ಹುಬ್ಬಳ್ಳಿ: ಬಿಜೆಪಿಯಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಯಡಿಯೂರಪ್ಪ ರಾಜೀನಾಮೆಯಿಂದ ಒಂದು ತಾರ್ಕಿಕ ಹಂತಕ್ಕೆ ಬಂದಿವೆ. ಯಡಿಯೂರಪ್ಪ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನ ಹಿಂದೆಯೇ ಮುಂದಿನ ಸಿಎಂ ಯಾರಾಗಬೇಕೆಂಬ ಚರ್ಚೆಗಳು ಜೋರಾಗಿವೆ. ಬಿಜೆಪಿಯಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಹುಬ್ಬಳ್ಳಿಯ ನಾಲ್ವರು ಪ್ರಬಲ ಬಿಜೆಪಿ ನಾಯಕರ ಚಿತ್ತವೂ ಸಿಎಂ ಕುರ್ಚಿಯತ್ತ ನೆಟ್ಟಿದ್ದು, ಹೈಕಮಾಂಡ್ ಯಾರಿಗೆ ಗ್ರೀನ್ ಸಿಗ್ನಲ್ ನೀಡಲಿದೆ ಅನ್ನೋದು ಕುತೂಹಲ ಕೆರಳಿಸಿದೆ.
ಜೋಷಿಗೆ ಒಲಿಯುತ್ತಾ ಸಿಎಂ ಸ್ಥಾನ?
ಸಿಎಂ ಹುದ್ದೆ ವಿಷಯಕ್ಕೆ ಬಂದಾಗ ಹುಬ್ಬಳ್ಳಿಯಲ್ಲಿ ವಾಸಿಸ್ತಿರೋ ನಾಲ್ವರು ಬಿಜೆಪಿ ನಾಯಕರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಬಂದಾಗಿನಿಂದಲೂ ಈ ನಾಯಕರ ಚಿತ್ತ ಸಿಎಂ ಕುರ್ಚಿಯತ್ತ ನೆಟ್ಟಿದೆ. ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಪ್ರಹ್ಲಾದ್ ಜೋಶಿ ಅವರನ್ನು ರಾತ್ರೋ ರಾತ್ರಿ ಭೇಟಿಯಾದ ಎರಡು ದಿನಗಳಲ್ಲಿಯೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೋಶಿ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಆರ್.ಎಸ್.ಎಸ್. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನೇರವಾಗಿ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಬಿಜೆಪಿಯ ಹಲವು ನಾಯಕರನ್ನು ಭೇಟಿಯಾದ ನಂತರ ದೆಹಲಿಗೆ ತೆರಳಿದ್ದರು. ಜೋಶಿ ದೆಹಲಿಗೆ ತೆರಳಿದ ಬೆನ್ನ ಹಿಂದೆಯೇ ಇಂದು ಮದ್ಯಾಹ್ನ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಯಡಿಯೂರಪ್ಪರಿಂದ ತೆರವಾದ ಸ್ಥಾನಕ್ಕೆ ಪ್ರಹ್ಲಾದ್ ಜೋಶಿ ಅವರ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಇದಕ್ಕಾಗಿಯೇ ರಾಜೀನಾಮೆಗೆ ಮುಂಚಿತವಾಗಿಯೇ ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಿಜೆಪಿಯ ರಾಷ್ಟ್ರೀಯ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿರೋ ಪ್ರಹ್ಲಾದ್ ಜೋಶಿ, ಸಿಎಂ ಹುದ್ದೆಯ ಸನಿಹದಲ್ಲಿಯೇ ಇದ್ದಾರೆ.
ಮುಖ್ಯಮಂತ್ರಿ ಗದ್ದುಗೆ ಏರುತ್ತಾರಾ ಅರವಿಂದ ಬೆಲ್ಲದ್ ?
ಯಡಿಯೂರಪ್ಪ ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ಲಿಂಗಾಯತರು ಬಿಜೆಪಿಗೆ ವಿರುದ್ಧವಾಗುತ್ತಾರೆ ಅನ್ನೋ ಆತಂಕವೂ ಇದೆ. ಹಾಗೊಂದು ವೇಳೆ ಬಿಜೆಪಿ ಹೈಕಮಾಂಡ್ ಈ ದೃಷ್ಟಿಯಲ್ಲಿ ಆಲೋಚನೆ ಮಾಡಿದರೆ ಲಿಂಗಾಯತ ಸಮುದಾಯದ ಮುವ್ವರು ನಾಯಕರು ಸಿದ್ಧವಾಗಿ ನಿಂತಿದ್ದಾರೆ. ಕೆಲ ದಿನಗಳಿಂದಲೂ ಯಡಿಯೂರಪ್ಪಗೆ ಸೆಡ್ಡು ಹೊಡೆದು, ದೆಹಲಿಯವರೆಗೂ ಹೋಗಿ ಹೈಕಮಾಂಟ್ ಕದ ತಟ್ಟಿ ಬಂದಿದ್ದ ಅರವಿಂದ ಬೆಲ್ಲದ್ ಸಿಎಂ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನೀಡಿದ್ದಾರೆ.
ಮುರುಗೇಶ್ ನಿರಾಣಿಗೆ ಮಣೆ ಹಾಕುತ್ತಾ ಹೈಕಮಾಂಡ್?
ಸಿಎಂ ಸ್ಥಾನದ ಮತ್ತೋರ್ವ ಆಕಾಂಕ್ಷಿ ಮುರುಗೇಶ್ ನಿರಾಣಿ ಕಾಶಿಗೆ ಭೇಟಿ ನೀಡಿದ ಬೆನ್ನ ಹಿಂದೆಯೇ ಬೆಲ್ಲದ್ ಸಹ ಕಾಶಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಬೆಲ್ಲದ್ ಪರ ಹಲವು ಮಠಾಧೀಶರು ಒಲವು ವ್ಯಕ್ತಪಡಿಸಿದ್ದು, ಅದರ ಫಲಿತಾಂಶಕ್ಕಾಗಿ ಎದುರು ನೋಡಬೇಕಾಗಿದೆ.
ಒಂದು ವೇಳೆ ಲಿಂಗಾಯತರಿಗೇ ಸಿಎಂ ಸ್ಥಾನ ನೀಡೋದಾದ್ರೆ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ ಹಾಗೂ ಅರವಿಂದ ಬೆಲ್ಲದ್ ರನ್ನು ದೂರವಿಡಬೇಕೆಂಬ ಕೂಗು ಯಡಿಯೂರಪ್ಪ ಬಣದ ಶಾಸಕರದ್ದಾಗಿದೆ. ಮೊನ್ನೆಯಷ್ಟೇ ದೆಹಲಿಗೆ ಹೋಗಿದ್ದ ರೇಣುಕಾಚಾರ್ಯ ಅಂಡ್ ಟೀಮ್, ಬಿಜೆಪಿಯ ಹಿರಿಯ ನಾಯಕರ ಜೊತೆ ಈ ಕುರಿತು ಮಾತುಕತೆ ನಡೆಸಿ ವಾಪಸ್ಸಾಗಿದ್ದಾರೆ.
ಶೆಟ್ಟರ್ಗೆ ಮತ್ತೆ ಸಿಎಂ ಪಟ್ಟ?
ಲಿಂಗಾಯತ ಕೋಟಾದ ಅಡಿ ಜಗದೀಶ್ ಶೆಟ್ಟರ್ ರನ್ನು ಮತ್ತೊಮ್ಮೆ ಸಿಎಂ ಮಾಡಿ. ಅವರಾದರೆ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುತ್ತಾರೆ ಅನ್ನೋ ಮಾತುನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಬೆಂಬಲಿಗರ ಶಾಸಕರು ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆಯೇ ಜಗದೀಶ್ ಶೆಟ್ಟರ್ ಆರ್.ಎಸ್.ಎಸ್. ಕಛೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಮತ್ತೊಮ್ಮೆ ಸಿಎಂ ಆಗಬೇಕೆಂಬ ಯತ್ನವನ್ನು ಶೆಟ್ಟರ್ ಮುಂದುವರೆಸಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಎದುರು ನೋಡ್ತಿದ್ದಾರೆ.
ಇದನ್ನೂ ಓದಿ: BS Yediyurappa Resigns: ಬಿ.ಎಸ್.ಯಡಿಯೂರಪ್ಪರ ರಾಜೀನಾಮೆ ನೀಡಿದ್ದರ ಹಿಂದಿನ 5 ಕಾರಣಗಳು ಇಲ್ಲಿವೆ..!
ಇನ್ನು ಯಡಿಯೂರಪ್ಪರ ಆಪ್ತ ಬಸವರಾಜ ಬೊಮ್ಮಾಯಿ ಸಹ ಸಿಎಂ ರೇಸ್ ನಲ್ಲಿದ್ದಾರೆ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಶಾಸಕ ಕ್ಷೇತ್ರದ ಶಾಸಕರಾಗಿದ್ದರೂ ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿದ್ದಾರೆ. ತನ್ನ ಮಾತನ್ನು ಕೇಳುವವರನ್ನು ಸಿಎಂ ಮಾಡಬೇಕೆಂಬ ಅಪೇಕ್ಷೆಯನ್ನು ಯಡಿಯೂರಪ್ಪ ಹೊಂದಿದ್ದಾರೆ ಎನ್ನಲಾಗಿದ್ದು, ಅವರ ಲಿಸ್ಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರೂ ಇದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರೂ ಸಿಎಂ ಆದ್ರೂ ಅಚ್ಚರಿಯಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.
ಒಂದು ವಾರದೊಳಗಾಗಿ ನೂತನ ಸಿಎಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಸಿಎಂ ಗಾದಿಯಲ್ಲಿ ಯೂರು ಕೂಡಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಹುಬ್ಬಳ್ಳಿ - ಧಾರವಾಡದ ನಾಲ್ವರು ನಾಯಕರೂ ತಮ್ಮ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದು, ಹೈಕಮಾಂಡ್ ಚಿತ್ತ ಯಾರತ್ತ ನೆಟ್ಟಿದೆ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ಎಲ್ಲದಕ್ಕೂ ಶೀಘ್ರವೇ ಉತ್ತರ ಸಿಗಲಿದ್ದು, ಹುಬ್ಬಳ್ಳಿಯ ಜನ ಮಾತ್ರ ನಮ್ಮವರೇ ಸಿಎಂ ಆಗ್ತಾರೆ ಅನ್ನೋ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ