ಕೊರೋನಾ ಲಾಕ್​ಡೌನ್​ಗೆ ರಾಜ್ಯದ ಛೋಟಾ ಮುಂಬೈ ವಾಣಿಜ್ಯೋದ್ಯಮ ತತ್ತರ; 4800 ಕೋಟಿ ರೂಪಾಯಿ ಹಾನಿ!

ಕೊರೋನಾ ಏರಿಳಿಕೆಗೆ ತಕ್ಕಂತೆ ಲಾಕ್ ಡೌನ್ ಗಳೂ ಆಗ್ತಿವೆ. ಅದರ ಪರಿಣಾಮ ವಾಣಿಜ್ಯೋದ್ಯಮ ಕ್ಷೇತ್ರ ತೀವ್ರ ನಷ್ಟಕ್ಕೊಳಗಾಗಿದೆ. ಸರ್ಕಾರ ಇತರೆ ವಲಯಗಳಿಗೆ ನೆರವು ನೀಡಿದಂತೆ ವಾಣಿಜ್ಯೋದ್ಯಮ ಕ್ಷೇತ್ರಕ್ಕೂ ನೆರವು ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ; ಕೊರೋನಾ ಅಲೆಗಳು ಒಂದರ ನಂತರ ಮತ್ತೊಂದು ಬಂದೆರಗಲಾರಂಭಿಸಿವೆ. ಮೊದಲ ಅಲೆಯ ನಂತ್ರ ಎರಡನೆಯ ಅಲೆಯ ಅಬ್ಬರ. ಅದು ಕ್ಷೀಣಿಸುತ್ತಿದೆ ಎನ್ನುವಾಗಲೇ ಮೂರನೇ ಅಲೆಯ ಮುನ್ಸೂಚನೆ. ಇದರ ಮಧ್ಯೆ ಬ್ಲಾಕ್ ಫಂಗಸ್, ಡೆಲ್ಟಾ ಪ್ಲಸ್ ಇತ್ಯಾದಿಗಳ ಕಾಟ. ಇದೆಲ್ಲದರ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಮಾರ್ಗ ಅನುಸರಿಸುತ್ತಿದ್ದು, ಅದರ ಹೆಚ್ಚಿನ ಪರಿಣಾಮ ವಾಣಿಜ್ಯೋದ್ಯಮ ಕ್ಷೇತ್ರದ ಮೇಲಾಗಿದೆ. ಅದರಲ್ಲಿಯೂ ಕಮರ್ಷಿಯಲ್ ಹಬ್ ಎನಿಸಿಕೊಂಡ ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಪರಿಣಾಮ ಸಾವಿರಾರು ಕೋಟಿಗಳ ಹಾನಿ ಸಂಭವಿಸಿದ್ದು, ವರ್ತಕರು ತತ್ತರಗೊಳ್ಳುವಂತಾಗಿದೆ.

ಲಾಕ್ ಡೌನ್ ನಿಂದ ವಾಣಿಜ್ಯ ಕ್ಷೇತ್ರ ತತ್ತರಗೊಂಡಿದೆ. ಅದರಲ್ಲಿಯೂ ಮೊದಲನೆಯ ಅಲೆಗಿಂತ ಎರಡನೆಯ ಅಲೆಯಿಂದ ವರ್ತಕರು ಬೆಚ್ಚಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಂತೂ ವರ್ತಕರಿಗೆ ಚೇತರಿಸಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ನಗರಿಗೆ ವರ್ಷದ ನಷ್ಟವೆಷ್ಟು ಗೊತ್ತಾ..? ಪ್ರತಿ ವರ್ಷ ಲಾಭದಲ್ಲೇ ಇದ್ದ ಉದ್ಯಮಕ್ಕೆ ಕೊರೋನಾ ಕಂಟಕವಾಗಿ ಮಾರ್ಪಟ್ಟಿದೆ. ಕೊರೋನಾ ನಂತ್ರ ಲಾಭ ನಷ್ಟದ ಲೆಕ್ಕಾಚಾರ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ.

ಕೈಗಾರಿಕೋದ್ಯಮಕ್ಕೆ ಅತಿ ದೊಡ್ಡ ಹೊಡೆತ ಬಿದ್ದಿದೆ. ಹೋಟೆಲ್ ಉದ್ಯಮಕ್ಕೂ ಭಾರಿ ಪೆಟ್ಟು ಕೊಟ್ಟಿದೆ ಡೆಡ್ಲಿ ವೈರಸ್. ಹುಬ್ಬಳ್ಳಿ ಧಾರವಾಡ ನಗರದ ಉದ್ಯಮಿಗಳಿಗೆ ಕೋವಿಡ್ ಶಾಕ್ ಕೊಟ್ಟಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 4800 ಕೋಟಿ ರೂಪಾಯಿ ನಷ್ಟವಾಗಿದೆ. ಲಾಕ್ ಡೌನ್ ನ ಎರಡು ತಿಂಗಳಲ್ಲಿ 1000 ರಿಂದ 1200 ಕೋಟಿ ರೂಪಾಯಿ ನಷ್ಟವಾಗಿದೆ. ಪ್ರತಿ ವರ್ಷ 25 ಸಾವಿರ ಕೋಟಿ ವ್ಯಾಪಾರ ವಹಿವಾಟಿದ್ದ ವಾಣಿಜ್ಯೋದ್ಯಮ ಇದೀಗ ಕಂಪ್ಲೀಟ್ ಲಾಸ್ ಆಗಿದೆ.

ಹುಬ್ಬಳ್ಳಿ ಹಲವಾರು ಜಿಲ್ಲೆಯ ಜನರ ವಾಣಿಜ್ಯ ಕೇಂದ್ರ ಆಗಿದೆ. ಛೋಟಾ ಮುಂಬೈ ಎಂದೇ ಹುಬ್ಬಳ್ಳಿ ಪ್ರಸಿದ್ಧಿ ಪಡೆದಿದೆ. ಕೊರೋನಾ ತೀವ್ರತೆಗೆ ಹುಬ್ಬಳ್ಳಿಯ ವಾಣಿಜ್ಯ ವಹಿವಾಟು ಸಂಪೂರ್ಣ ತತ್ತರಗೊಂಡಿದೆ. ಲಾಕ್ ಡೌನ್ ಅಂತ್ಯಗೊಂಡಿದ್ರೂ ವ್ಯಾಪಾರ ವಹಿವಾಟು ಹಳಿ ಮೇಲೆ ಬಂದಿಲ್ಲ. ಹೋಟೆಲ್ ಉದ್ಯಮಕ್ಕೆ 500 ಕೋಟಿಯಷ್ಟು ನಷ್ಟವಾದ್ರೆ, ಕೈಗಾರಿಕಾ ಕ್ಷೇತ್ರದಲ್ಲಿ ಸುಮಾರು 600 ಕೋಟಿ ರೂಪಾಯಿ ನಷ್ಟವಾಗಿದೆ. ಸಿನೆಮಾ, ಟೂರಿಸಂ ಸೇರಿ ಮನರಂಜನೆ ವಲಯದಲ್ಲಿ ಸುಮಾರು 600 ಕೋಟಿ ರೂಪಾಯಿ ನಷ್ಟವಾಗಿದೆ. ಜವಳಿ ವ್ಯಾಪಾರದಲ್ಲಿ 50 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಎಲೆಕ್ಟ್ರಿಕಲ್ ವಸ್ತುಗಳ ಮಾರಾಟಗಾರರಿಗೆ ತೀವ್ರ ಹಾನಿಯಾಗಿದೆ. ನಮ್ಮಲ್ಲಿ ಸಾಕಷ್ಟು ಸ್ಟಾಕ್ ಇದೆ. ಆದ್ರೆ ಖರೀದಿಗೆ ನಿರೀಕ್ಷಿತ ಮಟ್ಟದಲ್ಲಿ ಜನ ಬರ್ತಿಲ್ಲ. ಕೆಲವೊಮ್ಮೆ ಹೆಚ್ಚು ಜನ ಬಂದ್ರೂ ಕೇವಲ ಇಬ್ಬರಿಗೆ ಮಾತ್ರ ಬಿಟ್ಟುಕೊಳ್ಳಲು ಅವಕಾಶವಿಲ್ಲ. ಮಾರಾಟಕ್ಕೆ ಕಾಲಮಿತಿ ಹಾಕಿರೋದ್ರಿಂದ ಅಂಗಡಿ ತೆಗೆದರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗ್ತಿಲ್ಲ ಎಂದು ವರ್ತಕ ಪ್ರವೀಣ್ ಅಲವತ್ತುಕೊಂಡಿದ್ದಾರೆ.

ಇದನ್ನು ಓದಿ: Blast in Jammu Airport | ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ಸ್ಟೋಟ; ಪಾಕಿಸ್ತಾನದ ಕೈವಾಡ ಶಂಕೆ?

ಮೊದಲನೆಯ ಅಲೆಗೆ ಹೋಲಿಸಿದಲ್ಲಿ, ಎರಡನೆಯ ಅಲೆಯ ಲಾಕ್ ಡೌನ್ ನಲ್ಲಿ ಅತಿದೊಡ್ಡ ನಷ್ಟವಾಗಿದೆ. ಇಷ್ಟೆಲ್ಲ ನಷ್ಟ ಹೊಂದಿದ್ದರೂ ರಾಜ್ಯ ಸರ್ಕಾರದಿಂದ ಯಾವುದೇ ರಿಯಾಯಿತಿ ಸಿಕ್ಕಿಲ್ಲ. ವಾಣಿಜ್ಯ ತೆರಿಗೆ, ಕಟ್ಟಡ ಬಾಡಿಗೆ ರಿಯಾಯಿತಿ ಸೇರಿ ಯಾವೇದೇ ಸೌಲಭ್ಯವಿಲ್ಲ. ಕೇವಲ ವಿದ್ಯುತ್ ಬಿಲ್ ನಲ್ಲಿ ಮಾತ್ರ ಕೆಲ ರಿಯಾಯಿತಿ ದೊರಕಿದೆ. ಮೇ ಮತ್ತು ಜೂನ್ ತಿಂಗಳ ಬಿಲ್ ನಲ್ಲಿ ಫಿಕ್ಸ್ ಚಾರ್ಜಸ್ ಗೆ ರಿಯಾಯಿತಿ ಸಿಕ್ಕಿದೆ. ಆದ್ರೆ ಏಪ್ರಿಲ್ ತಿಂಗಳಿನಿಂದಲೇ ಪ್ರತಿ ಯೂನಿಟ್ ಗೆ ವಿದ್ಯುತ್ ದರ ಹೆಚ್ಚಳವಾಗಿದೆ. ಹೀಗಾಗಿ ಸರ್ಕಾರ ಕೊಟ್ಟ ರಿಯಾಯಿತಿ ಎಲ್ಲಿಯೂ ದಕ್ಕೋದಿಲ್ಲ. ಲಾಕ್ ಡೌನ್ ನಿಂದ ವರ್ತಕರಿಗೆ ಮತ್ತಷ್ಟು ಹೊಡೆತವಾಗಿದೆ. ಹೀಗಾಗಿ ಸರ್ಕಾರ ವರ್ತಕರಿಗೆ ವಿಶೇಷ ರಿಯಾಯಿತಿ ಘೋಷಿಸಿಲು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಂದ್ರ ಲಡ್ಡದ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಒಟ್ಟಾರೆ ಕೊರೋನಾ ಏರಿಳಿಕೆಗೆ ತಕ್ಕಂತೆ ಲಾಕ್ ಡೌನ್ ಗಳೂ ಆಗ್ತಿವೆ. ಅದರ ಪರಿಣಾಮ ವಾಣಿಜ್ಯೋದ್ಯಮ ಕ್ಷೇತ್ರ ತೀವ್ರ ನಷ್ಟಕ್ಕೊಳಗಾಗಿದೆ. ಸರ್ಕಾರ ಇತರೆ ವಲಯಗಳಿಗೆ ನೆರವು ನೀಡಿದಂತೆ ವಾಣಿಜ್ಯೋದ್ಯಮ ಕ್ಷೇತ್ರಕ್ಕೂ ನೆರವು ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

  • ವರದಿ: ಶಿವರಾಮ ಅಸುಂಡಿ

Published by:HR Ramesh
First published: