ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಿಸಿ; ಧಾರವಾಡ ಹೈ ಕೋರ್ಟ್ ಪೀಠ ಆದೇಶ

ಉಣಕಲ್ ಗ್ರಾಮದ ಪಕ್ಕದಲ್ಲಿಯೇ ಇದ್ದುದರಿಂದ ಅದಕ್ಕೆ ಉಣಕಲ್ ಕೆರೆ ಎಂದು ಈ ಹಿಂದೆ ನಾಮಕರಣ ಮಾಡಲಾಗಿತ್ತು.

ಉಣಕಲ್ ಕೆರೆ

ಉಣಕಲ್ ಕೆರೆ

  • Share this:
ಹುಬ್ಬಳ್ಳಿ (ಆ. 22): ಹುಬ್ಬಳ್ಳಿಯ ಐತಿಹಾಸಿಕ ಉಣಕಲ್ ಕೆರೆಗೆ ಚನ್ನಬಸವ ಸಾಗರವೆಂದು ನಾಮಕರಣ ಮಾಡುವಂತೆ ಮಹಾನಗರ ಪಾಲಿಕೆಗೆ ಧಾರವಾಡ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದರೂ, ಮರು ನಾಮಕರಣ ಮಾಡದೆ ವಿಳಂಬ ಮಾಡಿರುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೊರೆ ಹೋಗಿದ್ದರು. ಕೊನೆಗೂ ಕೆರೆ ಹೆಸರು ಬದಲಾಯಿಸುವಂತೆ ಹೈಕೋರ್ಟ್ ಆದೇಶಿಸಿದ್ದು, ಪಾಲಿಕೆ ಅದನ್ನು ಕಾರ್ಯಗತಗೊಳಿಸಬೇಕಿದೆ. 2003 ರ ಜನವರಿ 16 ರಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೆರೆಗೆ ಮರು ನಾಮಕರಣ ಮಾಡುವ ಕುರಿತು ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ನಿರ್ಣಯ ಜಾರಿಗೆ ತರುವಲ್ಲಿ ಮಾತ್ರ ಪಾಲಿಕೆ ವಿಳಂಬ ಧೋರಣೆ ತೋರಿತ್ತು. ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದು, ಕೇವಲ ಆಡಳಿತಾಧಿಕಾರಿಗಳ ಮೇಲೆ ಪಾಲಿಕೆ ಮುನ್ನಡೆದಿರುವುದು ಇದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಧೋರಣೆ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ ಕೆರೆಯ ಮರು ನಾಮಕರಣ ಆದೇಶ ನೀಡಿದೆ. ಹುಬ್ಬಳ್ಳಿ ಯಿಂದ ಧಾರವಾಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ, ಉಣಕಲ್ ಕೆರೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಉಣಕಲ್ ಗ್ರಾಮದ ಪಕ್ಕದಲ್ಲಿಯೇ ಇದ್ದುದರಿಂದ ಅದಕ್ಕೆ ಉಣಕಲ್ ಕೆರೆ ಎಂದು ಈ ಹಿಂದೆ ನಾಮಕರಣ ಮಾಡಲಾಗಿತ್ತು. ಶತಮಾನಗಳ ಇತಿಹಾಸ ಹೊಂದಿರುವ ಉಣಕಲ್ ಕೆರೆ ಹಾಗೂ ಆವರಣವನ್ನು ಸ್ಮಾರ್ಟ್ ಸಿಟಿ ಮತ್ತಿತರ ಯೋಜನೆಗಳ ಅಡಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಕೆರೆ ದಂಡೆಯ ಮೇಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ . ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆಯುತ್ತವೆ. 12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ನಂತರ ಶ್ರೀ ಚನ್ನಬಸವೇಶ್ವರರ ನೇತೃತ್ವದ ಶರಣರ ತಂಡ ಸಹ್ಯಾದ್ರಿಯ ಅರಣ್ಯ ಪ್ರದೇಶದ ಮಧ್ಯದ ಉಳವಿಯತ್ತ ಸಾಗಿತು. ಈ ಮಧ್ಯೆ ಅವರು ಉಣಕಲ್ಲ ಕೆರೆ ದಂಡೆ ಮೇಲೆ ಕೆಲಕಾಲ ಉಳಿದು ಜನರಲ್ಲಿ ಜಾಗೃತಿ ಮೂಡಿಸಿದರು. ಈ ಹಿನ್ನೆಲೆಯಲ್ಲಿ ಉಣಕಲ್ಲ ಕೆರೆ ದಂಡೆಯ ಮೇಲೆ ರೂಪಗೊಂಡಿರುವ ದೇವಸ್ಥಾನ ಬಸವ ಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿದೆ.

ಇದನ್ನು ಓದಿ: ಆದಾಯ ತೆರಿಗೆ ಇ-ಫೈಲಿಂಗ್​ ಪೋರ್ಟಲ್​ನಲ್ಲಿ ಸಮಸ್ಯೆ; ಇನ್ಫೋಸಿಸ್ ಸಿಇಒಗೆ ಸಮನ್ಸ್

ಈ ಎಲ್ಲ ಕಾರಣಗಳಿಂದ ಚನ್ನಬಸವ ಸಾಗರ ಎಂದು ನಾಮಕರಣ ಮಾಡುವಂತೆ ಬೇಡಿಕೆ ವ್ಯಕ್ತವಾಗಿದ್ದರಿಂದ, ಪಾಲಿಕೆಯಲ್ಲಿಯೂ ಈ ಕುರಿತು ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಎಂಟು ವರ್ಷ ಗತಿಸಿದರೂ ಮರು ನಾಮಕರಣ ಮಾಡಲೇ ಇಲ್ಲ. ಹೀಗಾಗಿ ಹುಬ್ಬಳ್ಳಿಯ ಶಂಕ್ರಗೌಡ ಪಾಟೀಲ, ವಿನಯ ಪರಮಾದಿ, ಶಿವಪ್ಪ ಪಟ್ಟಣಶೆಟ್ಟಿ ಅವರು ಸೇರಿ ಒಟ್ಟ 7 ಜನರು ನ್ಯಾಯಾಲಯದ ಮೊರೆ ಹೋಗಿದ್ದರು. ಇವರ ಪರವಾಗಿ ವಕೀಲ ಕೆ.ಎಸ್. ಕೋರಿಶೆಟ್ಟರ್ ವಾದ ಮಂಡಿಸಿದ್ದರು.

ಕೊನೆಗೂ ಮರು ನಾಮಕರಣಕ್ಕೆ ಆದೇಶ ಹೊರಡಿಸಲಾಗಿದ್ದು, ಅದನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಪಾಲಿಕೆಗೆ ಹೆಗಲ ಮೇಲೆ ಹಾಕಲಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮರು ನಾಮಕರಣ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಪಾಲಿಕೆ ಇದ್ದು, ಮಹಾನಗರ ಪಾಲಿಕೆ ಚುನಾವಣೆ ನಂತರ ಮರು ನಾಮಕರಣ ಮಾಡೋ ಸಾಧ್ಯತೆಗಳಿವೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: