• Home
  • »
  • News
  • »
  • state
  • »
  • 34 ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಉಚ್ಛಾಟನೆ ಬಿಸಿ; ಬಂಡಾಯಗಾರರನ್ನು ಬೆಂಬಲಿಸುವವರಿಗೆ ಅಮಾನತಿನ ಅಂಜಿಕೆ

34 ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಉಚ್ಛಾಟನೆ ಬಿಸಿ; ಬಂಡಾಯಗಾರರನ್ನು ಬೆಂಬಲಿಸುವವರಿಗೆ ಅಮಾನತಿನ ಅಂಜಿಕೆ

ಕಾಂಗ್ರೆಸ್

ಕಾಂಗ್ರೆಸ್

ಹುಬ್ಬಳ್ಳಿ - ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡೆದ್ದು ಅಖಾಡಕ್ಕಿಳಿದಿರೋ 34 ಅಭ್ಯರ್ಥಿಗಳನ್ನು ಉಚ್ಛಾಟಿಸಲಾಗಿದೆ.

  • Share this:

ಹುಬ್ಬಳ್ಳಿ (ಆ. 30):  ಮಹಾನಗರ ಪಾಲಿಕೆ ಚುನಾವಣೆ  ದಿನೇ ದಿನೇ ಕಾವೇರಲಾರಂಭಿಸಿದೆ. ಒಂದು ಕಡೆ ಅಬ್ಬರದ ಪ್ರಚಾರ ನಡೆದಿರುವ ಸಂದರ್ಭದಲ್ಲಿಯೇ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳ ಒಳಪೆಟ್ಟು ಬೀಳುವ ಲಕ್ಷಣಗಳು ಕಾಣಿಸಲಾರಂಭಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿ - ಧಾರವಾಡ ವ್ಯಾಪ್ತಿಯಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಬಂಡಾಯಗಾರರನ್ನು ಬೆಂಬಲಿಸೋರಿಗೂ ಕಠಿಣ ಎಚ್ಚರಿಕೆ ನೀಡಿದೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಲವು ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿದೆ. ಹೀಗಾಗಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಗಳ ಎದುರು ಬಂಡೆದ್ದವರ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ.


ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 28 ವಾರ್ಡ್ ಗಳಲ್ಲಿ 34 ಬಂಡಾಯ ಅಭ್ಯರ್ಥಿಗಳು ಅಖಾಡಕ್ಕಿಳಿದಿರೋದು ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿ ಪರಿಣಿಸಿದೆ. ಹೀಗಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಅಖಾಡಕ್ಕಿಳಿದ ಬಂಡಾಯ ಅಭ್ಯರ್ಥಿಗಳ ಪಟ್ಟಿ ಮಾಡಿರೋ ಕಾಂಗ್ರೆಸ್ ಅವರೆಲ್ಲರನ್ನೂ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ.


ಹುಬ್ಬಳ್ಳಿ - ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ, ಹು - ಧಾ ಕೇಂದ್ರ ವಿಧಾನಸಭಾ ಕ್ಷೇತ್ರ, ಹು - ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 82 ವಾರ್ಡ್ ಗಳ ಪೈಕಿ 28 ವಾರ್ಡ್ ಗಳಲ್ಲಿ 34 ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರೆಲ್ಲರನ್ನೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ನಿಂದ ಉಚ್ಛಾಟಿಸಲಾಗಿದೆ. ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರು ಬಂಡಾಯಗಾರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


ಪಾಲಿಕೆಯ ಮಾಜಿ ಸದಸ್ಯರಾಗಿದ್ದ ಗಣೇಶ ಟಗರಗುಂಟಿಯವರಿಗೆ ಟಿಕೆಟ್ ಕೊಡದೇ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೂರ ತಮ್ಮ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಅದೇ ವಾರ್ಡಿನಲ್ಲಿ ಗಣೇಶ ಟಗರಗುಂಟಿ ಹಲವು ಮುಸ್ಲಿಂ ನಾಯಕರ ಬೆಂಬದೊಂದಿಗೆ ಚುನಾವಣೆಗೆ ನಿಂತಿದ್ದಾರೆ. ಹೀಗಾಗಿ ಗಣೇಶ್ ಟಗರಗುಂಟಿ ಯನ್ನು ಉಚ್ಛಾಟನೆ ಮಾಡಲಾಗಿದೆ.


ಇದನ್ನು ಓದಿ: ವಾಟ್ಸಾಪ್​ ಡೇಟಾವನ್ನು ಶಾಶ್ವತವಾಗಿ ಅಳಿಸಬೇಕಾ; ಈ ಸರಳ ಕ್ರಮ ಅನುಸರಿಸಿ ಸಾಕು


ಇನ್ನುಳಿದಂತೆ ಧಾರವಾಡದ ಪ್ರಕಾಶ ಘಾಟಗೆ, ಮಂಜುನಾಥ ಕದಂ, ಯಾಸೀನ ಹಾವೇರಿಪೇಟೆಯವರ ಪತ್ನಿಶಾಹೀನಾ ಯಾಶೀನ್ ಹಾವೇರಿಪೇಟೆ, ಸುಧಾ ಮಣ್ಣೆಕುಂಟ್ಲಾ, ಶಾಂತವ್ವ ಬೂದಿಹಾಳ, ಶೋಭಾ ಕಮತಕರ್, ಅಕ್ಷತಾ ಅಸುಂಡಿ, ಬಸವರಾಜ ಕಳರೆಡ್ಡಿ, ಸಮೀರ್ ಖಾನ್, ಚೇತನ್ ಹಿರೇಕೆರೂರು ಸೇರಿ ಒಟ್ಟು 34 ಬಂಡುಕೋರ ಅಭ್ಯರ್ಥಿಗಳನ್ನ ಉಚ್ಛಾಟನೆ ಮಾಡಲಾಗಿದೆ.


ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡವರ ಪೈಕಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಸದ್ಯ ಬಂಡಾಯವಾಗಿ ನಿಂತಿರೋ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದೆ. ಆದರೆ ಮಹಿಳೆಯರನ್ನು ಬೆಂಬಲಿಸಿ ಅವರವರ ಪತಿಯರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ನಲ್ಲಿದ್ದುಕೊಂಡೇ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಮತ್ತು ಬಂಡಾಯ ಕಹಳೆ ಮೊಳಗಿಸಿದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದಾರೆ.


ಹುಬ್ಬಳ್ಳಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರೋ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸೋದಿಲ್ಲ. ಟಿಕೇಟ್ ಸಿಕ್ಕಿಲ್ಲ ಅನ್ನೋ ನೆಪ ಮಾಡಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಕಹಳೆ ಊದಿದರೆ ಸುಮ್ಮನೇ ಕೂಡೋದಿಲ್ಲ. ಬಂಡಾಯ ಅಭ್ಯರ್ಥಿಗಳ ಪಟ್ಟಿ ಮಾಡಿ ಉಚ್ಛಾಟನೆ ಮಾಡಿದ್ದೇವೆ. ಹಾಗೆಯೇ ಬಂಡಾಯ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವವರ ವಿರುದ್ಧವೂ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಯಾರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಸುಮ್ಮನಿರೊಲ್ಲ. ಅಧಿಕೃತ ಅಭ್ಯರ್ಥಿಗಳನ್ನು ಹೊರತುಪಡಿಸಿ ಬಂಡಾಯ ಅಭ್ಯರ್ಥಿಗಳನ್ನು ಬೆಂಬಲಿಸಿ ಪ್ರಚಾರ ನಡೆಸುತ್ತಿರುವವರ ಪಟ್ಟಿ ಮಾಡಲಾಗುತ್ತಿದೆ. ಶೀಘ್ರವೇ ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಲಾಗುವುದು ಎಂದು ತಿಳಿಸಿದ್ದಾರೆ.

Published by:Seema R
First published: