ಹುಬ್ಬಳ್ಳಿ; ಕೊರೋನಾ ಅಬ್ಬರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕೊರೋನಾ ಎರಡನೆಯ ಅಲೆಯ ಅಬ್ಬರಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಗೆ ತರಲಾಗಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಜನತಾ ಕರ್ಫ್ಯೂಗೆ ಜನ ಡೋಂಟ್ ಕೇರ್ ಅಂತಿದ್ದಾರೆ. ಇನ್ನು ಜನರಿಗೆ ಬುದ್ಧಿವಾದ ಹೇಳಬೇಕಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳೂ ಸಾಮಾಜಿಕ ಅಂತರವಿಲ್ಲದ ನಗರ ಪ್ರದಕ್ಷಿಣೆ ಹಾಕಿ ಹುಬ್ಬೇರುವಂತೆ ಮಾಡಿದ್ದಾರೆ.
ಸಾಮಾಜಿಕ ಅಂತರ ಕಾಪಾಡಬೇಕಾದ ಸಚಿವ ಜಗದೀಶ ಶೆಟ್ಟರ್, ಡಿಸಿ ನಿತೇಶ ಪಾಟೀಲ್ ಮತ್ತಿತರರು ಸಾಮಾಜಿಕ ಅಂತರ ಮರೆತು ಅಡ್ಡಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸಾಮಾಜಿಕ ಅಂತರ ಪಾಲಿಸದೇ ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿದ ಜಗದೀಶ್ ಶೆಟ್ಟರ್, ಮಾರುಕಟ್ಟೆ ಪರಿಸ್ಥಿತಿ ಅವಲೋಕನ ನಡೆಸಿದರು. ಸಚಿವರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ -ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಭು ರಾಮ್ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದರು. ಎಪಿಎಂಸಿ ನಂತರ ದುರ್ಗದ ಬೈಲು ಮತ್ತಿತರ ಕಡೆಗೂ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲಿಸಿದರು. ಜನ ಸಾಮಾಜಿಕ ಅಂತರ ಕಾಪಾಡ್ತಿದಾರೋ ಇಲ್ಲವೊ ಅನ್ನೋದನ್ನು ಪರಿಶೀಲಿಸಲು ಹೋದವರೇ ಸಾಮಾಜಿಕ ಅಂತರ ಮರೆತಿದ್ದುದು ವಿಪರ್ಯಾಸವೇ ಸರಿ.
ಈ ವೇಳೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ರಾಜ್ಯದ ದೊಡ್ಡ ಎಪಿಎಂಸಿಗಳಲ್ಲಿ ಹುಬ್ಬಳ್ಳಿಯದ್ದೂ ಒಂದಾಗಿದೆ. ಅತಿದೊಡ್ಡ ಮಾರ್ಕೆಟ್ ಆಗಿರುವುದರಿಂದ ರಶ್ ಹೆಚ್ಚಾಗಿದೆ. ರಷ್ ಹೇಗೆ ನಿಯಂತ್ರಿಸುತ್ತಾರೆ ಅನ್ನೋದನ್ನ ನೋಡೋಕೆ ಬಂದಿದ್ದೇನೆ. ಹೋಲ್ ಸೇಲ್ ಜೊತೆಗೆ ಕೆಲ ರೀಟೇಲ್ ಗ್ರಾಹಕರೂ ಬಂದಿರುವುದರಿಂದ ರಶ್ ಹೆಚ್ಚಾಗಿದೆ. ಇದನ್ನು ಆದಷ್ಟು ನಿಯಂತ್ರಣಕ್ಕೆ ತಂದರೆ ಕೊರೋನಾವು ನಿಯಂತ್ರಣಕ್ಕೆ ಬರಲಿದೆ ಎಂದರು.
ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಕಾಲಾವಕಾಶ ಕೊಡಬೇಕೆಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ಇದು ಕೇವಲ ಹುಬ್ಬಳ್ಳಿ - ಧಾರವಾಡ ಸಮಸ್ಯೆಯಲ್ಲ. ಈ ಸಂಬಂಧ ರಾಜ್ಯಾದ್ಯಂತ ಅನ್ವಯವಾಗುವಂತೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಬೆಂಗೇರಿ ಮಾರ್ಕೆಟ್ ನಲ್ಲಿ ಜನಜಂಗುಳಿ
ಜನತಾ ಕರ್ಫ್ಯೂ ಮುಂದುವರಿದಿದ್ದರೂ, ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಮಾತ್ರ ಜನವೋ ಜನ. ಬೆಂಗೇರಿ ಶನಿವಾರ ಸಂತೆಯಲ್ಲಿ ಜನಜಂಗುಳಿ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡದೆ ಜನ ಖರೀದಿಯಲ್ಲಿ ತೊಡಗಿಕೊಂಡಿದ್ದರು. ತರಕಾರಿ, ಹಣ್ಣು, ಹೂವು ಇತ್ಯಾದಿಗಳ ಖರೀದಿಯಲ್ಲಿ ಜನ ಬಿಜಿಯಾಗಿದ್ದರು. ಕೊರೋನಾ ವ್ಯಾಪಕಗೊಳ್ಳುತ್ತಿದ್ದರೂ ಹುಬ್ಬಳ್ಳಿಯಲ್ಲಿ ಜನರು ಮಾತ್ರ ಅದರ ಕಡೆ ಲಕ್ಷ್ಯ ವಹಿಸುತ್ತಿಲ್ಲ.
ಇದನ್ನು ಓದಿ: ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಐಸಿಯುನಲ್ಲಿದ್ದ 8 ಮಂದಿ ಸಾವು
ಕೊರೋನಾ ಮುಕ್ತ ದೇಶವಾಗಲಿ ಅಂತ ಕಣ್ಣೀರು ಹಾಕಿ ಪಾಸ್ಟರ್ ರೊಬ್ಬರು ಪ್ರಾರ್ಥನೆ ಮಾಡಿದ್ದಾರೆ. ನಗರದ ನವೀನ ಪಾರ್ಕ್ ನ ಮಷಿನ್ ಮಿನಸ್ಟರಿ ಚರ್ಚ್‌ನ ಪಾಸ್ಟರ್ ನಿಂದ ಪ್ರಾರ್ಥನೆ ನಡೆದಿತ್ತು. ಈ ವೇಳೆ ಪಾಸ್ಟರ್ ಕೆ. ಓಬುಲ್ ರಾವ್ ಕಣ್ಣೀರು ಹಾಕಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೊರೋನಾ ಆದಷ್ಟು ಬೇಗ ಮುಕ್ತ ಆಗಲಿ ಎಂದು ಪ್ರಾರ್ಥಿಸಿದ್ದಾರೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ