Hubli: ಈ ದರ್ಗಾಕ್ಕೆ ಹಿಂದೂ ಮಹಿಳೆಯೇ ಪೂಜಾರಿ: ಕೋಮು ದಳ್ಳುರಿ ಎಬ್ಬಿಸೋರಿಗೆ ಸೆಡ್ಡು ಹೊಡೆದ ದೂದ್ ಪೀರ್

ಆರು ದಶಕಗಳಿಗೂ ಹೆಚ್ಚು ಕಾಲದಿಂದ ಹಿಂದೂ ಪೂಜಾರಿಗಳು ಪೂಜೆ ಸಲ್ಲಿಸಿಕೊಂಡು ಬಂದಿದ್ದು, ಮುಸ್ಲಿಂ ಸಮುದಾಯದವರೂ ಬೆಂಬಲ ನೀಡಿದ್ದಾರೆ. ಕೋಮು ಸಾಮರಸ್ಯದ ಕೇಂದ್ರವಾದ ಈ ದರ್ಗಾದಲ್ಲಿ ಸದ್ಯ ಉರುಸ್ ಸಂಭ್ರಮ.

ದೂದ್ ಪೀರ್ ದರ್ಗಾ

ದೂದ್ ಪೀರ್ ದರ್ಗಾ

  • Share this:
ಹುಬ್ಬಳ್ಳಿ (ಮೇ. 13):  ಹಿಜಾಬ್ ಗದ್ದಲ, ಹಲಾಲ್ ಕಟ್, ಆಜಾನ್ (Azan) ಧ್ವನಿ ವರ್ಧಕ ವಿವಾದ. ಹೀಗೆ ಒಂದರ ನಂತರ ಒಂದು ವಿವಾದ ಸೃಷ್ಟಿಯಾಗಿ ಕರ್ನಾಟಕ ರಾಜ್ಯದಲ್ಲಿ ಕೋಮು ಸೌಹಾರ್ದತೆ (Communal Harmony)  ಹದಗೆಡ್ತಿದೆ. ಧರ್ಮ - ಧರ್ಮಗಳ ನಡುವೆ ದ್ವೇಷದ ಜ್ವಾಲೆ ಹಬ್ಬಲಾರಂಭಿಸಿದೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ದರ್ಗಾ (Darga) ವೊಂದು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದು, ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಇಲ್ಲಿ ಮುಸ್ಲಿಂ ರ ದರ್ಗಾಕ್ಕೆ, ಹಿಂದೂಗಳೇ ಪೂಜಾರಿಗಳು. ಕಳೆದ 62 ವರ್ಷಗಳಿಂದಲೂ ಇದೇ ಪದ್ಧತಿ ಮುಂದುವರಿದುಕೊಂಡು ಬಂದಿದೆ.

ಭಾವೈಕ್ಯತೆಯ ಸಂಕೇತ ಈ ದರ್ಗಾ

ಹುಬ್ಬಳ್ಳಿಯ ಕೇಶ್ವಾಪುರದ ರಾಮನಗರ ದೂದ್ ಪೀರಾ ದರ್ಗಾ ಭಾವೈಕ್ಯತೆಯ ಸಂಕೇತವಾಗಿದೆ. ಹಿಂದೂ – ಮುಸ್ಲಿಂ ಒಂದೇ ತಾಯಿ ಮಕ್ಕಳೆಂಬಂತೆ ಸೌಹಾರ್ದತೆಯಿಂದ ಇಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪೂರೈಕೆಯಾಗುತ್ತದೆ. ದರ್ಗಾದಲ್ಲಿ ಹಿಂದೂಗಳಿಂದಲೇ ಪೂಜೆ ನೆರವೇರುತ್ತದೆ. ಅದರಲ್ಲಿಯೂ ಹಿಂದೂ ಮಹಿಳೆಯಿಂದ ಪೂಜೆ ಅನ್ನೋದು ಇಲ್ಲಿನ ಮತ್ತೊಂದು ವಿಶೇಷ. ಕಳೆದ 62 ವರ್ಷಗಳಿಂದ ಗುಡಗುಂಟಿ ಮನೆತನದವರಿಂದ ದರ್ಗಾದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಮುಸ್ಲಿಂ ಸಮುದಾಯದವರಿಂದಲೂ ಇದಕ್ಕೆ ಬೆಂಬಲ ವ್ಯಕ್ತವಾಗಿದೆ.

ಹಿಂದೂ ಪೌರೋಹಿತ್ಯಕ್ಕೆ ಇಲ್ಲ ವಿರೋಧ

ಇದುವರೆಗೆ ಹಿಂದೂ ಪೌರೋಹಿತ್ಯಕ್ಕೆ ಯಾರಿಂದಲೂ ತಕರಾರಿಲ್ಲ. ಮುಸ್ಲಿಂ ಜನರು  ಬಂದು ಇಲ್ಲಿ ನಮಾಜ್ ಮಾಡ್ತಾರೆ. ಹಿಂದೂಗಳು ಬಂದ ಇಲ್ಲಿ ಪೂಜೆ ಮಾಡಿಸ್ತಾರೆ. ಅವರವರ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸ್ತಾರೆ. ಹನುಮವ್ವ ಎಂಬುವರು ಕಳೆದ ಮುವ್ವತ್ತಕ್ಕೂ ಹೆಚ್ಚು ವರ್ಷಗಳಿಂದ ಪೂಜೆ ನೆರವೇರಿಸ್ತಿದಾರೆ. ತಮ್ಮ ಹಿರಿಯರಿಂದ ಬಂದ ಪರಂಪರೆಯನ್ನು ಮುಂದುವರೆಸ್ತಿದೇನೆ. ಮೊದ್ಲು ನಮ್ಮ ಮನೆಯಲ್ಲಿಯೇ ದರ್ಗಾ ಮಾಡಲಾಗಿತ್ತು. ನಮ್ಮ ಕುಟುಂಬದವರಷ್ಟೇ ಪೂಜೆ ಮಾಡ್ತಿದ್ದೆವು. ನಂತರದಲ್ಲಿ ಎಲ್ಲ ಸಮುದಾಯದವರೂ ಇಲ್ಲಿಗೆ ಬಂದು ಪೂಜೆ ಸಲ್ಲಿಸ್ತಾರೆ. ಅವರವರ ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸ್ತಾರೆ ಎನ್ನುತ್ತಾರೆ ಹನುಮವ್ವ.

ಇದನ್ನು ಓದಿ: ರೈತನ ಬಾಳು ಅರಳಿಸಿದ ಗುಲಾಬಿ ಹೂವು! ಸಂಕಷ್ಟದಲ್ಲಿದ್ದಾಗ ಕೈ ಹಿಡಿಯಿತು ನರೇಗಾ ಯೋಜನೆ

ನಮ್ಮಲ್ಲಿ ಹಿಂದೂ- ಮುಸ್ಲಿಂ ಎಂಬ ಭೇದವಿಲ್ಲ

ಇನ್ನೂ ದೂದ್ ಪೀರ ಎನ್ನುವವರು ಲಕ್ಷ್ಮೇಶ್ವರ ಮೂಲದವರು. ಅವರ ದರ್ಗಾ ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ನಮಗೆ ಒಳ್ಳೆಯದು ಅನಿಸಿದ್ದರಿಂದ ಮನೆಯಲ್ಲಿಯೇ ದರ್ಗಾ ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದೇವೆ. ನಂತರದಲ್ಲಿ ಸಾರ್ವಜನಿಕರಿಗೆ ಬಿಟ್ಟುಕೊಟ್ಟಿದ್ದೇವೆ. ಯಾವತ್ತೂ ಹಿಂದು - ಮುಸ್ಲಿಂ ಅನ್ನೋ ಭಾವನೆಗಳು ನಮ್ಮಲ್ಲಿ ಬಂದಿಲ್ಲ. ಸದ್ಯ ಉರುಸ್ ನಡೆಯುತ್ತಿದ್ದು, ಹಿಂದು - ಮುಸ್ಲಿಂ ಎಲ್ಲರೂ ಒಂದಾಗಿ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಹನುಮವ್ವಳ ಪುತ್ರ ಗುರು ಗುಡಗಂಟಿ.

ಇದನ್ನು ಓದಿ: ರಸಗೊಬ್ಬರ ವ್ಯಾಪಾರಿಗಳಿಗೆ ನಕಲಿ ಡೀಲರ್ ಪಂಗನಾಮ; ಲಕ್ಷ, ಲಕ್ಷ ಕಳ್ಕೊಂಡ ಮಾಲೀಕ

ಇಷ್ಟಾರ್ಥ ಸಿದ್ದಿ

ದೂದ್ ಪೀರ್ ದರ್ಗಾಕ್ಕೆ ಯಾರೇ ಇಲ್ಲಿಗೆ ಬಂದು ಪ್ರಾರ್ಥಿಸಿದರೂ ಫಲ ಸಿಗುತ್ತೆ ಅನ್ನೋ ನಂಬಿಕೆ ಭಕ್ತರದ್ದಾಗಿದೆ. ದೂದ್ ಪೀರ್ ಪವಾಡ ಪುರುಷರಾಗಿದ್ದಾರೆ. ಎಲ್ಲ ಇಷ್ಟಾರ್ಥಸಿದ್ಧಿಸುತ್ತೆ. ಕಣ್ಣೀರು ಹಾಕುತ್ತಾ ದರ್ಗಾಕ್ಕೆ ಬಂದವರು, ತಮ್ಮ ಸಮಸ್ಯೆಗಳು ನಿವಾರಣೆಯಾಗಿ ವಾಪಸ್ ನಗು ನಗುತ್ತಾ ಹೋಗುತ್ತಾರೆ ಎನ್ನುತ್ತಾರೆ ಭಕ್ತೆ ವನಮಾಲ ಮರಿಯಮ್ಮನವರ್.

ಕರ್ನಾಟಕ ಭಾವೈಕ್ಯತೆಯ ತಾಣವಾಗಿದೆ. ಹಿಂದೂ - ಮುಸ್ಲಿಂ ರ ನಡುವೆ ಕೆಲ ಕಿಡಿಗೇಡಿಗಳು ಕಲಹ ಸೃಷ್ಟಿಸೋ ಕೆಲಸ ಮಾಡ್ತಿದಾರೆ. ಆದರೆ ನಮ್ಮದು ಸೌಹಾರ್ದ ಪರಂಪರೆ ಅನ್ನೋಕೆ ಹುಬ್ಬಳ್ಳಿಯ ದೂದ್ ಪೀರ್ ದರ್ಗಾ ಸಾಕ್ಷಿಯಾಗಿದೆ ಎಂದು ಹುಬ್ಬಳ್ಳಿ ಕೇಶ್ವಾಪುರ ನಿವಾಸಿ ಶಹಜಮಾನ್ ಮುಜಾಹಿದ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಭಾವೈಕ್ಯತೆಯ ಕೇಂದ್ರವೆನಿಸಿದ ದೂದ್ ಪೀರ್ ದರ್ಗಾದಲ್ಲಿ ಸದ್ಯ ಉರುಸ್ ಸಂಭ್ರಮ ಮನೆ ಮಾಡಿದೆ. ಜಾತಿ, ಧರ್ಮಗಳನ್ನು ಮೀರಿ ಎಲ್ಲ ಧರ್ಮೀಯರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಸಂದಲ್ ಮತ್ತು ಉರುಸ್ ಗಳಿಗೆ ಹಿಂದೂ ಹಾಗು ಮುಸ್ಲಿಂ ರು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ.
Published by:Seema R
First published: