Dharwad Central Jail: ಧಾರವಾಡ ಸೆಂಟ್ರಲ್​​ ಜೈಲಿನಲ್ಲಿ ಕೈದಿಗಳ ಭೇಟಿಗೆ ಹೊಸ‌ ತಂತ್ರಜ್ಞಾನ

ಕೈದಿಗಳು ಕುಳಿತುಕೊಳ್ಳುವ ವಿಭಾಗ ಹಾಗೂ ಕುಟುಂಬದವರು ಕುಳಿತುಕೊಳ್ಳುವ ವಿಭಾಗದ ಮಧ್ಯೆ ಪಾರದರ್ಶಕ ಗಾಜನ್ನು ಅಳವಡಿಸಲಾಗಿದೆ. ಅಲ್ಲದೇ ಕೈದಿಗಳು ಕುಳಿತುಕೊಳ್ಳಲು ಸಣ್ಣ ಸಣ್ಣ ಕೌಂಟರ್ ಕೂಡ ಮಾಡಲಾಗಿದೆ. ಅಲ್ಲದೇ ಪರಸ್ಪರ ಮಾತನಾಡಲು ಟೆಲಿಫೋನ್ ಇಡಲಾಗಿದೆ.

ಖೈದಿಗಳಿಂದ ಮಾತನಾಡುತ್ತಿರುವ ಕುಟುಂಬಸ್ಥರು

ಖೈದಿಗಳಿಂದ ಮಾತನಾಡುತ್ತಿರುವ ಕುಟುಂಬಸ್ಥರು

  • Share this:
 ಧಾರವಾಡ : ಜೈಲಿನಲ್ಲಿರೋ ಕೈದಿಗಳನ್ನು  ಭೇಟಿಯಾಗಬೇಕೆಂದರೆ ಕೆಲವು ನಿಯಮಗಳಿವೆ. ಸಂದರ್ಶಕರ ಕೊಠಡಿಯಲ್ಲಿ ಅವಕಾಶವಿದ್ದರೂ ಎಲ್ಲರಿಗೂ ಒಂದೇ ವೇಳೆ ಸಿಗೋದ್ರಿಂದ ಅಲ್ಲಿ, ತಮ್ಮವರ ಜೊತೆ ವೈಯಕ್ತಿಕವಾಗಿ ಮಾತನಾಡಲು ಆಗುವುದಿಲ್ಲ. ಎಲ್ಲರೂ ಸೇರಿದ್ದರಿಂದ ಸಂತೆಯ ವಾತಾವರಣ ಸೃಷ್ಟಿಯಾಗಿರುತ್ತದೆ. ಇದೇ ಕಾರಣಕ್ಕೆ ಇದೀಗ ಧಾರವಾಡ ಜೈಲಿನಲ್ಲಿ ಜೈಲು ಹಕ್ಕಿಗಳು ತಮ್ಮ ಕುಟುಂಬದವರೊಂದಿಗೆ  ವೈಯಕ್ತಿಕವಾಗಿ ಮಾತನಾಡಲು ವಿದೇಶಿ ಶೈಲಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಧಾರವಾಡದ ಕೇಂದ್ರ ಕಾರಾಗೃಹ ಬ್ರಿಟಿಷ್‌ ಕಾಲದ ಕಟ್ಟಡ. ಇಲ್ಲಿನ ಕಟ್ಟಡದಿಂದ ಹಿಡಿದು ಪೀಠೋಪಕರಣಗಳವೆರೆಗೆ ಎಲ್ಲವೂ ಹಳೆಯ ವಸ್ತುಗಳೇ. ಆದರೆ ಆಧುನಿಕ ಯುಗದಲ್ಲಿ ಕಾರಾಗೃಹಗಳನ್ನು ಕೂಡ ಆಧುನಿಕಗೊಳಿಸುವ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ಇದೀಗ ಈ ಕಾರಾಗೃಹಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಸಂದರ್ಶಕರ ಕೊಠಡಿ. ಹೌದು ಸಾಮಾನ್ಯವಾಗಿ ಜೈಲುಗಳಲ್ಲಿ ತಮ್ಮ ಸಂಬಂಧಿಗಳೊಂದಿಗೆ ಮಾತನಾಡಬೇಕಾದರೆ ಸಂದರ್ಶನ ಕೊಠಡಿಗೆ ಬರಬೇಕು. ಅಲ್ಲಿ ಒಂದೇ ಸೂರಿನಡಿ ಹತ್ತಾರು ಜನ ಕೈದಿಗಳು ತಮ್ಮ ತಮ್ಮ ಸಂಬಂಧಿಕರೊಂದಿಗೆ ಮಾತಿನಲ್ಲಿ ಮುಳುಗಿರುತ್ತಾರೆ. ಅಲ್ಲದೇ ಅವರೆಲ್ಲಾ ಅಕ್ಕಪಕ್ಕವೇ ಇರೋದ್ರಿಂದ ವೈಯಕ್ತಿಕ ವಿಷಯಗಳನ್ನು ಮಾತನಾಡಲು ಸಾಧ್ಯವಾಗೋದೇ ಇಲ್ಲ. ಇದೇ ಕಾರಣಕ್ಕೆ ಧಾರವಾಡದ ಕಾರಾಗೃಹದಲ್ಲಿ ಈಗ ವಿನೂತನ ತಂತ್ರಜಾನದ ಮೂಲಕ ಕೈದಿಗಳು ಹಾಗೂ ಅವರ ಕುಟುಂಬದವರು ಪರಸ್ಪರ ಮಾತನಾಡಲು ವಿಭಿನ್ನ ಬಗೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕೈದಿಗಳು ಕುಳಿತುಕೊಳ್ಳುವ ವಿಭಾಗ ಹಾಗೂ ಕುಟುಂಬದವರು ಕುಳಿತುಕೊಳ್ಳುವ ವಿಭಾಗದ ಮಧ್ಯೆ ಪಾರದರ್ಶಕ ಗಾಜನ್ನು ಅಳವಡಿಸಲಾಗಿದೆ. ಅಲ್ಲದೇ ಕೈದಿಗಳು ಕುಳಿತುಕೊಳ್ಳಲು ಸಣ್ಣ ಸಣ್ಣ ಕೌಂಟರ್ ಕೂಡ ಮಾಡಲಾಗಿದೆ. ಅಲ್ಲದೇ ಪರಸ್ಪರ ಮಾತನಾಡಲು ಟೆಲಿಫೋನ್ ಇಡಲಾಗಿದೆ. ಇತ್ತ ಕಡೆಯಿಂದ ಫೋನ್ ಎತ್ತಿದರೆ ಎದುರಿನ ಫೋನ್ ರಿಂಗ್ ಆಗುತ್ತೆ. ಇಬ್ಬರೂ ಪರಸ್ಪರ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಹೈಟೆಕ್ ವ್ಯವಸ್ಥೆ ಪರಸ್ಪರರ ಮಧ್ಯದ ಮಾತುಕತೆಗಷ್ಟೇ ಸೀಮಿತವಲ್ಲ. ಇಬ್ಬರ ಮಧ್ಯೆ ಇರೋ ಗಾಜು ಬುಲೆಟ್ ಪ್ರೂಫ್. ಎಷ್ಟೋ ಕಡೆಗಳಲ್ಲಿ ಭೇಟಿಯಾಗಲು ಹೋಗಿದ್ದ ಸಂದರ್ಭದಲ್ಲಿ ಅವಘಡಗಳು ಕೂಡ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಪರಸ್ಪರ ಕಾಣುತ್ತಿದ್ದರೂ ಯಾವುದೇ ಅಹಿತಕರ ಘಟನೆಗೆ ಅವಕಾಶ ಇರುವುದಿಲ್ಲ. ಇನ್ನು ಕೈದಿಗಳಿಗೆ ಊಟ ಹಾಗೂ ಅಗತ್ಯ ವಸ್ತುಗಳನ್ನು ನೀಡುವಾಗ ಅದರೊಂದಿಗೆ ಬೇರೆ ಬೇರೆ ವಸ್ತುಗಳನ್ನು ರವಾನಿಸಲಾಗುತ್ತಿತ್ತು ಅನ್ನೋ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ ಇದೀಗ ಕುಟುಂಬದವರು ತಂದು ನೀಡುವ ಬ್ಯಾಗ್ ಗಳನ್ನು ವಿಮಾನ ನಿಲ್ದಾಣದಲ್ಲಿನ ವ್ಯವಸ್ಥೆಯಂತೆ ಸ್ಕ್ಯಾನ್ ಮಾಡಲು ಹೈಟೆಕ್ ಯಂತ್ರಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: Chikmagalur Drug Case: ಕಾಫಿನಾಡು ಪೊಲೀಸರ ಭರ್ಜರಿ ಕಾರ್ಯಾಚರಣೆ, 50 ಲಕ್ಷದ ಮೌಲ್ಯದ ಗಾಂಜಾ ವಶ

ಕೈದಿಗಳ ಮಾನವ ಹಕ್ಕುಗಳನ್ನು ರಕ್ಷಿಸುವ ಕಾರ್ಯವೂ ನಡೆದಿದೆ. ಈ ಯೋಜನೆಗೆ ಒಟ್ಟು 18 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನು ಸಂದರ್ಶಕರ ಕೊಠಡಿಗೆ ಬರುವ ಕೈದಿಗಳ ವಿವರ ಅಟೋಮ್ಯಾಟಿಕ್ ಯಂತ್ರದ ಮೂಲಕ ದಾಖಲಾಗುತ್ತದೆ. ಜೊತೆಗೆ ಕೈದಿಗಳು ಕುಳಿತುಕೊಳ್ಳುವ ಪ್ರದೇಶದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತದೆ. ಹೀಗಾಗಿ ಇಲ್ಲಿ ಯಾವುದೇ ಅಹಿತರಕರ ಘಟನೆಗೆ ಅವಕಾಶವೇ ಇರುವುದಿಲ್ಲ ಎನ್ನುತ್ತಾರೆ ಜೈಲು ಅಧೀಕ್ಷಕ ಎಂ. ಎ. ಮರಿಗೌಡ.

ಒಟ್ಟಿನಲ್ಲಿ ಕಾರಾಗೃಹಗಳೆಂದರೆ ಶಿಕ್ಷೆಯ ತಾಣಗಳು ಅನ್ನುವ ಮನಸ್ಥಿತಿ ಇಂದು ಬದಲಾಗಿದೆ. ಆ ಮೂಲಕ ಮಾನವ ಹಕ್ಕುಗಳ ರಕ್ಷಣೆಗೂ ಆದ್ಯತೆ ನೀಡಲಾಗುತ್ತಿದೆ. ಈ ಮಾತಿಗೆ ಇದೀಗ ಜಾರಿಗೆ ತರುತ್ತಿರೋ ಹೊಸ ಹೊಸ ಯೋಜನೆಗಳೇ ಸಾಕ್ಷಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: