Puneeth Rajkumar- ಪುನೀತ್ ಪ್ರೇರಣೆ: ಮದುವೆ ಮಂಟಪದಲ್ಲೇ ನವದಂಪತಿ, ಪೋಷಕರಿಂದ ನೇತ್ರದಾನ

ಪುನೀತ್ ರಾಜಕುಮಾರ್ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ ನವ ದಂಪತಿಗಳ ಜೊತೆಗೆ ಅವರ ಕುಟುಂಬದ ಸದಸ್ಯರು, ಮದುವೆಗೆ ಬಂದ ಬಂಧುಗಳೂ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಎಲ್ಲರಿಗೂ ಮಾದರಿಯಾಗೋ ಕೆಲಸ ಮಾಡಿದ್ದು, ನೇತ್ರತಜ್ಞರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುನೀತ್ ರಾಜಕುಮಾರ್ ಪ್ರೇರಣೆಯಿಂದ ನೇತ್ರದಾನ ಮಾಡಿದ ಹುಬ್ಬಳ್ಳಿ ದಂಪತಿ

ಪುನೀತ್ ರಾಜಕುಮಾರ್ ಪ್ರೇರಣೆಯಿಂದ ನೇತ್ರದಾನ ಮಾಡಿದ ಹುಬ್ಬಳ್ಳಿ ದಂಪತಿ

  • Share this:
ಹುಬ್ಬಳ್ಳಿ: ಪುನೀತ್ ರಾಜಕುಮಾರ್ (Puneeth Rajkumar) ಸಮಾಜಮುಖಿ ಕೆಲಸ ಅವರ ನಿಧನದ ನಂತರ ಸಮಾಜದ ಮೇಲೆ ಸಕಾರಾತ್ಮಕ ಬೆಳವಣಿಗೆಗೆ ನಾಂದಿ ಹಾಡಿದೆ. ಪುನೀತ್ ರಾಜಕುಮಾರ್ ನಿಧನದ ನಂತರ ನೇತ್ರದಾನದ (Eye Donation) ಕುರಿತು ಜಾಗೃತಿ ಹೆಚ್ಚಾಗ್ತಿದೆ. ವಿವಾಹದ ಸಂದರ್ಭದಲ್ಲಿಯೇ ನವ ದಂಪತಿಗಳು (Newly Wed Couple) ನೇತ್ರದಾನ ಮಾಡಿದ್ದಾರೆ. ಅವರ ಜೊತೆ ನವ ದಂಪತಿಗಳ ಪೋಷಕರೂ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆ ಚವ್ಹಾಣ ಗಾರ್ಡನ್​ನಲ್ಲಿ (Chavan Garden, Gokul Road) ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ  ಪುತ್ರ ಸುಚೀತ್ ಹಾಗೂ ರಜನಿ ವಿವಾಹ ಮಹೋತ್ಸವ ನೆರವೇರಿತು. ನವ ದಂಪತಿಗಳು ಹಸೆಮಣೆ ಏರುವ ಮುನ್ನವೇ ನೇತ್ರದಾನ ಸಹಿ ಮಾಡಿದ್ದಾರೆ. ನವ ದಂಪತಿಗಳ ಜೊತೆ ಇಡೀ ಕುಟುಂಬದ ಸದಸ್ಯರಿಂದಲೂ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದು, ಹುಬ್ಬಳ್ಳಿಯ ಎಂ. ಎಂ. ಜೋಶಿ ನೇತ್ರಾಲಯಕ್ಕೆ ನೋಂದಣಿ ಪತ್ರ ಹಸ್ತಾಂತರ ಮಾಡಿದ್ದಾರೆ. ನವ ದಂಪತಿಗಳಿಂದ ಪ್ರೇರಣೆಯಾಗಿ ಮದುವೆಗೆ ಬಂದ ಬಂಧು – ಬಳಗದಲ್ಲಿಯೂ ಹಲವರು ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ.

ಇತ್ತೀಚೆಗೆ ನಿಧನರಾಗಿದ್ದ ಪುನೀತ್ ರಾಜಕುಮಾರ್ ನೇತ್ರದಾನ ಮಾಡಿ ಮಾದರಿಯಾಗಿದ್ದರು. ಹುಬ್ಬಳ್ಳಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ ಈಗ ಪುನೀತ್ ಹಾದಿಯನ್ನು ತುಳಿದಿದೆ. ಮದುವೆ ಮಂಟಪದಲ್ಲಿಯೇ ನೇತ್ರದಾನ ಪತ್ರಕ್ಕೆ ಸಹಿ ಹಾಕಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ಅವರು ಕಣ್ಣಿನ ಮಹತ್ವದ ಬಗ್ಗೆ ನಮಗೆಲ್ಲರಿಗೂ ತಿಳಿಸಿಕೊಟ್ಟು ಹೋಗಿದ್ದಾರೆ. ಅವರಿಂದಾಗಿ ಇಂದು ನಾಲ್ವರಿಗೆ ದೃಷ್ಟಿ ಸಿಕ್ಕಿದೆ.

ಅದೇ ರೀತಿ ಭಾರತ ದೇಶದಲ್ಲಿ 15 ಲಕ್ಷ ಜನ ಕಣ್ಣಿಲ್ಲದೇ ಇದ್ದಾರೆ. ಪ್ರತಿ ದಿನ ಅನೇಕರು ಮೃತರಾಗುತ್ತಾರೆ. ಬಹುತೇಕರು ನೇತ್ರದಾನ ಮಾಡದೆ ಅಂತ್ಯಕ್ರಿಯೆಗೆ ಒಳಗಾಗುತ್ತಾರೆ. ಅವರೊಂದಿಗೆ ಅವರ ಕಣ್ಣುಗಳು ಮಣ್ಣು ಸೇರುತ್ತವೆ. ಅದೇ ಕಣ್ಣುಗಳನ್ನು ದಾನ ಮಾಡಿದರೆ ಎಷ್ಟೋ ಅಂಧರ ಬಾಳಿಗೆ ಬೆಳಕಾಗಲು ಸಾಧ್ಯ ಎಂದು ನೇತ್ರ ದಾನದ ನಂತರ ನವ ದಂಪತಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Power Star Puneeth Rajkumar: ಮರಿಯಾನೆಗೆ ಪುನೀತ್​ ರಾಜ್​ಕುಮಾರ್ ಹೆಸರಿಟ್ಟ ಅರಣ್ಯ ಇಲಾಖೆ; ಇದಕ್ಕೂ ಕಾರಣವಿದೆ..!

ಅಂಗಡಿ ಕುಟಂಬದ ಸದಸ್ಯರ ಕಾರ್ಯವೈಖರಿಗೆ ನೇತ್ರತಜ್ಞರು ಸಂತಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಲಕ್ಷಾಂತರ ಜನ ಅಂಧತ್ವದಿಂದ ಬಳಲುತ್ತಿದ್ದಾರೆ. ನಾವೆಲ್ಲಾ ನಿಧನ ಹೊಂದಿದ ನಂತರ ಕಣ್ಣು ಮಣ್ಣಲ್ಲಿ ಲೀನವಾಗಿ ಹೋಗುತ್ತದೆ. ಆದರೆ ಅದೇ ಕಣ್ಣನ್ನು ದಾನ ಮಾಡಿದಲ್ಲಿ ಬೇಯವರಿಗೆ ದೃಷ್ಟಿ ಬರಲು ಸಹಕಾರಿಯಾಗಲಿದೆ. ಎಲ್ಲರೂ ಇದೇ ಹಾದಿ ತುಳಿದರೆ ದೇಶದಲ್ಲಿ ಅಂಧತ್ವ ಅನ್ನೋದೇ ಇರಲ್ಲ ಎಂದು ನೇತ್ರತಜ್ಞ ಡಾ. ಶ್ರೀನಿವಾಸ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಪುನೀತ್ ರಾಜಕುಮಾರ್ ನಿಧನದ ನಂತರ ಎಂ ಎಂ ಜೋಶಿ ಆಸ್ಪತ್ರೆಯಲ್ಲಿ ಕಣ್ಣುದಾನ ಮಾಡಲು 500 ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ನಿತ್ಯ ನೂರಾರು ಕರೆಗಳು ಬರಲಾರಂಭಿಸಿದ್ದು, ಹಲವಾರು ಜನ ನೇತ್ರದಾನ ಮಾಡಲು ಮುಂದಾಗಿದ್ದಾರೆ. ದಿನೇ ದಿನೇ ನೇತ್ರದಾನಿಗಳ ಸಂಖ್ಯೆ ಏರಿಕೆಯಾಗ್ತಿದ್ದು, ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ.

ಬದುಕಿದ್ದಾಗ ಅನೇಕರ ಬಾಳಿಗೆ ಬೆಳಕಾಗಿದ್ದ, ಯಾವತ್ತೂ ಪ್ರಚಾರ ಮಾಡದೇ ಸೇವೆಗಳನ್ನ ಮಾಡುತ್ತಿದ್ದ ಪುನೀತ್ ರಾಜಕುಮಾರ್ ತಮ್ಮ ಸಾವಿನ ನಂತರ ಕಣ್ಣುಗಳನ್ನ ದಾನ ಮಾಡಿದ್ದರು. ಇದರಿಂದ ನಾಲ್ವರಿಗೆ ದೃಷ್ಟಿ ಸಿಕ್ಕಿತ್ತು. ಈಗ ಅವರ ಪ್ರೇರಣೆಯಿಂದ ಸಾವಿರಾರು ಜನರು ನೇತ್ರದಾನಕ್ಕೆ ಮುಂದಾಗುತ್ತಿರುವುದು ಅದ್ಭುತ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: