ಬ್ಲಾಕ್ ಫಂಗಸ್ ಚಿಕಿತ್ಸೆಗೆ ಕಿಮ್ಸ್ ಕೇಳಿದ್ದು 2 ಸಾವಿರ ವೇಲ್ಸ್; ಸರ್ಕಾರ ಕೊಟ್ಟಿದ್ದು ನೂರು ವೇಲ್ಸ್: ಶೆಟ್ಟರ್ ಸಮರ್ಥನೆ

ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಬಫರ್ ಸ್ಟಾಕ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ

ಸಚಿವ ಜಗದೀಶ್ ಶೆಟ್ಟರ್.

ಸಚಿವ ಜಗದೀಶ್ ಶೆಟ್ಟರ್.

  • Share this:
ಹುಬ್ಬಳ್ಳಿ (ಮೇ. 24): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ರಾಜ್ಯ ಸರ್ಕಾರ ಕಿಮ್ಸ್ ಕೇಳಿದ ಔಷಧಿಯಲ್ಲಿ ಶೇ. 05 ರಷ್ಟನ್ನು ಮಾತ್ರ ಪೂರೈಕೆ ಮಾಡಿದೆ. ಸರ್ಕಾರದ ಕ್ರಮವನ್ನು ಕೈಗಾರಿಕೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ಬ್ಲಾಕ್ ಫಂಗಸ್ ಚಿಕಿತ್ಸೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಔಷಧ ಬಾರದೇ ಇರುವ ಹಿನ್ನೆಲೆಯಲ್ಲಿ ಕಿಮ್ಸ್ ಗೆ ಕಡಿಮೆ ಪ್ರಮಾಣದಲ್ಲಿ ಔಷಧ ಪೂರೈಕೆಯಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬ್ಲಾಕ್ ಫಂಗಸ್ ರೋಗಿಗಳಿಗೆ 2000 ವೇಲ್ಸ್ ಔಷಧ ಕಳಿಸುವಂತೆ ಕಿಮ್ಸ್ ಮನವಿ ಮಾಡಿದ್ದರೂ, ರಾಜ್ಯ ಸರ್ಕಾರದಿಂದ ಕೇವಲ ನೂರು ವೇಲ್ಸ್ ಸಿಕ್ಕಿದ್ದು, ಈ ಕ್ರಮವನ್ನು ಸಚಿವರು ಸಮರ್ಥಿಸಿಕೊಂಡರು.

ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಔಷಧ ಬಂದಿಲ್ಲ. ಬಂದ ಔಷಧಿಯಲ್ಲಿ ನಮ್ಮ ಕಿಮ್ಸ್ ಗೂ ರಾಜ್ಯ ಸರ್ಕಾರ ಕಳಿಸಿಕೊಟ್ಟಿದೆ. ಮುಂಚೆ ಹೆಚ್ಚಿನ ಪ್ರಮಾಣದಲ್ಲಿ ಔಷಧ ಉತ್ಪಾದನೆ ಆಗುತ್ತಿಲ್ಲ. ವರ್ಷಕ್ಕೆ ಐದಾರು ಜನರಲ್ಲಿ ಮಾತ್ರ ಬ್ಲಾಕ್ ಫಂಗಸ್ ಕಾಣಿಸುತ್ತಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಬ್ಲಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಿಮ್ಸ್ ಗೆ ನಿತ್ಯ ಐದಾರು ರೋಗಿಗಳು ಬರುತ್ತಿದ್ದಾರೆ. ಹೆಚ್ಚಿನ ಔಷಧ ಪೂರೈಕೆಗೆ ಸಂಬಂಧಿಸಿ ಅಶ್ವತ್ಥ ನಾರಾಯಣ ಮತ್ತು ಸುಧಾಕರ್ ಗೆ ಮಾತನಾಡಿದ್ದೇನೆ ಎಂದರು.

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸದ್ಯ 102 ಬ್ಲಾಕ್ ಫಂಗಸ್ ರೋಗಿಗಳಿದ್ದಾರೆ. ಈ ಪೈಕಿ ಧಾರವಾಡ ಜಿಲ್ಲೆಗೆ ಸೇರಿದವರು ಕೇವಲ 21 ರೋಗಿಗಳು. ಉಳಿದವರು ಬೇರೆ ಜಿಲ್ಲೆಗೆ ಸೇರಿದವರಾಗಿದ್ದಾರೆ. ಔಷಧಿಯನ್ನು ನೇರವಾಗಿ ಖರೀದಿಸಲೂ ನಾವು ಸಿದ್ಧರಿದ್ದೇವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಆಕ್ಸಿಜನ್ ಕೊರತೆಯಾಗದಂತೆ ಕ್ರಮ:

ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಬಫರ್ ಸ್ಟಾಕ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ನಿರ್ವಹಣೆ ಕಾರಣಕ್ಕೆ ಜಿಂದಾಲ್ ನಲ್ಲಿ ಒಂದು ದಿನದ ಮಟ್ಟಿಗೆ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಂಡಿತ್ತು. ಈಗ ಜಿಂದಾಲ್ ನಲ್ಲಿ ಮತ್ತೆ ಯಥಾರೀತಿ ಉತ್ಪಾದನೆ ಆರಂಭಗೊಂಡಿದೆ. ಸ್ಟೀಲ್ ಉತ್ಪಾದನೆಗಿಂತ ಆಕ್ಸಿಜನ್ ಉತ್ಪಾದನೆಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ.

ಒರಿಸ್ಸಾದಿಂದ ಮೂರು ದಿನಗಳಿಗೊಮ್ಮೆ ಆಕ್ಸಿಜನ್ ಬರುತ್ತಿತ್ತು. ಈಗ ನಿತ್ಯ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿಯೂ ಕೋವಿಡ್ ಕಾಳಜಿ ಕೇಂದ್ರ ಆರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕಿತರನ್ನು ಕಾಳಜಿ ಕೇಂದ್ರಕ್ಕೆ ಕಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಸಿಮ್ಸ್ ನಲ್ಲಿ ಎಂಬಿಬಿಎಸ್ ಮುಗಿಸಿದ ಮೊದಲ ಬ್ಯಾಚ್ ಗೆ ಕೋವಿಡ್ ಚಾಲೆಂಜ್!

ಮುಂಗಾರು ಕೃಷಿ ಚಟುವಟಿಕೆ ಸಭೆ

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಸಭೆ ಮಾಡಲಾಯಿತು. ಮುಂಗಾರು ಕೃಷಿ ಚಟುವಟಿಕೆಗಳ ಮೇಲೆ ಲಾಕ್ ಡೌನ್ ನಿಂದ ಅಡಚಣೆಯಾಗದಿರುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.ಮುಂಗಾರು ಚಟುವಟಿಕೆಗಳ ಹಿನ್ನೆಲೆಯಲ್ಲಿ ರೈತರಿಗಾಗಿ ಹೊಸ ಮಾರ್ಗಸೂಚಿ ರೂಪಿಸುವುದಾಗಿ ತಿಳಿಸಿದರು. ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಬೀಜ ವಿತರಣೆಗೆ ಹೆಚ್ಚುವರಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ನಾಳೆಯಿಂದಲೇ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಲಾಗುವುದು. ಹೋಬಳಿ ಮಟ್ಟದಲ್ಲಿ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.

ಗೊಬ್ಬರ ಖರೀದಿಗಾಗಿ ರೈತರು ಹುಬ್ಬಳ್ಳಿ, ಧಾರವಾಡಕ್ಕೆ ಬರೆಯತ್ತಾರೆ. ಖರೀದಿಗೆ ಹೆಚ್ಚುವರಿ ಕಾಲಾವಕಾಶ ಕೋರಿದ್ದಾರೆ. ಮುಂಗಾರು ಹಂಗಾಮಿಗೆ ಅಗತ್ಯ ಬೀಜ, ಗೊಬ್ಬರ ಖರೀದಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಸಗುವುದು. ಮುಂಗಾರು ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶೆಟ್ಟರ್ ತಿಳಿಸಿದ್ದಾರೆ.

ಲಾಕ್ ಡೌನ್ ಕಾರಣದಿಂದಾಗಿ ರೈತರು ನಗರಕ್ಕೆ ಬರಲು ತೊಡಕಾಗುತ್ತಿದೆ. ರೈತರಿಗೆ ಹತ್ತಿರದಲ್ಲಿಯೇ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಶಂಕರಪಾಟೀಲ ಮುನೇನಕೊಪ್ಪ, ಪ್ರಸಾದ್ ಅಬ್ಬಯ್ಯ, ಪ್ರದೀಪ್ ಶೆಟ್ಟರ್, ಕುಸುಮಾವತಿ ಶಿವಳ್ಳಿ, ಡಿಸಿ ನಿತೇಶ್ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

(ವರದಿ - ಶಿವರಾಮ ಅಸುಂಡಿ)
Published by:Seema R
First published: