ಮೊಬೈಲ್ ಕದ್ದವನಿಗೆ ಅಟ್ಟಾಡಿಸಿ ಹೊಡೆದ ಯುವಕ - ಗಾರ್ಡನ್ ಪೇಟೆಯಲ್ಲಿ ದಾಯಾದಿಗಳ ಕಲಹ

ಸ್ವಂತ ಚಿಕ್ಕಪ್ಪನ ಮಗನ ಮೇಲೆ ಮಚ್ಚಿನಿಂದ ಮಾರಣಂತಿಕವಾಗಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಾಗೆಯೇ, ವ್ಯಕ್ತಿಯೊಬ್ಬ ಮೊಬೈಲ್ ಕದ್ದು ಸಿಕ್ಕಿಬಿದ್ದು ಬೆಲ್ಟ್​ನಿಂದ ಗೂಸಾ ತಿಂದ ಘಟನೆಯೂ ಇಲ್ಲಿ ನಡೆದಿದೆ.

ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ ಪೊಲೀಸರು

  • Share this:
ಹುಬ್ಬಳ್ಳಿ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ಅಪರಾಧ ಕೃತ್ಯಗಳು ತಲೆಯೆತ್ತಲಾರಂಭಿಸಿವೆ. ಖದೀಮನೋರ್ವ ಯುವಕನ ಜೇಬಿನಲ್ಲಿದ್ದ ಮೊಬೈಲ್ ಕದಿಯಲು ಯತ್ನಿಸಿದಾಗ, ಕಳ್ಳನನ್ನು ಅಟ್ಟಾಡಿಸಿಕೊಂಡು ಹೊಡೆದ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ. ಮತ್ತೊಂದೆಡೆ ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿ ದಾಯಾದಿಗಳ ಕಲಹದಲ್ಲಿ ಯುವಕನೋರ್ವ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಬೈಲ್ ಕದ್ದ ಖದೀಮನಿಗೆ ಯುವಕ ಅಟ್ಟಾಡಿಸಿ ಹೊಡೆದ ಘಟನೆ ಹುಬ್ಬಳ್ಳಿಯ ಲ್ಯಾಮಿಂಗಟನ್ ರಸ್ತೆಯಲ್ಲಿ ನಡೆದಿದೆ. ಮಲಗಿದ್ದ ಯುವಕನ ಜೇಬಿನಿಂದ ಮೊಬೈಲ್ ಕಳ್ಳತನ ಮಾಡಿ, ಪರಾರಿಯಾಗಲು ಯತ್ನಿಸಿದಾಗ ಯುವಕ ಬೆನ್ನು ಹತ್ತಿ ಬೆಲ್ಟ್ ನಿಂದ ಹೊಡೆದಿದ್ದಾನೆ. ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಕಳ್ಳನನ್ನು ಬೆಲ್ಟ್ ನಿಂದ ಅಟ್ಟಾಡಿಸಿಕೊಂಡು ಹೊಡೆದು, ತನ್ನ ಮೊಬೈಲ್ ವಾಪಸ್ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಸ್ಕ್ಯಾನಿಂಗ್ ಗೆಂದು ಚಿಟುಗುಪ್ಪಿ ಆಸ್ಪತ್ರೆಗೆ ತನ್ನ ಪತ್ನಿಯನ್ನು ಕರೆದುಕೊಂಡು ಬಂದಿದ್ದ ಯುವಕ, ಆಯಾಸವಾದ ಕಾರಣದಿಂದ ಲ್ಯಾಮಿಂಗ್ಟನ್ ಸ್ಕೂಲ್ ಆವರಣದಲ್ಲಿ ಮಲಗಿದ್ದಾನೆ. ಯುವಕ ಮಲಗಿದ್ದುದನ್ನು ಗಮನಿಸಿದ ಖದೀಮ, ಯುವಕನ ಜೇಬಿಗೆ ಸದ್ದಿಲ್ಲದೆ ಕೈ ಹಾಕಿದ್ದಾನೆ. ಜೇಬಿನಲ್ಲಿದ್ದ ಮೊಬೈಲ್ ಕದ್ದು ಖದೀಮ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡ ಯುವಕ, ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನ ಬೆನ್ನು ಬಿದ್ದಿದ್ದಾನೆ.

ಬೆಲ್ಟ್ ಹಿಡಿದು ಬೆನ್ನು ಹತ್ತಿದ ಯುವಕರಿನಿಂದ ಬೆಲ್ಟ್ ಹೊಡೆತ ಬೀಳುತ್ತಿದ್ದಂತೆಯೇ ಕಳ್ಳ ಮೊಬೈಲ್ ನ್ನು ರಸ್ತೆಯಲ್ಲಿಯೇ ಬಿಟ್ಟು ಪಕ್ಕದ ರಸ್ತೆಗೆ ಜಂಪ್ ಮಾಡಿ ಎಸ್ಕೇಪ್ ಆಗಿದ್ದಾನೆ. ತನ್ನ ಮೊಬೈಲ್ ಸಿಕ್ಕ ಸಮಾಧಾನದೊಂದಿಗೆ ವಾಪಸ್ಸಾಗಿರೋ ಯುವಕ ತನ್ನ ಪತ್ನಿಯೊಂದಿಗೆ ಊರಿಗೆ ವಾಪಸ್ಸಾಗಿದ್ದಾನೆ. ಉಪನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ವಿಂಡೀಸ್ Vs ಪಾಕ್ ಟಿ20: ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಕುಸಿದುಬಿದ್ದರೂ ಮುಂದುವರಿದ ಪಂದ್ಯ

ಹುಬ್ಬಳ್ಳಿಯಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರಗಳು.... 

ಹುಬ್ಬಳ್ಳಿಯಲ್ಲಿ ದಾಯಾದಿಗಳ ಕಲಹ ನಡೆದಿದ್ದು, ಎಳೆ ನೀರು ಕೊಚ್ಚುವ ಮಚ್ಚಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಇಷ್ಟು ದಿನ ತಣ್ಣಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಮಾರಕಾಸ್ತ್ರಗಳು ಸದ್ದು ಮಾಡಿವೆ. ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಮಗನಿಗೆ ಮಚ್ಚಿನಿಂದ ಹೊಡೆದು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಗಾರ್ಡನ್ ಪೇಟೆಯ, ನ್ಯೂ ಇಂಗ್ಲೀಷ್ ಸ್ಕೂಲ್ ಹತ್ತಿರ ನಡೆದಿದೆ.
ನಗರದ ಗಾರ್ಡನ್ ಪೇಟೆ ನಿವಾಸಿ ಮಹ್ಮದ್ ಸಾದಿಕ್ ಬಿಕ್ಕನಬಾವಿ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಹಲ್ಲೆಗೆ ಒಳಗಾದ ಮಹ್ಮದ್ ಸಾದಿಕ್ ನ ಚಿಕ್ಕಪ್ಪನ ಮಗ ಸೈಯ್ಯದ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ದಾಯಾದಿಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಎಳನೀರು ಕೊಚ್ಚುವ ಮಚ್ಚಿನಿಂದ ಸೈಯ್ಯದ್, ಮಹ್ಮದ್ ಸಾಧಿಕ್‌ನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಮಹ್ಮದ್ ಸಾಧಿಕ್‌ ನ ಒಂದು ಬೆರಳು ಸಹ ಕಟ್ ಆಗಿದ್ದು, ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟಾಗಿದೆ.  ಹಲ್ಲೆಗೆ ಒಳಗಾದ ಸಾಧಿಕ್‌ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆಯುತ್ತಿದಂತೆ ಸ್ಥಳೀಯರು  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: