Hubballi: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ: ಮತೀಯ ಶಕ್ತಿಗಳನ್ನು ಮಟ್ಟ ಹಾಕ್ತೇವೆ ಎಂದ ಅರಗ ಜ್ಞಾನೇಂದ್ರ

ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ಗಲಭೆ ಸಂಭವಿಸಿದೆ. ಪೊಲೀಸರ ಮೇಲೆಯೇ ದಾಳಿ ಮಾಡಿದ ಮತೀಯ ಶಕ್ತಿಗಳನ್ನು ಮಟ್ಟ ಹಾಕ್ತೇವೆ ಎಂದು ಅರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.

 ಅರಗ ಜ್ಞಾನೇಂದ್ರ

ಅರಗ ಜ್ಞಾನೇಂದ್ರ

  • Share this:
ಹುಬ್ಬಳ್ಳಿ - ಡಿಜೆ.ಹಳ್ಳಿ, ಕೆಜಿ ಹಳ್ಳಿ (DJ Halli, KG Halli Riots) ಪ್ರಕರಣಕ್ಕೂ ಹುಬ್ಬಳ್ಳಿ ಗಲಭೆಗೂ (Hubballi Stone Pelting) ಸಾಮ್ಯತೆ ಇದ್ದು, ದುಷ್ಕೃತ್ಯ ಎಸಗಿದ ಮತೀಯ ಶಕ್ತಿಗಳನ್ನು ಮಟ್ಟ ಹಾಕೋದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಎಚ್ಚರಿಸಿದ್ದಾರೆ. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿಂದ ಕಲ್ಲು ತೂರಾಟಕ್ಕೆ ತುತ್ತಾಗಿದ್ದ ಹನುಮಾನ ಮಂದಿರ(Hanuman Temple)ಕ್ಕೆ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ಮೊದಲು ದೂರು ಕೊಟ್ಟು ಹೊದವರು, ಮರಳಿ ಗುಂಪು‌ ಗುಂಪಾಗಿ ಬರ್ತಾರೆ ಅಂದ್ರೆ ಏನು ಅರ್ಥ. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ, ವಾಹನಗಳು ಜಖಂಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಸಣ್ಣ ನಿರ್ಲಕ್ಷ್ಯ ಆಗಿದ್ರು ಕೆಜಿ ಹಳ್ಳಿ- ಡಿಜೆ ಹಳ್ಳಿ ಘಟನೆ ಮರುಕಳಿಸುತ್ತಿತ್ತು. ಕೆಜಿ ಹಳ್ಳಿ ಡಿಜೆಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೆ ಸಾಮ್ಯತೆ ಇದೆ. ದೂರು ಕೊಟ್ಟ ಮೇಲೆ ಆರೋಪಿಯನ್ನು ಬಂಧಿಸಿದ್ದರೂ ಗಲಭೆ ಮಾಡಲಾಗಿದೆ. ಇಡೀ ಹುಬ್ಬಳ್ಳಿ ಹೊತ್ತಿ ಉರಿಯುವ ಸಂಭವ ಇತ್ತು. ಇಂಟೆಲಿಜೆನ್ಸಿ ವಿಫಲತೆ ಎಂದು ಹೇಳೋಕೆ ಬರಲ್ಲ. ನಿನ್ನೆ ನಮ್ಮ ಪೊಲೀಸರು ಗಲಭೆಯನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.

ಕೇವಲ ಒಂದು ಗಂಟೆಯಲ್ಲಿ ಎಲ್ಲವನ್ನೂ ತಹಬದಿಗೆ ತಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುವೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ ಬರುತ್ತೆ. ಯಾರೇ ಕೃತ್ಯದಲ್ಲಿ ಭಾಗಿಯಾದ್ದರೂ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮತೀಯ ಶಕ್ತಿಗಳನ್ನು ಮಟ್ಟಹಾಕದೇ ಬಿಡುವುದಿಲ್ಲ ಎಂದು ಆರಗ ಜ್ಞಾನೇಂದ್ರ ಎಚ್ಚರಿಸಿದರು.

ಇದನ್ನೂ ಓದಿ:  Hubballi: ಸೋಶಿಯಲ್ ಮೀಡಿಯಾ ಹಿಂಸೆ ಹರಡುವ ಟೂಲ್‌ ಕಿಟ್‌ ಆಗಿದೆ, ಪೊಲೀಸರು ಅಂಥವರ ಬುಡಕ್ಕೆ ಬೆಂಕಿ ಇಡಬೇಕಿದೆ: HDK ಆಗ್ರಹ

ಮಟ್ಟ ಹಾಕ್ತೇವೆ ಎಂದು ಗುಡುಗಿದ ಜೋಶಿ..!

ಹುಬ್ಬಳ್ಳಿಯಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಮತೀಯ ಶಕ್ತಿಗಳನ್ನು ಮಟ್ಟಹಾಕುತ್ತೇವೆ. ಕಾನೂನು ಕೈಗೆತ್ತಿಕೊಂಡವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಒದ್ದು ಒಳಗೆ ಹಾಕುತ್ತೇವೆ. ಗ್ರಾಫಿಕ್ಸ್ ಮಾಡಿ ಯುವಕ ವಿಡಿಯೋ ಹರಿಬಿಟ್ಟಿದ್ದು ಸಹ ತಪ್ಪು. ಆದ್ರೇ ಸಣ್ಣ ಕಾರಣಕ್ಕೆ ಇಷ್ಟೊಂದು ದೊಡ್ಡದು ಮಾಡುವ ಅಗತ್ಯವಿರಲಿಲ್ಲ. ಆದರೆ ಆ ಯುವಕನ ಮನೆಗೆ ಕೆಲವರು ತಲ್ವಾರ್ ತೆಗೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಆಗಬೇಕು.

ಈ ದಾಳಿಯ ಹಿಂದೆ ಯಾರಿದ್ದಾರೆ, ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೆಲ ಗೂಂಡಾ ಶಕ್ತಿಗಳು ದೇಶದಲ್ಲಿ ಭಯದ ವಾತವರಣ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಮುಸ್ಲಿಂ ಸಮಾಜದ ಮುಖಂಡರು ಸಾಮಾಜಿಕ ದ್ವೇಷ ಬೆಳೆಯಲು ಬಿಡಬಾರದು. ನಾವು ಏನ್ ಮಾಡಿದ್ರು ನಡೆಯುತ್ತೇ ಅಂತ ಭಾವಿಸುವುದು ಸರಿಯಲ್ಲ ಎಂದರು.

ನೂರಕ್ಕೂ ಹೆಚ್ಚು ಜನರ ವಶಕ್ಕೆ

ಇನ್ನು ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ಫೂಟೇಜ್ ಹಾಗೂ ವೀಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಲಾಗಿದೆ.

ಈ ವೇಳೆ ಹಲವು ಪೋಷಕರು ತಮ್ಮ ಮಗ ಅಮಾಯಕನಿದ್ದು, ಬಿಡುಗಡೆ ಮಾಡುವಂತೆ ಮನವಿ ಮಾಡಿ  ಗಂಟೆಗಟ್ಟಲೇ ಪೊಲೀಸ್ ಠಾಣೆ ಎದುರು ಕಾಯ್ದ ಘಟನೆಯೂ ನಡೆಯಿತು. ಇದೇ ವೇಳೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಕಾಂಗ್ರೆಸ್ ನಿಯೋಗ, ನಗರದಲ್ಲಿ ಶಾಂತಿ ಕಾಪಾಡುವಂತೆ ಪೊಲೀಸ್ ಆಯುಕ್ತ ಲಾಭೂ ರಾಮ್ ಹಾಗೂ ಡಿಸಿ ನಿತೇಶ್ ಪಾಟೀಲರಿಗೆ ಮನವಿ ಮಾಡಿತು.

ಇದನ್ನೂ ಓದಿ:  Hubballi: ಪ್ರಚೋದನಾಕಾರಿ ಪೋಸ್ಟ್: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ: ಪೊಲೀಸರಿಂದ ಗಾಳಿಯಲ್ಲಿ ಗುಂಡು

ಮತ್ತೊಂದೆಡೆ ಹನುಮಾನ ಮಂದಿರದ ಮೇಲೆ ಕಲ್ಲು ತೂರಾಟ ಮಾಡುವರ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿದವು. ನಗರದಲ್ಲಿ ಶಾಂತಿ ಸ್ಥಾಪಿಸೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಹುಬ್ಬಳ್ಳಿಯಲ್ಲಿ ಸದ್ಯ ಪರಿಸ್ಥಿತಿ ತಿಳಿಗೊಳ್ಳಲಾರಂಭಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.
Published by:Mahmadrafik K
First published: