ರಂಗೇರಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ; ಡಿಕೆಶಿ- ಶ್ರೀರಾಮುಲು ಆರೋಪ-ಪ್ರತ್ಯಾರೋಪ

ಡ್ಯಾನ್ಸ್ ಕಲಿಯಬೇಕು ಎಂದರೆ ಹುಬ್ಬಳ್ಳಿ ರಸ್ತೇಲಿ ಅಡ್ಡಾಡಿ ಎಂದು ಡಿಕೆಶಿ ಎಂದರೆ, ಇದಕ್ಕೆ ತಿರುಗೇಟು ನೀಡಿರುವ ಸಚಿವ ಶ್ರೀರಾಮುಲುರಸ್ತೇಲೇ ಹೆರಿಗೆಯಾಗಬೇಕೆಂದ್ರೆ ಡಿಕೆಶಿ ಕ್ಷೇತ್ರಕ್ಕೆ ಹೋಗಿ ಎಂದಿದ್ದಾರೆ

ಡಿಕೆ ಶಿವಕುಮಾರ್​​

ಡಿಕೆ ಶಿವಕುಮಾರ್​​

  • Share this:
ಹುಬ್ಬಳ್ಳಿ (ಆ. 29):  ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ  ಚುನಾವಣಾ ಕಾವು ಜೋರಾಗುತ್ತಿದ್ದಂತೆ,  ಪ್ರಚಾರಕ್ಕೆಂದು ಬಂದ ಮುಖಂಡರಲ್ಲಿ ಆರೋಪ - ಪ್ರತ್ಯಾರೋಪಗಳೂ ತಾರಕಕ್ಕೇರಿವೆ. ಜನರಿಗೆ ಡ್ಯಾನ್ಸ್ ತರಬೇತಿ ಅವಶ್ಯಕತೆಯೇ ಇಲ್ಲ. ಹುಬ್ಬಳ್ಳಿ ರಸ್ತೆಗಳಲ್ಲಿ ಅಡ್ಡಾಡದರೆ ಸಾಕು ತಾನಾಗಿಯೇ ಡ್ಯಾನ್ಸ್ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಲೇವಡಿ ಮಾಡಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, (Sri ramaulu) ಯಾರಿಗಾದ್ರೂ ಹೆರಿಗೆ ಆಗಬೇಕೆಂದ್ರೆ ಡಿಕೆಶಿ ಕ್ಷೇತ್ರದ ರಸ್ತೆಗಳಲ್ಲಿ ಕರೆದುಕೊಂಡು ಹೋದ್ರೆ ಸಾಕು ಆಸ್ಪತ್ರೆಗೆ ಮುಟ್ಟುವ ಮುಂಚೆಯೇ ಎಲ್ಲವೂ ಮುಗಿದು ಹೋಗುತ್ತದೆ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​,  ಹುಬ್ಬಳ್ಳಿ - ಧಾರವಾಡ ಗುಂಡಿಗಳ ನಗರವಾಗಿದೆ. ಎಲ್ಲಿ ನೋಡಿದರೂ ತಗ್ಗು - ಗುಂಡಿಗಳೇ ಕಾಣಿಸುತ್ತಿವೆ. ಯಾರಾದರೂ ಡ್ಯಾನ್ಸ್ ಕಲಿಯಬೇಕೆಂದರೆ ಈ ಸಿಟಿಯಲ್ಲಿ ಅಡ್ಡಾಡಿದರೆ ಸಾಕು. ಅವರಿಗೆ ವಿಶೇಷ ಡ್ಯಾನ್ಸ್ ತರಬೇತಿ ಬೇಕಾಗುವುದಿಲ್ಲ. ಇದು ಬಿಜೆಪಿಯ ಆಡಳಿತದ ಕಾರ್ಯವೈಖರಿ.
ಹುಬ್ಬಳ್ಳಿಯಲ್ಲಿ ಹಾಲಿ ಸಿಎಂ, ಮಾಜಿ ಸಿಎಂ ಮತ್ತು ಕೇಂದ್ರ ಸಚಿವರಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ. ಈ ಹಿಂದಿನ  ಎರಡು ಅವಧಿಯಲ್ಲಿಯೂ ಬಿಜೆಪಿಯೇ ಇಲ್ಲಿ ಆಡಳಿತ ಮಾಡಿದೆ. ಆದರೆ ಹುಬ್ಬಳ್ಳಿ - ಧಾರವಾಡ ಜನತೆಗೆ ಏನು ಲಾಭವಾಗಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಏನು ಬದಲಾವಣೆ ತಂದಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸಿದರೆ ಸಾಕು ಡ್ಯಾನ್ಸ್ ತಾನಾಗಿಯೇ ಬರುತ್ತೆ. ಇನ್ನೂ ಧೂಳಿನ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ಬಿಳಿ ಬಟ್ಟೆ ಹಾಕಿಕೊಂಡರೆ ಸಾಕು ತಾನಾಗಿಯೇ ಕಲರ್ ಆಗಿಬಿಡುತ್ತದೆ. ನಾನು ಯಾವಾಗ ಹುಬ್ಬಳಿಗೆ ಬಂದ್ರೂ ನನ್ನ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತೇನೆ. ಅಷ್ಟರಮಟ್ಟಿಗೆ ಇಲ್ಲಿ ಬಟ್ಟೆಗಳು ಹೊಲಸಾಗುತ್ತದೆ.

ಬಿಜೆಪಿ ಪ್ರಣಾಳಿಕೆ ಸುಳ್ಳಿನ ಸರಮಾಲೆಯಾಗಿದೆ. ಬಿಜೆಪಿ ನುಡಿದಂತೆ ನಡೆದುಕೊಂಡಿಲ್ಲ. ಒಂದೂ ಬೇಡಿಕೆ ಈಡೇರಿಸದೆ ಇರುವಾಗ ನಿಮಗೆ ಮತ ಕೇಳುವುದಕ್ಕೆ ಏನು ಹಕ್ಕಿದೆ. ಕಾಂಗ್ರೆಸ್ ಪ್ರಣಾಳಿಕೆ ಪ್ರಕಾರವೇ ಹಿಂದೆ ನಡೆದುಕೊಂಡಿದ್ದೇವೆ. ನುಡಿದಂತೆ ನಡೆದಿದ್ದು, ಇದೇ ಕಾಂಗ್ರೆಸ್ ಶಕ್ತಿಯಾಗಿದೆ. ಹುಬ್ಬಳ್ಳಿ - ಧಾರವಾಡ ದಲ್ಲಿಯೂ ಪ್ರಣಾಳಿಕೆ ಸಂಪೂರ್ಣ ಜಾರಿಗೆ ತರುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟು ವಿನಾಯಿತಿ ನೀಡ್ತೇವೆ ಎಂದರು.

ಇದನ್ನು ಓದಿ: ನಾಗಚೈತನ್ಯ- ಸಮಂತಾ ದಾಂಪತ್ಯದಲ್ಲಿ ಬಿರುಕು; ಇದೇ ಕಾರಣಕ್ಕೆ ಸರ್​​ನೇಮ್​ ತೆಗೆದ್ರಾ ನಟಿ?

ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲು,  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿವೃದ್ಧಿಯ ಫಲವಾಗಿ ಹುಬ್ಬಳ್ಳಿ ಧಾರವಾಡ ದಲ್ಲಿ ಇಷ್ಟರಮಟ್ಟಿಗಾದರೂ ರಸ್ತೆಗಳಿವೆ. ಆದರೆ ಕನಕಪುರ ಮತ್ತು ರಾಮನಗರ ಕ್ಕೆ ಹೋಗಿ ನೋಡಿ. ಗರ್ಭಿಣಿ ಮಹಿಳೆಯರು ರಸ್ತೆಯಲ್ಲಿ ಆಸ್ಪತ್ರೆ ಮುಟ್ಟೋದೇ ಕಷ್ಟ. ರಸ್ತೆಗಳಲ್ಲಿಯೇ ಹೆರಿಗೆ ಆಗುವಷ್ಟರ ಮಟ್ಟಿಗೆ ರಸ್ತೆಗಳಿವೆ. ಹಿಂದೆ ಕುಳಿತವರು ಇದ್ದಾರೋ ಇಲ್ಲವೋ ಅನ್ನೋದನ್ನ ಪದೇಪದೆ ಮುಟ್ಟಿನೋಡಿಕೊಳ್ಳುವ ಪರಿಸ್ಥಿತಿ ಇದೆ. ಅಷ್ಟರ ಮಟ್ಟಿಗೆ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಕೆಟ್ಟ ರಸ್ತೆಗಳಿವೆ. ಡಿಕೆಶಿ ಅವರಿಗೆ ಅಕ್ರಮ ಗಣಿಗಾರಿಕೆ ನಡೆಸೋದು ಗೊತ್ತೇ ಹೊರತು ರಸ್ತೆಗಳು ಮಾಡೋದು ಗೊತ್ತಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ-ಡಿಕೆಶಿ ಫೋಟೋ ಫ್ರೇಂಡ್ಸ್​

ಸಿದ್ದರಾಮಯ್ಯ ಮತ್ತು ಡಿಕೆಶಿ ಕೇವಲ ಪೋಟೋ ಫ್ರೆಂಡ್ಸ್. ದೆಹಲಿಗೆ ಹೋದಾಗ ಮಾತ್ರ ಒಂದಾಗಿರುತ್ತಾರೆ. ರಾಹುಲ್, ಸೋನಿಯಾ ಗಾಂಧಿ ಎದರು ಕೈ ಕುಲಾಯಿಸುತ್ತಾರೆ. ಹೊರಗಡೆ ಇಬ್ಬರ ಮಧ್ಯೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇದೆ ಎಂದರು.

ಹುಬ್ಬಳ್ಳಿ - ಧಾರವಾಡ ಪಾಲಿಕೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ನವರು ಹಗಲುಕನಸು ಕಾಣುತ್ತಿದ್ದಾರೆ. ಎಲ್ಲಾ ಚುನಾವಣೆಯಲ್ಲಿ ಕೈ ನಾಯಕರು ನಾವೇ ಗೆಲ್ತಿವಿ ಅಂತಾರೆ, ಆದ್ರೆ ಎಲ್ಲೂ ಗೆದ್ದಿಲ್ಲ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.
ಇದೇ ವೇಳೆ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಳೆ ಇದ್ದ ಕಾರಣಕ್ಕೆ ಹಲವು ರಸ್ತೆಗಳನ್ನು ದುರಸ್ತಿ ಮಾಡಲಾಗಿಲ್ಲ. ಇದೀ ಚುನಾವಣಾ ನೀತಿ ಸಂಹಿತೆಯೂ ಜಾರಿಯಲ್ಲಿದೆ. ಚುನಾವಣೆ ಮುಗಿದ ನಂತರ ರಸ್ತೆಗಳಲ್ಲಿನ ಗುಂಡಿ ತುಂಬೋ ಕೆಲಸ ಮತ್ತು ನೆನೆಗುದಿಗೆ ಬಿದ್ದಿರೋ ಇತರೆ ರಸ್ತೆ ಕಾರ್ಯ ಪೂರ್ಣಗೊಳ್ಳುತ್ತೆ ಎಂದಿದ್ದಾರೆ.
Published by:Seema R
First published: