ಪಂಚಮಸಾಲಿ ಮೀಸಲಾತಿಗೆ ಮಾಡು ಇಲ್ಲವೇ ಮಡಿ ಹೋರಾಟ – ದುಂಡು ಮೇಜಿನ ಸಭೆಯಲ್ಲಿ ತೀರ್ಮಾನ

ಹುಬ್ಬಳ್ಳಿಯಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಪಂಚಮಸಾಲಿ ಸಮುದಾಯದ ಹೋರಾಟಗಾರರು ಐದು ನಿರ್ಣಯಗಳನ್ನ ತೆಗೆದುಕೊಂಡಿದ್ದಾರೆ. ಅದರಲ್ಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಡೆಸುವ ನಿರ್ಧಾರ ಒಂದು.

ಪಂಚಮಸಾಲಿ ಸಮುದಾಯ ಮುಖಂಡರ ದುಂಡು ಮೇಜಿನ ಸಭೆ

ಪಂಚಮಸಾಲಿ ಸಮುದಾಯ ಮುಖಂಡರ ದುಂಡು ಮೇಜಿನ ಸಭೆ

  • Share this:
ಹುಬ್ಬಳ್ಳಿ: ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಪಂಚಮಸಾಲಿ 2ಎ ಹೋರಾಟಕ್ಕೆ ಸಂಬಂಧಿಸಿ ದುಂಡು ಮೇಜಿನ ಸಭೆ ನಡೆಯಿತು. ಕೂಡಲ ಸಂಗಮದ ಬಸವ ಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತಿತರರ ಉಪಸ್ಥಿತಿರಿದ್ದರು. ಸಚಿವ ಸಿಸಿ ಪಾಟೀಲ ಸಭೆಗೂ ಮುನ್ನವೇ ಬಂದು ಸ್ವಾಮೀಜಿಗಳನ್ನು ಭೇಟಿಯಾಗಿ ಹೊರಟು ಹೋದರು. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗಿಯಾಗಿದ್ದ ಸಭೆಯಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ರಾಜ್ಯ ಅಭಿಯಾನದ ಕುರಿತು ಚರ್ಚಿಸಲಾಯಿತು.

ದುಂಡು ಮೇಜಿನ ಸಭೆಯಲ್ಲಿ ಐದು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ರಾಜ್ಯ ಸರ್ಕಾರ ಸೆಪ್ಟೆಂಬರ್ 15 ರ ಒಳಗಾಗಿ ಮೀಸಲಾತಿ ನೀಡುವುದಾಗಿ ಹೇಳಿತ್ತು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಆಗಸ್ಟ್‌ 26 ರಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಕೈಗೊಳ್ಳಲಾಗುವುದು. ಕೊಟ್ಟ ಮಾತಿಗೆ ತಪ್ಪಿದಲ್ಲಿ ಮೀಸಲಾತಿ ನೀಡದೇ ಇದ್ದಲ್ಲಿ ಅಕ್ಟೋಬರ್ 01 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಆರಂಭಿಸಲಾಗುವುದು.

ಕುರುಬ, ವಾಲ್ಮೀಕಿ, ಮಡಿವಾಳ, ಗಂಗಾಮತ ಇತರೆ ಸಮುದಾಯಗಳ ಬೇಡಿಕೆಯನ್ನು ಈಡೇರಿಸಬೇಕು. ಪಂಚಮಸಾಲಿ ಮೀಸಲಾತಿ ಕುರಿತ ಸಂಧಾನದ ಮಾತುಕತೆ ನಡೆಸಲು ಸಚಿವ ಸಿ.ಸಿ. ಪಾಟೀಲ ಅವರಿಗೆ ಜವಾಬ್ದಾರಿ ನೀಡುವುದೂ ಸೇರಿದಂತೆ ಐದು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: Nagara Panchami- ಕರಾವಳಿಯಲ್ಲಿ ನಾಗರಪಂಚಮಿಗೆ ಅಷ್ಟೊಂದು ಮಹತ್ವ ಏಕೆ ಗೊತ್ತೆ?

ಮಾಡು ಇಲ್ಲವೆ ಮಡಿ ಹೋರಾಟ....

ಪಂಚಮ ಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಮುಂದಿನ ದಿನಗಳಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ಮಾಡೋದಾಗಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಎಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ಸೆಪ್ಟೆಂಬರ್ 15 ರ ಒಳಗಾಗಿ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡಬೇಕು. ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರ ಮೇಲೆ ವಿಶ್ವಾಸವಿದೆ. ಆದರೆ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ನಮ್ಮ ಹೋರಾಟ ಯಾರನ್ನೋ ಸಿಎಂ ಮಾಡೋದು ಅಥವಾ ಮಂತ್ರಿ ಮಾಡೋದು ಅಲ್ಲ. 2 ಎ ಮೀಸಲಾತಿ ಪಡೆಯೋದೊಂದೇ ಗುರಿಯಾಗಿದ್ದು, ಅದಕ್ಕಾಗಿ ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ಸಭೆಯಲ್ಲಿ ಭಾಗಿಯಾಗದ ಸಚಿವ ಸಿಸಿ ಪಾಟೀಲ...

ಹುಬ್ಬಳ್ಳಿಯಲ್ಲಿ ಖಾಸಗಿ ಹೊಟೇಲ್ ನಲ್ಲಿ ಪಂಚಮಸಾಲಿ ಸಮಾಜದ ದುಂಡು ಮೇಜಿನ‌ ಸಭೆಯಲ್ಲಿ ಸಚಿವ ಸಿಸಿ ಪಾಟೀಲ ಭಾಗಿಯಾಗಲಿಲ್ಲ. ಬಸವ ಮೃತ್ಯುಂಜಯ ಸ್ವಾಮಿಜಿ ನೇತೃತ್ವದ ಸಭೆಗೆ ಆಗಮಿಸಿದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಶ್ರೀಗಳನ್ನು ಭೆಟ್ಟಿಯಾಗಿ ಸನ್ಮಾನ ಸ್ವೀಕರಿಸಿ ಹೊರಟುಹೋದರು. ಈ ವೇಳೆ ಮಾತನಾಡಿದ ಸಿ ಸಿ ಪಾಟೀಲ, ಸಚಿವನಾದ ಬಳಿಕ ಮೊದಲ‌ ಸಲ ಸ್ವಾಮಿಜಿಗಳನ್ನ ಭೇಟಿಯಾಗಲು ಬಂದಿದ್ದೇನೆ. ಸ್ವಾಮೀಜಿಗಳು ಹುಬ್ಬಳ್ಳಿಯಲ್ಲಿದ್ದಾರೆಂದು ಗೊತ್ತಾಗಿ ಬಂದಿದ್ದೇನೆ. ಇವತ್ತು ಮೀಸಲಾತಿಗಾಗಿ ನಡೆಯುತ್ತಿರುವ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ಸರಕಾರಕ್ಕೆ ಹೋರಾಟದ ಮಾಹಿತಿ ಇದೆ. ಸರ್ಕಾರ ಸಕಾರಾತ್ಮಕವಾಗಿ ಮುಂದೆ ಹೆಜ್ಜೆ ಇಡಲಿದೆ ಎಂದು ಸಿ ಸಿ ಪಾಟೀಲ ಹೇಳಿದರು.

ಯಡಿಯೂರಪ್ಪ ಪಟ್ಟಿನಿಂದ ಪಂಚಮಸಾಲಿಗೆ ಸಿಎಂ ಸ್ಥಾನ ಸಿಗಲಿಲ್ಲ....

ಪಂಚಮಸಾಲಿ ಸಮುದಾಯದವರಿಗೆ ಸಿಎಂ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದರೆ ಕೊನೆ ಘಳಿಗೆಯಲ್ಲಿ ಸಿಕ್ಕಿಲ್ಲ. ಇದಕ್ಕೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡ್ತೇವೆ ಎಂದು ಇದೇ ವೇಳೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು. ಸದ್ಯಕ್ಕೆ ನಮ್ಮ ಗುರಿ ಇರೋದು 2 ಎ ಮೀಸಲಾತಿ ಆಗಿದೆ. ನಮ್ಮ ಉದ್ದೇಶ ಮೀಸಲಾತಿ ಸಿಗಬೇಕು ಎನ್ನೋದು. ಸಮಾಜದ ಕಟ್ಟ ಕಡೆಯ ಜನರಿಗೆ ಮೀಸಲಾತಿ ಸಿಗಬೇಕು. ಬೇರೆಯವರು ಬೇಕಾದ್ರೆ ಇನ್ನೂ 10 ಪೀಠ ಮಾಡಿಕೊಳ್ಳಲಿ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಪೀಠ ಮಾಡಿಕೊಳ್ಳಾದಾದ್ರೆ ಮಾಡಿಕೊಳ್ಳಲಿ. ನಮ್ಮ ಹೋರಾಟ ಬೆಲ್ಲದ್ ಹಾಗೂ ಯತ್ನಾಳ್ ಅವರನ್ನ ಸಿಎಂ ಮಾಡೋಕೆ ಅಲ್ಲ. ಮೀಸಲಾತಿಗಾಗಿ ನಮ್ಮ ಹೋರಾಟ.

ಬೊಮ್ಮಾಯಿವರ ಮೇಲೆ ಬಹಳ ವಿಶ್ವಾಸವಿದೆ. ಅವರು ಮಾಡೇ ಮಾಡ್ತಾರೆ. ಅವರು ಗೃಹ ಸಚಿವರಾಗಿದ್ದಾಗಲೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು. ಈಗಲೂ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: