Murder: ಊಟ ಮುಗಿಸಿ ಮನೆಯಿಂದ ಹೋದವ ವಾಪಸ್ ಬರಲೇ ಇಲ್ಲ! 'ಆಕೆ' ಮೇಲೆ ತಾಯಿಗೆ ಅನುಮಾನ

ಊಟ ಮಾಡಿ ಹೊರಗೆ ಹೋಗಿ ಬರ್ತೇನೆ ಅಂತ ಹೋದವನು ರಾತ್ರೋರಾತ್ರಿ ಹೆಣವಾಗಿದ್ದಾನೆ. "ಆಸ್ತಿಗಾಗಿ ಹೆಂಡತಿಯೇ ಕೊಲೆ ಮಾಡಿಸಿದ್ದಾಳೆ" ಅಂತ ಮೃತನ ತಾಯಿ ಆರೋಪಿಸಿದ್ದಾಳೆ. "ಯಾರಾದ್ರೂ ಗಂಡನನ್ನು ಕಳೆದುಕೊಳ್ಳೋಕೆ ಇಷ್ಟಪಡ್ತಾರಾ" ಅಂತ ಹೆಂಡತಿ ಪ್ರಶ್ನಿಸಿದ್ದಾಳೆ.

ಕೊಲೆಯಾದ ಶಂಭು

ಕೊಲೆಯಾದ ಶಂಭು

  • Share this:
ಹುಬ್ಬಳ್ಳಿ: ರಾತ್ರಿ ಊಟ (Dinner) ಮಾಡಿ ಮನೆಯಿಂದ ಹೊರ ಹೋದವ ಸಿಕ್ಕಿದ್ದು ಮಾತ್ರ ಹೆಣವಾಗಿ. ಹುಬ್ಬಳ್ಳಿ (Hubballi) ತಾಲೂಕಿನ ನೂಲ್ವಿ ಗ್ರಾಮದಲ್ಲಿ ಹರಿಯಿತು ನೆತ್ತರ ಕೋಡಿ. ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ (Marriage) ಹೆಂಡತಿ (Wife) ಈಗ ಮೂರು ತಿಂಗಳ ಗರ್ಭಿಣಿ (Pregnant) . ಇನ್ನೇನು ಕಂದನ (Baby) ಆಗಮನ ಆಗುತ್ತೇ ಅಂತ ಎದುರು ನೋಡುತ್ತಿದ್ದವನು ಈಗ ಹೆಣವಾಗಿದ್ದಾನೆ. ತಾನಾಯಿತು ತನ್ನ ಕೆಲಸ ಆಯ್ತು ಅಂತ ತನ್ನದೇ ಜಗತ್ತಿನಲ್ಲಿದ್ದ ವ್ಯಕ್ತಿ ರಸ್ತೆ ಪಕ್ಕದಲ್ಲೇ ಬರ್ಬರವಾಗಿ ಕೊಲೆಯಾಗಿ (Murder) ಬಿದ್ದಿದ್ದಾನೆ. ಅಷ್ಟಕ್ಕೂ ಕೊಲೆಯಾಗಿರುವ ವ್ಯಕ್ತಿ ಯಾರು...? ಅಲ್ಲಿ ಆಗಿದ್ದಾದರೂ ಏನು ಅಂತೀರಾ..? ಈ ಸ್ಟೋರಿ ಓದಿ...

ಆ ಯುವಕ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ. ಆತನ ಹೆಂಡತಿ ಸದ್ಯ ಮೂರು ತಿಂಗಳ ಗರ್ಭಿಣಿ. ಕೆಲವೇ ತಿಂಗಳಲ್ಲಿ ಮನೆಗೆ ಕಂದನ ಆಗಮನವಾಗುತ್ತೆ, ಎತ್ತಿಕೊಂಡು ಮುದ್ದಾಡಬೇಕೆಂದವನು ಈಗ ಹೆಣವಾಗಿ ಬಿದ್ದಿದ್ದಾನೆ. ಯಾರೊಂದಿಗೂ ತಂಟೆ, ತಕರಾರು ಇಲ್ಲದವರು ಏಕಾಏಕಿ ಕೊಲೆಯಾಗಿ ಹೋಗಿದ್ದಾನೆ.

ಹೊರವಲಯದಲ್ಲಿ ನಡೀತು ಭೀಕರ ಕೊಲೆ

ಮಗನನ್ನು ಕಳೆದುಕೊಂಡ ದುಃಖದಲ್ಲಿ ಆಕ್ರೋಶಗೊಂಡ ತಾಯಿ. ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ. ಹೊಲ - ಮನೆ ಕೆಲಸ ಮಾಡಿಕೊಂಡಿದ್ದ ಶಂಭು ಕೊಲೆಯಾಗಿದ್ದಾನೆ ಎಂಬುವಂತ ಪಿಸು ಮಾತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮ. ನೂಲ್ವಿಯ ಹೊರವಲಯದಲ್ಲಿ ನಡೆಯಿತು ಬೀಕರ ಕೊಲೆ. ಹೌದು.. ನೂಲ್ವಿ  ಹಾಗೂ ಅದರಗುಂಚಿ ಗ್ರಾಮದ ಮಧ್ಯದಲ್ಲಿರುವ ರಸ್ತೆ ಪಕ್ಕದಲ್ಲಿಯೇ ಶಂಭು ಕಮಡೊಳ್ಳಿ (34) ಎಂಬಾತನನ್ನು ಮಾರಕಾಸ್ತ್ರದಿಂದ ಕೊಲೆ ಮಾಡಲಾಗಿದೆ.

ಗಂಡನ ಕೊಲೆಯಿಂದ ಕಂಗಾಲಾದ ಹೆಂಡತಿ

ಊಟ ಮಾಡಿ, ಇಲ್ಲೇ ಹೋಗಿ ಬರುತ್ತೇನೆ ಎಂದು ಹೆಂಡತಿಗೆ ಹೇಳಿ ಮನೆಯಿಂದ ಹೋದ ವ್ಯಕ್ತಿ ಬೆಳಿಗ್ಗೆ ಪತ್ತೆಯಾಗಿದ್ದು ಮಾತ್ರ ಹೆಣವಾಗಿ. ಮಡದಿಯ ಜೊತೆ ಮಾತನಾಡಿ ಊಟ ಮುಗಿಸಿಕೊಂಡು ಹೋದ ಶಂಭುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಯಾವುದೇ ಗಲಾಟೆ ಹಾಗೂ ಜಗಳ ಇಲ್ಲದೇ ಶಾಂತವಾಗಿದ್ದ ನೂಲ್ವಿಯ ಹೊರ ವಲಯದಲ್ಲಿ ನೆತ್ತರು ಹರಿದಿದೆ. ಗಂಡನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆಯೇ ಮಡದಿ ಗಾಬರಿಗೊಂಡಿದ್ದಾಳೆ.

ಇದನ್ನೂ ಓದಿ: Tragedy Love Story: ಪ್ರೀತಿಸಿದ ಹುಡುಗ ಅಪಘಾತಕ್ಕೆ ಬಲಿಯಾದ, ನೊಂದ ಹುಡುಗಿ ಸೂಸೈಡ್ ಮಾಡಿಕೊಂಡಳು! ಒಂದು ಪ್ರೇಮಕಥೆ ಎರಡು ಸಾವಿನಲ್ಲಿ ಅಂತ್ಯ

ಕೊಲೆ ಹಿಂದೆ ಯಾರ ಕೈವಾಡ ಇದೆ?

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಲಾಗಿದೆ ಎಂಬುವಂತ ಶಂಕೆ ವ್ಯಕ್ತವಾಗಿದೆ. ಹೋದ ವರ್ಷವಷ್ಟೇ ಮದುವೆಯಾಗಿದ್ದ ಶಂಭು, ಹೊಲ ಮನೆ ಕೆಲಸ ಮಾಡಿಕೊಂಡು, ತಾಯಿ ಹಾಗೂ ಹೆಂಡತಿ ಜೊತೆಗೆ ಚನ್ನಾಗಿಯೇ ಇದ್ದ. ಆದರೆ ಅದ್ಯಾವ ವಕ್ರದೃಷ್ಟಿ ಆ ಕುಟುಂಬದ ಮೇಲೆ ಬಿದ್ದಿತೋ ಗೊತ್ತಿಲ್ಲ, ಶಂಭು ಕಮಡೊಳ್ಳಿ ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಆದರೆ ಆತನ ತಾಯಿ ಮಲ್ಲವ್ವ ಮಾತ್ರ ಈ ಕೊಲೆಯ ಹಿಂದೆ ಯಾರದೋ ಕೈವಾಡವಿದೆ ಎಂಬುವಂತೇ ತನ್ನ ಮನದಾಳದ ಮಾತನ್ನು ದುಃಖದಲ್ಲಿಯೇ ಹೊರ ಹಾಕಿದ್ದಾಳೆ.

ಹೆಂಡತಿ ಕಡೆಯವರ ಮೇಲೆ ಅನುಮಾನ

ನಮ್ಮ ಜೊತೆ ಅಷ್ಟೇ ಆಗಾಗ ಜಗಳ ಮಾಡ್ತಿದ್ದ. ಹೊರಗಿನವರೊಂದಿಗೆ ಯಾರೊಂದಿಗೂ ಜಗಳವಿರಲಿಲ್ಲ. ಈಗ ನೋಡಿದ್ರೆ ಹಣವಾಗಿದ್ದಾನೆ. ಈ ಮುಂಚೆ ನನ್ನ ಮೊದಲ ಮಗನನ್ನೂ ಹೀಗೆಯೇ ಕೊಲೆ ಮಾಡಿದ್ದರು ಎಂದು ಮೃತನ ತಾಯಿ ಕಣ್ಣೀರು ಹಾಕಿದ್ದಾಳೆ. ಇದರ ಹಿಂದೆ ಅವನ ಹೆಂಡತಿ ಕಡೆಯವರ ಕೈವಾಡವಿದೆ ಎಂದು ಶಂಬು ತಾಯಿ ಮಲ್ಲವ್ವ ಆರೋಪಿಸಿದ್ದಾಳೆ.

ಅತ್ತೆ ಆರೋಪ ಅಲ್ಲಗಳೆದ ಸೊಸೆ

ಈ ಕೊಲೆಯ ಬಗ್ಗೆ ನನಗೆ ಗೊತ್ತಾಗಿದ್ದು ಬೆಳಿಗ್ಗೆಯೇ ಎನ್ನುತ್ತಾಳೆ ಮೃತ ಶಂಭುನ ಹೆಂಡತಿ. ಹೆಂಡತಿಯ ಕಡೆಯವರೇ ಕೊಲೆ ಮಾಡಿಸಿರಬಹುದೆಂಬ ಅತ್ತೆಯ ಆರೋಪವನ್ನು ಪ್ರೇಮಾ ಅಲ್ಲಗಳೆದಿದ್ದಾಳೆ. ಕೊಲೆ ಮಾಡಿಸೋಕೆ ನನಗೇನು ಗಂಡ ಬೇಡವಾಗಿದ್ದನಾ ಎಂದು ಶಂಭು ಪತ್ನಿ ಪ್ರೇಮಾ ಪ್ರಶ್ನಿಸಿದ್ದಾಳೆ. ಕುಡಿತದ ಚಟವಿತ್ತು, ಆದ್ರೆ ಯಾಕೆ ಕೊಲೆಯಾಗಿದ್ದಾನೆ ಅಂತ ಗೊತ್ತಿಲ್ಲ ಎಂದು ಶಂಭು ಮಾವ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರಿಂದ ಪರಿಶೀಲನೆ

ಕೊಲೆ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಪರಿಶೀಲನೆ ನಡೆಸಿದರು. ಕೊಲೆ ನಡೆದಿರುವ ಬಗ್ಗೆ ಈಗಾಗಲೇ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಅನ್ನೋದುರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರವೇ ಕೊಲೆ ಆರೋಪಿಗಳನ್ನು ಬಂಧಿಸುವುದಾಗಿ ಕೃಷ್ಣಕಾಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Husband-Wife Clash: ಗಂಡನೊಂದಿಗೆ ಮುನಿಸಿಕೊಂಡು ಕೆರೆ ಮಧ್ಯೆ ಕುಳಿತ ಹೆಂಡತಿ! "ನಾ ಮನೆಗ್ ಹೋಗೋದಿಲ್ಲ" ಅಂತ ರಂಪಾಟ

ಒಟ್ಟಿನಲ್ಲಿ ರಾತ್ರಿ ಹೊರಗೆ ಹೋಗಿ ಬರುವುದಾಗಿ ಹೇಳಿದ್ದ ಶಂಭು ಬೆಳಿಗ್ಗೆ ಹೆಣವಾಗಿ ಸಿಕ್ಕಿದ್ದಾನೆ. ಶಾಂತವಾಗಿದ್ದ ಊರಲ್ಲಿ ನೆತ್ತರು ಹರಿದಿದ್ದು, ಗ್ರಾಮಸ್ಥರ ಆತಂಕಕ್ಕೂ ಕಾರಣವಾಗಿದೆ. ಸೂಕ್ತ ತನಿಖೆಯ ಮೂಲಕ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Published by:Annappa Achari
First published: