IPL Betting: ಅವಳಿ ನಗರದಲ್ಲಿ ಜೋರಾದ ಬೆಟ್ಟಿಂಗ್ ದಂಧೆ! 58 ಪ್ರಕರಣ ದಾಖಲು, 4.23 ಲಕ್ಷ ರೂಪಾಯಿ ಜಪ್ತಿ

ಎಲ್ಲೆಡೆ ಐಪಿಎಲ್ ಕ್ರಿಕೆಟ್ ಜ್ವರ ಜೋರಾಗಿದೆ. ಹೀಗಿರುವಾಗಲೇ ಕ್ರಿಕೆಟ್ ಬೆಟ್ಟಿಂಗ್ ಸಹ ಅಬ್ಬರಿಸಲಾರಂಭಿಸಿದೆ. ಅವಳಿ ನಗರದಲ್ಲಿ ಬೆಟ್ಟಿಂಗ್ ಜೋರಾಗಿದ್ದು, ಪೊಲೀಸರು ಬಾಜೀಗಾರರ ಬೆನ್ನುಬಿದ್ದಿದ್ದಾರೆ. ಹಲವರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹುಬ್ಬಳ್ಳಿ: ಐಪಿಎಲ್ (IPL) ಕ್ರಿಕೆಟ್ ಪ್ರಿಯರನ್ನು (Cricket Lovers) ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಐಪಿಎಲ್ ಆರಂಭಗೊಂಡು, ಅಂತ್ಯವಾಗೋವರೆಗೂ ಅದರ ಹವಾ ಜೋರಾಗಿಯೇ ಇರುತ್ತೆ. ಅದರಲ್ಲಿಯೂ ಕ್ವಾರ್ಟರ್ ಫೈನಲ್ (Quarter final), ಸೆಮಿ ಫೈನಲ್ (Semi final) ಹಂತಕ್ಕೆ ಬರೋ ವೇಳೆಗೆ ಬಹುತೇಕರು ಕ್ರಿಕೆಟ್ ಗುಂಗಿನಲ್ಲಿ ಮುಳುಗಿರುತ್ತಾರೆ. ಇಂತಹ ಸಂದರ್ಭದಲ್ಲಿಯೇ ಬೆಟ್ಟಿಂಗ್ (Betting) ತಲೆಎತ್ತಿ, ಕೋಟ್ಯಾಂತರ ರೂಪಾಯಿ ವ್ಯವಹಾರವೂ ನಡೆಯುತ್ತದೆ. ಈ ವರ್ಷವೂ ಐಪಿಎಲ್ ವೇಳೆಯಲ್ಲಿ ಬೆಟ್ಟಿಂಗ್ ಹವಾ ಜೋರಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi) ಐಪಿಎಲ್‌ ಬೆಟ್ಟಿಂಗ್ ದಂಧೆ ಜೋರಾಗಿದೆ. ಇದುವರೆಗೂ 58 ಪ್ರಕರಣ (Case) ದಾಖಲಿಸಿಕೊಂಡಿರುವ ಪೊಲೀಸರು, 4.23 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.

58 ಕೇಸ್ ದಾಖಲು, 4.23 ಲಕ್ಷ ರೂಪಾಯಿ ಸೀಜ್

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಅಬ್ಬರ ಜೋರಾಗಿರುವಂತೆಯೇ ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯೂ ಅಬ್ಬರಿಸಲಾರಂಭಿಸಿದೆ. ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 58 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲವರನ್ನು ಬಂಧಿಸಿರೋ ಅವಳಿ ನಗರ ಪೊಲೀಸರು, 4.23 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಮಾರ್ಚ್‌ 26ರಿಂದ ಏಪ್ರಿಲ್ 15ರವರೆಗೆ 60 ಮಂದಿ ಅರೆಸ್ಟ್

ಮಾರ್ಚ್ 26 ರಿಂದ ಏಪ್ರಿಲ್ 15 ರವರೆಗೆ 39 ಪ್ರಕರಣ ದಾಖಲಿಸಲಾಗಿದ್ದು, 60 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 70ಕ್ಕೂ ಹೆಚ್ಚು ಮೊಬೈಲ್ ಜಪ್ತಿ ಮಾಡಿ, 2.40 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Murder: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೇ ಕೊಂದ ಅಕ್ಕ! ಪೊಲೀಸರನ್ನು ಯಾಮಾರಿಸೋಕೆ ಹೋಗಿ ಖೆಡ್ಡಕ್ಕೆ ಬಿದ್ದ ಕಿಲಾಡಿ ಜೋಡಿ

ಏಪ್ರಿಲ್ 16 ರಿಂದ ಮೇ 16 ರವರೆಗೆ 19 ಬೆಟ್ಟಿಂಗ್ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 40 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50 ಕ್ಕೂ ಹೆಚ್ಚು ಮೊಬೈಲ್ ಜಪ್ತಿ ಮಾಡಲಾಗಿದ್ದು, 1.83 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.

ಐಪಿಎಲ್‌ ಬೆಟ್ಟಿಂಗ್ ದಂಧೆ ಮೇಲೆ ಖಾಕಿ ಹದ್ದಿನಕಣ್ಣು

ಐಪಿಎಲ್ ಅಬ್ಬರ ಹೆಚ್ಚುತ್ತಿರುವಂತೆಯೇ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಳವಾಗಿದೆ. ಅವಳಿ ನಗರ ಬಹುತೇಕ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೆಟ್ಟಿಂಗ್ ಹಾವಳಿ ಜೋರಾಗಿದ್ದು, ಬೆಟ್ಟಿಂಗ್ ದಂಧೆಯ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಮಟ್ಕಾ ಆಡುತ್ತಿದ್ದವರೂ ಅಂದರ್

ಒಂದು ಕಡೆ ಕ್ರಿಕೆಟ್ ಬೆಟ್ಟಿಂಗ್, ಮತ್ತೊಂದು ಕಡೆ ಮಟ್ಕಾ ಅಬ್ಬರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯ ವಿವಿಧೆಡೆ ಮಟ್ಕಾ ಆಡುತ್ತಿದ್ದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂರು ಸಾವಿರ ಮಠದ ತಾಡಪತ್ರಿ ಗಲ್ಲಿ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತಿತರ ಕಡೆ ಮಟ್ಕಾ ಆಡುತ್ತಿದ್ದ ಆರೋಪಿಗಳ ಬಂಧಿಸಿರೋ ಪೊಲೀಸರು, 34 ಸಾವಿರ ರೂಪಾಯಿ ನಗದು ಮತ್ತು ನಾಲ್ಕು ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆ, ಗೋಕುಲ ರಸ್ತೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Forgery Case: ನ್ಯಾಯಾಧೀಶರ ಸಹಿಯನ್ನೇ ಫೋರ್ಜರಿ ಮಾಡಿದ ಭೂಪ, ನಕಲಿ ಆದೇಶ ಪ್ರತಿ ನೀಡಿದವನಿಗೆ ಈಗ ಜೈಲೂಟ!

ಮೊಬೈಲ್ ಕಳ್ಳನ ಬಂಧನ

ಹುಬ್ಬಳ್ಳಿಯ ಹಲವೆಡೆ ಮೊಬೈಲ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಜನತಾ ಬಜಾರ್, ದಾಜೀಬಾನ್ ಪೇಟೆ, ಮತ್ತಿತರ ಕಡೆ ಮೊಬೈಲ್ ಕಳುವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಬ್ ಅರ್ಬನ್ ಠಾಣೆ ಪೊಲೀಸರು, ಒಬ್ಬ ಮೊಬೈಲ್ ಕಳ್ಳನನ್ನು ಬಂಧಿಸಿ, 60 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ನಾಲ್ಕು ಮೊಬೈಲ್ ಕಳ್ಳತನ ಪ್ರಕರಣಗಳು ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದವು.
Published by:Annappa Achari
First published: