ಪಾಸಿಟಿವ್ ಬಂದ ಎರಡೇ ದಿನಕ್ಕೆ ನೆಗೆಟಿವ್ ರಿಪೋರ್ಟ್: ಕಿಮ್ಸ್ ಟೆಸ್ಟಿಂಗ್ ಲ್ಯಾಬ್ ಮೇಲೆ ಜನರ ಅನುಮಾನ

ಕೋವಿಡ್ ಪಾಸಿಟಿವ್ ಬೆನ್ನಲ್ಲೇ ನೆಗೆಟಿವ್ ರಿಪೋರ್ಟ್. ಇದೆಂಥಾ ರಿಪೋರ್ಟ್ ಎಂದು ಪ್ರಶ್ನಿಸ್ತಿರೋ ಜನ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಾಮಕಾವಸ್ತೆ ಟೆಸ್ಟ್ ಮಾಡ್ತಿದ್ದಾರೋ ಎನ್ನೋ ಅನುಮಾನ ಸೃಷ್ಟಿಯಾಗಿದೆ.

ಕಿಮ್ಸ್​​

ಕಿಮ್ಸ್​​

  • Share this:
ಹುಬ್ಬಳ್ಳಿ: ಕೊರೋನಾ (Coronavirus) ರೂಪಾಂತರದಿಂದ ಜನ ಹೈರಾಣಾಗಿದ್ದಾರೆ. ಡೆಲ್ಟಾ (Delta) ಆಯ್ತು, ಈಗ ಒಮೈಕ್ರಾನ್ (Omicon) ಬಂತು. ರಾಜ್ಯದಲ್ಲಿ ಮೂರನೇ ಅಲೆಯ  (Corona 3d Wave) ಭೀತಿಯೂ ಸೃಷ್ಟಿಯಾಯಿತು. ಹೀಗಿರುವಾಗ ಜನರಿಗೆ ಹೆಚ್ಚು ಧೈರ್ಯ ತುಂಬಬೇಕಿರೋ ಆಸ್ಪತ್ರೆಗಳಲ್ಲಿ ಬರ್ತಿರೋ ಟೆಸ್ಟ್ ವರದಿಗಳು ಮತ್ತಷ್ಟು ಕಂಗಾಲಾಗುವಂತೆ ಮಾಡ್ತಿವೆ. ಕೋವಿಡ್ ಪಾಸಿಟಿವ್ ಬಂದ ಹಿಂದೆಯೇ ಕೋವಿಡ್ ನೆಗೆಟಿವ್ ರಿಪೋರ್ಟ್ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯಲ್ಲಿ ಕೇವಲ ನಾಮಕಾವಸ್ತೆ ಟೆಸ್ಟ್ ಮಾಡಲಾಗುತ್ತಿದೆಯಾ ಅನ್ನೋ ಅನುಮಾನವೂ ಸೃಷ್ಟಿಯಾಗಿದೆ. ಕೊವಿಡ್ ನೆಗೆಟಿವ್, ಪಾಸಿಟಿವ್ ರಿಪೋರ್ಟ್ ಬಗ್ಗೆ ಜನರಲ್ಲಿ ಅನುಮಾನ ಶುರವಾಗಿದೆ. ಹುಬ್ಬಳ್ಳಿಯಲ್ಲಿ ಪಾಸಿಟಿವ್ ಬಂದಿದ್ದ ಇಬ್ಬರಿಗೆ ಎರಡೇ ದಿನಲ್ಲಿ ನೆಗೆಟಿವ್ ವರದಿ ಬಂದಿದೆ. ಸರ್ಕಾರವೇ ನೆಗೆಟಿವ್ ರಿಪೋರ್ಟ್ ನೀಡಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಎರಡೇ ದಿನದಲ್ಲಿ ಕೊರೊನಾ ಹೋಯ್ತಾ? :  ಡಿಸೆಂಬರ್ 2 ರಂದು ಹುಬ್ಬಳ್ಳಿಯ ಆರ್ಯುವೇದ ಕಾಲೇಜಿನ ಇಬ್ಬರು ವಿಧ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ಅಯೋಧ್ಯೆಯಲ್ಲಿ ನಡೆದ ಸೆಮಿನಾರ್ ಭಾಗವಹಿಸಿದ್ದ ಹಿನ್ನೆಲೆ ಟೆಸ್ಟ್ ಮಾಡಿಸಲಾಗಿತ್ತು. ಟೆಸ್ಟ್ ವೇಳೆ ಪಾಸಿಟಿವ್ ಬಂದಿತ್ತು. ಆದ್ರೆ ಮತ್ತೆ ನಿನ್ನೆ (ಡಿಸೆಂಬರ್ 4) ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಅಂತ ರಿಪೋರ್ಟ್ ಬಂದಿದೆ. ರಿಪೋರ್ಟ್‌ ನೋಡಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಕ್ ಆಗಿದ್ದಾರೆ. ಎರಡೇ ದಿನದಲ್ಲಿ ಕೊರೊನಾ ಹೋಯ್ತಾ ಅಂತ ಪಾಲಕರು ಪ್ರಶ್ನೆ ಮಾಡ್ತಿದಾರೆ.

ಟೆಸ್ಟಿಂಗ್ ಲ್ಯಾಬ್​ ಬಗ್ಗೆ ಅನುಮಾನ : ಒಂದೇ ಲ್ಯಾಬ್ ನಲ್ಲಿ ಟೆಸ್ಟಿಂಗ್ ಮಾಡಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇಬ್ಬರೂ ಟೆಸ್ಟ್ ಮಾಡಿಸಿದ್ದರು. ಕಿಮ್ಸ್ ಲ್ಯಾಬ್ ರಿಸಲ್ಟ್ ಮೇಲೆ ಅನುಮಾನ ಶುರುವಾಗಿದೆ. ಎರಡೇ ದಿನದಲ್ಲಿ ನೆಗೆಟಿವ್ ಬಂದಿದ್ದಾದ್ರು ಹೇಗೆ ಅಂತ ಪ್ರಶ್ನೆ ಮಾಡ್ತಿದಾರೆ. ಕಾಲೇಜು ಆಡಳಿತ ಮಂಡಳಿಯೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ನಿಜವಾಗಿಯೂ ಟೆಸ್ಟ್ ಮಾಡಲಾಗುತ್ತಿದೆಯಾ ಅಥವಾ ನಾಮಕಾವಸ್ತೆ ಟೆಸ್ಟ್ ಮಾಡಿ ಕೈಬಿಡ್ತಿದಾರಾ ಅನ್ನೋ ಪ್ರಶ್ನೆಯೂ ಎದ್ದಿದೆ. ಇದನ್ನೂ ಕೂಡಲೇ ಸರಿಪಡಿಸುವಂತೆ ಆಗ್ರಹವೂ ವ್ಯಕ್ತವಾಗಿದೆ.

ಮಾಲ್ ಗಳಿಗಿಲ್ಲ ಕೋವಿಡ್ ನಿಯಮ! : ರಾಜ್ಯಕ್ಕೆ ಒಮೈಕ್ರಾನ್ ಎಂಟ್ರಿ ಕೊಟ್ಟಿದ್ದು, ಕೊರೋನಾ ಮೂರನೇ ಅಲೆಯ ಭೀತಿ ಸೃಷ್ಟಿಯಾಗಿದೆ. ಹೀಗಾಗಿ ಸರ್ಕಾರ ಹೊಸ ಮಾರ್ಗಸೂಚಿಗಳ ಬಿಡುಗಡೆ ಮಾಡಿದೆ. ಮಾಲ್ ಸಿನೆಮಾ ಮಂದಿರ ಮತ್ತಿತರ ಕಡೆ ಎಂಟ್ರಿಗೆ ಕೆಲ ನಿಬಂಧನೆ ಹಾಕಿದೆ. ವ್ಯಾಕ್ಸಿನ್ ನ ಎರಡು ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಆದರೆ ಹುಬ್ಬಳ್ಳಿಯಲ್ಲಿ  ಸರಕಾರದ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಹುಬ್ಬಳ್ಳಿಯ ಯು ಮಾಲ್ ನಲ್ಲಿ ಸರ್ಕಾರದ ನಿಯಮಗಳಿಗೆ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಮಾಲ್ ನ ಆಡಳಿತ ಮಂಡಳಿ ಯಾವುದೇ ಮಾರ್ಗಸೂಚಿಗಳನ್ನು ಪಾಲನೆ ಮಾಡ್ತಿಲ್ಲ.

ಇದನ್ನೂ ಓದಿ: Airportನಿಂದ ನಾಪತ್ತೆಯಾಗಿದ್ದ ಎಲ್ಲ ದಕ್ಷಿಣ ಆಫ್ರಿಕನ್ನರು ಪತ್ತೆ, ಕೋವಿಡ್ ಪರೀಕ್ಷೆ

ಮಾಲ್ ಎಂಟ್ರೆನ್ಸ್ ನಲ್ಲಿ ಕೇವಲ ಸ್ಯಾನಿಟೈಸರ್ ಗೆ ಮಾತ್ರ ವ್ಯವಸ್ಥೆ. ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯೂ ಇಲ್ಲ. ಪ್ರಮಾಣ ಪತ್ರ ನೋಡಿ ಒಳ ಬಿಡೋದು ದೂರದ ಮಾತಾಗಿದೆ. ಮಾಲ್ ನೊಳಗೆ ಯಾರು ಬೇಕಾದ್ರೂ ಬರಬಹುದು, ಯಾರು ಬೇಕಾದ್ರೂ ಹೋಗಬಹುದು. ಮಾಸ್ಕ್ ಹಾಕದವರಿಗೂ ಒಳಗಡೆ ಪ್ರವೇಶ. ಇದರಿಂದಾಗಿ ಮಾಲ್ ನಲ್ಲಿ ಜನಜಂಗುಳಿ ವಾತಾವರಣ ನಿರ್ಮಾಣ.  ನಮಗೆ ಯಾರೂ ಕೋವಿಡ್ ಡೋಸ್ ಸರ್ಟಿಫಿಕೇಟ್ ತೋರಿಸುವಂತೆ ಕೇಳಿಲ್ಲ. ನಾವು ನೇರವಾಗಿ ಬಂದು ವಾಪಸ್ ಹೋಗುತ್ತಿದ್ದೇವೆ ಎನ್ನುತ್ತಿರೋ ಸಾರ್ವಜನಿಕರು. ಕಾಟಾಚಾರಕ್ಕೆ ಸರ್ಕಾರ ನಿಯಮಗಳನ್ನು ಮಾಡ್ತಾ ಅನ್ನೋ ಪ್ರಶ್ನೆ. ಕಾನೂನು ಪಾಲನೆ ಆಗದೇ ಇದ್ರೂ ಮೌನ ವಹಿಸಿ ಕುಳಿತ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ. ಕೊರೋನಾ ಮತ್ತಷ್ಟು ವ್ಯಾಪಕ  ಆತಂಕ ಸೃಷ್ಟಿಯಾಗಿದೆ.
Published by:Kavya V
First published: