ಧಾರವಾಡ: ರಾಜ್ಯದಲ್ಲಿ ನಿತ್ಯ ಕೋವಿಡ್ ಪ್ರಕರಣ ಹೆಚ್ಚುತ್ತಿವೆ. ಇದು ಹೀಗೆ ಮುಂದುವರೆದರೆ ಆಕ್ಸಿಜನ್ ಕೊರತೆ ಉಂಟಾಗಲಿದೆ. ಇನ್ನೂ ಆಕ್ಸಿಜನ್ ಹಂಚಿಕೆ ಬೇಡಿಕೆ ಹೆಚ್ಚಿದೆ. 1200 ಮೆಟ್ರಿಕ್ ಟನ್ವರೆಗೂ ಹೆಚ್ಚಳಕ್ಕೆ ಬೇಡಿಕೆ ಹಾಗೂ ಒತ್ತಾಯ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಕೋವಿಡ್ ಪ್ರಕರಣಗಳು, ಬೆಡ್, ಆಕ್ಸಿಜನ್ ವಿಚಾರವಾಗಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತರು ಹುಬ್ಬಳ್ಳಿ ಕಿಮ್ಸ್ನಲ್ಲಿ ಇದ್ದಾರೆ. ಸದ್ಯ ಇಲ್ಲಿ 900 ಕ್ಕೂ ಅಧಿಕ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಬೆಡ್ ಹೆಚ್ಚಿಸಿದರೆ, ಆಕ್ಸಿಜನ್ ಕೊರತೆ ಉಂಟಾಗಲಿದೆ. ಕೇಂದ್ರದಿಂದ ರಾಜ್ಯಕ್ಕೆ ಸಿಗುವ ಸೌಲಭ್ಯಗಳ ಹೆಚ್ಚಳಕ್ಕೂ ಒತ್ತಾಯ ಮಾಡಿದೆ ಎಂದು ಅವರು ತಿಳಿಸಿದರು.
ಹೈಕೋರ್ಟ್ ಸಹ ನಿರ್ದೇಶನ ನೀಡಿದೆ. ಅಲ್ಲದೇ, ಸುಪ್ರೀಂ ಕೋರ್ಟ್ ನಲ್ಲೂ ಸಮಾಲೋಚನೆ ಆಗಿದೆ. ಈ ಹಿನ್ನೆಲೆ, ರಾಜ್ಯಕ್ಕೆ 1200 ಟನ್ ಆಕ್ಸಿಜನ್ ನಿರೀಕ್ಷೆ ಇದೆ. ಬಳ್ಳಾರಿ ಜಿಂದಾಲ್ ಕಂಪೆನಿಯು ಕೂಡ ಕಬ್ಬಿಣ ಉತ್ಪಾದನೆ ಮಾಡುವುದು ಬಿಟ್ಟು, ಆಕ್ಸಿಜನ್ ಉತ್ಪಾದನೆಗೆ ಹೆಚ್ಚು ಒತ್ತು ಕೊಡುತ್ತಿದೆ. ಆಕ್ಸಿಜನ್ ಉತ್ಪಾದನೆ ಮೊದಲಿಗಿಂತ ದ್ವಿಗುಣಗೊಳಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿರುವ ವಿಚಾರವಾಗಿ ಮಾತನಾಡಿದ ಶೆಟ್ಟರ್, ಲಾಕ್ಡೌನ್ ಘೋಷಣೆ ಮಾಡಬೇಕೆಂಬುದು ಜನರ ಅಭಿಪ್ರಾಯ ಆಗಿದೆ. ಸಂಘ-ಸಂಸ್ಥೆಗಳು, ವ್ಯಾಪಾರಿಗಳು ಹಾಗೂ ಕೈಗಾರಿಕೆಗಳಿಂದಲೂ ಲಾಕ್ಡೌನ್ ಪರ ಅಭಿಪ್ರಾಯ ಬಂದಿದೆ ಎಂದರು.
ಇದನ್ನೂ ಓದಿ: ಸಿಎಂ ಯಡಿಯೂರಪ್ಪಗೆ ಪ್ರಧಾನಿ ಮೋದಿ ಕರೆ: ರಾಜ್ಯದ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹ
ಧಾರವಾಡ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಉಚಿತ ಶವ ಸಂಸ್ಕಾರಕ್ಕೆ ಮೂರು ಕಡೆಗಳಲ್ಲಿ ಸ್ಥಳ ಗುರುತಿಸಿದೆ. ಹುಬ್ಬಳ್ಳಿ ಹೆಗ್ಗೆರಿ, ವಿದ್ಯಾನಗರದ ಸ್ಮಶಾನ ಹಾಗೂ ಧಾರವಾಡದ ಹೊಸಯಲ್ಲಾಪೂರದ ಸ್ಮಶಾನದಲ್ಲಿ ವ್ಯವಸ್ಥೆ ಮಾಡಿದೆ. ಮಹಾನಗರ ಪಾಲಿಕೆಯಿಂದ ಉಚಿತ ಅಂತಕ್ರಿಯೆ ನಡೆಸಲಿದೆ. ಮೃತರು ಸಂಕಷ್ಟಕ್ಕೆ ಮಹಾನಗರ ಪಾಲಿಕೆಯಿಂದ ಉಚಿತವಾಗಿ ಅಂತ್ಯಸಂಸ್ಕಾ ನೇರವೆರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ನೆರವಾಗಲು ಮತ್ತು ಅಗತ್ಯವಿರುವ ಮಾಹಿತಿಯನ್ನು ಪೂರೈಸಿ ಸೋಂಕಿತರೊಂದಿಗೆ ಆಸ್ಪತ್ರೆಗಳ ಸಮನ್ವಯ ಸಾಧಿಸಲು ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಹಿತಿಯನ್ನು ಪೂರೈಸಲು ಧಾರವಾಡ ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆರಂಭಿಸಿರುವ ಕೋವಿಡ್ ವಾರ್ರೂಮ್ ಗೆ ಸಚಿವ ಜಗದೀಶ ಶೆಟ್ಟರ್ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೊಂದಿಗೆ ಭೇಟಿ ನೀಡಿ ವಾರ್ರೂಮ್ ಕಾರ್ಯದ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಮಂಜುನಾಥ ಯಡಳ್ಳಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ