ಹುಬ್ಬಳ್ಳಿ (ಜು. 6): ಕೊರೋನಾ ಎರಡನೆಯ ಅಲೆ ಒಂದಷ್ಟು ಇಳಿಮುಖವಾಗಿದ್ದರೂ, ಕೊರೋನಾ ಹೊಡೆತಕ್ಕೆ ಗುರಿಯಾದವರು ಮಾತ್ರ ತತ್ತರಗೊಳ್ಳೋದು ನಿಂತಿಲ್ಲ. ಮಹಾಮಾರಿ ಕೋವಿಡ್ ಸಾವಿರಾರು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಈ ಕೋವಿಡ್ ಸೋಂಕು ನೂರಾರು ಮಕ್ಕಳನ್ನು ತಬ್ಬಲಿ ಮಾಡಿದೆ. ಧಾರವಾಡ ಜಿಲ್ಲೆಯೊಂದರಲ್ಲಿಯೇ 198 ಮಕ್ಕಳು ತಬ್ಬಲಿಯಾಗಿದ್ದು, ಮಕ್ಕಳ ಆರ್ತನಾದ ಕೇಳುವವರಿಲ್ಲದಂತಾಗಿದೆ. ಅದರಲ್ಲಿಯೂ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ಮೂರು ಮಕ್ಕಳಿವೆ. ಧಾರವಾಡ ತಾಲೂಕಿನ ಎರಡು ಹಾಗೂ ನವಲಗುಂದ ತಾಲೂಕಿನ ಒಂದು ಕುಟುಂಬದಲ್ಲಿ ಮಕ್ಕಳು ತಬ್ಬಲಿಯಾಗಿವೆ. ಇನ್ನು 195 ಮಕ್ಕಳಿಗೆ ಏಕ ಪೋಷಕರೇ ಆಸರೆ ಎನ್ನುವಂತಾಗಿದೆ.
ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಬಾಲ್ಯದಲ್ಲಿಯೇ ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ. ತಂದೆ ಅಥವಾ ತಾಯಿಯೊಂದಿಗೆ ಕೆಲ ಮಕ್ಕಳ ವಾಸ ಮಾಡುತ್ತಿದ್ದರೆ, ಕೆಲ ಮಕ್ಕಳು ಏಕ ಪೋಷಕರೊಂದಿಗೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸ ಮಾಡ್ತಿದಾರೆ. ದುಡಿಯುವ ಕೈಗಳೇ ಇಲ್ಲದಿರೋದ್ರಿಂದ ಪಾಲನೆ, ಪೋಷಣೆಗೆ ತೀವ್ರ ಸಮಸ್ಯೆಯಾಗಿದೆ. ತಂದೆ – ತಾಯಿ ಇಬ್ಬರನ್ನು ಕಳೆದುಕೊಂಡ ಮುವ್ವರು ಮಕ್ಕಳಿಗೆ ಬಾಲ ಸೇವಾ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ತಂದೆ ತಾಯಿಗಳನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ತಲಾ 3500 ರೂಪಾಯಿ ನೆರವು ನೀಡಲಾಗುವುದು. 21 ವರ್ಷಗಳ ನಂತರ ಒಂದು ಲಕ್ಷ ರೂಪಾಯಿ ನೀಡಲಾಗುತ್ತೆ. ಏಕ ಪೋಷಕರಿದ್ದವರಿಗೆ ಅಗತ್ಯವಿದ್ದವರಿಗೆ ಬಾಲ ಸೇವಾ ಯೋಜನೆ ಅಡಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಮಲಾ ಬೈಲೂರ ಮಾಹಿತಿ ನೀಡಿದ್ದಾರೆ.
ಆದರೆ, ಸದ್ಯ ತಂದೆ – ತಾಯಿ ಗಳನ್ನು ಕಳೆದುಕೊಂಡ ಮುವ್ವರು ಮಕ್ಕಳಿಗೆ ಮಾತ್ರ ಬಾಲ ಸೇವಾ ಯೋಜನೆ ಅಡಿ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಉಳಿದ ಮಕ್ಕಳ ಸರ್ವೆ ಕಾರ್ಯ ನಡೆದಿದೆ ಅನ್ತಿರೋ ಅಧಿಕಾರಿಗಳು. ವಿಚಿತ್ರವೆಂದರೆ ಕೋವಿಡ್ ನಿಂದ ತತ್ತರಿಸಿಕೊಂಡ ಕುಟುಂಬಗಳಿಗೆ ಸರ್ಕಾರದ ಯಾವುದೇ ಯೋಜನೆಯ ಮಾಹಿತಿಯಿಲ್ಲ. ಅವರಿಗೆ ಮಾಹಿತಿ ಕೊಡೋ ಪ್ರಯತ್ನಗಳೂ ನಡೆದಿಲ್ಲ. ಮರಣ ಪ್ರಮಾಣ ಪತ್ರ ಪಡೆಯಲೂ ಪರದಾಡೋ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಅದರಲ್ಲಿಯೂ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಗಂಡನನ್ನು ಕಳೆದುಕೊಂಡವರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನು ಓದಿ: ಸುಲಭ, ಸಹಜ ಹೆರಿಗೆಗಾಗಿ ಈ ಐದು ಆಸನ ಮಾಡುವುದು ಉತ್ತಮ
ಕೊರೋನಾ ಮಹಾಮಾರಿ ನನ್ನ ಪತಿಯನ್ನು ಬಲಿ ಪಡೆಯಿತು. ಕುಟುಂಬಕ್ಕೆ ಆತನೇ ಆಧಾರ ಸ್ತಂಭವಾಗಿದ್ದ, ಆತನ ನಿಧನದ ನಂತರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇರೋ ಬಾಡಿಗೆ ಮನೆ ಬಿಟ್ಟು ಪುಟ್ಟ ಮನೆ ಹಿಡಿಯಬೇಕಾಗಿದೆ. ಕೋವಿಡ್ ನಮ್ಮ ಬದುಕನ್ನೇ ಕೊಚ್ಚಿಕೊಂಡು ಹೋಗಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದರೂ ಯಾವುದೇ ಪರಿಹಾರ ಸಿಗಲ್ಲ ಅಂತಿದಾರೆ. ಹೀಗಾದ್ರೆ ಇರೋ ಒಬ್ಬ ಮಗಳನ್ನು ಓದಿಸೋದಾದ್ರೂ ಹೇಗೆಂದು ಕೋವಿಡ್ ಗೆ ಪತಿಯನ್ನು ಕಳೆದುಕೊಂಡ ಹುಬ್ಬಳ್ಳಿ ಶಬಾನಾ ಕಣ್ಣೀರು ಹಾಕ್ತಿದಾರೆ.
ಇದನ್ನು ಓದಿ: ರಾತ್ರೋ ರಾತ್ರಿ ಅಫ್ಘಾನ್ನ ಬಾಗ್ರಾಮ್ ವಾಯುನೆಲೆ ತೊರೆದ ಅಮೆರಿಕ ಸೇನಾಪಡೆ; ಕಾರಣವೇನು?
ಸ್ಕೂಲ್ ನಲ್ಲಿ ಫೀಸ್ ರಿಯಾಯಿತಿ ಕೊಡೋದಿಲ್ಲ ಅಂತಿದಾರೆ. ಕೋವಿಡ್ ಸಾವಿಗೂ ನಮ್ಮ ಶಾಲೆಗೂ ಸಂಬಂಧವಿಲ್ಲ ಅಂತಿದಾರೆ. ಫೀಸ್ ಕಟ್ಟಿದರಷ್ಟೇ ಶಾಲೆಗೆ ಪ್ರವೇಶ ಎನ್ನುತ್ತಿದ್ದಾರೆ. ಅಪ್ಪ ಇದ್ದಾಗ ಎಲ್ಲವನ್ನೂ ನೋಡಿಕೊಳ್ತಿದ್ದ. ಈಗ ಶಾಲೆಗೆ ಹೋಗಬೇಕೆಂದ್ರೆ ಫೀಸ್ ಕಟ್ಟಬೇಕು. ಇಲ್ಲದಿದ್ದರೆ ಸ್ಕೂಲ್ ಬಿಟ್ಟು ದುಡಿಮೆ ಮಾಡಿ ಅಮ್ಮನಿಗೆ ನೆರವಾಗೋ ಅನಿವಾರ್ಯತೆ ಎದುರಾಗಿದೆ ಎಂದು ತಂದೆಯನ್ನು ಕಳೆದುಕೊಂಡ ಹುಬ್ಬಳ್ಳಿಯ ವಿದ್ಯಾರ್ಥಿನಿ ಸಾನಿಯಾ ಕಣ್ಣೀರು ಹಾಕ್ತಿದ್ದಾಳೆ.
ಜಿಲ್ಲೆಯ ಬಹುತೇಕ ಮಕ್ಕಳದ್ದು ಇಂಥದ್ದೇ ದಯನೀಯ ಸ್ಥಿತಿಯಾಗಿದೆ. ಸರ್ಕಾರವೇನೋ ತಂದೆ – ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ವಿದ್ಯಾಭ್ಯಾಸದ ಸಂಪೂರಣ ಹೊರೆ ಹೊರೋದಾಗಿ ಹೇಳ್ತಿದೆ. ಏಕ ಪೋಷಕರ ಮಕ್ಕಳಿಗೆ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡೋದಾಗಿ ಹೇಳ್ತಿದೆ. ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸೋದಾಗಿ ಹೇಳ್ತಿದೆ. ಆದ್ರೆ ವಸ್ತುಸ್ಥಿತಿ ಇದಕ್ಕೆ ಭಿನ್ನವಾಗಿದ್ದು, ಪೋಷಕರನ್ನು ಕಳೆದುಕೊಂಡವರ ಆತಂಕ ದೂರವಾಗಿಲ್ಲ. ಕುಟುಂಬದ ಸದಸ್ಯರ ಮತ್ತು ಮಕ್ಕಳ ಕಣ್ಣೀರ ಕೋಡಿ ನಿಂತಿಲ್ಲ. ಕಂದಮ್ಮಗಳ ಕಣ್ಣೀರು ಒರೆಸೋ ಕಾರ್ಯವನ್ನು ಸರ್ಕಾರ ಮಾಡಬೇಕಿದೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ