ಅಮೃತ ಮಹೋತ್ಸವಕ್ಕೆ ಕಾಲಿಟ್ಟರೂ ಸಿಎಂ ತವರಿನಲ್ಲಿ ಪೂರ್ಣಗೊಳ್ಳದ ರಾಷ್ಟ್ರಧ್ವಜ ಮ್ಯೂಸಿಯಂ

2015 ರಲ್ಲಿ ರೂಪಿತಗೊಂಡ ಮ್ಯೂಸಿಯಂ ನಿರ್ಮಾಣ, ಖಾದಿ ಎಂಪೋರಿಯಂ ಸ್ಥಾಪನೆ ಯೋಜನೆ ನೆನೆಗುದಿಗೆ ಬಿದ್ದಿವೆ. ಸರ್ಕಾರ ಕೋಟಿ ರೂಪಾಯಿ ಮಂಜೂರು ಮಾಡಿ ಹಸಿರು ನಿಶಾನೆ ತೋರಿತ್ತು. ಇನ್ನೂ ನೆನೆಗುದಿಯಲ್ಲಿವೆ ಈ ಯೋಜನೆಗಳು.

ರಾಷ್ಟ್ರೀಯ ಧ್ವಜ

ರಾಷ್ಟ್ರೀಯ ಧ್ವಜ

  • Share this:
ಹುಬ್ಬಳ್ಳಿ:  ದೇಶದೆಲ್ಲೆಡೆ 75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಜನ ಅಮೃತ ಮಹೋತ್ಸವ ವರ್ಷಾಚರಣೆಗೆ ಕಾಲಿಡೋ ಹೊಸ್ತಿಲಲ್ಲಿದ್ದಾರೆ. ಆದ್ರೆ ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರಾಷ್ಟ್ರ ಧ್ವಜ ಮ್ಯುಸಿಯಂ, ಖಾದಿ ಎಂಪೋರಿಯಮ್ ಗೆ ಮಾತ್ರ ಗ್ರಹಣ ಹಿಡಿದಿದೆ. ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಅವರ ಅವಧಿಯಲ್ಲಾದ್ರೂ ಮ್ಯೂಸಿಯಂ ಪೂರ್ಣಗೊಳ್ಳುತ್ತಾ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ. 2015 ರಲ್ಲಿ ರೂಪಿತಗೊಂಡ ಮ್ಯೂಸಿಯಂ ನಿರ್ಮಾಣ, ಖಾದಿ ಎಂಪೋರಿಯಂ ಸ್ಥಾಪನೆ ಯೋಜನೆ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಮಂಜೂರು ಮಾಡಿ ಹಸಿರು ನಿಶಾನೆ ತೋರಿತ್ತು. ಇಡೀ ದೇಶಕ್ಕೆ ರಾಷ್ಟ್ರ ಧ್ವಜ ಸಿದ್ಧಪಡಿಸಿ ಪೂರೈಸೋ ಹೆಗ್ಗಳಿಕೆ ಹುಬ್ಬಳ್ಳಿಯದ್ದಾಗಿದ್ದರೂ, ಇಲ್ಲೊಂದು ಮ್ಯೂಸಿಯಂ ಸ್ಥಾಪಿಸಲಾಗಿಲ್ಲ.

ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಿಂದ ತ್ರಿವರ್ಣ ಧ್ವಜ ತಯಾರಿಕೆ ನಡೆದಿದೆ. ರಾಷ್ಟ್ರ ಧ್ವಜ ತಯಾರಿಕೆಗೆ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಮಾನ್ಯತೆ ಪಡೆದಿರೋ ಏಕೈಕ ಸಂಸ್ಥೆ ಇದಾಗಿದೆ. ಹುಬ್ಬಳ್ಳಿಯಲ್ಲಿ ತಯಾರಾಗೋ ಧ್ವಜಗಳು ದೇಶವಲ್ಲದೆ, ವಿದೇಶಗಳಿಗೂ ಪೂರೈಕೆ ಮಾಡಲಾಗ್ತಿದೆ. ಈ ಹಿನ್ನೆಲೆಯಲ್ಲಿಯೇ ಇಲ್ಲೊಂದು ರಾಷ್ಟ್ರಧ್ವಜ ಮ್ಯೂಸಿಯಂ ಸ್ಥಾಪಿಸಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಇದರ ಫಲಶೃತಿಯಾಗಿ ಫ್ಲ್ಯಾಗ್ ಮ್ಯೂಸಿಯಂ, ಖಾದಿ ಎಂಪೋರಿಯಂ ಯೋಜನೆ ರೂಪಿಸಲಾಗಿತ್ತು. ರಾಷ್ಟ್ರ ಧ್ವಜ ಹೇಗೆ ಅಸ್ತಿತ್ವಕ್ಕೆ ಬಂದಿತು, ಅದರ ಮಹತ್ವ ಏನು, ಅದರ ಇತಿಹಾಸ ಇತ್ಯಾದಿಗಳನ್ನು ಒಂದೆಡೆ ಬಿಂಬಿಸಲು ಮ್ಯುಸಿಯಂ ಸ್ಥಾಪನೆ ಉದ್ದೇಶ ಹೊಂದಲಾಗಿತ್ತು. ರಾಷ್ಟ್ರ ಧ್ವಜ ತಯಾರಿಕೆಗೆ ವಿಶಾಲವಾದ ಸ್ಥಳಾವಕಾಶ, ಖಾದಿ ಎಂಪೋರಿಯಂ ಸ್ಥಾಪನೆಗೂ ಯೋಜನೆ ರೂಪಿಸಲಾಗಿತ್ತು. ಖಾದಿ ಮಹತ್ವ ಹಾಗೂ ಗಾಂಧೀಜಿಯವರ ಹೋರಾಟದ ಹೆಜ್ಜೆಗಳನ್ನು ಬಿಂಬಿಸೋ ಉದ್ದೇಶ ಹೊಂದಲಾಗಿತ್ತು. ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಮಹತ್ವದ ಯೋಜನೆಗೆ ಗ್ರಹಣ ಹಿಡಿದಿದೆ. ಇದುವರೆಗೆ ಕೇವಲ 33 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಇದರಿಂದಾಗಿ ಎಲ್ಲ ಕೆಲಸಗಳೂ ನೆನೆಗುದಿಗಿಗೆ ಬಿದ್ದಿವೆ.

ಇದನ್ನೂ ಓದಿ: Amrith Mahotsav- ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಘೋಷಿಸಿದ ಸಿಎಂ ಬೊಮ್ಮಾಯಿ

ಧ್ವಜ ನಿರ್ಮಾಣ ಹಾಗೂ ತ್ವಿವರ್ಣ ಧ್ವಜದ ಕುರಿತು ಮ್ಯೂಸಿಯಂಗೆ ಒಂದು ಕಟ್ಟಡ, ಗಾಂಧಿ ಮ್ಯೂಸಿಯಂ ಗಾಗಿ ಮತ್ತೊಂದು ಕಟ್ಟಡ ಹಾಗೂ ಖಾದಿ ಎಂಪೋರಿಯಂಗಾಗಿ ಇನ್ನೊಂದು ಕಟ್ಟಡ ನಿರ್ಮಾಣದ ಉದ್ದೇಶ ಹೊಂದಲಾಗಿತ್ತು. ಸರ್ಕಾರ ಹಣ ಬಿಡುಗಡೆ ಮಾಡದೇ ಇರೋದ್ರಿಂದ ಒಂದು ಕಟ್ಟಡವೂ ಪೂರ್ತಿಯಾಗಿಲ್ಲ. ಕಟ್ಟಡಕ್ಕೆಂದು ಅಡಿಪಾಯ ಹಾಕಲಾಗಿದ್ದು, ಕಬ್ಬಿಣದ ರಾಡುಗಳು ಅಸ್ತಿಪಂಜರದ ರೀತಿಯಲ್ಲಿ ನಿಂತಿವೆ. ನಿರ್ಮಾಣ ಹಂತದ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿದೆ.

13 ಎಕರೆ ಪ್ರದೇಶದ ವ್ಯಾಪ್ತಿಯನ್ನೊಳಗೊಂಡಿರೋ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಲಿ ಫ್ಲ್ಯಾಗ್ ಮ್ಯೂಸಿಯಂ, ಖಾದಿ ಎಂಪೋರಿಯಂ ತಲೆ ಎತ್ತಬೇಕಿದೆ. ಬಾಕಿ ಇರೋ 66 ಲಕ್ಷ ಬಿಡುಗಡೆಗೊಳಿಸಿದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸ್ತೇವೆ. ಆದರೆ ಸರ್ಕಾರ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸ್ತಿಲ್ಲ. ಹಲವಾರು ಬಾರಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಹತ್ತಾರು ಪತ್ರ ವ್ಯವಹಾರಗಳನ್ನೂ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್.ಮಠಪತಿ ತಿಳಿಸಿದ್ದಾರೆ. ಸರ್ಕಾರದ ಧೋರಣೆಗೆ ಹುಬ್ಬಳ್ಳಿ ಜನರೂ ಕಿಡಿ ಕಾರಿದ್ದಾರೆ.

ಇಡೀ ದೇಶಕ್ಕೆ ತ್ರಿವರ್ಣ ಧ್ವಜ ಪೂರೈಸುತ್ತೆ ಅನ್ನೋ ಹೆಗ್ಗಳಿಕೆ ನಮ್ಮದಾಗಿದೆ. ಆದರೆ ಹುಬ್ಬಳ್ಳಿಯಲ್ಲೊಂದು ತ್ವಿವರ್ಣ ಧ್ವಜ ಮ್ಯೂಸಿಯಂ ಮಾಡೋಕೆ ಮಾತ್ರ ಎಲ್ಲ ಸರ್ಕಾರಗಳ ನಿರಾಸಕ್ತಿ ಆರೋಪಿಸಿದ್ದಾರೆ. ಈಗ ಹುಬ್ಬಳ್ಳಿಯ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ. ಈಗಲಾದ್ರೂ ಗ್ರಹಣ ಹಿಡಿದಿರೋ ಈ ಯೋಜನೆಗೆ ವಿಮೋಚನೆ ಸಿಗಲಿ ಎಂದು ಆಗ್ರಹಿಸಿದ್ದಾರೆ. ಅಗತ್ಯ ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದು, ಬೊಮ್ಮಾಯಿ ಅವಧಿಯಲ್ಲಾದ್ರೂ ಯೋಜನೆ ಪೂರ್ಣಗೊಳ್ಳಲಿದೆ ಅನ್ನೋ ಆಶಯ ವ್ಯಕವಾಗಿದೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: