Police Sale Ganja: ಸಿಎಂ ತವರು ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಗಾಂಜಾ ಮಾರಾಟ ಆರೋಪ; ಪಿಐ ಸೇರಿ 7 ಸಿಬ್ಬಂದಿ ಅಮಾನತು!

ಇಂತಹ ಪೊಲೀಸ್ ಸಿಬ್ಬಂದಿಯಿಂದ ಇಡೀ ಖಾಕಿ ಪಡೆಗೆ ಕಪ್ಪು ಚುಕ್ಕೆ ಎನ್ನುವಂತಾಗಿದೆ. ಅಪರಾಧ ಎಸಗಿದ ಆರೋಪಿಗಳನ್ನು ಬಿಟ್ಟಿರುವುದಲ್ಲದೆ ಅವರಿಂದ ವಶಪಡಿಸಿಕೊಂಡ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ಅಚ್ಚರಿ ಜೊತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ನವನಗರದ ಎಪಿಎಂಸಿ ಠಾಣೆ

ನವನಗರದ ಎಪಿಎಂಸಿ ಠಾಣೆ

  • Share this:

  • ವರದಿ - ಶಿವರಾಮ ಅಸುಂಡಿ


ಹುಬ್ಬಳ್ಳಿ: ಅಪರಾಧಗಳನ್ನು ತಡೆಗಟ್ಟಬೇಕಾದ ಪೊಲೀಸರೇ ಅಪರಾಧ ಕೃತ್ಯಕ್ಕೆ ಇಳಿದರೆ ಕಾನೂನು ಸುವ್ಯವಸ್ಥೆಯ ಗತಿ ಏನಾಗಬಹುದು..? ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿದ್ದಾರೆ ಹುಬ್ಬಳ್ಳಿ ಪೊಲೀಸರು (Hubballi Police). ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರ ತವರು ಜಿಲ್ಲೆಯ ಪೊಲೀಸರು ಏನು ಮಾಡಿದರು, ಅಪರಾಧ ಕೃತ್ಯಕ್ಕೆ ಭಾಗಿಯಾದ ಪೊಲೀಸ್ ಅಧಿಕಾರಿ ಮತ್ತಿತರರ ಕಥೆ ಏನಾಯ್ತು ಅನ್ನೋದಕ್ಕೆ ಈ ಸ್ಟೋರಿ ನೋಡಿ.

ಹುಬ್ಬಳ್ಳಿ ಹೇಳಿ.. ಕೇಳಿ... ಸಿಎಂ ಬಸವರಾಜ ಬೊಮ್ಮಾಯಿ ತವರೂರು. ಹೀಗಾಗಿ ಹುಬ್ಬಳ್ಳಿ - ಧಾರವಾಡ ಪೊಲೀಸರು ಹೆಚ್ಚು ಕ್ರಿಯಾಶೀಲರಾಗಿಯೇ ಕೆಲಸ ಮಾಡಬೇಕೆಂದು ಜನ ನಿರೀಕ್ಷೆ ಮಾಡೋದು ಸಹಜ. ಆದ್ರೆ ಅಪರಾಧಗಳನ್ನು ತಡೆಯಬೇಕಾದ ಪೊಲೀಸರಿಂದಲೇ ಅಪರಾಧ ಕೃತ್ಯ ನಡೆದ್ರೆ. ಅದೂ ಸಹ ಸಿಎಂ ತವರು ಹುಬ್ಬಳ್ಳಿಯಲ್ಲಿ ಅಂದ್ರೆ ಹೇಗಿರಬೇಡ. ಈ ಒಂದು ಘಟನೆ ಮೂಲಕ ಖಾಕಿ ಮೇಲಿನ ನಂಬಿಕೆಯನ್ನೇ ಹುಬ್ಬಳ್ಳಿಯ ಕೆಲ ಪೊಲೀಸರು ಮಣ್ಣುಪಾಲು ಮಾಡಿದ್ದಾರೆ. ಬೇಲಿಯೇ ಎದ್ದು ಹೊಲ ಮೆಯ್ದ ಹಾಗಾಗಿದೆ ಹುಬ್ಬಳ್ಳಿ ಪೊಲೀಸರ ಕತೆ. ವಶಪಡಿಸಿಕೊಂಡ ಗಾಂಜಾವನ್ನೇ ಖಾಕೀ ಪಡೆ ಮಾರಾಟ ಮಾಡುತ್ತಿದೆ (Police Sale Ganja) ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಆ ಠಾಣೆಯಲ್ಲಿ ಎಲ್ಲರನ್ನು ಇದೀಗ ಅಮಾನತು ಮಾಡಲಾಗಿದೆ.

ಗಾಂಜಾ ಮಾರಾಟ ಮಾಡಿದ ಪೊಲೀಸರು!

ಗಾಂಜಾ ಮಾರಾಟ ಮಾಡುವವರನ್ನ ಬಂಧಿಸಿದ ಪೊಲೀಸರಿಂದಲೇ ಗಾಂಜಾ ಮಾರಾಟ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಶಪಡಿಸಿಕೊಂಡ ಗಾಂಜಾವನ್ನು ಪೊಲೀಸರೇ ಮಾರಾಟ ಮಾಡುತ್ತಿದ್ದರೆಂಬ ಅಂಶ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 30 ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದ ನವನಗರದ ಎಪಿಎಂಸಿ ಠಾಣೆ ಪೊಲೀಸರು ಅವರಿಂದ ಹಣ ಪಡೆದಿದ್ದರು. ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಿದ್ದರೆಂಬ ಆರೋಪ ಕೇಳಿ ಬಂದಿತ್ತು. ಹಣ ಪೀಕಿ ಆರೋಪಿಗನ್ನು ಬಿಟ್ಟಿದ್ದ ಪೊಲೀಸರು, ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾವನ್ನು ತಾವೇ ಮಾರಾಟ ಮಾಡೋ ಮೂಲಕ ಖಾಕಿಗೆ ಕಪ್ಪು ಮಸಿ ಬಳಿಯೋ ಪ್ರಯತ್ನ ಮಾಡಿದ್ದಾರೆ ಎಂದು ದೂರು ಕೇಳಿಬಂದಿದೆ.

ಪೊಲೀಸ್ ಇನ್ಸ್​ಪೆಕ್ಟರ್ ಸೇರಿ 7 ಮಂದಿ ಅಮಾನತು

ವಶಕ್ಕೆ ಪಡೆದ 1.5 ಕೆ.ಜಿ ಗಾಂಜಾ ಜೊತೆಗೆ ಕೃತ್ಯಕ್ಕೆ ಬಳಸಿದ್ದ ವಾಹನ ಬಿಡಲು ಪೊಲೀಸರು ಹಣ ಪಡೆದಿದ್ದರು. ಗಾಂಜಾ ಮಾರಾಟ ಮಾಡಿದ್ದ ನವನಗರ ಪೊಲೀಸ್ ಇನ್ಸಪೆಕ್ಟರ್ ಸೇರಿ 7 ಮಂದಿಯನ್ನು ಅಮಾನತು ಮಾಡಲಾಗಿದೆ. ನವನಗರ ಎಪಿಎಂಸಿ ಠಾಣೆಯ ಇನ್ಸ್ಪೆಕ್ಟರ್ ವಿಶ್ವನಾಥ್ ಚೌಗಲೆ, ಎಎಸ್ಐ ಕರಿಯಪ್ಪಗೌಡರ, ಹೆಚ್ ಸಿ ನಾಗರಾಜ ಗುಡಿಮಾನಿ ವಿಕ್ರಮ್ ಪಾಟೀಲ್, ಶಿವಕುಮಾರ್ ಮೇತ್ರಿ ಮತ್ತು ಗೋಕುಲ ಠಾಣೆಯ ಹೆಚ್ ಸಿ ದಿಲ್ಶಾದಾ, ಎಂ ಸಿ ಹೊನ್ನಪ್ಪನವರು ಅಮಾನತ್ತಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಗಾಂಜಾ ಮಾರಾಟ ಮಾಡಿರುವುದು ಕಂಡು ಬಂದ ಹಿನ್ನೆಲೆ ಕಮಿಷನರ್ ಲಾಭೂರಾಮ್ ಅಮಾನತು ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರೋ ಡಿಸಿಪಿ ಕೆ.ರಾಮರಾಜನ್, ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ವರದಿ ಕೊಡಲು ಪೊಲೀಸ್ ಕಮೀಷನರ್ ಲಾಭೂ ರಾಮ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ವರದಿ ಸಲ್ಲಿಸಿದ್ದಾರೆ. ತನಿಖೆಯ ವರದಿಯನ್ನಾಧರಿಸಿ ಪಿ.ಐ. ಸೇರಿ ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಮಾನತಿನ ನಂತರ ಇಲಾಖಾ ತನಿಖೆ ಮುಂದುವರೆಯಲಿದೆ. ಗಾಂಜಾ ಎಷ್ಟು ಸೀಜ್ ಆಗಿದೆ, ಹಣ ಎಷ್ಟು ಪಡೆದಿದ್ದಾರೆ ಎನ್ನೋ ಮಾಹಿತಿ ತನಿಖೆಯ ನಂತರ ಗೊತ್ತಾಗಲಿದೆ. ತನಿಖೆಗೆ ತೊಂದರೆಯಾಗಬಾರೆಂದು ತಕ್ಷಣ ಅಮಾನತು ಮಾಡಿರೋದಾಗಿ ಡಿಸಿಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: HD Kumaraswamy: ಮೈತ್ರಿಯ ಭಾಗವಾಗಿದ್ದುಕೊಂಡೇ ಬೆನ್ನಿಗಿರಿದ ನಿಮ್ಮ ಹೀನ ರಾಜಕೀಯ ಯಾರಿಗೆ ಗೊತ್ತಿಲ್ಲ ಹೇಳಿ?: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಇಂತಹ ಪೊಲೀಸ್ ಸಿಬ್ಬಂದಿಯಿಂದ ಇಡೀ ಖಾಕಿ ಪಡೆಗೆ ಕಪ್ಪು ಚುಕ್ಕೆ ಎನ್ನುವಂತಾಗಿದೆ. ಅಪರಾಧ ಎಸಗಿದ ಆರೋಪಿಗಳನ್ನು ಬಿಟ್ಟಿರುವುದಲ್ಲದೆ ಅವರಿಂದ ವಶಪಡಿಸಿಕೊಂಡ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ಅಚ್ಚರಿ ಜೊತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಸಿಎಂ ತವರು ಊರೇ ಆಗಿರೋದ್ರಿಂದ ಪೊಲೀಸ್ ಆಯುಕ್ತರೂ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ. ತಕ್ಷಣವೇ ಪೊಲೀಸ್ ಅಧಿಕಾರಿ ಸೇರಿ ಏಳು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇಲಾಖಾ ತನಿಖೆಯ ನಂತರ ಪೊಲೀಸರು ಆರೋಪಿಗಳಿಂದ ಪೀಕಿದ್ದೆಷ್ಟು, ಅವರಿಂದ ವಶಪಡಿಸಿಕೊಂಡಿದ್ದ ಗಾಂಜಾ ಎಷ್ಟು, ಅದನ್ನು ಯಾರಿಗೆ, ಎಷ್ಟಕ್ಕೆ ಮಾರಿದರು ಎಂಬಿತ್ಯಾದಿ ಅಂಶಗಳು ಬೆಳಕಿಗೆ ಬರಲಿವೆ.
Published by:HR Ramesh
First published: