನ್ನೆಯಷ್ಟೇ ಬೆಂಗಳೂರಲ್ಲಿ ಸಿದ್ಧಾರೂಢರ ಕುರಿತ ಸಾಕ್ಷ್ಯಚಿತ್ರದ ಟ್ರೈಲರ್ ಬಿಡುಗಡೆಯನ್ನೂ ಪುನೀತ್ ಮಾಡಿದ್ದರು. ಇಂಥವರು ಹೀಗೆ ಅಕಾಲಿಕವಾಗಿ ನಿಧನರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಸಿದ್ಧಾರೂಢ ಮಠದ ಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ. ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಹೀಗಾಗುತ್ತದೆ ಎಂದುಕೊಂಡಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮಠದ ಕಾರ್ಯದರ್ಶಿ ಈರಣ್ಣ ತುಪ್ಪದ ಹಾಗೂ ಧರ್ಮದರ್ಶಿ ಸಿದ್ಧರಾಮಯ ಪ್ರಾರ್ಥಿಸಿದ್ದಾರೆ.

ಯುವ ರತ್ನನಿಗೆ ಹುಬ್ಬಳ್ಳಿಯಲ್ಲಿ ಸಂತಾಪ

ಯುವರತ್ನ, ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಸಂತಾಪ ಸೂಚಕ ಸಭೆ ಆಯೋಜಿಸಲಾಗಿತ್ತು. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ಸಂತಾಪ ಸಭೆ ನಡೆಯಿತು. ಚೆನ್ನಮ್ಮ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಿದ್ಧಾರೂಢ ಮಂತ್ರ ಪಠಣ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುನೀತ್ ಪರ ಘೋಷಣೆ ಕೂಗಿದ ಅಭಿಮಾನಿಗಳು, ಪುನೀತ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದರು. ಹುಬ್ಬಳ್ಳಿಯ ನಂಟನ್ನು ನೆನೆಸಿಕೊಂಡು ಅಭಿಮಾನಿಗಳು ಗದ್ಗದಿತರಾದರು. ನಮ್ಮೆಲ್ಲರ ಅಪ್ಪು ಇನ್ನಿಲ್ಲ ಎನ್ನೋದು ಅರಗಿಸಿಕೊಳ್ಳಲಾಗ್ತಿಲ್ಲ. ಅವರ ಪ್ರೀತಿ ವಿಶ್ವಾಸಕ್ಕೆ ಹುಬ್ಬಳ್ಳಿ ಜನ ಭಾಜನರಾಗಿದ್ದೆವೆ. ಇಂತರ ಪ್ರೀತಿಪಾತ್ರ ವ್ಯಕ್ತಿಯನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಿಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by:Anitha E
First published: