ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲವೆಂದ ಪ್ರೇಮ್ - ಕಾನೂನು ಸುವ್ಯವಸ್ಥೆ ಹಾಳು ಮಾಡೋರಿಗೆ ಸಿಎಂ ಎಚ್ಚರಿಕೆ

Anguish Against MES: ಗಡಿಭಾಗದಲ್ಲಿ ಕನ್ನಡಿಗರನ್ನ ಪದೇಪದೇ ಕೆಣಕುತ್ತಿರುವ ಎಂಇಎಸ್ ಸಂಘಟನೆಯ ಪುಂಡಾಟದ ವಿರುದ್ಧ ಕನ್ನಡ ಚಿತ್ರರಂಗದವರೂ ಘರ್ಜಿಸುತ್ತಿದ್ದಾರೆ. ಎಂಇಎಸ್ ನಿಷೇಧಿಸಬೇಕೆಂದು ಪ್ರೇಮ್ ಒತ್ತಾಯಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ನಟ ಪ್ರೇಮ್

ಸಿಎಂ ಬಸವರಾಜ ಬೊಮ್ಮಾಯಿ, ನಟ ಪ್ರೇಮ್

  • Share this:
ಹುಬ್ಬಳ್ಳಿ: ಬೆಳಗಾವಿ ಗಡಿಯಲ್ಲಿ ಎಂ.ಇ.ಎಸ್. ಪುಂಡರ, ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡಾಟಿಕೆ ವಿರುದ್ಧ ಆಕ್ರೋಶಗಳು ಮುಂದುವರಿದಿವೆ. ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸೋಲ್ಲವೆಂದು ನಟ ಪ್ರೇಮ್ (Sandalwood actor Lovely Star Prem) ಹೇಳಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಖಚಿತ ಎಂದ ಸಿಎಂ ಬಸವರಾಜ ಬೊಮ್ಮಾಯಿ (Karnataka CM Basavaraja Bommai) ಎಚ್ಚರಿಸಿದ್ದಾರೆ.

ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ ಎಂದಿರೋ ನಟ ಪ್ರೇಮ್, ಎಂ.ಇ.ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದ ನಂತರ ಮಾತನಾಡಿದ ಪ್ರೇಮ್, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಅತಿಯಾಯ್ತು ಎಂದು ಕಿಡಿಕಾರಿದ್ದಾರೆ. ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪುಂಡಾಟಿಕೆಯಿಂದ ದೇಶದಲ್ಲಿ ಎಂಇಎಸ್​ಗೆ ಒಳ್ಳೆಯ ಹೆಸರು ಬರಲ್ಲ. ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಬಾಂಧವ್ಯದಿಂದ ಇದ್ದಾರೆ. ಆ ಬಾಂಧವ್ಯವನ್ನ ಹಾಳು ಮಾಡುವಂತಹ ಕೆಲಸಕ್ಕೆ ಎಂಇಎಸ್ ಕೈ ಹಾಕಬಾರದು. ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು. ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಎಂಇಎಸ್ ನವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದರು.

ಎಂಇಎಸ್ ಬ್ಯಾನ್ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರೇಮ್, ಈ ವಿಚಾರದಲ್ಲಿ ಸರ್ಕಾರದ ನಿಲುವು ಏನಿದೆಯೋ ಗೊತ್ತಿಲ್ಲ. ಆದ್ರೆ ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ. ಕನ್ನಡ ಚಿತ್ರರಂಗ ಹೋರಾಟಕ್ಕಿಳಿದರೆ ನಮ್ಮವರಿಗೆ ತೊಂದರೆಯಾಗಲಿದೆ ಅನ್ನೋ ಹಿನ್ನೆಲೆ ಶಾಂತ ರೀತಿಯಾಗಿದ್ದಾರೆ ಎಂದರು.

ಇದನ್ನೂ ಓದಿ: ಕನ್ನಡಿಗರ ಆಕ್ರೋಶ ತಣಿಸಲು ಪೊಲೀಸರಿಂದಲೇ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ - ನಾಳೆ ಸುವರ್ಣ ಸೌಧ ಮುತ್ತಿಗೆ

ಸಿಎಂ ಖಡಕ್ ವಾರ್ನಿಂಗ್....

ಬೇರೆ ಬೇರೆ ವಿಷಯ ತಂದು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡೋದನ್ನ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಂ ಇ ಎಸ್ ಪುಂಡಾಟಿಕೆ ಮುಂದುವರಿಕೆಗೆ ಕಿಡಿಕಾರಿದ್ದಾರೆ. ದೇಶಭಕ್ತರಿಗೆ ಎಲ್ಲರೂ ಗೌರವ ಕೊಡಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ.

ಅದಕ್ಕಾಗಿಯೇ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಶಿವಾಜಿಯ ಮೂರ್ತಿ ಸ್ಥಾಪನೆ ಮಾಡಿದ್ದೇವೆ. ಏನೇ ಹೇಳೋದಿದ್ದರೂ ಸಹ ಶಾಂತವಾಗಿ ಹೇಳಬೇಕು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಭಂಗ ಮಾಡೋದಕ್ಕೆ ನಮ್ಮ ಸರ್ಕಾರ ಬಿಡೋದಿಲ್ಲ. ಯಾರೇ ಹೋರಾಟ ಮಾಡಿದ್ರು ಕಾನೂನು ಸುವ್ಯವಸ್ಥೆ ಭಂಗ ಬರದಂತೆ ನೋಡಿಕೊಳ್ಳಬೇಕೆಂದರು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಓರ್ವ ಸಾವು

ಕನ್ನಡಿಗರ ರಕ್ಷಣೆಗೆ ಬದ್ಧ ಎಂದ ಚವ್ಹಾಣ....

ರಾಜ್ಯ ಸರ್ಕಾರ ಕನ್ನಡಿಗರು ಮತ್ತು ಕನ್ನಡ ಭಾಷೆ ರಕ್ಷಣೆಗೆ ಬದ್ಧವಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ. ಸಿದ್ಧಾರೂಢ ಮಠ ಹಾಗೂ ಗೋಶಾಲೆಗೆ ಭೇಟಿ ನೀಡಿದ ಪ್ರಭು ಚೌವ್ಹಾಣ್, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕನ್ನಡಿಗರು ಹಾಗೂ ಕನ್ನಡ ಭಾಷೆ ರಕ್ಷಣೆಗೆ ಬದ್ಧವಾಗಿದೆ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಈ ಹಿಂದೆಯೂ ಚರ್ಚೆಯಾಗಿತ್ತು, ಈಗಲೂ ಸದನದಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಗೋಮಾಳ ಜಾಗದಲ್ಲಿ ಗೋಶಾಲೆಗಳನ್ನ ತೆರೆಯಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಗೋಮಾಳ ಜಾಗಗಳನ್ನೂ ಸಹ ನಿಗದಿಪಡಿಸಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ. ಕಸಾಯಿಖಾನೆಯಲ್ಲಿ ಗೋವುಗಳ ಹತ್ಯೆ ವಿಚಾರದಲ್ಲಿ ಅನೇಕ ಪಿಐಎಲ್ ‌ಮೊರೆ ಹೋಗಿದ್ದಾರೆ. ಆದರೆ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದರು.

ವರದಿ: ಶಿವರಾಮ ಅಸುಂಡಿ.
Published by:Vijayasarthy SN
First published: