ಪ್ರವಾಹ ಇಳಿಮುಖವಾದ್ರೂ ಮನೆಗಳಲ್ಲಿ ಉಕ್ಕುತ್ತಿರೋ ನೀರು: ಸಿಎಂ ತವರಲ್ಲಿ ಸಾವಿರಾರು ಮನೆಗಳು ಹಾನಿ

ಪ್ರವಾಹ ಬಹುತೇಕ ಇಳಿಮುಖವಾಗಿದೆ. ಆದ್ರೆ ಕೆಲವೆಡೆ ನೆಲದಿಂದ ನೀರು ಉಕ್ಕುತ್ತಿದ್ದು, ಮನೆಗಳಲ್ಲಿ ವಾಸಿಸೋದೆ ದುಸ್ಥರ ಎನ್ನುವಂತಾಗಿದೆ.

ಪ್ರವಾಹ ಸಂಕಷ್ಟ

ಪ್ರವಾಹ ಸಂಕಷ್ಟ

  • Share this:
ಹುಬ್ಬಳ್ಳಿ (ಆ.6):  ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರ ಇಳಿಮುಖವಾಗಿದೆ. ಪ್ರವಾಹವೂ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಮಳೆಯಿಂದ ಆಗಿರೋ ಅವಾಂತರಕ್ಕೆ ಮಾತ್ರ ಕೊನೆಯಿಲ್ಲದಂತಾಗಿದೆ. ಈ ವರ್ಷ ಮುಂಗಾರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳಲ್ಲಿಯೇ ನೀರು ಪುಟಿಯುತ್ತಿದ್ದು, ಕೆಲವರು ಮನೆಗಳನ್ನೇ ಬಿಟ್ಟು ತೊರೆದಿದ್ದಾರೆ. ಇನ್ನು ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಧಾರವಾಡ ಜಿಲ್ಲೆಯ ಸಿಎಂ ಬಸವರಾಜ ಬೊಮ್ಮಾಯಿ ತವರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಗುರಿಯಾಗಿದ್ದರು. ಮುಖ್ಯಮಂತ್ರಿಗಳನ್ನು ಇಳಿಸಿ – ಏರಿಸೋ ಕೆಲಸದಲ್ಲಿ ಬಿಜೆಪಿ ಬಿಜಿಯಾಗಿದ್ದರಿಂದ ಸಂತ್ರಸ್ಥರನ್ನು ಕೇಳುವವರೇ ಇಲ್ಲದಂತಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, 29 ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಕೊರೋನಾ ಹಾಗೂ ಪ್ರವಾಹದ ಉಸ್ತುವಾರಿ ಹೊತ್ತಿರುವ ಸಚಿವ ಶಂಕರಪಾಟೀಲ ಮುನೇನಕೊಪ್ಪ ಇನ್ನೂ ಜಿಲ್ಲೆಯ ಕಡೆ ಮುಖಮಾಡಿಲ್ಲ.

ಹೀಗಾಗಿ ನೆರೆ ಪೀಡಿತರ ಗೋಳನ್ನು ಕೇಳೋರೇ ಇಲ್ಲದಂತಾಗಿದೆ. ಮನೆಗಳು ಬಿದ್ದು, ಬೀದಿ ಪಾಲಾದ್ರೂ ಮಾತನಾಡಿಸೋರಿಲ್ಲ. ಧಾರವಾಡ ಜಿಲ್ಲೆಯಲ್ಲಿಯೊಂದರಲ್ಲಿಯೇ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಧಾರಕಾರ ಮಳೆಗೆ ಮನೆಗಳು ಕುಸಿದು ಬಿದ್ದಿವೆ. ಮಳೆ ಅಬ್ಬರಕ್ಕೆ ಮನೆಗಳು ಬಿದ್ದು ಹೋಗಿವೆ.
ಮಳೆ ಬಂದಾಗ ಮಾಳಿಗೆ ಸೋರುತ್ತೆ, ಉಳಿದ ಸಮಯದಲ್ಲಿ ಅಂತರ್ಜಲ ಪುಟಿಯುತ್ತೆ. ಇದು ಕುಂದಗೋಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಸದ್ಯದ ಅವಸ್ಥೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಅಲ್ಲಾಪುರ ಮತ್ತಿತರ ಕಡೆ ಮನೆಗಳಲ್ಲಿಯೇ ನೀರಿನ ಜಲೆ ಹೊರಹೊಮ್ಮುತ್ತಿದೆ. ಮಳೆ ಬಂದಾಗ ಮೇಲಿನಿಂದ ಸೋರೋದು ಒಂದು ಕಡೆಯಾದ್ರೆ, ಕೆಳಗಿನಿಂದ ಜಲೆಯಾಗಿ ಹೊರಹೊಮ್ತಿರೋದು ಮತ್ತೊಂದು ಕಡೆ. ನೆಲದಿಂದ ನೀರು ಜಲೆಯ ರೂಪದಲ್ಲಿ ಬರ್ತಿರೋದ್ರಿಂದ ಮನೆಯಲ್ಲಿರೋದೇ ಕಷ್ಟ ಎನ್ನುವಂತಾಗಿದೆ.

ಇನ್ನು ಮಳೆಯ ಅಬ್ಬರಕ್ಕೆ ಹಲವಾರು ಮನೆಗಳು ಧರೆಗೆ ಕುಸಿದಿವೆ. ಕೆಲ ಮನೆಗಳ ಗೋಡೆ ಕುಸಿದು ಬಿದ್ದಿದ್ದರೆ, ಮತ್ತೆ ಕೆಲವೆಡೆ ಇಡೀ ಮನೆಗಳೇ ಕುಸಿದು ಬಿದ್ದಿವೆ. ಬೀಳೋ ಮನೆಗಳಲ್ಲಿ ವಾಸಿಸೋಕೆ ಭಯವಾಗಿ ಜನ ಖಾಲಿ ಮಾಡಿದ್ದಾರೆ. ಕೆಲವೊಬ್ಬರು ಬಾಡಿಗೆ ಮನೆಗಳಲ್ಲಿದ್ದರೆ, ಮತ್ತೆ ಕೆಲವರು ಗುಡಿ – ಗುಂಡಾರದಲ್ಲಿ ವಾಸ ಮಾಡ್ತಿದ್ದಾರೆ. ಅಂತರ್ಜಲ ಹೆಚ್ಚಾಗಿ ಬಸಿಯಾಗಿರೋ ಮನೆಗಲ್ಲಿ ವಾಸಿಸೋದು ದುಸ್ಥರವಾಗಿದೆ. ನೆಲವೆಲ್ಲ ತಂಪು ಹಿಡಿದು, ಮನೆಯಲ್ಲಿ ಉಳಿದುಕೊಳ್ಳೋಕಾಗದೆ ಜನ ಒದ್ದಾಡುವಂತಾಗಿದೆ.

ಇದನ್ನು ಓದಿ: ರಾಜಧಾನಿಯಲ್ಲಿ Night Curfew ಯಶಸ್ವಿ; ಹೇಗಿದೆ ಗೊತ್ತಾ ಸಿಲಿಕಾನ್​ ಸಿಟಿ ದೃಶ್ಯ?!

ನೆಲದಿಂದ ಪುಟಿದು ಬರ್ತಿರೋ ನೀರನ್ನು ಎತ್ತಿ ಹಾಕೋದೆ ದೊಡ್ಡ ಕೆಲಸವಾಗಿದೆ. ಗುಡೇನಕಟ್ಟಿ ಗ್ರಾಮವೊಂದರಲ್ಲಿಯೇ ಇಪ್ಪತ್ತಕ್ಕೂ ಹೆಚ್ಚು ಮನೆಗಳಲ್ಲಿ ಈ ದುಸ್ತಿತಿ ನಿರ್ಮಾಣವಾಗಿದೆ. ಕುಂದಗೋಳ ತಾಲೂಕಿನ ಅಲ್ಲಾಪುರ ಮತ್ತಿತರ ಕಡೆಯೂ ಇದೇ ಪರಿಸ್ಥಿತಿ ಇದೆ. ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿ  ಮನೆಗಳು ಬಿದ್ದಿವೆ. ಬಹುತೇಕ ಕಡೆ ಭಾಗಶಹ ಮನೆಗಳು ಬಿದ್ದಿದ್ದು, ವಾಸ ಮಾಡೋಕೆ ಜನರಲ್ಲಿ ಜೀವಭಯ ಸೃಷ್ಟಿಯಾಗಿದೆ.

ಇಷ್ಟಾದ್ರೂ ಯಾರೂ ಅಧಿಕಾರಿಗಳು ಭೇಟಿ ನೀಡಿಲ್ಲ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಕುರ್ಚಿಯಿಂದ ಇಳಿಸೋದು, ಮತ್ತೊಬ್ಬರನ್ನು ಏರಿಸೋದ್ರಲ್ಲಿಯೇ ಕಾಲಹರಣ ಮಾಡ್ತಿದ್ದಾರೆ ಎಂದು ಆರೋಪಿಸಲಾಗಿದೆ. ಯಾರಿಗೆ ಯಾವ ಸಚಿವ ಸ್ಥಾನ ಸಿಗುತ್ತೆ ಅನ್ನೋ ವಿಚಾರದಲ್ಲಿ, ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದ್ದು, ನಮ್ಮ ಕಡೆ ನೋಡೋರೆ ಇಲ್ಲ ಎಂದು ಗುಡೇನಕಟ್ಟಿ ಗ್ರಾಮದ ಸಂತ್ರಸ್ಥ ನಿಂಗಪ್ಪ ಸಂಶಿ ಕಿಡಿ ಕಾರಿದ್ದಾರೆ.

ಕನಿಷ್ಟ ಅಧಿಕಾರಿಗಳಾದ್ರೂ ಬಂದು ಪರಿಶೀಲನೆ ಮಾಡಿದ್ರೆ ತಪ್ಪೇನು ಅನ್ನೋ ಪ್ರಶ್ನೆ ಮಾಡ್ತಿದ್ದಾರೆ. ಆಡಳಿತ ನಡೆಸುವವರಲ್ಲಿನ ಗೊಂದಲದಿಂದಾಗಿ ಅಧಿಕಾರಿಗಳೂ ಮಾತು ಕೇಳ್ತಿಲ್ಲ. ಈಗಲಾದ್ರೂ ಬಿದ್ದು ಹೋದ ಮನೆಗಳ ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಮನೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಬೇರೆ ಮನೆಗಳನ್ನು ನಿರ್ಮಿಸಿ, ಸೂರನ್ನು ಕಲ್ಪಿಸಬೇಕೆಂದು ಮನೆ ಕಳೆದುಕೊಂಡ ಯಮನಲ್ಲ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಿಎಂ ಬೊಮ್ಮಾಯಿ ತಮ್ಮವರೇ ಎಂಬ ಅಭಿಮಾನ ಧಾರವಾಡ ಜಿಲ್ಲೆಯ ಜನತೆಯಲ್ಲಿದ್ದು, ನೂತನ ಸಿಎಂ ರಿಂದ ಸೂಕ್ತ ಪರಿಹಾರ ಸಿಗಲಿದೆ ಎನ್ನೋ ವಿಶ್ವಾಸದಲ್ಲಿದ್ದಾರೆ.
Published by:Seema R
First published: