ಸ್ಟಾಲೇಜ್ ಫೀ ಪಾವತಿಸದ ಬಾಡಿಗೆದಾರರಿಗೆ ಬಿಸಿ ಮುಟ್ಟಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ

ಮರು ಹರಾಜು ಕರೆದು ನೂತನ ಬಾಡಿಗೆ ದರ ನಿಗದಿಪಡಿಸಿದರೆ ಇನ್ನೂರು ಕೋಟಿಗೂ ಹೆಚ್ಚು ಆದಾಯ ಬರಲಿದೆ ಅನ್ನೋ ಅಂದಾಜಿದೆ. ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕು. ಮಳಿಗೆಗಳ ಮರು ಹರಾಜು ನಡೆಸಿ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಮಳಿಗೆಗಳು

ಮಳಿಗೆಗಳು

  • Share this:
ಹುಬ್ಬಳ್ಳಿ(ಜ.06): ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸ್ಟಾಲೇಜ್ ಫೀ ಪಾವತಿ ಮಾಡದೇ ಇರುವ ಬಾಡಿಗೆದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ. ದಶಕಗಳಿಂದ ಕಡಿಮೆ ಬಾಡಿಗೆ ಕೊಡುತ್ತಾ ಪಾಲಿಕೆ ಆಸ್ತಿಯನ್ನು ಬಳಸಿಕೊಳ್ಳುತ್ತಿದ್ದವರಿಗೆ ಶಾಕ್ ನೀಡುತ್ತಿದೆ. ಈಗಾಗಲೇ ಹೆಚ್ಚಿನ ದರ ನಿಗದಿ ಪಡಿಸಿರುವ ಪಾಲಿಕೆ ಅಧಿಕಾರಿಗಳು ಮಳಿಗೆಗಳ ಮರು ಹರಾಜಿಗೆ ಪ್ಲ್ಯಾನ್ ಮಾಡಿದ್ದಾರೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳಲ್ಲಿ ಮಹಾನಗರ ಪಾಲಿಕೆಯ ಒಡೆತನದ ಸುಮಾರು ಎರಡೂವರೆ ಸಾವಿರ ಮಳಿಗೆಗಳಿವೆ. ಹಳೆಯ ಬಾಡಿಗೆಯಂತೆ ಪ್ರತಿವರ್ಷ ಆರರಿಂದ ಏಳು ಕೋಟಿ ರೂಪಾಯಿ ಆದಾಯ ಸಂಗ್ರಹವಾಗುತ್ತೆ. ಹಳೆಯ ಬಾಡಿಗೆಯಂತೆ ಮಾರ್ಚ್ ಅಂತ್ಯದವರೆಗೆ ಸ್ಟಾಲೇಜ್ ಶುಲ್ಕದಿಂದ 6.10 ಕೋಟಿ ರೂಪಾಯಿ ಸಂಗ್ರಹವಾಗಬೇಕಿದೆ.‌ ಆದರೆ ಈವರೆಗೆ ಕೇವಲ 2.78 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದೆ.

ಸಮರ್ಪಕವಾಗಿ ಬಾಕಿ ಮೊತ್ತ ಪಾವತಿಯಾಗದೇ ಇರುವುದರಿಂದ ಅವಳಿ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ‌. ಶುಲ್ಕ ಪಾವತಿಸದ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡಲಾಗುತ್ತಿದೆ. ಇದುವರೆಗೆ 35 ಸ್ಟಾಲೇಜ್ ಗಳನ್ನು ಮಾತ್ರ ಸೀಜ್ ಮಾಡಲಾಗಿದೆ. ಆದರೆ ಈಗಾಗಲೆ ಬಾಗಿಲು ಮುಚ್ಚಿರುವ ಮಳಿಗೆಗಳಿಗೆ ಮಾತ್ರ ಅಧಿಕಾರಿಗಳು ನೋಟೀಸ್ ಅಂಟಿಸಿ ಬಂದಿದ್ದಾರೆ. ಆದರೆ ಪ್ರಭಾವಿಗಳು ಮತ್ತು ತಮಗೆ ಬೇಕಾದವರ ಮಳಿಗೆಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ. ಬಾಡಿಗೆ ಕೊಡದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಿ. ಯಾವುದೇ ತಾರತಮ್ಯ ಮಾಡದೆ, ಯಾರ ಪ್ರಭಾವಕ್ಕೂ ಒಳಗಾಗದೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಲಿ ಎನ್ನುವ ಕೂಗು ಜೋರಾಗಿದೆ.

Boris Johnson: ಇಂಗ್ಲೆಂಡ್​ನಲ್ಲಿ ಕೈಮೀರಿದ ಕೊರೋನಾ ಸ್ಥಿತಿ; ಭಾರತದ ಭೇಟಿ ರದ್ದುಗೊಳಿಸಿದ ಬ್ರಿಟನ್ ಪ್ರಧಾನಿ ಬೋರಿಸ್

ಪಾಲಿಕೆ ನಿಯಮಾವಳಿಯಂತೆ ಪ್ರತಿವರ್ಷ ಬಾಡಿಗೆ ದರ ಹೆಚ್ಚಿಸಬೇಕು. ಮೂರು ವರ್ಷಕ್ಕೊಮ್ಮೆ ಹರಾಜು ಪ್ರಕ್ರಿಯೆ ನಡೆಸಬೇಕು. ಆದರೆ ಕಳೆದ ಹದಿನೈದು- ಇಪ್ಪತ್ತು ವರ್ಷಗಳಿಂದ ಮರು ಹರಾಜು ನಡೆದಿಲ್ಲ. ಹಳೆಯ ದರದಂತೆಯೇ ಪಾಲಿಕೆಗೆ ಬಾಡಿಗೆ ಸಂದಾಯ ಮಾಡಲಾಗುತ್ತಿದೆ. ಇದರಿಂದ ಪಾಲಿಕೆಗೆ ಬರಬೇಕಾದ ದೊಡ್ಡ ಪ್ರಮಾಣದ ಆದಾಯ ನಷ್ಟವಾಗುತ್ತಿದೆ. ಮರು ಹರಾಜು ಕರೆದು ನೂತನ ಬಾಡಿಗೆ ದರ ನಿಗದಿಪಡಿಸಿದರೆ ಇನ್ನೂರು ಕೋಟಿಗೂ ಹೆಚ್ಚು ಆದಾಯ ಬರಲಿದೆ ಅನ್ನೋ ಅಂದಾಜಿದೆ. ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕು. ಮಳಿಗೆಗಳ ಮರು ಹರಾಜು ನಡೆಸಿ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಮಹಾನಗರ ಪಾಲಿಕೆ ಸಂಘರ್ಷ ಮುಂದುವರಿದಿದೆ. ಪಾಲಿಕೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಾಪಾರಿಗಳು ಪ್ರತಿಭಟನೆ ಮಾಡಿದ್ದಾರೆ. ಪಾಲಿಕೆ ಕಚೇರಿ ಎದುರು ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ‌. ಹುಬ್ಬಳ್ಳಿ - ಧಾರವಾಡ ಅವಳಿ ನಗದರದಲ್ಲಿನ ವ್ಯಾಪಾರಸ್ಥರನ್ನು ಅನವಶ್ಯಕವಾಗಿ ತೆರವುಗೊಳಿಸಲಾಗಿದೆ.

ವ್ಯಾಪಾರ ಸಾಮಗ್ರಿಗಳನ್ನು ಜಪ್ತಿ ಮಾಡಿ, ದಂಡ ಹಾಕಲಾಗಿದೆ. ಅಕ್ರಮ ಹಣ ವಸೂಲಿ ಮಾಡಿ ಬೆದರಿಸಲಾಗಿದೆ. ವ್ಯಾಪಾರ ಮಾಡದಂತೆ ಬಲವಂತವಾಗಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಕುಂದುಕೊರತೆ ಕೇಳಲು ಮಾರಾಟ ಸಮಿತಿ ಸಭೆಯನ್ನು ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಶಕ್ಕೆ ಪಡೆದಿರುವ ವ್ಯಾಪಾರ ಸಾಮಗ್ರಿಗಳನ್ನು ವಾಪಸ್ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರುವವರೆಗೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಪಟ್ಟುಹಿಡಿದಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ‌. ನಾಳೆ ಮಹಾನಗರ ಪಾಲಿಕೆಯಲ್ಲಿ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಮನವೊಲಿಸಿದ್ದಾರೆ‌.
Published by:Latha CG
First published: