ಅನ್​​ ಲಾಕ್ ನಂತರ ದೇವಸ್ಥಾನಗಳಿಗೆ ಮುಗಿಬಿದ್ದ ಜನ; ಬಸ್, ಮಾಲ್ ಗಳು ಖಾಲಿ ಖಾಲಿ...

ದೇವಸ್ಥಾನಗಳತ್ತ ಬೆಳಿಗ್ಗೆಯಿಂದ ಭಕ್ತರು ದೇವಸ್ಥಾನ, ಮಠಗಳ ಕಡೆ ಮುಖಮಾಡಿದ್ದರೆ, ಬಸ್ ಗಳ ಮಾತ್ರ ಖಾಲಿ ಖಾಲಿಯಾಗಿ, ಮಾಲ್ ಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ.

ದೇವಸ್ಥಾನದ ಚಿತ್ರಣ

ದೇವಸ್ಥಾನದ ಚಿತ್ರಣ

  • Share this:
ಹುಬ್ಬಳ್ಳಿ (ಜು. 5):  ಕೊರೋನಾ ಎರಡನೆಯ ಅಬ್ಬರ ತುಸು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದೆ. ಮೂರನೇ ಹಂತದ ಅನ್ ಲಾಕ್ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ್ದು, ಕೆಲ ವಿನಾಯಿತಿಗಳನ್ನು ನೀಡಿದೆ. ಸಿನೆಮಾ ಮಂದಿರ, ಪಬ್ ಗಳನ್ನು ಹೊರತುಪಡಿಸಿ ಉಳಿದವುಗಳಿಗೆ ಅನುಮತಿ ನೀಡಲಾಗಿದೆ. ಬಸ್ ಗಳಲ್ಲಿ ಶೇ. 100 ರಷ್ಟು ಆಸನ ಭರ್ತಿಗೂ ಅವಕಾಶ ನೀಡಿದೆ. ದೇವಸ್ಥಾನಗಳತ್ತ ಬೆಳಿಗ್ಗೆಯಿಂದ ಭಕ್ತರು ದೇವಸ್ಥಾನ, ಮಠಗಳ ಕಡೆ ಮುಖಮಾಡಿದ್ದರೆ, ಬಸ್ ಗಳ ಮಾತ್ರ ಖಾಲಿ ಖಾಲಿಯಾಗಿ, ಮಾಲ್ ಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಸ್ಥಿತಿ ಹುಬ್ಬಳ್ಳಿಯಲ್ಲಿ ಕಂಡು ಬಂದಿತು.

ಇಂದಿನಿಂದ ಮೂರನೇ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು, ದೇವಸ್ಥಾನ ಪ್ರವೇಶಕ್ಕೂ ಅವಕಾಶ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತು ಭಕ್ತರು ಸಿದ್ಧಾರೂಢರ ದರ್ಶನ ಪಡೆಯುತ್ತಿದ್ದಾರೆ. ಸಿದ್ಧಾರೂಢ ಮಠ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಹೊಂದಿದ್ದು, ಭಕ್ತ ಸಾಗರ ಮಠದ ಕಡೆ ಹರಿದುಬರಲಾರಂಭಿಸಿದೆ. ಲಾಕ್ ಡೌನ್ ಗೆ ಮುಂಚಿತವಾಗಿ ರಥೋತ್ಸವ ನೆರವೇರಿತ್ತು. ರಥೋತ್ಸವದ ನಂತರ ಲಾಕ್ ಡೌನ್ ಜಾರಿಗೊಂಡಿದ್ದರಿಂದ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು.

ಸುಮಾರು 2 ತಿಂಗಳ ನಂತರ ಮತ್ತೆ ಸಿದ್ಧಾರೂಡರ ದರ್ಶನಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಸಾಲುಗಟ್ಟಿ ನಿಂತು ಭಕ್ತರು ಸಿದ್ಧಾರೂಢ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದ್ದಾರೆ. ದರ್ಶನಕ್ಕೆ ಬಂದವರು ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡೋದು ಇತ್ಯಾದಿ ಕೊರಾನಾ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ. ಇಂದಿನಿಂದ ಧಾರವಾಡ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರ ದಂಡು ದೇವಸ್ಥಾನಗಳ ಕಡೆ ಮುಖಮಾಡಿದೆ.

ಇದನ್ನು ಓದಿ: ಮದುವೆ ವಾರ್ಷಿಕೋತ್ಸವದಂದು ಹೆಂಡತಿಗೆ ದುಬಾರಿ ಗಿಫ್ಟ್ ನೀಡಿದ ಧೋನಿ

ಸಾರಿಗೆ ಬಸ್ ಗಳಿಗೆ ಪ್ರಯಾಣಿಕರ ಕೊರತೆ
ಸಾರಿಗೆ ಬಸ್ ಗಳಲ್ಲಿ ಶೇಕಡ ನೂರರಷ್ಟು ಸೀಟ್ ಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸೀಟುಗಳ ಭರ್ತಿಗೆ ಅವಕಾಶ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೊರಡುವ ಬಸ್ಸುಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹುಬ್ಬಳ್ಳಿಯಿಂದ ಬೆಂಗಳೂರು, ದಾವಣಗೆರೆ, ಹಾವೇರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಇತ್ಯಾದಿ ಪ್ರಮುಖ ನಗರ, ಅಕ್ಕ-ಪಕ್ಕದ ಊರುಗಳ ಕಡೆ ಬಸ್ ಸಂಚಾರ ಕಲ್ಪಿಸಲಾಗಿದೆ. ಶೇಕಡಾ ನೂರರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬಂದಿಲ್ಲ. ಬಹುತೇಕ ಬಸ್ ಗಳಲ್ಲಿ ಶೇಕಡಾ 50 ರಷ್ಟು ಆಸನಗಳು ಭರ್ತಿಯಾಗಿಲ್ಲ. ಪ್ರಯಾಣಿಕರ ಪ್ರತಿಕ್ರಿಯೆ ತಕ್ಕಂತೆ ಬಸ್ ಗಳ ಸಂಖ್ಯೆ ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧಾರ ಕೈಗೊಂಡಿದೆ.

ಬಿಕೋ ಎನ್ನುತ್ತಿರೋ ಮಾಲ್ ಗಳು....
ರಾಜ್ಯಾದ್ಯಂತ ಇಂದಿನಿಂದ 3.0 ಅನ್ ಲಾಕ್ ಗೆ ರಾಜ್ಯ ಸರ್ಕಾರದ ಅನುಮತಿ ನೀಡಿದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಶಾಪಿಂಗ್ ಮಾಲ್ ಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಶಾಪಿಂಗ್ ಮಾಲ್ ಗಳಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಸಿದ್ಧತೆ ಮಾಡಲಾಗಿದೆ. ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ ನಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲಾಗಿದ್ದು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ. ಮಾಲ್‌ಗಳು ಬೆಳಿಗ್ಗೆಯೇ ಓಪನ್ ಆದ್ರೂ ಜನ ಅಷ್ಟಾಗಿ ಮಾಲ್ ಗಳ ಕಡೆ ಮುಖಮಾಡಿಲ್ಲ. ಶಾಪಿಂಗ್ ಮಾಲ್‌ಗಳು ಸಂಪೂರ್ಣ ಖಾಲಿ ಖಾಲಿಯಾಗಿ ಕಾಣುತ್ತಿದ್ದವು. ಈಗಾಲೇ ಲಾಕ್ ಡೌನ್ ನಿಂದ ನಷ್ಟ ಹೊಂದಿರೋ ವರ್ತಕರು, ಗ್ರಾಹಕರ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:Seema R
First published: