ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಅವಳಿ ನಗರ ಮಹಾನಗರ ಪಾಲಿಕೆ ಚುನಾವಣೆ (Hubli Dharwad Corporation elections) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲಿಯೂ ಈ ಬಾರಿ ಅಖಾಡಕ್ಕಿಳಿದಿರುವ ಕೆಲ ಅಭ್ಯರ್ಥಿಗಳ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ. ಅಂಥವರಲ್ಲಿ ಕೊರೋನಾ ಶವಗಳ ಅಂತ್ಯಕ್ರಿಯೆ ನೆರವೇರಿಸಿ ಹಣಕ್ಕಾಗಿ ಪರದಾಟ ನಡೆಸಿದ ವ್ಯಕ್ತಿಯೋರ್ವ ಬಾಕಿ ವಸೂಲಿಗಾಗಿ ಚುನಾವಣಾ ಅಖಾಡಕ್ಕಿಳಿದಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿದ್ದಾನೆ.
200ಕ್ಕೂ ಅಧಿಕ ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆಸಿದ್ದರೂ, ಈತನಿಗೆ ಅಂತ್ಯಕ್ರಿಯೆಯ ದುಡ್ಡು ಬಂದೇ ಇಲ್ಲ. ಹಣಕ್ಕಾಗಿ ಪಾಲಿಕೆಗೆ ಸುತ್ತಾಡಿ ಸುತ್ತಾಡಿ ಸುಸ್ತು ಹೊಡೆದ ಈ ವ್ಯಕ್ತಿ ಕೊನೆಗೆ ಅಂತ್ಯಕ್ರಿಯೆ ಹಣಕ್ಕಾಗಿ ಚುನಾವಣಾ ಅಖಾಡಕ್ಕಿಳಿದಿದ್ದಾನೆ. ಹುಬ್ಬಳ್ಳಿ ಸ್ಮಶಾನ ಕಾವಲುಗಾರ ಪಾಲಿಕೆ ಚುನಾವಣಾ ಅಖಾಡಕ್ಕಿಳಿದು ಗಮನ ಸೆಳೀತಿದಾನೆ. ಹೆಗ್ಗೆರೆ ರುದ್ರಭೂಮಿಯ ಕಾವಲುಗಾರ ಹುಸನಪ್ಪ ವಜ್ಜಣ್ಣನವರ ಪಾಲಿಕೆ ಅಖಾಡಕ್ಕಿಳಿದ ವ್ಯಕ್ತಿಯಾಗಿದ್ದಾನೆ. ಹುಸನಪ್ಪ ಪಾಲಿಕೆಯ 52ನೇ ವಾರ್ಡ್ನಿಂದ ಸ್ಪರ್ಧೆ ಮಾಡಿದ್ದಾನೆ. ಹೆಗ್ಗೆರೆ ರುದ್ರಭೂಮಿ ಪ್ರದೇಶದ ವ್ಯಾಪ್ತಿಯಲ್ಲಿ ಬರೋ 52ನೇ ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಹುಸನಪ್ಪ ಕಹಳೆ ಮೊಳಗಿಸ್ತಿದಾನೆ.
ಹುಬ್ಬಳ್ಳಿಯ ಹೆಗ್ಗೆರೆ ರುದ್ರಭೂಮಿಯ ಕಾವಲುಗಾರನಾಗಿರೋ ಹುಸನಪ್ಪ, ಅವ್ಯವಸ್ಥೆಯ ಆಗರವಾಗಿದ್ದ ಸ್ಮಶಾಕ್ಕೆ ಉದ್ಯಾನವನದ ಸ್ವರೂಪ ನೀಡಿದ್ದಾನೆ. ಹಗಲಿರುಳು ಶ್ರಮಿಸಿ ರುದ್ರಭೂಮಿಯ ಸ್ವಚ್ಛತೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾನೆ. ಕೋವಿಡ್ ಸಂದರ್ಭದಲ್ಲಿಯಂತೂ ಈತನ ಕರ್ತವ್ಯ ಪ್ರಜ್ಞೆ ಎಲ್ಲರನ್ನೂ ತಲೆದೂಗುವಂತೆ ಮಾಡಿತು. ಕೋವಿಡ್ ಸೋಂಕಿತರೆಂದರೆ ಸಾಕು ಗಾವುದ ದೂರ ಜಿಗಿಯೋ ಪರಿಸ್ಥಿತಿ ಈಗಲೂ ಇದೆ. ಇಂಥದ್ದರಲ್ಲಿ ಈತ ಜೀವದ ಹಂಗುದೊರೆದು ಕೋವಿಡ್ ಮೊದಲ ಹಾಗೂ ಎರಡನೆಯ ಅಲೆಯಲ್ಲಿ ಕೋವಿಡ್ ನಲ್ಲಿ ಸಾವನ್ನಪ್ಪಿದ್ದ 200ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದಾನೆ.
ಯುವಕರ ಜೊತೆಗೂಡಿಸಿಕೊಂಡು ಇಷ್ಟೆಲ್ಲಾ ಕಾರ್ಯ ಮಾಡಿದರೂ ಅಂತ್ಯಕ್ರಿಯೆಗಳಿಗೆ ಆಗಿರುವ ಖರ್ಚನ್ನು ಮಾತ್ರ ಕಟ್ಟಿಕೊಡುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು 9.75 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಪ್ರತಿ ತಿಂಗಳ ವೇತನವೂ ಬಾರದೆ ಈತ ಕಂಗಾಲಾಗಿದ್ದಾನೆ. ಶವ ಸುಡಲು ಕಟ್ಟಿಗೆ ಇತ್ಯಾದಿ ಸಾಮಾಗ್ರಿ, ಕೆಲಸಗಾರರಿಗೆ ತಾನೇ ಹಣ ನೀಡಿ ಅಂತ್ಯಕ್ರಿಯೆ ನೆರವೇರಿಸಿರೋ ಹುಸನಪ್ಪ ಹಣಕ್ಕಾಗಿ ಪರದಾಟ ನಡೆಸೋ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ‘ದಲ್ಲಾಳಿಗಿರಿ ಮಾಡೋರಿಗೆ ದಲ್ಲಾಳಿತನ ಗೊತ್ತಿರುತ್ತೆ‘; ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಈಶ್ವರಪ್ಪ
ಕೋವಿಡ್ ಸೋಂಕಿತರೆಂದ್ರೆ ಜನ ದೂರ ಜಿಗಿಯೋ ಸಂದರ್ಭದಲ್ಲಿಯೂ ಹತ್ತಿರ ನಿಂತು ಹುಸನಪ್ಪ ಅಂತ್ಯಕ್ರಿಯೆ ನೆರವೇರಿಸಿದ್ದ. ಆದ್ರೆ ಹುಸನಪ್ಪನ ಕಾರ್ಯಕ್ಕೆ ಗೌರವವನ್ನೂ ನೀಡದೆ, ಹಣವನ್ನೂ ಪಾವತಿಸದೆ ಪಾಲಿಕೆ ಅಧಿಕಾರಿಗಳ ಅಸಡ್ಡೆ ವರ್ತನೆ ತೋರಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಪಾಲಿಕೆ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಈತ ಚುನಾವಣಾ ಅಖಾಡಕ್ಕಿಳಿದಿದ್ದಾನೆ. ಚುನಾವಣೆಯಲ್ಲಿ ಗೆದ್ದು ಪಾಲಿಕೆಯಲ್ಲಿ ಫೈಟ್ ಮಾಡಿ ನನ್ನ ಹಣ ನಾನು ಪಡೆಯುತ್ತೇನೆ ಅನ್ನೋ ವಿಶ್ವಾಸದಲ್ಲಿದ್ದಾನೆ.
ಕೋವಿಡ್ ಸಂದರ್ಭದಲ್ಲಿನ ಕೆಲಸ ನೋಡಿ ಜನರಿಂದಲೂ ಹುಸನಪ್ಪಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓಣಿ ಓಣಿ ಸುತ್ತಿ ತನಗೆ ಮತ ನೀಡಿ ಅಂತ ಹುಸನಪ್ಪ ಪ್ರಚಾರ ನಡೆಸಿದ್ದಾನೆ. ಸ್ಮಶಾನವನ್ನು ಉದ್ಯಾನದ ರೀತಿಯಲ್ಲಿ ಅಭಿವೃದ್ಧಿಪಡಿಸಿದ, ಕೋವಿಡ್ ವೇಳೆ ಶವಗಳ ಅಂತ್ಯಕ್ರಿಯೆ ಮಾಡಿದ್ದು ಇತ್ಯಾದಿ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಹಾಕುವಂತೆ ಬೇಡಿಕೊಳ್ಳುತ್ತಿದ್ದಾನೆ. ತನ್ನ ‘ಕಹಳೆ’ ಗುರುತಿಗೆ ಮತ ಹಾಕುವಂತೆ ಮನವಿ ಮಾಡ್ತಿದ್ದಾನೆ. ಪಾಲಿಕೆ ವಿರುದ್ಧ ಕಹಳೆ ಮೊಳಗಿಸೋ ಮೂಲಕ ಗಮನ ಸೆಳೆದಿದ್ದಾನೆ.
ಸ್ಮಶಾನವನ್ನು ಸುಸ್ತಿಯಲ್ಲಿಟ್ಟು, ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗುದೊರೆದು ಕೆಲಸ ಮಾಡಿರೋ ಬಗ್ಗೆ ಈ ವಾರ್ಡ್ ಜನ ಮೆಚ್ಚುಗೆ ವ್ಯಕ್ತಪಡಿಸ್ತಿದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಸೆಡ್ಡು ಹೊಡೋದಿರೋ ಹುಸನಪ್ಪನಿಗೆ ಸ್ಥಳೀಯರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ತನ್ನ ಹಣಕ್ಕಾಗಿ ಪಾಲಿಕೆಯಲ್ಲಿ ಧ್ವನಿ ಎತ್ತುತ್ತೇನೆ. ಒಂದು ವೇಳೆ ಸೋತರೆ ಪಾಲಿಕೆಯ ಮುಂದೆ ಕುಳಿತು ಹೋರಾಟ ಮಾಡ್ತೇನೆ ಎಂದಿರೋ ಹುಸನಪ್ಪ, ಮತದಾರರ ಓಲೈಕೆಯ ಕಸರತ್ತನ್ನು ಮುಂದುವರೆಸಿದ್ದಾನೆ.
ವರದಿ: ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ