ಸದ್ದಿಲ್ಲದೆ ಸಾರಿಗೆ ಖಾಸಗೀಕರಣ; ಬೇಂದ್ರೆ ಸಾರಿಗೆಗೆ ಲಾಭದ ಮಾರ್ಗಗಳನ್ನು ಬಿಟ್ಟುಕೊಟ್ಟಿತಾ ಸರ್ಕಾರ?

ಸದ್ದಿಲ್ಲದೆ ಸಾರಿಗೆ ಇಲಾಖೆಯನ್ನು ಖಾಸಗೀಕರಣ ಮಾಡೋ ಹುನ್ನಾರ ನಡೆಸಿದೆ ಎನ್ನೋ ಅನುಮಾನಗಳು ಮೂಡಲಾರಂಭಿಸಿವೆ.

ಬೇಂದ್ರೆ ಸಾರಿಗೆ

ಬೇಂದ್ರೆ ಸಾರಿಗೆ

  • Share this:
ಹುಬ್ಬಳ್ಳಿ (ಆ. 19):  ರಾಜ್ಯ ಸರ್ಕಾರ ಸದ್ದಿಲ್ಲದೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿದೆಯಾ ಎಂಬುದಕ್ಕೆ ಹೌದು ಎನ್ನುತ್ತಿದೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಬೆಳವಣಿಗೆಗಳು.  ರಾಜ್ಯ ಸರ್ಕಾರ ಸದ್ದಿಲ್ಲದೆ ಬೇಂದ್ರೆ ನಗರ ಸಾರಿಗೆ 41 ಮಾರ್ಗಗಳ ವ್ಯವಸ್ಥೆ ಮಾಡಿದೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರ ಸಂಚಾರಕ್ಕೆ ಸೀಮಿತವಾಗಿದ್ದ, ಬೇಂದ್ರ ಸಾರಿಗೆ ಬಸ್ ಗಳಿಗೆ ಉತ್ತರ ಕರ್ನಾಟಕದ ಬೇರೆ ಬೇರೆ ಕಡೆ ಲಾಭದಾಯಕ ಮಾರ್ಗಗಳನ್ನು ಬಿಟ್ಟುಕೊಟ್ಟಿರುವುದು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಇದುವರೆಗೆ ಬೇಂದ್ರೆ ಸಾರಿಗೆ ಖಾಸಗಿ ಬಸ್ ಗಳು ಹುಬ್ಬಳ್ಳಿ – ಧಾರವಾಡ ಅವಳಿ ನಗರದ ನಡುವೆ ನಗರ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದ್ದವು. ಬಿ.ಆರ್.ಟಿ.ಎಸ್. ಕಾಮಗಾರಿ ಮುಗಿದ ಮೇಲೆ ಬೇರೆ ಸಾರಿಗೆಗೆ ನೀಡಿದ್ದ ಪರ್ಮಿಟ್ ನಿಲ್ಲಿಸೋದಾಗಿ ಸರ್ಕಾರ ಹೇಳಿತ್ತು. ಬಿ.ಆರ್.ಟಿ.ಎಸ್. ಬಸ್ ಗಳ ಸಂಚಾರ ಆರಂಭಗೊಂಡ ಹಲ ವರ್ಷವಾದರೂ ಬೇಂದ್ರೆ ನಗರ ಸಾರಿಗೆ ಬಸ್ ಸಂಚಾರ ಮುಂದುವರಿದಿದೆ.

ಇದೀಗ ನಗರ ಸಾರಿಗೆ ಬಿಟ್ಟು, ಲಾಭದಾಯಕ ಮಾರ್ಗಗಳ ಪರ್ಮಿಟ್ ನ್ನು ಸರ್ಕಾರ ಭಕ್ಷೀಸಾಗಿ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿ – ಬಾಗಲಕೋಟ – ವಿಜಯಪುರ ಗಳ ನಡುವೆ 15 ಬಸ್ ಮಾರ್ಗಗಳು, ಹುಬ್ಬಳ್ಳಿ – ಗದಗ ನಡುವೆ 11 ಬಸ್ ಮಾರ್ಗ ಗಳು, ಬೆಳಗಾವಿ – ಅಥಣಿ – ವಿಜಯಪುರಗಳ ನಡುವೆ 15 ಬಸ್ ಮಾರ್ಗಗಳು ಗಳು. ಹೀಗೆ ಒಟ್ಟು 41 ಬಸ್ ರೂಟ್ ಗಳನ್ನು ಬೇಂದ್ರೆ ಸಾರಿಗೆಗೆ ಕಾಣಿಕೆಯಾಗಿ ರಾಜ್ಯ ಸರ್ಕಾರ ನೀಡಿದೆ.

ಈಗಾಗಲೇ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ತೀವ್ರ ನಷ್ಟದಲ್ಲಿದೆ. ಕೋವಿಡ್ ಸಂಕಷ್ಟದಿಂದ ಎದುರಾದ ಸಮಸ್ಯೆಗಳಿಂದ ಚೇತರಿಸುವ ಪ್ರಯತ್ನದಲ್ಲಿದೆ. ಇದರ ನಡುವೆ ಲಾಭದಾಯಕ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ. ಸಾರಿಗೆ ಇಲಾಖೆಯಿಂದ 41 ರಹದಾರಿಗಳನ್ನು ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಸಾರಿಗೆ ಇಲಾಖೆ ಪರ್ಯಾಯ ಮಾರ್ಗಗಳನ್ನು ರೂಪಿಸಿ, ನಿರ್ದೇಶನವನ್ನೂ ನೀಡಿದೆ.
ಬೇಂದ್ರ ನಗರ ಸಾರಿಗೆಯ ಕಡತ ಕಳುಹಿಸಿಕೊಡುವಂತೆ ಧಾರವಾಡದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರ ಸದ್ದಿಲ್ಲದೆ ರಹದಾರಿಗಳನ್ನು ಖಾಸಗಿಯವರ ಪಾಲು ಮಾಡಿ, ಖಾಸಗೀಕರಣಕ್ಕೆ ಮುನ್ನುಡಿ ಬರೆಯುತ್ತಿದೆ ಎಂಬ ಗುಮಾನಿ ಮೂಡಿದೆ. ಅಷ್ಟೇನು ಲಾಭವಲ್ಲದಿದ್ದ ಮಾರ್ಗಗಳನನು ತೆಗೆದು ಲಾಭದಾಯಕ ಮಾರ್ಗ ಕೊಟ್ಟಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಸರ್ಕಾರದಿಂದಲೇ ಸರ್ಕಾರಿ ಸ್ವಾಮ್ಯದ ಕತ್ತು ಹಿಸುಕೋ ಪ್ರಯತ್ನ ನಡೆದಿದೆ.

ಇದನ್ನು ಓದಿ:  ಪ್ರಧಾನಿ ಕಚೇರಿ ಆಕ್ಷೇಪದ ಬಳಿಕ ರಾತ್ರೋ ರಾತ್ರಿ ಕಣ್ಮರೆಯಾಯಿತು ಪುಣೆಯಲ್ಲಿನ ಮೋದಿ ಪ್ರತಿಮೆ

ಹಂತ ಹಂತವಾಗಿ ಖಾಸಗಿಯವರ ಮಾರ್ಗಗಳ ಸಂಖ್ಯೆ ಹೆಚ್ಚಿಸಿದಲ್ಲಿ ನಮ್ಮ ಗತಿ ಏನೆಂಬ ಪ್ರಶ್ನೆ ಸಾರಿಗೆ ನೌಕರರದ್ದಾಗಿದೆ. ಸರ್ಕಾರದ ಧೋರಣೆಗೆ ಪ್ರಯಾಣಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಬಿ.ಆರ್.ಟಿ.ಎಸ್. ಬಸ್ ಆರಂಭಿಸುತ್ತಿದ್ದಂತೆಯೇ ಖಾಸಗಿ ಬಸ್ ನಿಲ್ಲಿಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ನಡೆದುಕೊಳ್ಳಲೇ ಇಲ್ಲ. ಅದರ ಬದಲಾಗಿ ಲಾಭದಾಯಕ ಮಾರ್ಗಗಳನ್ನು ನೀಡಿ ಸಾರಿಗೆ ಸಂಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದೆ ಎಂದು ಹುಬ್ಬಳ್ಳಿ ನಿವಾಸಿ ಎಸ್. ಎಸ್.ಶಂಕರಣ್ಣ ಆರೋಪಿಸಿದ್ದಾರೆ.

ಹಂತ ಹಂತವಾಗಿ ಖಾಸಗೀಕರಣ ಮಾಡಲು ಸರ್ಕಾರದ ಪ್ರಯತ್ನ ನಡೆಸಿದ್ದು, ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಬೇಂದ್ರೆ ಸಾರಿಗೆಗೆ ನೀಡಿರುವ 41 ಪರ್ಯಾಯ ಮಾರ್ಗ ಗಳನ್ನು ರದ್ದು ಮಾಡಬೇಕು. ಅವಳಿ ನಗರದ ನಡುವಿನ ಬೇಂದ್ರೆ ಬಸ್ ಸಂಚಾರವನ್ನೂ ನಿಲ್ಲಿಸಬೇಕೆಂದು ಹುಬ್ಬಳ್ಳಿ ನಿವಾಸಿ ಸಂಜೀವ್ ದುಮಕಾಳ ಆಗ್ರಹಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿಯೂ ಸಾರಿಗೆ ನೌಕರರ ಸಂಘ, ಹುಬ್ಬಳ್ಳಿಯ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.
Published by:Seema R
First published: