ಬಿಗಿ ಬಂದೋಬಸ್ತ್​ನಲ್ಲಿ ಧಾರವಾಡಕ್ಕೆ ಆಗಮಿಸಿದ ವಿನಯ ಕುಲಕರ್ಣಿ; ಅಭಿಮಾನಿಗಳಿಂದ ಜೈಕಾರ

ವಿನಯ್​ ಕುಲಕರ್ಣಿ ಅವರ ವ್ಯವಹಾರಕ್ಕೆ ಸಂಬಂಧಿಸಿದಂತೆ ಪತ್ನಿ ಶಿವಲೀಲಾ ಅವರಿಗೆ ಜನರಲ್ ಪಾವರ್ ಆಫ್ ಅಟಾರ್ನಿ ನೀಡಲು ಅವರು ಇಂದು ನಗರಕ್ಕೆ ಆಗಮಿಸಿದರು.

ವಿನಯ್​ ಕುಲಕರ್ಣಿ

ವಿನಯ್​ ಕುಲಕರ್ಣಿ

  • Share this:
ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬೆಳಗಾವಿಯಿಂದ ಧಾರವಾಡಕ್ಕೆ ಕರೆತರಲಾಗಿತ್ತು. ಅವರ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸು ಪ್ರಕ್ರಿಯೆಗಳಿಗೆ ವಿನಯ ತಮ್ಮ ಪತ್ನಿ ಶಿವಲೀಲಾ  ಅವರಿಗೆ ಇಂದು ಜಿಪಿಎ ನೀಡಲು ಧಾರವಾಡಕ್ಕೆ ಬಂದಿದ್ದರು. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರಿ 9 ತಿಂಗಳುಗಳೇ ಕಳೆದಿವೆ. ಇದೀಗ ಅವರ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿದೆ. ಈ ವೇಳೆ ನ್ಯಾಯಾಲಯದ ಅನುಮತಿ ಮೇರೆಗೆ ಬಂದಿದ್ದ ವಿನಯ ನೋಡಲು ಅವರ ನೂರಾರು ಅಭಿಮಾನಿಗಳು ಆಗಮಿಸಿದ್ದರು.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆಗೆ ಸಂಬಂಧಿಸಿದ ಸಿಬಿಐ ತನಿಖೆಯ ವೇಳೆ ಕಳೆದ ವರ್ಷದ ನವೆಂಬರ್ 5 ರಂದು  ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನಕ್ಕೆ ಒಳಗಾಗಿದ್ದಾರೆ. ಅವರ ವ್ಯವಹಾರಕ್ಕೆ ಸಂಬಂಧಿಸಿದಂತೆ ಪತ್ನಿ ಶಿವಲೀಲಾ ಅವರಿಗೆ ಜನರಲ್ ಪಾವರ್ ಆಫ್ ಅಟಾರ್ನಿ ನೀಡಲು ಅವರು ಇಂದು ನಗರಕ್ಕೆ ಆಗಮಿಸಿದರು.  ನಗರದ ಮಿನಿ ವಿಧಾನಸೌಧ ಕಟ್ಟಡದಲ್ಲಿರುಉಪ ನೋಂದಣಾಧಿಕಾರಿ ಕಚೇರಿಗೆ ಬೆಳಿಗ್ಗೆ 10:30 ಕ್ಕೆ ಆಗಮಿಸಿದರು.

ವಿನಯ್ ಕುಲಕರ್ಣಿ ಕಚೇರಿ ಬಳಿ ಬರುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರ ಹಾಕಿದರು. ಅಭಿಮಾನಿಗಳತ್ತ ಕೈ ಬೀಸಿ, ವಂದಿಸಿದ ವಿನಯ ಕಚೇರಿಯೊಳಗೆ ಹೋದರು. ಅವರು ಕಚೇರಿಯೊಳಗೆ ಹೋಗುತ್ತಲೇ ಇತ್ತ ಅಭಿಮಾನಿಗಳ ದಂಡು ಹೆಚ್ಚಾದಾಗ ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಅವರನ್ನು ಕೂಡ ಪೊಲೀಸರು ಒಳಗೆ ಬಿಡಲಿಲ್ಲ. ಕೊನೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಚೇರಿಯೊಳಗೆ ಹೋಗಲು ಅವಕಾಶ ಕಲ್ಪಿಸಲಾಯಿತು.

ಇದನ್ನು ಓದಿ: ನೂತನ ಸಿಎಂ ಘೋಷಣೆಗೆ ಕ್ಷಣಗಣನೆ..? ಬೆಂಗಳೂರಿಗೆ ಬಂದಿಳಿದ ವೀಕ್ಷಕರು ಲೆಕ್ಕಾಚಾರ ಏನು?

ವಿನಯ ಕುಲಕರ್ಣಿ ಅವರು ಬಂದ ಬಳಿಕ ಪತ್ನಿ ಶಿವಲೀಲಾ, ಹಿರಿಯ ಮಗಳು ವೈಶಾಲಿ ಹಾಗೂ ಮಗ ಹೇಮಂತ ಆಗಮಿಸಿದರು. ಪತ್ನಿ ಶಿವಲೀಲಾಗೆ ಜಿಪಿಎ ನೀಡಿದ ಪ್ರಕ್ರಿಯೆ ಬಳಿಕ ವಿನಯ ಕುಲಕರ್ಣಿ ನೇರವಾಗಿ ನಗರದ ಹಳೆಯ ಡಿಎಸ್ಪಿ ವೃತ್ತದ ಬಳಿಯ ಬ್ಯಾಂಕ್ ಆಫ್ ಇಂಡಿಯಾಕ್ಕೆ ತೆರಳಿದರು. ತಮ್ಮ ಆಸ್ತಿ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಪಿಎ ನೀಡಲು ಹಾಗೂ ಜಂಟಿ ಖಾತೆ ತೆರೆಯಲು ಅವಕಾಶ ನೀಡಬೇಕೆಂದು ವಿನಯ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ನ್ಯಾಯಾಲಯ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಜಿಪಿಎ ನೀಡುವುದು ಹಾಗೂ ಜಂಟಿ ಖಾತೆ ತೆರೆಯುವ ಪ್ರಕ್ರಿಯೆ ನಡೆಸಿದರು.

ಇನ್ನು ತಮ್ಮ ನೆಚ್ಚಿನ ನಾಯಕನನ್ನು ನೋಡಲು ನೂರಾರು ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಪೊಲೀಸರು ಅವರನ್ನು ದೂರವೇ ತಡೆದಿದ್ದರು. ಇದರಿಂದಾಗಿ ಆಕ್ರೋಶಗೊಂಡ ಬೆಂಬಲಿಗರು ಪೊಲೀಸರ ವಿರುದ್ಧ ಘೋಷಣೆ ಹಾಕಿದರಲ್ಲದೇ ವಿನಯ ಪರ ಜೈಕಾರ ಹಾಕಿದರು. ಬ್ಯಾಂಕ್ ಬಳಿ ಬಂದ ವಿನಯ ಕುಲಕರ್ಣಿಗೆ ಅಭಿಮಾನಿಯೊಬ್ಬ ಮುಂದೆ ಏನಣ್ಣಾ ಅಂತಾ ಕೇಳೋ ಮೂಲಕ ತನ್ನ ದುಃಖವನ್ನು ತೋಡಿಕೊಂಡ. ಅದಕ್ಕೆ ನೋವಿನಿಂದಲೇ ಉತ್ತರಿಸಿದ ವಿನಯ, ಏನೂ ಮಾಡಲಿಕ್ಕೆ ಆಗೋದಿಲ್ಲ ಅಂತಾ ಹೇಳಿ ಹೋದರು.

ಇದನ್ನು ಓದಿ: ಮುಂದಿನ ತಿಂಗಳಿಂದ ಮಕ್ಕಳಿಗೆ ಕೋವಿಡ್​ ಲಸಿಕೆ ವಿತರಣೆ ಸಾಧ್ಯತೆ; ಕೇಂದ್ರ ಆರೋಗ್ಯ ಸಚಿವರು

ಬ್ಯಾಂಕ್ ನಲ್ಲಿ ಸುಮಾರು ಅರ್ಧ ಗಂಟೆ ಪ್ರಕ್ರಿಯೆ ಬಳಿಕ ಹೊರ ಬಂದ ವಿನಯ ಕುಲಕರ್ಣಿ, ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಬೆಂಬಲಿಗರು ವಿನಯ ಕುಲಕರ್ಣಿ ಅವರನ್ನು ಮಾತನಾಡಿಸಲು ಯತ್ನಿಸಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬಿಗಿ ಬಂದೋಬಸ್ತ್ ನಡುವೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಯಿತು.

ಈ ಮಧ್ಯೆ ಸೋಮವಾರವಷ್ಟೇ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇತ್ತು. ವಿಚಾರಣೆಯನ್ನು ಆಗಸ್ಟ್ 10 ಕ್ಕೆ ಮುಂದೂಡಲಾಗಿದೆ.

(ವರದಿ: ಮಂಜುನಾಥ ಯಡಳ್ಳಿ)
Published by:Seema R
First published: