ಹುಬ್ಬಳ್ಳಿಯಲ್ಲೂ ಭುಗಿಲೆದ್ದ Hijab Controversy.. ಶಾಲಾ-ಕಾಲೇಜಿಗೆ ರಜೆ ಘೋಷಣೆ..!

ಹಿಜಾಬ್ ವಿವಾದ ಹುಬ್ಬಳ್ಳಿಗೂ ಕಾಲಿಟ್ಟಿದ್ದು ಮಹಿಳಾ ಕಾಲೇಜಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಹಿಳಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಕಾಲೇಜ್​​ ಎದುರು ಪ್ರತಿಭಟನೆ

ಕಾಲೇಜ್​​ ಎದುರು ಪ್ರತಿಭಟನೆ

  • Share this:
ಹುಬ್ಬಳ್ಳಿ:  ವಾಣಿಜ್ಯ ನಗರಿ ಹುಬ್ಬಳ್ಳಿಗೂ ಹಿಜಾಬ್ ವಿವಾದ (Hijab Controversy) ಪ್ರವೇಶಿಸಿದೆ. ಕರಾವಳಿಯಲ್ಲಿ ಹಿಜಾಬ್ ಗೊಂದಲ ಗದ್ದಲ ಏರ್ಪಟ್ಟರೂ ಹುಬ್ಬಳ್ಳಿಯಲ್ಲಿ (Hubli) ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದರೆ ಇಂದು ಕಾಲೇಜು (College) ಪುನರಾರಂಭಗೊಂಡ ನಂತರ ಹುಬ್ಬಳ್ಳಿಯಲ್ಲಿಯೂ ವಿವಾದ ಸೃಷ್ಟಿಯಾಗಿದೆ. ಹಿಜಾಬ್ ಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದು ಪೋಷಕರು ಪ್ರತಿಭಟಿಸಿದ್ದರಿಂದ ಮಹಿಳಾ ಕಾಲೇಜು ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಮಹಿಳಾ ಕಾಲೇಜ್ ಗೆ ರಜೆ ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ .

ಹಿಜಾಬ್ ಗೆ ಪಟ್ಟು ಹಿಡಿದಿದ್ದರಿಂದ ಗೊಂದಲ....
ವಿದ್ಯಾರ್ಥಿನಿಯರು ಹಿಜಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದರಿಂದ ಹುಬ್ಬಳ್ಳಿಯ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಹಿಜಾಬ್ ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ಆದರೆ ಹಿಜಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜ್ ಒಳಗಡೆ ಬಿಡದೇ ಇದ್ದುದರಿಂದ ಗೇಟ್ ಮುಂಭಾಗದಲ್ಲಿ ವಿದ್ಯಾರ್ಥಿನೀಯರು ಪ್ರತಿಭಟನೆ ಮಾಡಿದರು.  ಪೋಷಕರೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಿಗ್ರಿ ಕಾಲೇಜಿಗೆ ಹಿಜಬ್ ಅವಕಾಶ ನಿರಾಕರಿಸಿಲ್ಲ ಎಂದು ಅಂಜುಮನ್ ಸಂಸ್ಥೆ ಮುಖಂಡರು ವಾದಿಸಿದರು. ಆದರೆ ಗೇಟ್ ಒಳಗೆ ಬಿಟ್ಟುಕೊಳ್ಳೊದಿಲ್ಲ ಎಂದು ಆಡಳಿತ ಮಂಡಳಿ ಹೇಳಿದ್ದರಿಂದ ಗೊಂದಲ ಉಂಟಾಯಿತು. ನ್ಯಾಯ ಸಿಗುವವರೆಗು ಹೋರಾಟ ಮಾಡುವುದಾಗಿ ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Hijab Controversy: ಮಂಡ್ಯ ಬಳಿಕ ತುಮಕೂರಿನಲ್ಲಿ ಮಾರ್ದನಿಸಿದ ‘ಅಲ್ಲಾಹು ಅಕ್ಬರ್’ ಘೋಷಣೆ..!

ಪೋಷಕರು, ಸಂಘಟನೆಗಳ ಪ್ರವೇಶದಿಂದ ಪರಿಸ್ಥಿತಿ ಬಿಗಿ...
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಹುಬ್ಬಳ್ಳಿಯ ಮಹಿಳಾ ಡಿಗ್ರಿ ಕಾಲೇಜು ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.  ಪೋಷಕರ ಆಕ್ರೋಶದಿಂದ ವಾತಾವರಣ ಬಿಗಿಗೊಂಡಿತು. ಜತೆಗೆ ವಿವಿಧ ಸಂಘಟನೆಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಯಿತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮಹಿಳಾ ಪದವಿ ಮಹಾವಿದ್ಯಾಲಯದ ಬಳಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪೊಲೀಸ್ ಆಯುಕ್ತರ ಭೇಟಿ...
ಮಹಿಳಾ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಲಾಭೂ ರಾಮ್ ಪರಿಸ್ಥಿತಿ ಅವಲೋಕಿಸಿದರು. ನಂತರ ನ್ಯೂಸ್ 18 ಕನ್ನಡದ  ಜೊತೆ ಮಾತನಾಡಿದ ಲಾಭೂ ರಾಮ್, ಸದ್ಯಕ್ಕೆ ಒಂದು ದಿನದ ಮಟ್ಟಿಗೆ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಪರಿಸ್ಥಿತಿ ಅವಲೋಕಿಸಿ ನಿಷೇಧಾಜ್ಞೆ ಮುಂದುವ ರಿಸಬೇಕೊ ಅಥವಾ ವಾಪಸ್ ಪಡೆಯ ಬೇಕೋ ಅನ್ನೋದನ್ನ ನಿರ್ಧಾರ ಮಾಡ್ತೇವೆ. ಹಿಜಬ್ ವಿವಾದದ ಹಿನ್ನೆಲೆಯಲ್ಲಿ ಎಲ್ಲ ಕಾಲೇಜುಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಮಹಿಳಾ ಪದವಿ ಮಹಾವಿದ್ಯಾಲಯದ ಬಳಿ ಪೋಷಕರು ವಿದ್ಯಾರ್ಥಿಗಳ ಪ್ರತಿಭಟನೆ ಮಾಡಿದ್ದಾರೆ.

ಸದ್ಯಕ್ಕೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ತರಗತಿಗಳನ್ನು ಮುಂದುವರಿಸುವ ಕುರಿತು ಕಾಲೇಜು ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದಲ್ಲಿ ಕಾಲೇಜುಗಳ ಬಳಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾನೂನು ಕೈಗೆತ್ತಿಕೊಳ್ಳಲು ಹೋದವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವಳಿ ನಗರದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಲಾಭೂ ರಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: Hijab Controversy: ಶಾಲಾ ಕಾಲೇಜುಗಳ ಸುತ್ತ ಮುಂದುವರೆದ ನಿಷೇಧಾಜ್ಞೆ, ನಿಲ್ಲದ ವಿದ್ಯಾರ್ಥಿನಿಯರ ಪರ-ವಿರೋಧ ನಿಲುವು

ಶಾಲೆಗೂ ರಜೆ ಘೋಷಣೆ....
ಹಿಜಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಎಸ್ ಜೆ ಎಂ ವಿ ಮಹಿಳಾ ಮಹಾವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ. ಹಿಜಬ್ ಹಾಕಿಕೊಂಡರೂ ತರಗತಿಗಳಿಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಪೋಷಕರಿಂದಲೂ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಮತ್ತು ಕಾಲೇಜು ಆಡಳಿತ ಮಂಡಳಿ ಮಾತುಕತೆ ನಂತರ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜಿನ ಬಳಿ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ ಕಾಲೇಜು ಆಡಳಿತ ಮಂಡಳಿ ನಿರ್ಧಾರಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಗ್ರಿ ಕಾಲೇಜುಗಳಲ್ಲಿ ಹಿಜಬ್ ಗೆ ನಿರ್ಭಂಧವಿಲ್ಲ. ಆದರೂ ನಮಗೆ ತರಗತಿಗೆ ಅವಕಾಶ ಮಾಡಿಕೊಟ್ಟಿಲ್ಲ. ಪರೀಕ್ಷೆ ಗಳಿದ್ದರೂ ಬರೆಯೋಕೆ ಬಿಟ್ಟಿಲ್ಲ ಎಂದು ವಿದ್ಯಾರ್ಥಿನಿಯೂ ಕಿಡಿಕಾರಿದರು.

ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಹಿಜಬ್ ಗೆ ಅವಕಾಶ ನೀಡಿಲ್ಲ. ಹಿಜಬ್ ಗೊಂದಲವಾದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಿದ್ದೇವೆ. ಸದ್ಯಕ್ಕೆ ಒಂದು ದಿನದ ಮಟ್ಟಿಗೆ ರಜೆ ಘೋಷಣೆ ಮಾಡಿದ್ದೇವೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದ ನಿರ್ದೇಶನದಂತೆ ನಡೆದುಕೊಂಡಿದ್ದೇವೆ ಎಂದು ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಲಿಂಗರಾಜ ಅಂಗಡಿ ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಲೇಜು ಬಳಿ ಪೊಲೀಸ್ ಬಂದೋಬಸ್ತ್  ಮುಂದುವರೆಸಲಾಗಿದೆ. ಒಂದು ದಿನದ ಮಟ್ಟಿಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Published by:Kavya V
First published: