ಹುಬ್ಬಳ್ಳಿ (ಜು. 13): ಕೊರೋನಾ ಲಾಕ್ ಡೌನ ಅಂತ್ಯಗೊಳ್ಳುತ್ತಿರುವಂತೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಲಾರಂಭಿಸಿವೆ. ಅದರಲ್ಲಿಯೂ ಕೊಲೆ, ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ. ಕಳೆದ ಒಂದು ವಾರದಲ್ಲಿ ಅಪರಾಧ ಪ್ರಕರಣಗಳು ತೀವ್ರಗೊಂಡಿವೆ. ಒಂದು ಕಡೆ ಬಿಜೆಪಿ ಮುಖಂಡನೋರ್ವನ ಸಂಬಂಧಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದ್ದರೆ, ಮತ್ತೊಂದೆಡೆ ಜಮೀನು ವಿವಾದದ ಹಿನ್ನೆಲೆಯಲ್ಲಿ ತೀವ್ರ ಹಲ್ಲೆಗೊಳಗಾದ ವ್ಯಕ್ತಿ ಅಸುನೀಗಿದ್ದಾನೆ. ಎರಡೂ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಎಂಟು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಗೋಪನಕೊಪ್ಪ ಪ್ರದೇಶದಲ್ಲಿ ಬಿಜೆಪಿ ಮುಖಂಡನ ಸಂಬಂಧಿಯೋರ್ವನ ಬರ್ಬರ ಹತ್ಯೆಯಾಗಿದೆ. ಬಿಜೆಪಿ ಮುಖಂಡನ ಸಂಬಂಧಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಪೊಲೀಸರು ಮುವ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ಅಭಿಷೇಕಗೌಡ ಪಾಟೀಲ ಎಂಬ ಯುವಕನ ಕೊಲೆ ನಡೆದಿತ್ತು. ಅಭಿಷೇಕ್ ಪಾಟೀಲ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ನ ಸಂಬಂಧಿಯಾಗಿದ್ದ. ಚಾಕುವಿನಿಂದ ಹೊಟ್ಟೆಗೆ ಇರಿದು ತೀವ್ರ ಹಲ್ಲೆ ಮಾಡಲಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ, ತೀವ್ರ ರಕ್ತಸ್ರಾವದಿಂದಾಗಿ ಅಭಿಷೇಕ್ ಮೃತಪಟ್ಟಿದ್ದ. ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಅಶೋಕನಗರ ಠಾಣೆ ಪೊಲೀಸರು, ಮುವ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರವೀಣ ಬೇವಿನಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ ಇದ್ದಲಗಿ ಬಂಧಿತ ಆರೋಪಿಗಳಾಗಿದ್ದಾರೆ. ಡಿಸಿಪಿ ವಿನೋದ್ ಮುಕ್ತಾದಾರ್ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಆರೋಪಿ ಪ್ರವೀಣ ಬೇವಿನಕಟ್ಟಿ ಕೆಲವು ದಿನಗಳ ಹಿಂದೆ ಅಭಿಷೇಕನೊಂದಿಗೆ ಜಗಳವಾಡಿದ್ದ. ಅಭಿಷೇಕ್ ಪಾಟೀಲ ನ ಮನೆಯ ಮುಂದಿನ ಕಾರಿನ ಗಾಜನ್ನು ಒಡೆದು ಹೋಗಿದ್ದ. ಅದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿತ್ತು. ತನ್ನ ದ್ವೇಷವನ್ನು ಮುಂದುವರಿಸಿದ್ದ ಪ್ರವೀಣ್, ಸಾಯಿ ಮತ್ತು ಕುಮಾರನನ್ನು ಕಳಿಸಿ ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇದನ್ನು ಓದಿ: ಬೆಂಡೆಕಾಯಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು!
ಜಮೀನಿಗಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
ಜಮೀನಿನ ವಿಷಯವಾಗಿ ತೀವ್ರ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಗೋಪನಕೊಪ್ಪ ಸ್ವಾಗತ ಕಾಲೋನಿಯ ವೀರೇಶ ಹೆಗಡಾಳ ಎಂದು ಗುರುತಿಸಲಾಗಿದೆ. ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಬರೆದುಕೊಡುವಂತೆ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹುಬ್ಬಳ್ಳಿಯ ಬೆಂಗೇರಿಯ ಚಿಕ್ಕೂ ತೋಟದಲ್ಲಿ ಘಟನೆ ನಡೆದಿತ್ತು. ರೌಡಿಶೀಟರ್ ಅಲ್ತಾಫ್ ಬೇಪಾರಿ ಮತ್ತು ಸಂಗಡಿಗರಿಂದ ಹಲ್ಲೆ ನಡೆದಿತ್ತು.
ನಾಲ್ಕು ದಿನಗಳಿಂದಲೂ ವೀರೇಶ್ ಗೆ ಚಿಕಿತ್ಸೆ ನೀಡಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿ ನಾಗಶೆಟ್ಟಿಕೊಪ್ಪದ ಕರಿವಂಡಿಯ ಅಲ್ತಾಫ್ ಬೇಪಾರಿ, ಮುನ್ನಾ ಮಹ್ಮದಲಿ ಬೇಪಾರಿ, ಬಸವೇಶ್ವರ ಪಾರ್ಕ್ ನ ಶ್ರೀನಿವಾಸ ದಲಭಂಜನ, ಜಾವೇದ್ ತಾಳಿಕೇಟೆ, ಇಮ್ರಾನ್ ತಾಳಿಕೋಟೆ ಹಾಗೂ ಮಂಜುನಾಥ ಬಾನಪ್ಪನವರ ಎಂಬ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ