ಹುಬ್ಬಳ್ಳಿ (ಜೂನ್ 19): ಅರೆ ಮಲೆನಾಡು ಪ್ರದೇಶ ಎನಿಸಿಕೊಂಡ ಧಾರವಾಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ಭರ್ತಿಯಾಗಲಾರಂಭಿಸಿವೆ. ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಅವಾಂತರಗಳೂ ಸೃಷ್ಟಿಯಾಗಲಾರಂಭಿಸಿವೆ. ಮೊನ್ನೆಯಷ್ಟೇ ಹಳೆ ಹುಬ್ಬಳ್ಳಿ ಪ್ರದೇಶದ ವ್ಯಕ್ತಿಯೋರ್ವ ಕಸ ಹಾಕಲು ಹೋಗಿ ನಾಲೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ. ಇದೀಗ ಕೆರಗಳು ಒಡೆದು ಅವಾಂತರ ಸೃಷ್ಟಿಯಾಗಲಾರಂಭಿಸಿದೆ. ಭರ್ತಿಯಾದ ಕೆರೆಯೊಂದು ಒಡೆದು ಸಾವಿರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಧಾರಕಾರ ಮಳೆಯಿಂದ ಕೆರೆ ಕಟ್ಟೆ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದ ಘಟನೆ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆದಿದೆ. ಹಟಕಿನಾಳ ಗ್ರಾಮದ ಜಿಗಳಿ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಬೆಳಗಳು ಸಂಪೂರ್ಣ ಜಲಾವೃತಗೊಂಡಿದೆ. ಭತ್ತ, ಸೋಯಾಬಿನ್, ಕಬ್ಬು, ಹತ್ತಿ, ಗೋವಿನಜೋಳ ಬೆಳೆಗಳು ಜಲಾವೃತಗೊಂಡಿವೆ. ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಹಲವಾರು ರೈತರು ಮುಂಗಾರು ಬಿತ್ತನೆ ಮಾಡಿದ್ದರು.
ಇದನ್ನೂ ಓದಿ: Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ; ಬೆಳಗಾವಿಯಲ್ಲಿ ಪ್ರವಾಹ ಭೀತಿ
ಸೋಯಾಬಿನ್, ಹತ್ತಿ, ಹೆಸರು, ಗೋವಿನ ಜೋಳ ಇತ್ಯಾದಿಗಳು ಮೊಳಕೆಯ ಹಂತದಲ್ಲಿಯೇ ಜಲಾವೃತಗೊಂಡು ಅಪಾರ ಹಾನಿ ಸೃಷ್ಟಿಯಾಗುವಂತಾಗಿದೆ. ಇದರಿಂದಾಗಿ ಅನ್ನದಾತನಿಗೆ ದಿಕ್ಕು ತೋಚದಂತಾಗಿದೆ. ಆದರೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆಗಳು ತುಂಬಿ ಹರಿಯುತ್ತಿವೆ. ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟಕ್ಕೆ ಜನತೆ ತತ್ತರಗೊಳ್ಳುವಂತಾಗಿದೆ.
ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಮಳೆ ಮುಂದುವರಿದಿದೆ. ಹುಬ್ಬಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಮಳೆ ಆಗುತ್ತಿದೆ. ಬೆಳಿಗ್ಗೆಯಿಂದಲೂ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಜಿಟಿ ಜಿಟಿಯಾಗಿ, ಕೆಲವೊಮ್ಮೆ ಧಾರಾಕಾರ ಸ್ವರೂಪವಾಗಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಹುಬ್ಬಳ್ಳಿ ತಾಲೂಕಿನ ಹಲವು ಕೆರೆಗಳೂ ಭರ್ತಿಯಾಗಲಾರಂಭಿಸಿವೆ. ಅಂತರ್ಜಲ ಮಟ್ಟವೂ ಹೆಚ್ಚಳವಾಗಲು ಮಳೆ ಅನುಕೂಲವಾಗಿದೆ.
ಇದನ್ನೂ ಓದಿ: Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
ತುಂಬಿ ಕೋಡಿ ಹರಿದ ಉಣಕಲ್ ಕೆರೆ:
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿಯ ಉಣಕಲ್ ಕೆರೆ ಭರ್ತಿಯಾಗಿದೆ. ಉಣಕಲ್ ಕೆರೆ ಭರ್ತಿಯಾಗಿ ಕೋಡಿಯಾಗಿ ಹರಿಯುತ್ತಿದೆ. ಧಾರವಾಡ ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಉಣಕಲ್ ಕೆರೆಯೂ ಒಂದಾಗಿದೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಅಂತರ್ಜಲದ ಜೀವನಾಡಿಯಾಗಿರೊ ಉಣಕಲ್ ಕೆರೆ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕೋಡಿಯಾಗಿ ಮೈದುಂಬಿ ಹರಿಯುತ್ತಿದೆ. ಕೆರೆ ಕೋಡಿಯ ದೃಶ್ಯಗಳು ಮನೋಹರವಾಗಿದ್ದು, ನೀರು ಹರಿಯೋದನ್ನು ಕಣ್ತುಂಬಿಕೊಳ್ತಿರೋ ಜನತೆ ಕೆರೆಯ ಕಡೆ ಮುಖ ಮಾಡಿದೆ. ಮುಂಗಾರು ಮಳೆ ಆರಂಭಗೊಂಡ ಕೆಲವೇ ದಿನಗಳಲ್ಲಿ ಉಣಕಲ್ ಕೆರೆ ಭರ್ತಿಯಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ