ಹುಬ್ಬಳ್ಳಿ: ಹಸಮಣೆ ಏರುವ ಮುನ್ನವೇ ಮಾವನ ಮನೆ ಸೇರಿದ್ದಾನೆ ಮಧುಮಗ(Groom). ಮದುವೆಗೆ (Marriage) ಎರಡು ದಿನ ಬಾಕಿ ಇರುವಂತೆಯೇ ಈತ ಮಾಡಿದ ಖತರ್ನಾಕ್ ಐಡಿಯಾದಿಂದ ಪೊಲೀಸರ (Police) ಅತಿಥಿಯಾಗಿದ್ದಾರೆ. ಇನ್ನೇನು ಎರಡು ದಿನಗಳಲ್ಲಿ ಹಸೆಮಣೆ ಏರಬೇಕಿತ್ತು. ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಬೇಕಿತ್ತು. ಆದ್ರೆ ಈತನಿಗೆ ಅದೇನು ಯೋಚನೆ ಬಂತೋ ಗೊತ್ತಿಲ್ಲ. ತನ್ನ ತಲೆಗೆ ತೋಚಿದ್ದನ್ನು ಕಾರ್ಯರೂಪಕ್ಕೆ ತರೋಕೆ ಮುಂದಾದ. ಅದರ ಕಾರ್ಯರೂಪಕ್ಕೆ ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡ. ಇನ್ನೇನು ತನ್ನ ಯೋಜನೆಯಲ್ಲಿ ಯಶಸ್ವಿಯಾಗೇ ಬಿಟ್ಟನೆಂದು ಓಟ ಕಿತ್ತವನನ್ನು ಸಾರ್ವಜನಿಕರು ಮತ್ತು ಪೊಲೀಸರು ಹಿಡಿದಿದ್ದಾರೆ. ಹಾಡಹಗಲೇ ದರೋಡೆಗೆ ಯತ್ನಿಸಿದ ಖತರ್ನಾಕ್ ಕಳ್ಳನನ್ನು ಸಿನೀಮಿಯಾ ರೀತಿಯಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: Hassan Murder: ಬಾಡೂಟಕ್ಕೆ ಕರೆಯಲಿಲ್ಲ ಎಂದು ಹೊಡೆದಾಟ; ಬಿದ್ದೇ ಬಿಡ್ತು ಯುವಕನ ಹೆಣ!
ಮದುವೆ ನಂತರ ಸೆಟಲ್ ಆಗೋಕೆ ಅಡ್ಡದಾರಿ ಹಿಡಿದ
ಹೀಗೆ ಬ್ಯಾಂಕ್ ನಲ್ಲಿ ದರೋಡೆಗೆ ಯತ್ನಿಸಿದವನನ್ನು ಪ್ರವೀಣ್ ಕುಮಾರ್ ಅಪ್ಪಾಸಾಹೇಬ್ ಪಾಟೀಲ ಎಂದು ಗುರುತಿಸಲಾಗಿದೆ. ವಿಜಯಪುರ ಮೂಲದ ಪ್ರವೀಣ್ ಕುಮಾರ್ ಮೈಸೂರಿನಲ್ಲಿ ವಾಸಿಸುತ್ತಿದ್ದ. ಇಷ್ಟರಲ್ಲಿಯೇ ಆತನ ಮದುವೆಯೂ ಇತ್ತು. ಮದುವೆ ಎರಡು ದಿನ ಬಾಕಿ ಇರುವಾಗಲೇ ಆತನ ತಲೆಯಲ್ಲಿ ಖತರ್ನಾಕ್ ಐಡಿಯಾ ಬಂದಿದೆ. ಮುಂದಿನ ಜೀವನಕ್ಕಾಗಿ ಈಗಲೇ ಏನಾದ್ರೂ ಗಂಟು ಕಟ್ಟಿಕೊಳ್ಳಬೇಕೆಂಬ ಯೋಚನೆಯೊಂದಿಗೆ ಯೋಜನೆಯೊಂದನ್ನು ರೂಪಿಸಿದ್ದಾನೆ. ಹುಬ್ಬಳ್ಳಿಗೆ ಬಂದು ಲಾಡ್ಜ್ ಒಂದರಲ್ಲಿ ರೂಮ್ ಮಾಡಿದ್ದ ಪ್ರವೀಣ್, ಇಂದು ಮಧ್ಯಾಹ್ನ ಕೊಪ್ಪಿಕರ ರಸ್ತೆಯಲ್ಲಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಹೋಗಿದ್ದಾನೆ.
ಫಿಲ್ಮಿ ಸ್ಟೈಲ್ನಲ್ಲಿ ಬ್ಯಾಂಕ್ ದರೋಡೆ
ಮಂಕಿ ಕ್ಯಾಪ್ ಹಾಕಿ ಒಳಗೆ ಹೋದ ಈತ, ಕ್ಯಾಷ್ ಕೌಂಟರ್ ಬಳಿ ಹೋಗಿ ಚಾಕು ತೋರಿಸಿ ಹಣ ಕೊಡುವಂತೆ ಸೂಚಿಸಿದ್ದಾನೆ. ಚಾಕು ನೋಡಿ ಹೆದರಿಕೊಂಡ ಕ್ಯಾಷಿಯರ್ ಕೌಂಟರ್ ನಲ್ಲಿದ್ದ ಹಣವನ್ನು ತೆಗೆದುಕೊಟ್ಟಿದ್ದಾಳೆ. ಅದನ್ನು ಬ್ಯಾಗಿನಲ್ಲಿ ಹಾಕಿಕೊಂಡು ದರೋಡೆಕೋರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತಕ್ಷಣ ಕ್ಯಾಷಿಯರ್ ಬಾಯಿ ಬಡಿದುಕೊಂಡಿದ್ದಾಳೆ. ಈ ವೇಳೆ ಅಲ್ಲಿದ್ದ ಗ್ರಾಹಕರು ದರೋಡೆಕೋರನ ಬೆನ್ನುಬಿದ್ದಿದ್ದಾರೆ. ಹೀಗೆ ಗುಂಪು ಓಡುತ್ತಿದ್ದ ವ್ಯಕ್ತಿಯ ಬೆನ್ನು ಬಿದ್ದಿರೋದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಉಮೇಶ್ ಬಂಗಾರಿ ಹಾಗೂ ಹುಬ್ಬಳ್ಳಿ ಉಪ ನಗರ ಪೊಲೀಸ್ ಠಾಣೆಯ ಪೇದೆ ಮಂಜುನಾಥ ಹಾಲನವರ ಚೇಸ್ ಮಾಡಿದ್ದಾರೆ.
ಸಿಕ್ಕಿಬಿದ್ದ ಖದೀಮ
ಸಾರ್ವಜನಿಕರ ನೆರವಿನೊಂದಿಗೆ ದರೋಡೆಕೋರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಹರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ದರೋಡೆಕೋರನಿಂದ 6, 39,125 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ಲಾಭೂ ರಾಮ್, ಆರೋಪಿ ದರೋಡೆ ಮಾಡಿದ ಹಣವನ್ನೆಲ್ಲಾ ಸೀಜ್ ಮಾಡಿದ್ದೇವೆ. ಕೃತ್ಯಕ್ಕೆ ಬಳಸಿದ ಚಾಕು ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿರೋದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; Blackmailಗೆ ಹೆದರಿ ಜೀವ ಕಳೆದುಕೊಂಡ Doctor
ಕಳ್ಳನನ್ನು ಹಿಡಿದ ಪೊಲೀಸರಿಗೆ ಬಹುಮಾನ
ಸಾರ್ವಜನಿಕರ ಸಹಾಯದೊಂದಿಗೆ ಚೇಸ್ ಮಾಡಿ ದರೋಡೆಕೋರನ ಹೆಡೆಮುರಿಗೆ ಕಟ್ಟುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪೊಲೀಸ್ ಇಲಾಖೆಯೂ ಶಹಬ್ಬಾಸ್ ಗಿರಿ ಕೊಟ್ಟು, ಬಹುಮಾನವನ್ನೂ ಘೋಷಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪೇದೆಗಳಾದ ಉಮೇಶ್ ಬಂಗಾರಿ ಹಾಗೂ ಮಂಜುನಾಥರಿಗೆ ಬಹುಮಾನ ಘೋಷಿಸಿದ್ದಾರೆ. ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಪೊಲೀಸ್ ಕಮೀಷನರ್ ಲಾಭೂ ರಾಮ್ ಸಹ ಇಬ್ಬರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ಅಭಿನಂದನೆ ಸಲ್ಲಿಸೋ ಜೊತೆಗೆ, ಆರೋಪಿಯನ್ನು ಹಿಡಿಯಲು ನೆರವಾದ ಸಾರ್ವಜನಿಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಮದುವೆ ಮನೆಯಲ್ಲಿ ಸಂಭ್ರಮದಿಂದ ಇರಬೇಕಿದ್ದ ಮಧುಮಗ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಸದ್ಯದ ಮಾಹಿತಿ ಪ್ರಕಾರ ಪ್ರವೀಣ್ ಕುಮಾರ್ ಅಪ್ಪಾಸಾಹೇಬ್ ಪಾಟೀಲ ನದ್ದು ಇದೇ ಮೊದಲ ಅಪರಾಧ ಎನ್ನಲಾಗಿದೆ. ಈತನ ಪೂರ್ವಾಪರ ಕೆದಕುತ್ತಿರೋ ಹುಬ್ಬಳ್ಳಿ ಪೊಲೀಸರು, ಎಲ್ಲ ರೀತಿಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮದುವೆಗೆ ಮುನ್ನವೇ ಮಧುಮಗ ಮಾವನ ಮನೆ ಸೇರಿದ್ದು, ಕುಟುಂಬದ ಸದಸ್ಯರನ್ನು ಪೇಚಿಗೆ ಸಿಲುಕುವಂತೆ ಮಾಡಿದೆ. ಸೀನೀಮಿಯಾ ರೀತಿಯಲ್ಲಿ ನಡೆದ ಘಟನೆಗೆ ಅಚ್ಚರಿ ವ್ಯಕ್ತಪಡಿಸಿರೋ ಜನತೆ, ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ